ಆಗಸ್ಟ್ 15 ಭಾರತೀಯರೆಲ್ಲರೂ ಜಾತಿ, ಮತ, ಪಂಥ, ಸಿರಿತನ, ಬಡತನಗಳ ಭೇದವಿಲ್ಲದೆ ಉತ್ಸಾಹದಿಂದ, ಸಂತೋಷದಿಂದ ಆಚರಿಸುವ ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನೋತ್ಸವ. ಯಾವುದೇ ಹಬ್ಬ-ಉತ್ಸವಗಳಾದರೂ ಅದನ್ನು ಆಚರಿಸಲು ಒಂದು ಕಾರಣ ಮತ್ತು ಹಿನ್ನೆಲೆ ಇದ್ದೇ ಇರುತ್ತದೆ. ಹಾಗೆ ಸ್ವಾತಂತ್ರ್ಯ ದಿನೋತ್ಸವದ ಕಾರಣ ಸರಳ ಅದುವೇ ನಮ್ಮ ದೇಶ ದಾಸ್ಯಮುಕ್ತವಾದ ದಿನ ಅಂದರೆ ನಮಗೆ ಸ್ವಾತಂತ್ರ್ಯ ದೊರೆತ ದಿನ. 1947 ಆಗಸ್ಟ್ 14ರ ಮಧ್ಯರಾತ್ರಿಯಿಂದ ಇಲ್ಲಿನ ತನಕ ನಾವು ಈ ದಿನವನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸುತ್ತಿದ್ದೇವೆ. 70 ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಈ ಹಬ್ಬದ ಸಂಪೂರ್ಣ ಹಿನ್ನೆಲೆ ನಾನಾ ಕಾರಣಗಳಿಂದ ನಮ್ಮ ದೇಶದ ಎಷ್ಟೋ ಜನಕ್ಕೆ ಇಂದಿಗೂ ತಿಳಿಯದಿರುವುದು ವಿಪರ್ಯಾಸವೇ ಸರಿ.
ಈ ಬಗ್ಗೆ ಎಲ್ಲರಿಗೂ ತಿಳಿದಿರುವಂತಹ ವಿಷಯವೇನೆಂದರೆ ದೇಶದ ಜನ ಅಹಿಂಸಾ ಮಾರ್ಗವಾಗಿ ಹೋರಾಟ ನಡೆಸಿ 1947ರಲ್ಲಿ ಬ್ರಿಟಿಷರಿಂದ ಸ್ವತಂತ್ರ ಪಡೆದೆವೆಂಬುದು. ಇದು ನಿಜವಾದರೂ, ಸತ್ಯದ ಒಂದು ಸಣ್ಣ ಭಾಗವಷ್ಟೇ ಸಂಪೂರ್ಣ ಸತ್ಯವಲ್ಲ.
ಅನಾದಿಕಾಲದಿಂದಲೂ ಸನಾತನ ಸಂಸ್ಕೃತಿಯ ಅಡಿಯಲ್ಲಿ ಜನಜೀವನ ಅರಳಿದ್ದ, ಮನುಕುಲದ ಒಳಿತನ್ನೇ ಚಿಂತಿಸುತ್ತಿದ್ದ, ಪರರ ಮೇಲೆ ದಂಡೆತ್ತಿ ದಾಳಿ ಮಾಡದ ಈ ನಾಡಿನ ಮೇಲೆ ಪರಕೀಯರ ಎಷ್ಟೋ ಆಕ್ರಮಣಗಳಾಗಿವೆ. ನಮ್ಮ ದೇಶದ ಮೇಲಿನ ದಾಳಿಗಳು ಅದರ ವಿರುದ್ಧ ನಮ್ಮವರ ಹೋರಾಟ ಸಾಮಾನ್ಯದ್ದಲ್ಲ, ಒಬ್ಬರ ಆಕ್ರಮಣವನ್ನು ತಡೆದು ನಾವು ಪುನರುಜ್ಜೀವನ ಶುರು ಮಾಡುವಷ್ಟರಲ್ಲಿ ಮತ್ತೊಬ್ಬರು ದಂಡೆತ್ತಿ ದಾಳಿ ಮಾಡುತ್ತಿದ್ದರು. ಈ ರೀತಿಯಾದ ಪರಿಸ್ಥಿತಿಯನ್ನು ದೇಶ ಅನುಭವಿಸಿದ್ದು 2500 ವರ್ಷಗಳ ಸುಧೀರ್ಘ ಕಾಲ. ಆ ಧೀರ್ಘವಾದಿಯ ಹೋರಾಟದ ಇತಿಹಾಸವ ಹುಡುಕುತ್ತ ಅಧ್ಯಯನ ನಡೆಸಲು ಬಹುಶಃ ವ್ಯಕ್ತಿಯ ಜೀವಮಾನವು ಸಹ ಸಾಲದೇನೋ..
