ನಿನ್ನೆ ಬೆಳಗಿನಿಂದ ಮಧ್ಯಾಹ್ನದವರೆಗೂ ನನ್ನದು ಬಿಡುವಿಲ್ಲದ ಭಾನುವಾರ. ಮಧ್ಯಾಹ್ನ ಮನೆಗೆ ಬಂದವನೇ ಕಾಲ್ಚಾಚಿ ಮಲಗಿದ್ದೆ. ಆಗ ತಾನೆ ಮೇಲೆದ್ದವನಿಗೆ ಸಮಯ ಸಂಜೆ 5 ಕಳೆದಿರುವುದು ಅರಿವಾಗಿರಲಿಲ್ಲ.
ನನ್ನ ಸನ್ಮಿತ್ರರೋರ್ವರು ಮನೆಗೆ ಬಂದು ಬಿಡುವಿದ್ದರೆ ಕೂಡಲೆ ಹೊರಡೋಣವೆಂದರು. ಅವರು ಯಾವಾಗ ಕರೆದರೂ ಎಲ್ಲಿಗೆ ಎಂದು ಮರುಪ್ರಶ್ನಿಸದೇ ಹೊರಡುವ ಅಭ್ಯಾಸ ನನ್ನದು. ತಕ್ಷಣ ತಯಾರಾಗಿ ಹೊರಟೆ, ಗಾಡಿಯ ಹಿಂದೆ ಕುಳಿತ ನಾನು, ಹೋಗೋ ದಾರಿಯಲ್ಲಿ “ಯಾವ ಕಡೆಗೆ..?” ಎಂದಾಗ ‘ಕೇಶವ ಕೃಪಾ ಕಾರ್ಯಾಲಯದಲ್ಲಿ ಸೀತಾರಾಮ್ ಜಿ. ಅವರ ಅನೌಪಚಾರಿಕ ಕಾರ್ಯಕ್ರಮ’ವೆಂದರು. ಮುಂಚಿತವಾಗಿಯೇ ತಿಳಿದಿದ್ದರೆ ಇನ್ನಷ್ಟು ಜನರಿಗೆ ವಿಷಯ ಮುಟ್ಟಿಸಬಹುದಿತ್ತೆಂದು ನಾವು ಮಾತಾನಾಡಿಕೊಳ್ಳುತ್ತಿರುವಾಗ ಇನ್ನೋರ್ವ ಹಿತೈಷಿಗಳ ಫೋನ್ ಕರೆ. ಅವರೊಡನೆ ಮಾತಾನಾಡಿ ಮುಗಿಸುವಷ್ಟರಲ್ಲಿ ಶಂಕರಪುರಂನ ಕೇಶವ ಕೃಪಾ ತಲುಪಿಯಾಗಿತ್ತು. ನಾವು ಅಲ್ಲಿಗೆ ತಲುಪುವ ವೇಳೆಗಾಗಲೇ ಕಾರ್ಯಕ್ರಮ ಶುರುವಾಗಿತ್ತು. ಓಡಿ ಹೋಗಿ ಕುಳಿತುಕೊಂಡೆವು. ಇಬ್ಬರ ಬಳಿಯೂ ಪುಸ್ತಕವಾಗಲಿ, ಲೇಖನಿ, ಹಾಳೆಗಳಾಗಲಿ ಇರಲಿಲ್ಲ. ಅದರೆ ಆ ಕಾರ್ಯಕ್ರಮದ ಬಗೆಗಿನ ನಮ್ಮ ಆಸಕ್ತಿಗೇನೂ ಕಮ್ಮಿ ಇರಲಿಲ್ಲ. ಅದಾಗಲೇ ಶುರುವಾಗಿದ್ದ ಮಾತುಕತೆ ಅಲ್ಲಿ ನೆರದಿದ್ದ ಹಿರಿಯರು, ಸಮಾನಮನಸ್ಕರು, ಮಿತ್ರರು ಮತ್ತು ಭಾರತ ಪರಿಕ್ರಮಣ ಯಾತ್ರೆಯ ವಿಷಯಾಸಕ್ತರು ಪ್ರಶ್ನೆಗಳನ್ನು ಕೇಳುತ್ತಿದ್ದರು. ಆ ಕಾರ್ಯಕ್ರಮದ ಕೇಂದ್ರಬಿಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ‘ಮಾನ್ಯ ಶ್ರೀ ಸೀತಾರಾಮ ಕೆದಿಲಾಯರು’. 2012 ಆಗಸ್ಟ್ 9, 2012 ರಿಂದ ಜುಲೈ 7, 2017 ರ ವರೆಗೆ ಕನ್ಯಾಕುಮಾರಿಯಿಂದ ಭಾರತ ಪರಿಕ್ರಮ ಯಾತ್ರೆಯನ್ನು ಪ್ರಾರಂಭಗೊಳಿಸಿ 5 ವರ್ಷಗಳಲ್ಲಿ ದೇಶದ 23100 km ಗಳ ಕಾಲ್ನಡಿಗೆಯಲ್ಲಿ 23 ರಾಜ್ಯಗಳನ್ನು ಕ್ರಮಿಸಿ ಮತ್ತದೇ ಕನ್ಯಾಕುಮಾರಿಯಲ್ಲಿಯೇ ಯಾತ್ರೆಯನ್ನು ಸಂಪನ್ನಗೊಳಿಸಿದ ಸಾಧಕರು.
