ಧಾರವಾಡ : ಕ್ರಿಯಾಶೀಲ ಗೆಳೆಯರು, ಬಳಗ ಧಾರವಾಡ ಇದರ ವತಿಯಿಂದ ಬೀಜ ಮತ್ತು ವೃಕ್ಷ ಗಣಪತಿ ತಯಾರಿಕೆ ಪ್ರಾತ್ಯಕ್ಷಿಕೆ ಕಾರ್ಯಾಗಾರ ಹಾಗೂ ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆ ಮಹತ್ವ – ಚಿಂತನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆಗಸ್ಟ್ 6 ರ ಭಾನುವಾರದಂದು ಕರ್ನಾಟಕ ವಿದ್ಯಾವರ್ಧಕ ಸಂಘದ, ರಾ.ಹ. ದೇಶಪಾಂಡೆ ಸಭಾ ಭವನ, ಧಾರವಾಡ ಇಲ್ಲಿ ಕಾರ್ಯಕ್ರಮವು ನಡೆಯಲಿದ್ದು, ಶ್ರೀ ವಿಜಯಕುಮಾರ ಕಡಕಬಾವಿ, ಮಾಲಿನ್ಯ ನಿಯಂತ್ರಣಾಧಿಕಾರಿ, ಧಾರವಾಡ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಮುಕುಂದ ಮೈಗೂರ, ಪರಿಸರವಾದಿ, ಧಾರವಾಡ ಇವರು ಚಿಂತನೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ ಹಾಗೂ ಪ್ರಾತ್ಯಕ್ಷಿಕೆಯನ್ನು ಶ್ರೀ ಮಂಜುನಾಥ ಹಿರೇಮಠ, ಪರಿಸರ ಸ್ನೇಹಿ ಮೂರ್ತಿಕಾರ, ಧಾರವಾಡ ಇವರು ನಡೆಸಿಕೊಡಲಿದ್ದಾರೆ.
ಕಾರ್ಯಾಗಾರದ ಹಿನ್ನೆಲೆ
ಗಣೇಶ ಚತುರ್ಥಿ ಆಚರಣೆಯ ಹೊಸ್ತಿಲಲ್ಲಿದ್ದೇವೆ. ಹಬ್ಬ ಪರಿಸರ ಸ್ನೇಹಿ ಆಗಿರಲಿ; ಮೂರ್ತಿ ಬಣ್ಣ ರಹಿತ ಕೇವಲ ಮಣ್ಣಿನ ಮೃತ್ತಿಕೆಯಾಗಿರಲಿ ಎಂಬುದು ಪರಿಸರ ಕಾರ್ಯಕರ್ತರ ಒತ್ತಾಸೆ. ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸಹ ಈ ಆಂದೋಲನಕ್ಕೆ ಸಮುದಾಯದ ಸಹಭಾಗಿತ್ವ ಕೋರಿದೆ. ಮೂರ್ತಿ ಕಲಾವಿದರಿಂದ ಸಹಕಾರ ಬಯಸಿದೆ.
ಆದರೆ, ಮಹಾರಾಷ್ಟ್ರದ ಕೊಲ್ಹಾಪುರ ಸೇರಿದಂತೆ, ವಿವಿಧ ಭಾಗಗಳಿಂದ ರೆಡ್, ಗ್ರೀನ್, ವೈಟ್ ಮತ್ತು ಬ್ಲ್ಯಾಕ್ ಆಕ್ಸೈಡ್ ಬಳಸಿ ತಯಾರಿಸಿದ, ಮಣ್ಣಿನ ಗಣಪತಿ ಎಂದೇ ಬಿಂಬಿಸಿ, ಶೇ.60 ರಷ್ಟು ಮಣ್ಣು ಮತ್ತು ಶೇ.40 ರಷ್ಟು ‘ಪಿಓಪಿ’ -ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳನ್ನು ತಂದು ಇಲ್ಲಿ ಮಾರುವ ಪ್ರಯತ್ನ ನಡೆದಿದೆ.