ನಮ್ಮ ಮೇಲೆ ನಡೆದ ಆಕ್ರಮಣಗಳ ಸುಲಭವಾಗಿ ಅರ್ಥೈಸಿಕೊಳ್ಳಲು ಅವನ್ನು ಮೂರು ಭಾಗಗಳನ್ನಾಗಿ ವಿಗಂಡಿಸಬಹುದು.
ಮೊದಲನೆಯ ಗುಂಪಿನ ದಾಳಿ ನಡೆದದ್ದು 6 ರಿಂದ 7 ನೇ ಶತಮಾನದವರೆಗೆ
ಎರಡನೆಯ ಗುಂಪಿನ ದಾಳಿ 7 ರಿಂದ 18 ನೇ ಶತಮಾನದವರೆಗೆ
ಮೂರನೆಯ ಗುಂಪಿನ ದಾಳಿ 18 ರಿಂದ 20 ನೇ ಶತಮಾನದವರೆಗೆ.
ಮೊದಲ ಗುಂಪಿನ ಆಕ್ರಮಣಕಾರರಲ್ಲಿ ಈಜಿಪ್ಟ್, ಗ್ರೀಕ್, ಪರ್ಶಿಯನ್, ಶಕ, ಹೂಣ, ಕುಶಾಣರು. ಇವರಲ್ಲಿ ಮುಖ್ಯವಾಗಿ ಸೈರಸ್, ಅಲೆಗ್ಸಾಂಡರ್, ಸೇಲುಕಸ್ ಮುಂತಾದವರು. ಇವರ ವಿರುದ್ಧ ವಿಕ್ರಮ, ಶಾಲಿವಾಹರು, ಯಶೋವರ್ಮ, ಸೂರ್ಯವರ್ಮ, ಹರ್ಷವರ್ಧನ, ಪುಲಕೇಶಿ ಹೀಗೆ ಅನೇಕ ವೀರರು ಯುದ್ಧ ಮಾಡಿದರು.
ಪ್ರಪಂಚದ ಇತಿಹಾಸದಲ್ಲಿ ಬಾರಿ ನಾಮಾಂಕಿತನಾದ ಸೈರಸ್ ನಮ್ಮವರ ವಿರುದ್ಧ ಸೋತನು. ಪ್ರಪಂಚವನ್ನೇ ಗೆದ್ದಿರುವನೆಂದು ಬಿಂಬಿತವಾಗಿರುವ ಅಲೆಗ್ಸ್ಯಾಂಡರ್ ದೊಡ್ಡ ಸೇನೆಯೊಡನೆ ನಮ್ಮ ದೇಶದ ಮೇಲೆ ದಾಳಿ ಮಾಡಿ ಗೆಲ್ಲಲೂ ಇಲ್ಲ ಕೊನೆಗೆ ಇಲ್ಲಿಂದ ಜೀವಂತವಾಗಿ ಹಿಂದಿರುಗಲೂ ಇಲ್ಲ.
