ನಾವೆಲ್ಲರೂ ಒಂದಲ್ಲ ಒಂದು ಬಾರಿ ಅಥವಾ ಒಂದಕ್ಕಿಂತಲೂ ಹೆಚ್ಚು ಬಾರಿ ಕೇಳಿರಬಹುದಾದ ಕಥೆಗಳಲ್ಲೊಂದು ‘ಆಮೆ ಮತ್ತು ಮೊಲ’ದ ಕಥೆ. ಈ ಕಾಲ್ಪನಿಕ ಕಥೆ ನಮ್ಮನ್ನು ನಾವು ಕೀಳರಿಮೆಯಲ್ಲಿ ನೋಡಿಕೊಳ್ಳದೆ ಎದುರಾಳಿ ನಮಗಿಂತ ಎಷ್ಟೇ ಶಕ್ತಿಶಾಲಿಯಾದರೂ ಧೃತಿಗೆಡದೆ ನಮ್ಮ ಪರಿಶ್ರಮವನ್ನು ಛಲದಿಂದ ಒಂದೆಡೆಗೆ ಕೇಂದ್ರೀಕರಿಸಿದರೇ, ನಿಧಾನವಾದರೂ ಗೆಲುವು ಸಾಧಿಸಬಹುದೆಂಬ ನೀತಿಯನ್ನು ನೀಡಿದೆ.
ಕಾರ್ಯಸಾಧನಗೆ ತೋಳ್ಬಲ ಅವಶ್ಯಕವಾದರೂ ಸಾಧನೆಯ ಹಾದಿಯಲ್ಲಿ ನಮಗಾಗುವ ಅಡ್ಡಿ-ಆತಂಕಗಳನ್ನು ಮೆಟ್ಟಿ ಮುಂದೆ ಸಾಗಲು ಗಟ್ಟಿಯಾದ ಮನೋಬಲವು ಬೇಕೇ ಬೇಕು.
ತಮ್ಮ ಅಚಲ ಮನೋಬಲದಿಂದ ವಿವಿಧ ಕ್ಷೇತ್ರಗಳಲ್ಲಿ ಮಹತ್ಕಾರ್ಯಗಳ ಸಾಧಿಸಿರುವ ಅದೆಷ್ಟೋ ಸಾಧಕರನ್ನು ನಾವು ಕಂಡು, ಕೇಳಿ ಹಾಗೂ ಓದಿರುತ್ತೇವೆ. ನಾವು ಸಹ ಯಾವುದಾದರೂ ಕೆಲಸಕ್ಕೆ ಮುಂದಾದರೆ ಅದರ ಫಲಿತಾಂಶದ ಬಗ್ಗೆ ಚಿಂತಿಸದೆ ನಮ್ಮ ಸಂಪೂರ್ಣ ಲಕ್ಷದಿಂದ ಆ ಕಾರ್ಯದಲ್ಲಿ ತೊಡಗುವಂತೆ ಗುರು-ಹಿರಿಯರು, ಹಿತೈಷಿಗಳು, ಸ್ನೇಹಿತರು ಹೇಳುವುದುಂಟು.
ಕ್ರೀಡಾಕ್ಷೇತ್ರದಲ್ಲಂತೂ ಒಬ್ಬರಿಗೆ ಗೆಲವು ಮತ್ತೊಬ್ಬರಿಗೆ ಸೋಲು ಕಟ್ಟಿಟ್ಟ ಬುತ್ತಿ. ಆದರೆ ಕ್ರೀಡಾಪಟುಗಳು ಎಂದಿಗೂ ಸೋಲಿನ ಕಡೆಗೆ ಗಮನಹರಿಸದೆ ತಮ್ಮ ಚಿತ್ತವನ್ನೆಲ್ಲ ಗೆಲುವಿನೆಡೆಗೆ ನೆಟ್ಟು ಸ್ಪರ್ಧಿಸುತ್ತಾರೆ. ಆ ಕಾರಣಕ್ಕೆ ಜೀವನದಲ್ಲಿ ನಮಗೆ ಎದುರಾಗುವ ತೊಂದರೆಗಳನ್ನು “Sportsman Spirit”ನಿಂದ ಎದುರಿಸಬೇಕೆಂಬ ಮಾತು ಬಂದಿದೆ ಎಂದರೂ ತಪ್ಪಿಲ್ಲವೆನಿಸುತ್ತದೆ.
