ಭಾರತೀಯ ಸಂಸ್ಕೃತಿಯ ಆಧಾರದ ಮೇಲೆ ದೇಶವನ್ನು ಪುನರ್ ನಿರ್ಮಾಣ ಮಾಡುವ ಹಾಗೂ ಜಗತ್ತಿನಲ್ಲಿ ಭಾರತವನ್ನು ಪ್ರಬಲ ರಾಷ್ಟ್ರವನ್ನಾಗಿಸುವ ಗುರಿಯನ್ನು ಹೊಂದಿ, ಆ ಮಹಾನ್ ಕಾರ್ಯಕ್ಕೆ ತಮ್ಮ ಬದುಕನ್ನು ಮುಡುಪಾಗಿಟ್ಟ ನಮ್ಮ ಹಿರಿಯರು ದಾರಿದೀಪವಾಗಿದ್ದಾರೆ.
ಡಾ|| ಶ್ಯಾಮ ಪ್ರಸಾದ್ ಮುಖರ್ಜಿ ಶ್ರೇಷ್ಠ ವಿದ್ವಾಂಸರು, ಶ್ರೇಷ್ಠ ರಾಜನೀತಿ ತಜ್ಞ, ಅಸಾಧಾರಣ ಸಂಸದೀಯ ಪಟು, ಭಾರತೀಯ ರಾಜಕೀಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಅಪಾರ.
ಶಿಕ್ಷಣ ಕ್ಷೇತ್ರದಲ್ಲಿನ ಶೈಕ್ಷಣಿಕ ಯೋಜನೆ, ಅದರ ವಿಧಿವಿಧಾನ ಚೆನ್ನಾಗಿ ಬಲ್ಲವರಾಗಿದ್ದ ಮುಖರ್ಜಿಯವರು ವಿಶ್ವ ವಿದ್ಯಾಲಯದ ಸೆನೆಟ್ ಹಾಗು ಸಿಂಡೀಕೆಟ್ಗಳಿಗೆ 1924 ರಲ್ಲಿ ಚುನಾಯಿತರಾದರು.
ಬಂಗಾಳದ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಲ್ಕತ್ತ ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದರು.
ಅತ್ಯಂತ ಕಿರಿಯ ವಯಸ್ಸಿನಲ್ಲೇ ಕಲ್ಕತ್ತಾ ವಿಶ್ವವಿದ್ಯಾನಿಲಯದ ಉಪ ಕುಲಪತಿಯಾಗಿ 1934 ರಲ್ಲಿ ನೇಮಕಗೊಂಡರು. ಅವರ ಪ್ರತಿ ಕಾರ್ಯದಲ್ಲೂ ಮಾತಿನಲ್ಲೂ ದೇಶಾಭಿಮಾನ ಎದ್ದು ಕಾಣುತ್ತಿತ್ತು.
ಉಜ್ವಲ ಪ್ರತಿಭೆಯಿಂದ ಉತ್ತಮ ವಿದ್ಯಾರ್ಥಿ ಎಂಬ ಗೌರವಕ್ಕೆ ಪಾತ್ರರಾದರು.
ಪತ್ರಿಕೋದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮುಖರ್ಜಿ ಬಂಗವಾಣಿ ಕ್ಯಾಪಿಟಲ್ ಪತ್ರಿಕೆಗಳಿಗೆ ಪರಿಣಾಮಕಾರಿ ಲೇಖನ ಬರೆಯುತ್ತಿದ್ದರು. 40ನೇ ವರ್ಷದಲ್ಲಿ ನ್ಯಾಷನಲಿಸ್ಟ್ ಎಂಬ ಸ್ವಂತ ಪತ್ರಿಕೆ ಪ್ರಾರಂಭಿಸಿದರು.
ಸ್ಥಳೀಯ ಸಮಸ್ಯೆಯಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ ಸಮಸ್ಯೆಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು. ಮುಖರ್ಜಿಯವರ ಮಾತುಗಳು ಸ್ಪಷ್ಟ ನಿಖರ ಮತ್ತು ನೇರವಾಗಿದ್ದವು, ದೃಢ ನಿಶ್ಚಯದಿಂದ ಕೂಡಿದ್ದವು. ದುಷ್ಟ ಶಕ್ತಿಗಳಿಂದ ದೇಶ ವಿಭಜಿಸುವ ಹುನ್ನಾರ ನಡೆದಾಗ ಪ್ರತಿ ಹಂತದಲ್ಲಿಯೂ ಪ್ರಬಲವಾಗಿ ವಿರೋಧಿಸುತ್ತಾ ಬಂದರು. ಭಾರತದ ಏಕತೆ ಅಖಂಡತೆಗೆ ಅವರಿಗಿದ್ದ ಪ್ರೇಮ, ಕಾಳಜಿ, ಪ್ರತಿಯೊಬ್ಬ ಭಾರತೀಯನಿಗೆ ಅವರ ಮೇಲೆ ಅಪಾರ ಗೌರವ ಮೂಡಿಸಿತ್ತು. ಸಂಯುಕ್ತ ಬಂಗಾಳದಲ್ಲಿ ರಾಷ್ಟ್ರೀಯ ಸರ್ಕಾರದ ರಚನೆಗೆ ಇವರೇ ಕಾರಣ.
