ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಕ್ರಾಂತಿಯ ಕಿಡಿ ಭಾರತಾಂಬೆಯ ಹೆಮ್ಮೆಯ ಪುತ್ರ ಮಂಗಲ್ ಪಾಂಡೆ ಜನ್ಮದಿನ ಇಂದು.
ಬನ್ನಿ ಆ ವೀರನನ್ನು ನೆನೆಯೋಣ. ಆತ ನಮಗಾಗಿ ಮಾಡಿದ ತ್ಯಾಗ ಬಲಿದಾನಗಳ ಸ್ಮರಿಸೋಣ, ನಮಗಾಗಿ ಅವರು ತಂದು ಕೊಟ್ಟ ಸ್ವಾತಂತ್ರ್ಯವನ್ನು ಕಾಪಾಡೋಣ.
ಮಹಾನ್ ಭಾರತೀಯ ಸ್ವಾತಂತ್ರ್ಯಯೋಧರೆಂದು ಚಿರಸ್ಮರಣೀಯರಾದ ಮಂಗಲ್ ಪಾಂಡೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ, ನಾಗವ ಹಳ್ಳಿಯ ಬಡ ಕುಟುಂಬವೊಂದರಲ್ಲಿ 19ನೇ ಜುಲೈ 1827 ರಂದು ಜನಿಸಿದರು. ಕೃಷಿಯನ್ನವಲಂಬಿಸಿದ್ದ ಅವರ ತಂದೆ ದಿವಾಕರ್ ಪಾಂಡೆಯವರು ಮಂಗಲ್ ಪಾಂಡೆ ಇನ್ನೂ ಮೂರು ವರ್ಷದ ಮಗುವಾಗಿದ್ದಾಗಲೇ ಅಂದಿನ ಬರಗಾಲದ ಪರಿಣಾಮವಾಗಿ ನಿಧನರಾದರು. ಕಷ್ಟಪಟ್ಟು ಬೆಳೆದ ಮಂಗಲ್ ಪಾಂಡೆ 1849ರ ವರ್ಷದಲ್ಲಿ ತಮ್ಮ 22ನೇ ವಯಸ್ಸಿನಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೇವೆಗೆ ಸೇರಿದರು.
ಅಂದಿನ ದಿನಗಳಲ್ಲಿ ಬ್ರಿಟಿಷ್ ಸೇನೆಯಲ್ಲಿದ್ದ ಭಾರತೀಯ ಸಿಪಾಯಿಗಳನ್ನು ಅಗೌರವದಿಂದ ಕಾಣಲಾಗುತ್ತಿತ್ತು. ಬ್ರಿಟಿಷ್ ಸಿಪಾಯಿಗಳಿಗೆ ಹೋಲಿಸಿದರೆ ಭಾರತೀಯ ಸಿಪಾಯಿಗಳಿಗೆ ಸಿಗುತ್ತಿದ್ದ ಸಂಬಳವೂ ಕಡಿಮೆ. ಯುದ್ಧಗಳಲ್ಲಿ ಹೋರಾಡಲು ಭಾರತದಿಂದ ಬೇರೆ ಕಡೆಗೂ ಹೋಗಬೇಕಿತ್ತು. ಹಣೆಗೆ ತಿಲಕ ಇಟ್ಟುಕೊಳ್ಳುವುದು, ಗಡ್ಡ-ಮೀಸೆ ಬೆಳೆಸುವುದು ಕೂಡ ನಿಷಿದ್ಧವಾಗಿತ್ತು. ದೇವನಾಗರಿ ಉರ್ದು ಲಿಪಿಗಳಲ್ಲಿ ಕ್ರೈಸ್ತ ಧರ್ಮ ಬೋಧನೆಗಳನ್ನು ಹಂಚಿ ಭಾರತೀಯ ಮನೋಧರ್ಮಗಳನ್ನು ಖಂಡಿಸುವ ಪ್ರಯತ್ನಗಳು ಎಡಬಿಡದೆ ನಡೆಯತೊಡಗಿದವು. ಇದಲ್ಲೆವನ್ನೂ ಮೀರಿದ್ದು ಎಂಬಂತೆ ಸಿಪಾಯಿಗಳಿಗೆ ಕೊಟ್ಟ ಹೊಸ ಬಂದೂಕುಗಳಿಗೆ ತುಪಾಕಿ ಹಾಕುವ ಮೊದಲು ಅವನ್ನು ಬಾಯಿಯಿಂದ ಕಚ್ಚಿ ಮೇಲಿನ ಕವಚ ಕೀಳಬೇಕಿತ್ತು. ಆ ತುಪಾಕಿಗಳಿಗೆ ಹಸು ಮತ್ತು ಹಂದಿಗಳ ದೇಹದ ಕೊಬ್ಬನ್ನು ಸವರಿದ್ದರೆಂಬ ಸುದ್ದಿ ಇತ್ತು. ಇದರಿಂದ ಭಾರತದ ಸಿಪಾಯಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿ ಅವರೆಲ್ಲ ದಂಗೆ ಎದ್ದರು.