ಕಾರ್ಯಕ್ರಮದ ಮಾತು-ಕತೆಯು ಅದೇ ವಿಷಯವಾಗಿತ್ತು. ಅಲ್ಲಿ ನೆರೆದವರಲ್ಲಿ ಮೂಡಿದ ಕೆಲ ಪ್ರಶ್ನೆಗಳಿಗೆ ಶ್ರೀ ಸೀತಾರಾಮ್ ಜೀ ಅವರ ಸ್ಪಷ್ಟ-ಸುಂದರ ಉತ್ತರದ 1 ಗಂಟೆಯ ಕಾರ್ಯಕ್ರಮದ ಸಣ್ಣ ಬರೆವಣಿಗೆ.
ಪಾದಯಾತ್ರೆಯಲ್ಲಿನ ತಮ್ಮ ಆರೋಗ್ಯ ?
• ಪ್ರವಾಸ, ಯಾತ್ರೆ ಎಂದರೇನೇ ಆರೋಗ್ಯವೆಂದು. ಎಲ್ಲೂ ಸಹ ಅನಾರೋಗ್ಯವಾಗದೆ ಯಾತ್ರೆ ಯಶಸ್ವಿಯಾಗಿದೆ.
ಈ ಪರಿಕ್ರಮಣ ಯಾತ್ರೆಗೆ ಎಲ್ಲಿನ ಪ್ರೇರಣೆ ?
• ಪ್ರೇರಣೆ ಎಂಬುದನ್ನು ಕೆಲವರು ಹೊರಗಡೆ ಹುಡುಕುವರು ಆದರೆ ಅದು ನಮ್ಮೊಳಗಿನದ್ದಾಗಿದೆ.
ಕೆಲವು ಪ್ರಾಂತಗಳಲ್ಲಿ ನಕ್ಸಲರ ಹಾವಳಿ ಇದೆ, ಅಲ್ಲಿನ ಯಾತ್ರಾ ಅನುಭವ ?
• ನಕ್ಸಲರಾಗಲಿ, ಭಯೋತ್ಪಾದಕರಾಗಲಿ ಮೊದಲಿಗೆ ಅವರು ಸಹ ಮನುಷ್ಯರೇ. ಮಾನವೀಯತೆ ಎಂಬುದು ಎಲ್ಲರೊಳಗು ಇದ್ದೇ ಇರುತ್ತದೆ. ಬಂಗಾಳದ ಒಂದೂರಿನಲ್ಲಿ ತಮ್ಮ ನಿವಾಸ ಹಾಗೂ ಯಾತ್ರಾ ವ್ಯವಸ್ಥೆಯನ್ನು ಮಾಡಿಕೊಟ್ಟವರು 20 ವರ್ಷಗಳಿಂದ ನಕ್ಸಲರೆಂದು ಗುರುತಿಸಿಕೊಂಡವರೇ. ಎಷ್ಟೋ ಜಾಗದಲ್ಲಿ ಕಮುನಿಸ್ಟ್ ಪಾರ್ಟಿಯವರು ತಮ್ಮ ಜೊತೆ ಮೈಲುಗಳಷ್ಟು ನಡೆದಿದ್ದಾರೆ, ನಕ್ಸಲರು ಪಶ್ಚಾತ್ತಾಪದ ಮಾತುಗಳನ್ನಾಡಿ ಅತ್ತ ಉದಾಹರಣೆಗಳೂ ಇವೆ.