ಎರಡನೆಯ ಗುಂಪು ಅರಬ್ ಮತ್ತು ಆಫ್ಘನ್ನಿಂದ ಬಂದ ಮುಸಲ್ಮಾನರದ್ದು. ಅವರಲ್ಲಿ ಕೀಲ್ಜಿಗಳು, ಸೈಯದರು, ತುಘಲಕ್, ಮೊಗಲರು, ಲೋದಿಗಳಿದ್ದಿರು. ಇವರ ಪೈಕಿ ಘಜನಿ, ಗೋರಿ, ಅಕ್ಬರ್, ಬಾಬರ್, ಔರಂಗಜೇಬ, ಅಲ್ಲಾಹುದ್ ಕೀಲ್ಜಿ, ಮೊಹಮದ್ ಬಿನ್ ಕಾಸಿಂ, ಮೊಹಮದ್ ಬಿನ್ ತುಘಲಕ್ ಇನ್ನೂ ಮುಂತಾದವರು. ಈ ದೇಶದ ಮೇಲೆ ಮುಸ್ಲಿಂರ ಮೊಟ್ಟಮೊದಲ ದಾಳಿ 7ನೇ ಶತಮಾನದಲ್ಲಿ ನಡೆದದ್ದು ಆದರೆ ಅವರು ದೆಹಲಿ ತಲುಪಿದ್ದು 12ರಲ್ಲಿ ಅಂದರೆ ಸುಮಾರು 500 ವರ್ಷಗಳ ಕಾಲ ಭಾರತದ ವೀರಯೋಧರು ವೈರಿಗಳು ಒಳನುಗ್ಗದಂತೆ ಕಾದಿದ್ದರು. ಭಾರತದ ಒಳಗೆ ಬಂದ ಮೊದಲ ಮುಸ್ಲಿಂ ದೊರೆ ಮಹಮ್ಮದ್ ಬಿನ್ ಕಾಸಿಂ ಅವನ ವಿರುದ್ಧ ಪ್ರಬಲವಾಗಿ ಹೋರಾಡಿ ಅವನನ್ನು ಈ ಮಣ್ಣಿನಿಂದ ಹೊರಗಟ್ಟಿದ ನಂತರ ಸುಮಾರು 300 ವರ್ಷಗಳ ತರುವಾಯ ಮಹಮ್ಮದ್ ಘಜನಿ ಬಂದ್ದಿದು, ಅವನ ದಾಳಿ ಮುಗಿದ ಮೇಲೆ 150ವರ್ಷಗಳ ನಂತರ ದೆಹಲಿಯನ್ನು ತನ್ನ ವಶಪಡಿಸಿಕೊಂಡವ ಮಹಮ್ಮದ್ ಘೋರಿ. ಆಮೇಲೆ ಸುಮಾರು 500ಕ್ಕೂ ಹೆಚ್ಚು ವರ್ಷ ಇಡೀ ದೇಶದಲ್ಲಿ ಮುಸಲ್ಮಾನರ ದೌರ್ಜನ್ಯ ಭರಿತ ಆಳ್ವಿಕೆಯ ವಿರುದ್ಧ ನಿರಂತರವಾದ ಯುದ್ಧ-ಹೋರಾಟಗಳು ನಡೆಯುತ್ತಲೇ ಇತ್ತು.
ಪೃಥ್ವಿ ರಾಜ, ಬಪ್ಪರಾವಲ, ರಾಣಾ ಸಂಗ್ರಾಮ ಸಿಂಹ, ರಾಜಸಿಂಹ, ಮಹಾರಾಣಾ ಪ್ರತಾಪ್, ಅರ್ಜುನ ದೇವ, ಗುರು ತೇಜ್ ಬಹದ್ದೂರ್, ಗುರು ಗೋವಿಂದರು, ರಣಜಿತ್ ಸಿಂಗ್, ಹಕ್ಕ-ಬುಕ್ಕರು, ಶ್ರೀಕೃಷ್ಣದೇವರಾಯ, ಛತ್ರಪತಿ ಶಿವಾಜಿ ಮಹಾರಾಜ ಮುಂತಾದ ಅನೇಕ ಶೂರರು ಆ ಸಮಯದಲ್ಲಿ ಹೋರಾಡಿದ ಕಲಿಗಳು.
ಮೂರನೆಯ ಗುಂಪು ಫ್ರೆಂಚ್, ಡಚ್, ಫೋರ್ಚಗೀಸಿನಂತ ಯುರೋಪಿನವರದ್ದು ಅದರಲ್ಲಿ ಪ್ರಮುಖವಾಗಿ 190 ವರ್ಷಗಳ ಕಾಲ ನಮ್ಮನ್ನಾಳಿದವರು ಇಂಗ್ಲಿಷಿನವರು (East India Company). ಬ್ರಿಟಿಷರೇನು ಸುಲಲಿತವಾಗಿ ಈ ದೇಶವನ್ನು ಆಳಲಿಲ್ಲ, ಅವರ ಮೊದಲ ದಿನದ ಆಡಳಿತದಿಂದ ಕೊನೆಯವರೆಗೂ ನಮ್ಮವರ ಹೋರಾಟವನ್ನು ಎದುರಿಸಬೇಕಾಗಿತ್ತು. 1857ರ ನಂತರವಂತೂ ಸ್ವಾತಂತ್ರ್ಯದ ಹೋರಾಟ ಕೇವಲ ರಾಜ-ಮಹಾರಾಜರ-ಸಾಮಂತರದ್ದಾಗಿರದೇ ಸಾಧು-ಸಂತರು, ಸೈನಿಕರು, ಸಮಾಜಸುಧಾರಕರು, ಕ್ರಾಂತಿಕಾರಿಗಳಾದಿಯಾಗಿ ಸಾಮಾನ್ಯ ಜನರವರೆಗೆ ಎಲ್ಲರ ಧ್ಯೇಯವಾಯಿತು. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಪ್ರಮುಖವಾಗಿ ತಾತ್ಯಾಟೋಪಿ, ಝಾನ್ಸಿ ರಾಣಿ ಲಕ್ಷೀಬಾಯಿ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ವಾಸುದೇವ ಬಲವಂತ ಫಡಕೆ, ಚಂದ್ರಶೇಖರ್ ಆಜಾದ್, ವೀರ ಸಾವರ್ಕರ್, ಭಗತ್ ಸಿಂಗ್, ಧಿಂಗ್ರಾ, ಸುಭಾಷ್ ಚಂದ್ರ ಬೋಸ್, ತಿಲಕ್, ಗಾಂಧೀಜಿ ಮತ್ತು ಹೆಸರಿಸುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುವುದೇ ಹೊರತು ಅಲ್ಪಾವಧಿಯಲ್ಲಿ ನಿಲ್ಲುವುದಿಲ್ಲ. ದೇಶದ ಒಳಗಿನ ಅಸಂಖ್ಯ ಜನರ ಹೋರಾಟ ಆಂದೋಲನಗಳು ಮಾತ್ರವಲ್ಲದೆ ವಿಶ್ವಯುದ್ಧದ ಸಂದರ್ಭವನ್ನು ಬಳಸಿಕೊಂಡು ಹೊರಗಿನಿಂದಲೂ ನಡೆದ ಕ್ರಾಂತಿಕಾರಿಗಳ ತಂತ್ರಗಾರಿಕೆಯ ಹೋರಾಟದಿಂದ 1947 ರಲ್ಲಿ ಬ್ರಿಟಿಷರು ಈ ನೆಲದಿಂದ ಕಾಲ್ಕೀಳಬೇಕಾಯಿತು ಆದರೆ ಅವರ ಕುತಂತ್ರಕ್ಕೆ ಹಾಗೂ ಕೆಲವರ ಸ್ವಾರ್ಥಕ್ಕೆ ಅಖಂಡ ಭಾರತ ತುಂಡಾಯಿತು.
ಹಿಂದುಸ್ಥಾನದ ಮೇಲಿನ ಸುಧೀರ್ಘಾವಧಿಯ, ಅಪಾರ ಪ್ರಮಾಣದ ಶತ್ರುಗಳ ದಾಳಿ ಕೇವಲ ಭೂಮಿಯ ಕಬಳಿಕೆ, ಸಂಪತ್ತಿನ ಲೂಟಿಗೆ ಮಾತ್ರ ಸೀಮಿತವಾಗಿರದೆ ಬಲವಂತದ ಮತಾಂತರ, ಸಂಸ್ಕೃತಿ, ದೇವಾಲಯ, ಶ್ರದ್ಧಾಕೇಂದ್ರಗಳನ್ನು ಹಾಳು ಮಾಡುವ ಕಾರ್ಯ, ಸಾಮರಸ್ಯವನ್ನು ಒಡೆದು ಆಳುವ ರೀತಿ-ನೀತಿ ಕುತಂತ್ರಗಳನ್ನು ಸಹ ಒಳಗೊಂಡದ್ದು. ಇವನೆಲ್ಲ ಎದುರಿಸಿ ಸಾವಿರಾರು ಯುದ್ಧಗಳು, ಲಕ್ಷಾಂತರ ಹೋರಾಟಗಳು, ಕೋಟ್ಯಾಂತರ ಬಲಿದಾನಗಳ ಫಲವಾಗಿ ಇಂದು ಸ್ವತಂತ್ರದ ಜೊತೆಜೊತೆಗೆ ಸನಾತನ ಸಂಸ್ಕೃತಿಯನ್ನು ಉಳಿಸಿಕೊಂಡಿರುವುದು ನಮ್ಮ ಹೆಗ್ಗಳಿಕೆ. ಪೂರ್ವಜರ “ಅವಿರತ ಸಂಗ್ರಾಮದ ಹೆಮ್ಮೆಯ ಸ್ವಾತಂತ್ರ್ಯ”ವನ್ನು ಸನಾತನ ಸಂಸ್ಕೃತಿಯೊಂದಿಗೆ ಉಳಿಸಿ ಅಖಂಡ ಭಾರತವನ್ನು ಬೆಳೆಸೋಣವೆಂಬ ಆಶಯದೊಂದಿಗೆ ಸ್ವಾತಂತ್ರ್ಯ ದಿನೋತ್ಸವದ ಶುಭಾಶಯಗಳು.
||ವಂದೇ ಮಾತರಂ||
||ಭಾರತ್ ಮಾತಾ ಕೀ ಜಯ್||
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.