ಮಾರ್ಚ್ 29, 1857. ಬಂಗಾಲ ಪ್ರಾಂತ್ಯದ ಬಾರಕ್ಪುರ ಕಂಟೋನ್ಮೆಂಟ್ನ ಮಂಗಲ್ ಪಾಂಡೆ ಬ್ರಿಟಿಷ್ ಅಧಿಕಾರಿಯ ಮೇಲೆ ಗುಂಡು ಹಾರಿಸಿದರು. ಆ ನಂತರದಲ್ಲಿ ಬ್ರಿಟಿಷರಿಗೆ ತಲೆಬಾಗಬಾರದೆಂಬ ಉದ್ದೇಶದಿಂದ ತಮ್ಮನ್ನೂ ಕೊಂದುಕೊಳ್ಳಲು ಯತ್ನಿಸಿದ ಅವರ ಪ್ರಯತ್ನ ವಿಫಲಗೊಂಡಿತು. ನಂತರದಲ್ಲಿ ಬ್ರಿಟಿಷರು ಅವರನ್ನು ಗಲ್ಲಿಗೇರಿಸಿದರು. ಈ ಘಟನೆಯೇ ದಂಗೆಯ ಪ್ರೇರಕ ಶಕ್ತಿ. ಮಂಗಲ್ ಪಾಂಡೆ ಅವರನ್ನು ಗಲ್ಲಿಗೇರಿಸಲಾಯಿತಾದರೂ ಅವರು ಮಾಡಿದ ಈ ಹೋರಾಟ ಭಾರತೀಯ ಮನಗಳಲ್ಲಿ ಕಾವು ನೀಡಿತ್ತು. ಮೇ 10, 1857ರಂದು ಮೀರತ್ನಲ್ಲಿದ್ದ ಬಂಗಾಲ ತುಕಡಿಯಲ್ಲಿನ ಭಾರತದ ಸಿಪಾಯಿಗಳೆಲ್ಲಾ ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಬ್ರಿಟಿಷ್ ಅಧಿಕಾರಿಗಳ ಆದೇಶವನ್ನು ಸಾಮೂಹಿಕವಾಗಿ ಧಿಕ್ಕರಿಸಿ ಎಲ್ಲರೂ ದೆಹಲಿಯಲ್ಲಿ ಕವಾಯತು ಹೊರಟರು. ವಿವಿಧ ಪ್ರಾಂತ್ಯಗಳ ಸಿಪಾಯಿಗಳೂ ಅವರನ್ನು ಸೇರಿಕೊಳ್ಳತೊಡಗಿದರು. ಅವರೆಲ್ಲಾ ಮುಘಲ್ ದೊರೆ ಬಹಾದೂರ್ ಶಾ ಜಫಾರ್ ಭಾರತದ ಚಕ್ರವರ್ತಿ ಎಂದು ಘೋಷಿಸಿದರು.
ನಾನಾಸಾಹೇಬ್ ಪೇಶ್ವೆ, ತಾತ್ಯಾ ಟೋಪೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಅವಧ್ನ ಬೇಗಂ ಹಜ್ರತ್ ಮಹಲ್, ಬಿಹಾರದ ಕುನ್ವರ್ಸಿಂಗ್, ಮೌಲ್ವಿ ಅಹಮದುಲ್ಲಾ ಇವರೆಲ್ಲರೂ ವಿವಿಧ ಪ್ರಾಂತ್ಯಗಳಲ್ಲಿ ದಂಗೆಯ ನೇತೃತ್ವ ವಹಿಸಿಕೊಂಡಿದ್ದರು. ಉತ್ತರ ಪ್ರದೇಶದ ಬಹುತೇಕ ಹಳ್ಳಿಗಳು, ಪಟ್ಟಣಗಳು ದಂಗೆಯಲ್ಲಿ ಪಾಲ್ಗೊಂಡವು. ಬಂಗಾಲದಿಂದ ಬಿಹಾರ, ಒರಿಸ್ಸಾಗೂ ಸಮರದ ಜ್ವಾಲೆಗಳು ಹಬ್ಬಿದವು. ಔರಂಗಾಬಾದ್, ಕೊಲ್ಹಾಪುರ, ಸತಾರಾ ಹಾಗೂ ನಾಗ್ಪುರಗಳಲ್ಲೂ ಸಿಪಾಯಿಗಳು ದಂಗೆ ಎದ್ದರು. ಕುನ್ವರ್ಸಿಂಗ್, ಮೌಲ್ವಿ ಅಹಮದುಲ್ಲಾ ಹಾಗೂ ರಾಣಿ ಲಕ್ಷ್ಮೀಬಾಯಿ ತಮ್ಮ ಜೀವವನ್ನೇ ತೆತ್ತರು. ತಾತ್ಯಾ ಟೋಪೆಯನ್ನು ಬ್ರಿಟಿಷರು ಹಿಡಿದು ಗಲ್ಲಿಗೇರಿಸಿದರು. ಬಹಾದೂರ್ ಶಾನನ್ನು ಬ್ರಿಟಿಷರು ಬಂಧಿಸಿ, ಸೆರೆಮನೆಯಲ್ಲಿಟ್ಟರು.
ಹೀಗೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪ್ರಥಮ ಕಿಚ್ಚನ್ನು ನೀಡಿದ ಮಂಗಲ್ ಪಾಂಡೆ ಚಿರಸ್ಮರಣೀಯರಾಗಿದ್ದಾರೆ. ಈ ಮಹಾನ್ ಚೇತನಕ್ಕೆ ಭಕ್ತಿಯಿಂದ ನಮಿಸೋಣ.
ವಂದೇ ಮಾತರಂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.