News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಸಹಕಾರಿ ಸಂಘಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ತರಲು ನಿರ್ಣಯ

ಸುಳ್ಯ: ಸಹಕಾರಿ ಸಂಘಗಳಲ್ಲಿ ಅವ್ಯವಹಾರಗಳಾಗುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದೆ. ಆದರೆ ಈ ಅವ್ಯವಹಾರದ ಮಾಹಿತಿಗಳು ಎಲ್ಲಿಯೂ ಸಿಗುವುದಿಲ್ಲ. ಇದಕ್ಕಾಗಿ ಸಹಕಾರಿ ಸಂಘಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ತರಬೇಕು ಎಂದು ಸದಸ್ಯರು ಒತ್ತಾಯಿಸಿದ ಹಿನ್ನಲೆಯಲ್ಲಿ ಸಹಕಾರಿ ಸಂಘಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಲು ಸುಳ್ಯ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

SUL-27MAR-TP

ತಾ.ಪಂ ಅದ್ಯಕ್ಷ ಜಯಪ್ರಕಾಶ್ ಕುಚಂಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಅನಿಲ್ ರೈ, ಸಹಕಾರಿ ಸಂಘಗಳಲ್ಲಿ ಅವ್ಯವಹಾರಗಳಾಗುತ್ತಿವೆ. ಇದರ ಯಾವುದೇ ಮಾಹಿತಿಗಳು ನಮಗೆ ತಿಳಿಯುತ್ತಿಲ್ಲ ಅವುಗಳನ್ನು ಮಾಹಿತಿ ಹಕ್ಕು ಕಾಯಿದೆಯಡಿ ತರಬೇಕು ಎಂದು ಒತ್ತಾಯಿಸಿದರು.

ನಕ್ಸಲ್ ಕಾರ್ಯಕರ್ತರು ಭೇಟಿ ನೀಡಿದ ಸುಬ್ರಹ್ಮಣ್ಯ ಪಳ್ಳಿಗದ್ದೆಯ ಪ್ರದೇಶದಲ್ಲಿರುವ ಐದು ಕುಟುಂಬಗಳಿಗೆ ಪರ್ಯಾಯ ನಿವೇಶನ ನೀಡಲು ನಿರ್ಣಯ ಮಾಡಿ ಹಲವು ವರ್ಷಗಳೇ ಕಳೆದರೂ ಕಾರ್ಯಾಗತವಾಗಿಲ್ಲ ಎಂದು ವಿಮಲಾ ರಂಗಯ್ಯ ಪ್ರಶ್ನಿಸಿದರು. ಅಲ್ಲಿ ಕಂದಾಯ ಇಲಾಖೆಗೆ ಸೇರಿದ ಜಾಗ ಇಲ್ಲವೆಂದು ಕಂದಾಯ ಇಲಾಖೆಯ ಸಿಬ್ಬಂದಿ ಉತ್ತರಿಸಿದರು. ನಿವೇಶನ ಕೊಡುವ ಬಗ್ಗೆ ಅಧಿಕಾರಿಗಳಿಗೆ ಇಚ್ಛಾಶಕ್ತಿ ಇಲ್ಲದೇ ಇರುವುದರಿಂದ ಈ ರೀತಿ ಆಗಿದೆ ಎಂದು ಮುಳಿಯ ಕೇಶವ ಭಟ್ ಹೇಳಿದರು. ನಿವೇಶನ ಕೊಡದಿದ್ದರೆ ತಾ.ಪಂ. ಎದುರು ಪ್ರತಿಭಟಿಸಲಾಗುವುದು ಎಂದು ಹೇಳಿದ ವಿಮಲಾ ರಂಗಯ್ಯ, ತಹಶೀಲ್ದಾರರು ಸಭೆಗೆ ಬಂದು ಉತ್ತರಿಸಬೇಕು ಎಂದು ಆಗ್ರಹಿಸಿದರು.

ಈ ಕುರಿತು ಸೂಕ್ತ ಲಿಖಿತ ಮಾಹಿತಿ ನೀಡುವಂತೆ ಕಾರ್ಯನಿರ್ವಹಣಾಧಿಕಾರಿ ಸೂಚಿಸಿದರು. ಬೆಳ್ಳಾರೆಯಲ್ಲಿ ಪಂಚಾಯತ್‌ನ ಜಾಗವನ್ನು ವಶಪಡಿಸಿ ಕೊಳ್ಳದಿರುವ ಬಗ್ಗೆ ಅನಿಲ್ ರೈ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಸುಮಾರು 30 ಎಕ್ರೆ ಡಿಸಿ ಮನ್ನಾ ಜಾಗ ಬೇರೆಯವರ ವಶದಲ್ಲಿದೆ ಎಂದು ಆರೋಪಿಸಿದರು.

ವಸತಿ ಯೋಜನೆಯಲ್ಲಿ ಹಲವು ಕಾನೂನಿನ ತೊಡಕುಗಳಿರುವುದರಿಂದ ಫಲಾನುಭವಿಗಳಿಗೆ ಸೌಲಭ್ಯ ಪಡೆಯಲು ಕಷ್ಟವಾಗುತ್ತ್ತಿದೆ. ತಾಲೂಕು ಕಚೇರಿಯಲ್ಲಿ ಕನ್ವರ್ಷನ್ ಆಗುತ್ತಿಲ್ಲ ಎಂದು ಹೇಳಿದ ಮುಳಿಯ ಕೇಶವ ಭಟ್ ಕಂದಾಯ ಇಲಾಖೆಯ ಅಧಿಕಾರಿಗಳು ಬಡವರನ್ನು ಸತಾಯಿಸುತ್ತಿದ್ದಾರೆ ಎಂದರು.