ಈ ರೀತಿ ತನಗೆ ಬಂದ ಕಷ್ಟಗಳಿಗೆ ಕುಗ್ಗದೆ, ನೋವುಗಳಿಗೆ ಜಗ್ಗದೆ ಜಗತ್ತೇ ತನ್ನತ್ತ ನಿಬ್ಬೆರಗಾಗಿ ನೋಡುವಂತ ಸಾಧನೆಗೈದ ಓಲಿಂಪಿಕ್ ಕ್ರೀಡಾಪಟು “ಕರೋಲಿ ಟಕಾಸ್”.
ಹಂಗೇರಿಯ ದೇಶದ ಕರೋಲಿ ಟಕಾಸ್ ಹುಟ್ಟಿದ್ದು ಜನವರಿ 21, 1910ರಲ್ಲಿ, ತನ್ನ ಹರೆಯದಲ್ಲೇ ಹಂಗೇರಿಯ ದೇಶದ ಸೈನ್ಯಕ್ಕೆ ಸೇರಿದ ಆತನಿಗೆ ಶೂಟಿಂಗ್ನಲ್ಲಿ ಎಲ್ಲಿಲ್ಲದ ಆಸಕ್ತಿ ಜೊತೆಗೆ ತನ್ನ ಸೇನಾ ನೆಲೆಯಲ್ಲೂ ಉತ್ತಮ ಶೂಟರ್ ಆಗಿದ್ದಾತ. 1936ರಲ್ಲಿ ಬರ್ಲಿನ್ನಲ್ಲಿ ನಡೆದ ಓಲಿಂಪಿಕ್ನ ಶೂಟಿಂಗ್ಗೆ ತಾನು ಸಮರ್ಥನಾಗಿದ್ದರೂ ಒಂದು ರಾಷ್ಟ್ರದಿಂದ ಒಬ್ಬ ಸೇನಾಧಿಕಾರಿಗೆ ಮಾತ್ರ ಅವಕಾಶವೆಂಬ ನಿಯಮದಿಂದ ಆ ವರ್ಷ ಅವಕಾಶ ವಂಚಿತನಾದ. ಆ ವರ್ಷವಲ್ಲದಿದ್ದರೇನು ಮುಂದೆ ನಾಲ್ಕು ವರ್ಷಗಳ ತರುವಾಯ ಬರುವ ಓಲಿಂಪಿಕ್ನಲ್ಲಿ ತನಗೆ ಅವಕಾಶ ಸಿಕ್ಕೇ ಸಿಗುವುದೆಂಬ ಆಶಾಭಾವದಿಂದ ತನ್ನ ಅಭ್ಯಾಸವನ್ನು ಮುಂದುವರಿಸಿದ, ಆದರೆ ಅವನಾಸೆಯ ವಿರುದ್ಧವಾಟವಾಡಿತ್ತು ವಿಧಿ.