ಗ್ರಾಮವಿಕಾಸಕ್ಕೆ ನೀರು, ವಿದ್ಯುತ್, ತಂತ್ರಗಾರಿಕೆಯ ವ್ಯವಸ್ಥೆ ಸರ್ಕಾರಗಳಿಂದ ಹೇಗೆ ನಡೆಯುತ್ತಿದೆ ?
• ನಿಜವಾದ ಗ್ರಾಮ ವಿಕಾಸವೆಂದರೆ ಅಲ್ಲಿನ ಜನರ ಮನೋವಿಕಾಸವಾಗಬೇಕು. ಜನರು ವಿಕಾಸವಾಗದೆ ಯಾರು ಎಷ್ಟು ನೆರವು ನೀಡಿದರೇನು? ಹಳ್ಳಿಗಳಲ್ಲಿ ಶೌಚಾಲಯಗಳನ್ನು ಕಟ್ಟಿಕೊಟ್ಟರೆ ಅವುಗಳನ್ನು ಸ್ಟೋರ್ ರೂಂಗಳಂತೆ ಉಪಯೋಗಿಸುತ್ತ ಶೌಚಕ್ಕೆ ಬಯಲಿಗೆ ಹೋಗುವ ಎಷ್ಟೋ ಜನರಿದ್ದಾರೆ. ವಿವೇಕಾನಂದರ ನುಡಿಯಂತೆ “ಇಡೀ ದೇಶದ ಸಂಪತ್ತನ್ನು ಒಂದು ಗ್ರಾಮದಲ್ಲಿ ಸುರಿದರೂ, ಆ ಹಳ್ಳಿಯ ಜನರ ಮನ ಪರಿವರ್ತನೆ ಆಗದಿದ್ದರೆ ಗ್ರಾಮ ವಿಕಾಸ ಕನಸಿನ ಮಾತು”.
ಉತ್ತರಾಂಚಲ ರಾಜ್ಯಗಳು ಹೇಗಿದೆ ?
• ಅಸ್ಸಾಂ ರಾಜ್ಯದ ಪ್ರತಿ ಗ್ರಾಮಗಳು ಬಹಳ ಸ್ವಚ್ಛವಾಗಿವೆ. ಅಲ್ಲಿನ ಜನರು ಅತಿಥಿಗಳಿಗೆ ತಾವೇ ನೈದ ಬಟ್ಟೆಯನ್ನು ಉಡುಗೊರೆಯಾಗಿ ನೀಡುವುದು ವಿಶೇಷ. ಅಸ್ಸಾಂ ರುಮಾಲು ದೇಶದಲ್ಲೇ ಜನಪ್ರಿಯವಾಗಿದೆ.
ವಿವಿಧ ರಾಜ್ಯಗಳ ಜನರನ್ನು ಸಂಪರ್ಕಿಸುವ ವೇಳೆ ಭಾಷೆಯ ತೊಡಕುಂಟಾಗಲಿಲ್ಲವೇ ?
• ಹೃದಯದ ನುಡಿಗಳಿಗೆ ಯಾವ ಭಾಷೆಯಾದರೇನು? ಪ್ರೀತಿ, ಆತ್ಮೀಯತೆಯಿಂದ ಮಾತನಾಡಿದಾಗ ತೊಡಕುಗಳೆಲ್ಲಿ.
ಗ್ರಾಮಗಳಲ್ಲಿನ ವಿಜ್ಞಾನ ?
• ಗ್ರಾಮಗಳಲ್ಲಿನ ಪ್ರಾಚೀನ ದೇವಾಲಯಗಳ ಕಂಡರೆ ಸಾಕು ಆಗಿನ ಕಾಲದಲ್ಲಿಯೇ ಅಲ್ಲಿ ಗಣಿತ ವಿಜ್ಞಾನ ಎಷ್ಟು ಮುಂದುವರಿದಿದೆಂಬುದು ತಿಳಿಯುತ್ತದೆ. ಸಿಮೆಂಟ್, ಕಾಂಕ್ರಿಟಿನ ಬಳಕೆಗಳಿಲ್ಲದ ಬೃಹದಾಕಾರದ ಕಂಬಗಳ ಜೋಡಣೆ ಮತ್ತು ವಾಸ್ತುಶಿಲ್ಪ ಅದ್ಭುತ ವಿಜ್ಞಾನ.