ಪೆರುವಾಜೆಯಲ್ಲಿ 4 ಮನೆಗಳಿಗೆ 35 ವರ್ಷದಿಂದ ವಿದ್ಯುತ್ ಸಂಪರ್ಕಕ್ಕೆ ಪ್ರಯತ್ನ ನಡೆಸಿದ್ದಾರೆ, ಆದರೆ ಇದುವರೆಗೆ ಸಂಪರ್ಕ ನೀಡಲಿಲ್ಲ ಎಂದು ಅನಿಲ್ ರೈ ಹೇಳಿದಾಗ ಅಲ್ಲಿ ನ್ಯಾಯಾಲದ ತಡೆಯಾಜ್ಞೆಯಿರುವುದಾಗಿ ಮೆಸ್ಕಾಂನ ಇಂಜಿನಿಯರ್ ಹೇಳಿದರು.

ರಾಜೀವ್ ಗಾಂಧಿ ವಿದ್ಯುತ್ ಯೋಜನೆಯಲ್ಲಿ ಹಲವು ಕಡೆ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೆ ಮೆಸ್ಕಾಂನವರು ಪೂರ್ಣಗೊಂಡಿದೆ ಎಂದು ಹೇಳುತ್ತಿದ್ದಾರೆ. ದಯವಿಟ್ಟು ತಪ್ಪು ಮಾಹಿತಿ ಕೊಡಬೇಡಿ ಎಂದು ಅನಿಲ್ ರೈ ಹೇಳಿದರು. ಪಿ.ಡಿ.ಓ ಗಳು ವರದಿ ಕೊಟ್ಟಿದ್ದಾರೆ ಎಂದು ಮೆಸ್ಕಾಂ ಇಂಜಿನಿಯರ್ ಹೇಳಿದಾಗ ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳಿ ಎಂದು ವಿಮಲಾರಂಗಯ್ಯ ಹೇಳಿದರು.

ಸುಳ್ಯದಲ್ಲಿ ಎಂಡೋ ಪೀಡಿತರಿಲ್ಲ. ಎಂಡೋಪಾಲನಾ ಕೇಂದ್ರ ಬೆಳ್ಳಾರೆಯಲ್ಲಿ ಅಗತ್ಯವಿಲ್ಲ ಎಂದು ಅನಿಲ್ ರೈ ಹೇಳಿದ್ದು, ವೈದ್ಯಾಧಿಕಾರಿಗಳು ಸುಳ್ಯದಲ್ಲಿ 230 ಎಂಡೋ ಪೀಡಿತರನ್ನು ಗುರುತಿಸಲಾಗಿದೆ. ಬೆಳ್ಳಾರೆಯಲ್ಲಿ 93 ಮಂದಿ ಇದ್ದಾರೆ ಎಂದು ಸಭೆಗೆ ತಿಳಿಸಿದರು. ಬೆಳ್ಳಾರೆಯಲ್ಲಿ ಪಂಚಾಯತ್ ವಾಣಿಜ್ಯ ಸಂಕೀರ್ಣಕ್ಕೆ ಅಡ್ಡಿಯಾಗುತ್ತಿರುವ ಆರೋಗ್ಯ ಇಲಾಖೆಯ ಕಟ್ಟಡ ತೆರವುಗೊಳಿಸಬೇಕು ಎಂದು ಅನಿಲ್ ಒತ್ತಾಯಿಸಿದರು.

ಬೇಸಿಗೆಯಲ್ಲಿ ತುರ್ತು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಗ್ರಾಮ ಪಂಚಾಯತ್‌ಗಳು ಸಿದ್ಧವಾಗಿರಬೇಕು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೂಚನೆ ನೀಡಿದರು. ಗುತ್ತಿಗಾರಿನಲ್ಲಿ ಪಶು ಚಿಕಿತ್ಸಾಲಯಕ್ಕೆ ಹಾಗೂ ಅಂಗನವಾಡಿಗೆ ನೀರಿನ ವ್ಯವಸ್ಥೆ ಇಲ್ಲ ಎಂದು ಮುಳಿಯ ಕೇಶವ ಭಟ್ ಗಮನ ಸೆಳೆದರು. ಖಾಸಗಿ ವ್ಯಕ್ತಿಗಳಿಗೆ ಪಂಚಾಯಿತು ನೀರು ಕೊಡುತ್ತದೆ. ಸಾರ್ವಜನಿಕ ಉದ್ದೇಶಕ್ಕೆ ಯಾಕೆ ನೀರು ಕೊಡುತ್ತಿಲ್ಲ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅನಿಯಮಿತ ವಿದ್ಯುತ್ ನಿಲುಗಡೆ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಪೆರುವಾಜೆ ಕಾಲೇಜಿನ ವಠಾರಕ್ಕೆ ಹೆಚ್ಚುವರಿ ಸರ್ಕಾರಿ ಬಸ್ಸು ಸೌಲಭ್ಯ ನೀಡಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಅನಿಲ್ ರೈ ಹೇಳಿದರು.

ಉಪಾಧ್ಯಕ್ಷೆ ಮಮತಾ ಬೊಳುಗಲ್ಲು, ಸದಸ್ಯರಾದ ಗುಣವತಿ ಕೊಲ್ಲಂತಡ್ಕ, ತಾರಾಮಲ್ಲಾರ, ರಘುರಾಮ ಅಂಗಡಿಮಜಲು, ರಾಜೀವಿ ಉದ್ದಂಪಾಡಿ, ಜಯಂತಿ ತೊಡಿಕಾನ ಮೊದಲಾದವರು ಚರ್ಚೆಯಲ್ಲಿ ಭಾಗವಹಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಲ್ಲೇಶಪ್ಪ ಕಲಾಪದಲ್ಲಿ ಉಪಸ್ಥಿತರಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top