ಪಾಲಿಕೆ ಮತ್ತು ಜಿಲ್ಲಾಡಳಿತದ ನಿಷೇಧದ ಮಧ್ಯೆಯೂ, ಮತ್ತೆ ಈ ಬಾರಿಯೂ ಪಿಓಪಿ ಗಣಪತಿ ಮೂರ್ತಿ ಕೊಂಡು ತಂದು ಮಾರುವ ಪ್ರಯತ್ನ ತೆರೆ ಮರೆಯಲ್ಲಿ ನಡೆದಿದೆ. ಖರೀದಿಸಿದ ಮೇಲೆ ಅವುಗಳ ವಿಸರ್ಜನೆ ಹೇಗೆ ಎಂಬುದರ ಬಗ್ಗೆ ಯಾರೂ ಚಿಂತಿಸಿದಂತೆ ತೋರುತ್ತಿಲ್ಲ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಪ್ರಸಿದ್ಧ ಕಲಾವಿದ ಕೆಲಗೇರಿಯ ಮಂಜುನಾಥ ಹಿರೇಮಠ, ಬೀಜ ದುಂಡೆ ಪ್ರಯೋಗದ ಮುಂದುವರೆದ ಭಾಗವಾಗಿ, ಈ ಬಾರಿಯ ಗಣೇಶೋತ್ಸವದಲ್ಲಿ ‘ಬೀಜ ಗಣಪತಿ ಪ್ರತಿಷ್ಟಾಪನೆ’ (ಸೀಡ್ ಐಡೋಲ್) ಆಂದೋಲನಕ್ಕೆ ಮುನ್ನುಡಿ ಬರೆದಿದ್ದಾರೆ. ಪ್ರಯೋಗಾರ್ಥ, ಗಣಪತಿ ಮೂರ್ತಿಯ ಮೃತ್ತಿಕೆಗೆ ಬೀಜಗಳನ್ನು ಬಿತ್ತಲಾಗುತ್ತದೆ. ಗಣೇಶೋತ್ಸವದ 11 ದಿನಗಳಲ್ಲಿ ಬೀಜ ಮೊಳಕೆಯೊಡೆದು, ವಿಸರ್ಜನೆಯ ಎರಡು ದಿನಗಳ ಬಳಿಕ ಅದೇ ಬಸಿದ ಮಣ್ಣು ಮತ್ತು ಮೊಳಕೆ ಬಳಸಿ, ನಾಟಿ ಅಥವಾ ಬಿತ್ತನೆ ಮಾಡುವ ಯೋಚನೆ ಇದು.
ಬೀಜಗಳ ನೈಸರ್ಗಿಕ ಪ್ರಸಾರದಲ್ಲಿ ಪ್ರಾಣಿ ಮತ್ತು ಪಕ್ಷಿಗಳ ಕೊಡುಗೆ ಅನನ್ಯವಾಗಿದ್ದು, ಪರಾಗಸ್ಪರ್ಷಕ್ಕೆ ಜೇನ್ನೊಣ ಮತ್ತು ದುಂಬಿಗಳ ಸೇವೆ ಮನನೀಯ. ಆದರೆ, ಎಲ್ಲವೂ ತನಗೇ ‘ಮೀಸಲಿದೆ’ ಎಂಬಂತೆ ವರ್ತಿಸುವ ಮನುಷ್ಯ ಪಾತ್ರ ಬೀಜ ಪ್ರಸಾರ, ಪರಾಗಸ್ಪರ್ಷದಲ್ಲಿ ಮಾತ್ರ ಏನೂ ಇಲ್ಲ!
ಮನೆ-ಮನೆಗಳಲ್ಲಿ ಬಕೆಟ್ನಲ್ಲಿ ನೀರು ತುಂಬಿಸಿ, ಪ್ರಾಣ ಪ್ರತಿಷ್ಟಾಪಿತ ಪೂಜೆಗೈದ ಮೂರ್ತಿಗಳನ್ನು ವಿಸರ್ಜಿಸುವ ಅರಿವು ಸಹ ಮೂಡಿಸಲಾಗುತ್ತಿದೆ. ಹಾಗೆಯೇ, ಆ ಮಣ್ಣನ್ನು ಮನೆ ಅಂಗಳದ ತೆಂಗಿನ ಮರ ಅಥವಾ ಹೂ ಕುಂಡಗಳಿಗೂ ಹಾಕಿಕೊಳ್ಳಬಹುದು ಎನ್ನುತ್ತಾರೆ, ಮಂಜುನಾಥ ಹಿರೇಮಠ.
‘ಧಾರವಾಡ ದಾರಿ ತೋರಿಸ್ತು..’ ಎಂಬ ಮಾತಿದೆ. ಪರಿಸರ ಸ್ನೇಹಿಯಾಗಿ, ಪಟಾಕಿ ಮತ್ತು ಡಾಲ್ಬಿ ಸೌಂಡ್ ಸಿಸ್ಟಮ್ ಅಬ್ಬರವಿಲ್ಲದೇ, ತಾಳಿಕೆ ಮತ್ತು ಬಾಳಿಕೆ ಬರುವಂತೆ ಪೂಜಿತ ಮಣ್ಣಿನ ಮೂರ್ತಿಗಳ ಪರಿಸರ ಸ್ನೇಹಿ ವಿಸರ್ಜನೆಗೆ ಇಲ್ಲಿನ ಕೆಲ ಸುಮನಸ್ಸುಗಳು ಮುಂದಾಗಿವೆ. ಬೀಜ ಗಣೇಶ ಅರಿವಿನ ಸಸಿ ಆಚರಕರಲ್ಲಿ ಮೊಳಕೆಯೊಡೆಸಿದರೆ ಆಚರಣೆಗೂ ಒಂದರ್ಥ ಬಂದೀತು. ನಾಡವ್ಯಾಪಿಯಾಗಿ ಪಸರಿಸೀತು ಎಂಬ ಸದಾಶಯ.
ಅಂದು, ಮಣ್ಣಿನ ಗಣಪತಿಯನ್ನು ಕೇವಲ ಒಂದು ಗಂಟೆಯೊಳಗೆ ತಯಾರಿಸಿಕೊಳ್ಳಬಹುದಾದ ರೀತಿ ಬಗ್ಗೆ ಪ್ರಾತ್ಯಕ್ಷಿಕೆ ಸಹ ಇದೆ. ಆಸಕ್ತರು ಪಾಲ್ಗೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ 98865 21664/ 9880787122/ 9448822199 ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.