ಡಾ|| ಮುಖರ್ಜಿಯವರು ಹಿಂದೂ ಮಹಾಸಭಾ ನಾಯಕತ್ವದಲ್ಲಿ ಅಖಂಡ ಭಾರತದ ಒಕ್ಕೂಟದ ಕಲ್ಪನೆಯನ್ನು ಮಿಷನ್ನಿನ ಮುಂದೆ ತರ್ಕಬದ್ಧವಾಗಿ ಹಾಗು ಪರಿಣಾಮಕಾರಿಯಾಗಿ ಮಂಡಿಸಿದರು. ಇವರ ಮಾತೆಂದರೆ ದೇಶ ಭಕ್ತರಿಗೆ ಆನಂದ ಮತ್ತು ಸ್ಪೂರ್ತಿ ನೀಡುತ್ತಿತ್ತು. ದೇಶ ದ್ರೋಹಿಗಳಿಗೆ ಸಿಂಹ ಸ್ವಪ್ನವಾಗಿತ್ತು. ಸ್ವಾರ್ಥ ಹಾಗು ಸಮಯ ಸಾಧಕ ರಾಜಕಾರಣಿಗಳಿಗೆ ಕಟ್ಟೆಚ್ಚರ ನೀಡುತ್ತಿತ್ತು. “ಆಂಗ್ಲರೇ ಭಾರತ ಬಿಟ್ಟು ತೊಲಗಿ” ಆಂದೋಲನದ ಕಷ್ಟಕರ ಸ್ಥಿತಿಯಲ್ಲಿ ಭಾರತೀಯ ರಾಷ್ಟ್ರೀಯತೆಯ ವಕ್ತಾರರಾಗಿ ಕಾರ್ಯಪ್ರವೃತ್ತರಾದರು. 1947 ರಲ್ಲಿ ರಚನೆಯಾದ ರಾಷ್ಟ್ರೀಯ ಸರ್ಕಾರದಲ್ಲಿ ಪ್ರಥಮ ಕೈಗಾರಿಕಾ ಮತ್ತು ವಾಣಿಜ್ಯ ಮಂತ್ರಿಗಳಾಗಿದ್ದರು. ಭಾರತದ ಕೈಗಾರಿಕಾ ನೀತಿಗೆ ಅಡಿಪಾಯ ಹಾಕಿದವಾರೇ ಮುಖರ್ಜಿಯವರು. ಮಂತ್ರಿಯಾಗಿ ಹಲವಾರು ಪ್ರಗತಿಪರ ಯೋಜನೆ ಹಾಗು ಸುಧಾರಣೆಗೆ ಕಾರಣರಾದರು. ಅವರ ದಕ್ಷ ಹಾಗು ಪ್ರಾಮಾಣಿಕ ಆಡಳಿತಕ್ಕೆ ಇಡೀ ದೇಶವೇ ತಲೆದೂಗಿತ್ತು.
ನೆಹರೂ ಸರ್ಕಾರ ಪಾಕಿಸ್ಥಾನದ ಬಗ್ಗೆ ತಿಳಿದಿದ್ದ ಸಿಎಎಗೆ ವಿರೋಧ ವ್ಯಕ್ತಪಡಿಸಿದರು. ಪಾಕಿಸ್ಥಾನದಲ್ಲಿ ಹಿಂದುಗಳ ಮೇಲೆ ನಡದ ದೌರ್ಜನ್ಯಕ್ಕೆ ಕಿಡಿಕಾಡಿದರು. ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಿದರು. ನೀತಿ, ತತ್ವದ ಆಧಾರದ ಮೇಲೆ ಮಂತ್ರಿ ಪದವಿ ತ್ಯಾಗ ಮಾಡಿದ ಸ್ವಾತಂತ್ರ್ಯ ಭಾರತದ ಪ್ರಪ್ರಥಮ ರಾಷ್ಟ್ರ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿಯವರು ದೇಶದ ಪರಿಸ್ಥಿತಿ ಅಧೋಗತಿಗೆ ಇಳಿದಾಗ, ರಾಜಕೀಯ ಅಸ್ಥಿರತೆ, ಆಡಳಿತ ದೋಷ ಕಂಡಾಗ ಅವಿರತ ದುಡಿದು “ಭಾರತೀಯ ಜನಸಂಘ” ಎಂಬ ಹೊಸ ಪಕ್ಷಕ್ಕೆ ನಾಂದಿ ಹಾಡಿದರು. 1953 ಅಕ್ಟೋಬರ್ 23 ರಂದು ಕಾಶ್ಮೀರವನ್ನು ಭಾರತದಲ್ಲಿ ಉಳಿಸಲು ನಡೆಸಿದ ಹೋರಾಟದಲ್ಲಿ ಡಾ|| ಮುಖರ್ಜಿಯವರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದರು.
ದೇಶದ ಏಕತೆಗಾಗಿ ಶ್ರಮಿಸಿದ ಮಹಾನ್ ಆತ್ಮ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಆದರ್ಶಗಳನ್ನು ಅವರ ಬಲಿದಾನ ದಿನವಾದ ಇಂದು ನೆನೆಯೋಣ.
ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿಕೆಗೆ ಬಲಿದಾನಗೈದ ಅವರ ತ್ಯಾಗ ಬಲಿದಾನ ವ್ಯರ್ಥವಾಗದಂತೆ ದೇಶದ ಅಖಂಡತೆಯನ್ನು ಉಳಿಸಿ, ದೇಶವನ್ನು ಕಟ್ಟಿ ಬೆಳೆಸುವ ಪ್ರಯತ್ನ ಮಾಡೋಣ.
ವಂದೇಮಾತರಂ | ಜೈಹಿಂದ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.