1938ರಲ್ಲಿ ಸೇನಾತರಬೇತಿಯ ಅಭ್ಯಾಸದ ವೇಳೆ ಗ್ರಾನೇಟ್ ಸ್ಫೋಟಗೊಂಡು ತನ್ನ ಬಲಗೈ ಕಳೆದುಕೊಂಡ. ಒಂದೆಡೆ ಟಕಾಸ್ ಬದುಕುಳಿದನೆಂದು ತನ್ನವರಿಗೆ ಹರ್ಷವಾದರೆ ಇನ್ನೊಂದೆಡೆ ಅವನು ಶೂಟಿಂಗ್ ಅಭ್ಯಾಸ ಮಾಡುತ್ತಿದ್ದ ಕೈಯನ್ನೇ ಕಳೆದುಕೊಂಡನೆಂಬ ನೋವು. ನಡೆದ ಅಪಘಾತಕ್ಕೆ ಸ್ವಲ್ಪವೂ ಧೃತಿಗೆಡದೆ ಟಕಾಸ್ ಯಾರ ಬಳಿಯು ಏನು ಹೇಳದೆ-ಕೇಳದೆ ತನ್ನಪಾಡಿಗೆ ತಾನು ತನಗಿದ್ದ ಎಡಗೈನಲ್ಲೇ ನಿರಂತರ ಶೂಟಿಂಗ್ ಅಭ್ಯಾಸ ಪ್ರಾರಂಭಿಸಿದ. 1939ರಲ್ಲಿ ನಡೆದ ಹಂಗೇರಿಯ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಟಕಾಸ್ ಎಡಗೈನಲ್ಲಿ ಪಿಸ್ತೂಲ್ ಹಿಡಿದು ನಡೆದು ಬರುತ್ತಿದ್ದುದನ್ನು ಕಂಡ ಕ್ರೀಡಾಭಿಮಾನಿಗಳು ಮತ್ತು ಸ್ಪರ್ಧಾಳುಗಳು ತಾನು ಸ್ಪರ್ಧಿಸದ್ದಿದ್ದರು ಇನ್ನಿತರ ಸ್ಪರ್ಧಿಗಳಿಗಳಿಗೆ ಪ್ರೋತ್ಸಾಹ ನೀಡಲು ಟಕಾಸ್ ಬಂದಿರುವನೆಂದುಕೊಂಡರು, ಆದರೆ ಟಕಾಸ್ ಅಲ್ಲಿ ಪ್ರೋತ್ಸಾಹಕನಾಗಿ ತಾನು ಬಂದಿಲ್ಲ ಸ್ಪರ್ಧಿಯಾಗಿ ಸ್ಪರ್ಧಿಸಲು ಬಂದಿರುವುದಾಗಿ ತಿಳಿಸಿದಾಗ ಅಭಿಮಾನಿಗಳಿಗೆ ಅವನ ಮೇಲಿದ್ದ ಅಭಿಮಾನ ಇಮ್ಮಡಿಯಾಯಿತು. ಎಲ್ಲಾ ಸ್ಪರ್ಧೆಗಳು ತಮ್ಮ ಬಲಶಾಲಿ ಕೈಗಳಿಂದ ಪಿಸ್ತೂಲಿಡಿದು ಗುರಿಯಿಡುತ್ತಿದ್ದರೇ, ಟಕಾಸ್ ವರ್ಷದ ಪರಿಶ್ರಮ, ಅಭ್ಯಾಸ, ಛಲ ಮತ್ತು ಮನೋಬಲದಿಂದ ತನಗಿದ್ದ ಕೈಯನ್ನು ಬಳಸಿ ಗುರಿತಪ್ಪದೆ ಗೆದ್ದು ರಾಷ್ಟ್ರೀಯ ಚಾಂಪಿಯನ್ಶಿಪ್ನ ಚಿನ್ನದ ಬೇಟೆಯನ್ನಾಡೇ ಬಿಟ್ಟ. ಜೊತೆಗೆ ಮುಂದೆ 1940ರ ಶೂಟಿಂಗ್ ವಿಭಾಗದ ಓಲಿಂಪಿಕ್ ಚಿನ್ನ ಹಂಗೇರಿಯಾ ದೇಶದ್ದೇ ಎಂಬ ವಿಶ್ವಾಸವನ್ನು ದೇಶದ ಜನರಲ್ಲಿ ಮೂಡಿಸಿಬಿಟ್ಟಿದ್ದ. ಆದರೆ ಮತ್ತೊಮ್ಮೆ ಎದುರಾದ ಸಂದರ್ಭವೇ ಬೇರಾಗಿತ್ತು. ಎರಡನೇ ‘ವಿಶ್ವಯುದ್ಧ’ದ ಕಾರಣ 1940 ಹಾಗೂ 1944ರ ಓಲಿಂಪಿಕ್ ರದ್ದಾಯಿತು. 1940ರ ಓಲಿಂಪಿಕ್ಗೆ ಹಾತೊರೆಯುತ್ತಿದ್ದ ಟಕಾಸ್ ಮನ ಮರುಗಲಿಲ್ಲ, ಅಭ್ಯಾಸದಲ್ಲಿ ಸ್ವಲ್ಪವೂ ನಿರಾಸಕ್ತಿ ಬರಲಿಲ್ಲ ಸತತವಾಗಿ ಶೂಟಿಂಗ್ ವಿಷಯವಾಗಿ ಪರಿಶ್ರಮ ಸಾಗುತ್ತಲೇ ಇತ್ತು. 26ರ ವಯಸ್ಸಿನಲ್ಲಿ ಟಕಾಸ್ ಕಂಡಿದ್ದ ಓಲಿಂಪಿಕ್ ಕನಸು ಬಾಳಲ್ಲಿ ಬಂದೊದಗಿದ ದುರಂತ, ಅಡೆ-ತಡೆಗಳನ್ನೆಲ್ಲ ಎದುರಿಸಿ ಕೊನೆಗೆ ತನ್ನ 38ರ ಹರೆಯದಲ್ಲಿ ನೆರವೇರಿತು.