ನಿಜವಾಗಿಯೂ ನಮ್ಮ ಗ್ರಾಮಗಳು ಹೇಗಿವೆ ?
• ತುಂಬಾ ಸೊಗಸಾಗಿದೆ. ಆಧ್ಯಾತ್ಮಿಕತೆ ಜನಜೀವನದ ವ್ಯವಹಾರಗಳಲ್ಲಿ ಕಾಣಬೇಕೆಂದರೆ ನಾವು ಹಳ್ಳಿಗಳಿಗೆ, ಗ್ರಾಮಗಳಿಗೆ ಭೇಟಿ ನೀಡಬೇಕು.
ಯಾತ್ರೆಯಲ್ಲಿ ಯಾವುದಾದರೂ ಕೆಟ್ಟ ಸಂಗತಿಗಳು ನಡೆದವೇ ?
• ತಮ್ಮ ಇಡೀ ಯಾತ್ರೆ ಸುಖವಾಗಿ, ಸುಸೂತ್ರವಾಗಿ ಪ್ರತಿ ಹಂತದಲ್ಲೂ ಒಳ್ಳೆಯ ಸಂಗತಿಯಿಂದಲೇ ಕೂಡಿತ್ತು. ನಮಗೆ ಎಲ್ಲೂ ಕೆಟ್ಟದೆಂಬುದೇ ಕಾಣ ಸಿಗಲಿಲ್ಲ. ನೊಣಕ್ಕೆ ಯಾವಾಗಲೂ ಕೊಳಕೇ ಆಕರ್ಷಣೆ. ಅದರ ಮೇಲೆ ಕುಳಿತು ಇತರೆಡೆಗೆ ಹಾರಿ ಕಾಯಿಲೆ ಹರಡುವುದೇ ಅದರ ಸ್ವಭಾವ. ಅದೇ ಜೇನುನೊಣ ಹೂಗಳಿಂದ ಮಕರಂದ ಹೀರಿ ಜೇನುಗೂಡು ಕಟ್ಟುತ್ತದೆ.
ಪೂರ್ಣ ಭಾರತವನ್ನು ನೀವು ಸುತ್ತಾಡಿ ಜನ, ವಿಜ್ಞಾನ, ಅಭಿವೃದ್ಧಿ, ಹಳ್ಳಿ – ಗ್ರಾಮ ಎಲ್ಲವನ್ನೂ ನೋಡಿ ಬಂದಿದ್ದೀರಿ, ಮುಂಬರುವ ವರ್ಷಗಳಲ್ಲಿ ನಮ್ಮ ದೇಶ ಹೇಗಿರಲಿದೆ ?
• ಕೆಲವು ವರ್ಷಗಳಲ್ಲೇ ಭಾರತ ವಿಶ್ವಗುರುವಾಗುವುದು ನಿಶ್ಚಿತ. ಅದರ ಲಕ್ಷಣಗಳು ಈಗಲೇ ಎಲ್ಲೆಡೆ ಗೋಚರಿಸುತ್ತಿದೆ.
ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ಸೀತಾರಾಮ್ ಜೀ ಅವರಿಂದ ವೇದ, ಉಪನಿಷತ್ತುಗಳ ಶ್ಲೋಕಗಳ ಉಲ್ಲೇಖ, ಮಾಜಿ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂರವರ ಮನೆಯಲ್ಲಿ ಅವರ ಕುಟುಂಬಸ್ಥರ ಭೇಟಿ ಹಾಗೂ ವಿವಿಧ ಜನರ ಒಡನಾಟದಲ್ಲಿನ ನೋವು-ನಲಿವುಗಳು, ಸಾವಿನ ಮನೆಯ ತಮ್ಮ ಭೇಟಿ ಹೀಗೆ ಎಷ್ಟೋ ಸ್ವಾರಸ್ಯಕರವಾದ ವಿಷಯಗಳನ್ನು ಕೇಳುವ ಭಾಗ್ಯ ನೆರೆದಿದ್ದವರ ಪಾಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.