1948ರಲ್ಲಿ ಲಂಡನ್ನಿನ ಓಲಿಂಪಿಕ್ನಲ್ಲಿ ಎಡಗೈ ಶೂಟಿಂಗ್ ವೀರನ ಗುರಿ ಹಂಗೇರಿಯಾ ದೇಶಕ್ಕೆ ಚಿನ್ನವನ್ನು ತಂದುಕೊಟ್ಟಿತ್ತು. ಅಷ್ಟು ಮಾತ್ರವಲ್ಲ, 1952ರಲ್ಲಿ ಫಿನ್ಲ್ಯಾಂಡಿನಲ್ಲಿ ನಡೆದ ಓಲಿಂಪಿಕ್ನಲ್ಲೂ ಟಕಾಸೇ ವಿಜೇತ. ಆ ತನಕ ನಡೆದಿದ್ದ ಓಲಿಂಪಿಕ್ನ 25 ಮಿಟರ್ ರಾಪಿಡ್ ಫೈರ್ ಶೂಟಿಂಗ್ ವಿಭಾಗದಲ್ಲಿ ಸತತ ಎರಡು ಬಾರಿಗೆ ಚಿನ್ನ ಗೆದ್ದ ಮೊದಲಿಗನೆಂಬ ದಾಖಲೆ ಕರೋಲಿ ಟಕಾಸ್ ಪಾಲಾಯಿತು. 1956ರ ಓಲಿಂಪಿಕ್ನಲ್ಲೂ ಉತ್ಸಾಹದಿಂದ ಭಾಗವಹಿದ ಟಕಾಸ್ ಆ ಬಾರಿ 8ನೇ ಸ್ಥಾನ ಪಡೆದು ನಂತರ ಹಂಗೇರಿಯಾ ದೇಶದ ಶೂಟರ್ಗಳಿಗೆ ಕೋಚ್ ಆಗಿ ತಮ್ಮ ಜೀವನ ಕಳೆದರು.
ಕರೋಲಿ ಟಕಾಸಿನ ಸಾಧನೆ “Olympic heroes” of the International Olympic Committee ಯಲ್ಲಿ ಜಾಗ ಪಡೆದಿದೆ ಹಾಗೂ ಅದೆಷ್ಟೋ ಕ್ರೀಡ್ರಾಪಟುಗಳಿಗೆ ಸ್ಫೂರ್ತಿಯಾಗಿರುವುದರ ಜೊತೆಗೆ ಜೀವನದಲ್ಲಿ ಏನನ್ನಾದರೂ ಕಳೆದುಕೊಂಡು ಇಲ್ಲಿಗೆ ಜೀವನವೇ ಮುಗಿದು ಹೋಯಿತೆಂದು ಕೊರಗುವ ನಿರಾಶಾವಾದಿಗಳಿಗೆ ಆಶಾಕಿರಣವಾಗಿ ಬೆಳಕು ನೀಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.