ಬೆಂಗಳೂರು : ಇಂದು ಬೆಂಗಳೂರನ್ನು ಜಾಗತಿಕವಾಗಿ ‘ಅತ್ಯಂತ ಕ್ರಿಯಾಶೀಲ ನಗರ’ ಎಂದು ಗುರುತಿಸಲಾಗಿದೆ. ಈ ವಿಚಾರ ನಮ್ಮ ಯುವ ಪೀಳಿಗೆಯಲ್ಲಿ ಸ್ಫೂರ್ತಿಯನ್ನು ತುಂಬಬೇಕು. ಅದೇ ರೀತಿ, ಕರ್ನಾಟಕವು ದೇಶದಲ್ಲಿಯೇ ಸ್ಟಾರ್ಟ್ಅಪ್ ಉದ್ಯಮಗಳಲ್ಲಿ ನಂ. 1 ಆಗಿದ್ದು, ದೇಶದ ಒಟ್ಟು ಸ್ಟಾರ್ಟ್ಅಪ್ ನಲ್ಲಿ ಶೇಕಡ 30ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ನಮ್ಮ ರಾಜ್ಯದಲ್ಲಿಯೇ ಇವೆ ಎನ್ನುವ ಅಂಶ ನಮ್ಮ ಯುವಜನತೆಯಲ್ಲಿ ಉತ್ಸಾಹವನ್ನು ತುಂಬಬೇಕು. ಹೊಸ ಆಲೋಚನೆಗಳು, ಚಿಂತನೆಗಳನ್ನು ಈ ನಾಡು ಯಾವತ್ತೂ ಪ್ರೋತ್ಸಾಹಿಸುತ್ತಾ ಬಂದಿದೆ. ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳು ಹಾಗೂ ಎಲ್ಲಾ ಗ್ರಾಮ ಮತ್ತು ನಗರಗಳು ಕ್ರೀಯಾಶೀಲವಾಗಬೇಕೆಂಬುದು ನನ್ನ ಆಸೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ.
ಕಾರ್ಮಿಕ ಮಾರುಕಟ್ಟೆಯಲ್ಲಿ ಬದಲಾಗುತ್ತಿರುವ ತಂತ್ರಜ್ಞಾನದೊಂದಿಗೆ ಕೌಶಲ್ಯವುಳ್ಳ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆ ಇದೆ. ಇದರಿಂದ ಶಾಲೆಯಿಂದ ಹೊರಗುಳಿದ ಮತ್ತು ಕೌಶಲ್ಯದಿಂದ ವಂಚಿತರಾದ ಯುವಕ ಯುವತಿಯರಿಗೆ ಕೌಶಲ್ಯಗಳ ಕೊರತೆಯಿಂದಾಗಿ ಲಾಭದಾಯಕ ಉದ್ಯೋಗವನ್ನು ಪಡೆಯುವುದು ಕಷ್ಟಕರವಾಗಿದೆ. ರಾಜ್ಯ ಸರ್ಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ 2016ರಿಂದಲೇ ಈ ಕುರಿತು ಯೋಜನೆಗಳನ್ನು ರೂಪಿಸಲು ಪ್ರಾರಂಭಿಸಿದೆ.
ರಾಜ್ಯದಲ್ಲಿ ಅನೇಕ ಕಾರ್ಯಕ್ರಮಗಳಡಿ ಸರ್ಕಾರಿ ಇಲಾಖೆಗಳು ಮತ್ತು ಖಾಸಗಿ ಏಜೆನ್ಸಿಗಳು ಕೌಶಲ್ಯ ತರಬೇತಿಯನ್ನು ನೀಡುತ್ತಿವೆ. ಆದರೆ ತರಬೇತಿ ಪಠ್ಯಕ್ರಮ, ಮೌಲ್ಯ ಮಾಪನ ಮತ್ತು ಪ್ರಮಾಣ ಪತ್ರ ನೀಡುವಿಕೆ ಇತ್ಯಾದಿ ವಿಷಯಗಳಿಗೆ ಅಧಿಕೃತ ಮುದ್ರೆ ಇಲ್ಲದಿರುವುದರಿಂದ ಈ ಪ್ರಮಾಣ ಪತ್ರಗಳಿಗೆ ಮಾನ್ಯತೆ ಇರುವುದಿಲ್ಲ. ಉದ್ಯೋಗದಾತರು ಬಯಸುವ ಕೌಶಲ್ಯಗಳಲ್ಲಿ ತರಬೇತಿ ಇಲ್ಲದೆ ಇರುವುದರಿಂದ ಯೋಗ್ಯ ಉದ್ಯೋಗಗಳು ದೊರೆಯುತ್ತಿಲ್ಲ. ತರಬೇತಿ ನಂತರ ತರಬೇತಿ ಹೊಂದಿದ ಅಭ್ಯರ್ಥಿಗಳು ಉದ್ಯೋಗ ಹೊಂದಿದ ಮತ್ತು ಮುಂದುವರೆದ ಕುರಿತು ಜಾಡು ಹಿಡಿಯುವ ಪದ್ಧತಿ ನಿಯತವಾಗಿ ಅನುಸರಿಸಲು ಆಗದ ಕಾರಣ ತರಬೇತಿ ಹೊಂದಿದ ಯುವಜನರ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು, ಏಕೀಕೃತ ನಿಯಂತ್ರಣ, ಗುಣಮಟ್ಟ, ಪ್ರಮಾಣೀಕರಣ, ಪ್ರೋತ್ಸಾಹ, ಯೋಜನೆ ತಯಾರಿಕೆ, ಅನುಷ್ಠಾನ, ಉಸ್ತುವಾರಿ, ಮೌಲ್ಯಮಾಪನ, ಇತ್ಯಾದಿ ವಿಷಯಗಳ ಕುರಿತು ವ್ಯಾಪಕವಾದ ಪಾತ್ರವನ್ನು ಹೊಂದಿರುವ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಸೃಜಿಸಲಾಗಿದೆ. ವಿವಿಧ ಕೌಶಲ್ಯಗಳನ್ನು ಯುವಜನರಿಗೆ ಒದಗಿಸಿ ಅವರ ಕೈಗಳನ್ನು ಬಲ ಪಡಿಸಲು ಮುಂದಾಗಿದೆ. ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳನ್ನು ಒಗ್ಗೂಡಿಸಿ “ಕುಶಲತೆಯ ಬೆಂಬಲ, ಯುವ ಕೈಗಳಿಗೆ ಬಲ” ಎನ್ನುವ ಘೋಷಣೆಯೊಂದಿಗೆ “ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ”ಯನ್ನು ರೂಪಿಸಿದೆ. ಈ ಯೋಜನೆಯಡಿ ಕೈಗೊಳ್ಳಲಾಗುವ ವೃತ್ತಿ ತರಬೇತಿಗಳು, ಮಾರುಕಟ್ಟೆ ಆಧಾರಿತ ನಿಗದಿತ ಪಠ್ಯಕ್ರಮ, ಮೌಲ್ಯ ಮಾಪನ ಮತ್ತು ಪ್ರಮಾಣೀಕರಣವನ್ನು ಹೊಂದಿರುತ್ತವೆ.
ಕರ್ನಾಟಕ ಜ್ಞಾನ ಆಯೋಗವು 2030 ರವರೆಗೆ ವಿವಿಧ ವಲಯಗಳ ವೃತ್ತಿಗಳಲ್ಲಿ 1.88 ಕೋಟಿ ಯುವಜನರಿಗೆ ಕೌಶಲ್ಯ ತರಬೇತಿಯನ್ನು ನೀಡಬೇಕು ಎಂದು ಅಂದಾಜು ಮಾಡಿದೆ. ದೊಡ್ಡ ಪ್ರಮಾಣದ ಈ ಗುರಿಯನ್ನು ತಲುಪಲು ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
2017-18ನೇ ಸಾಲಿನಲ್ಲಿ 5 ಲಕ್ಷ ಯುವಕ-ಯುವತಿಯರಿಗೆ ಕೌಶಲ್ಯೀಕರಣ, ಮರು ಕೌಶಲ್ಯೀಕರಣ ಮತ್ತು ಉನ್ನತ ಕೌಶಲ್ಯೀಕರಣ ತರಬೇತಿಯನ್ನು ನೀಡಿ ಲಾಭದಾಯಕ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುವುದು. ಮುಖ್ಯಮಂತ್ರಿಗಳ ಕರ್ನಾಟಕ ಜೀವನೋಪಾಯ ಯೋಜನೆಯಡಿ 50,000 ಸ್ಥಳೀಯ ಕುಶಲಕರ್ಮಿಗಳಿಗೆ ವಿಶೇಷವಾಗಿ ಮಹಿಳೆಯರಿಗೆ ಸ್ಥಳೀಯ ಕರಕುಶಲ, ಕೈಮಗ್ಗ, ಮುಂತಾದ ವಲಯಗಳನ್ನು ಉತ್ತೇಜಿಸಿ ಜೀವನೋಪಾಯ ಕಲ್ಪಿಸಲು ಕೌಶಲ್ಯ ತರಬೇತಿ, ವಿನ್ಯಾಸ ನಿರ್ಮಾಣಕ್ಕೆ ನೆರವು ಮತ್ತು ಮಾರುಕಟ್ಟೆ ಸೌಲಭ್ಯವನ್ನು “ಸ್ಥಳೀಯ ಮಟ್ಟದಿಂದ ಜಾಗತೀಕ ಮಟ್ಟದವರೆಗೆ” ಉಪಕ್ರಮದಡಿಯಲ್ಲಿ ನೀಡಲಾಗುವುದು. ಕರ್ನಾಟಕ ಅಪ್ರೆಂಟಿಷಿಪ್ ಯೋಜನೆಯಡಿ 50,000 ವಿದ್ಯಾರ್ಥಿಗಳಿಗೆ ಅಪ್ರೆಂಟಿಷಿಪ್ ತರಬೇತಿಯನ್ನು ನೀಡಲಾಗುವುದು. ಉದ್ಯೋಗ ಮೇಳ ಮತ್ತು ಉದ್ಯೋಗ ವಿನಿಮಯ ಕೇಂದ್ರಗಳಿಂದ 1,00,000 ಜನರಿಗೆ ಉದ್ಯೋಗ ನಿಯುಕ್ತಿ ಮತ್ತು 25,000 ಜನರಿಗೆ ಉದ್ಯಮಶೀಲತಾ ತರಬೇತಿಯನ್ನು ನೀಡಲಾಗುವುದು. ಮುಂದಿನ ವರ್ಷಗಳಲ್ಲಿ ಈ ಗುರಿಗಳು ದ್ವಿಗುಣಗೊಳ್ಳಲಿವೆ.
ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಶೇಕಡ 20 ರಷ್ಟು ಪರಿಶಿಷ್ಟಜಾತಿ, ಶೇಕಡ 7 ರಷ್ಟು ಪರಿಶಿಷ್ಟ ಪಂಗಡ ಮತ್ತು ಶೇಕಡ 15 ರಷ್ಟು ಅಲ್ಪಸಂಖ್ಯಾತ ಯುವಜನರಿಗೆ ತರಬೇತಿಯನ್ನು ನೀಡಲಾಗುವುದು. ಅಲ್ಲದೆ ಶೇಕಡ 33 ರಷ್ಟು ಮಹಿಳೆಯರಿಗೆ ಮತ್ತು ಶೇಕಡ 3 ರಷ್ಟು ವಿಶೇಷ ಚೇತನರಿಗೆ ತರಬೇತಿಯನ್ನು ನೀಡಲಾಗುವುದು. 2016-17 ನೇ ಸಾಲಿನಲ್ಲಿ 1,61,000 ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ, 8,900 ಜನರಿಗೆ ಶಿಶಿಕ್ಷು ತರಬೇತಿ, 49,000 ಜನರಿಗೆ ಜೀವನೋಪಾಯ ತರಬೇತಿ, ಉದ್ಯೋಗ ಮೇಳ ಮತ್ತು ಉದ್ಯೋಗ ವಿನಿಮಯ ಕೇಂದ್ರಗಳಿಂದ 75,000 ಜನರಿಗೆ ಉದ್ಯೋಗ ನಿಯುಕ್ತಿ ಮತ್ತು 4,500 ಜನರಿಗೆ ಉದ್ಯಮಶೀಲತಾ ತರಬೇತಿಯನ್ನು ನೀಡಲಾಗಿದೆ.
ಇದಕ್ಕೆ ಪೂರಕವಾಗಿ ಕೌಶಲ್ಯ ವಿಶ್ವವಿದ್ಯಾಲಯ, ಪ್ರಾವೀಣ್ಯತಾ ಕೇಂದ್ರಗಳು, ವೃತ್ತಿ ಮಾರ್ಗದರ್ಶನ, ಸಲಹೆ ಮತ್ತು ಉದ್ಯೋಗ ನಿಯುಕ್ತಿ ಸೇವಾಕೇಂದ್ರಗಳು, ವಿದೇಶಿ ಉದ್ಯೋಗ ಕೋಶ ಮುಂತಾದವುಗಳನ್ನು ಸ್ಥಾಪಿಸಲಾಗುವುದು. ಉದ್ಯೋಗಾಸಕ್ತ ಯುವಜನರಿಗೆ, ಪೋಷಕರಿಗೆ, ಶೈಕ್ಷಣಿಕ ಸಂಸ್ಧೆಗಳಿಗೆ, ವೃತ್ತಿ ತರಬೇತಿ ಸಂಸ್ಥೆಗಳಿಗೆ, ಉದ್ದಿಮೆದಾರರಿಗೆ ನಿರಂತರ ಮಾಹಿತಿಯನ್ನು ಒದಗಿಸಲು ವೆಬ್ ಸೈಟ್, ವೆಬ್ ಪೋರ್ಟಲ್ ಅಭಿವೃದ್ಧಿ ಪಡಿಸಲಾಗಿದೆ ಮತ್ತು ಕೌಶಲ್ಯ ಕರ್ನಾಟಕ ಮಾಸಪತ್ರಿಕೆಯನ್ನು ಹೊರಡಿಸಲಾಗಿದೆ.
ಉದ್ಯೋಗ ಮತ್ತು ಆಸಕ್ತ ಕ್ಷೇತ್ರದಲ್ಲಿ ತರಬೇತಿಗೆ ತಮ್ಮ ಹೆಸರನ್ನು ಕೌಶಲ್ಯ ತರಬೇತಿ ಮತ್ತು ಉದ್ಯೋಗಕ್ಕಾಗಿ ಆನ್ ಲೈನ್ http://www.kaushalkar.com ನಲ್ಲಿ ನೊಂದಣಿ ಮಾಡಿಕೊಳ್ಳಬಹುದು.
ಮೋಬೈಲ್ ಅಪ್ಲಿಕೇಶನ್ನಲ್ಲಿ ಕೂಡಾ ಅರ್ಜಿಗಳನ್ನು ಸಲ್ಲಿಸಬಹುದು ಅದಕ್ಕಾಗಿ ಈ ಕೆಳಗಿನ ಲಿಂಕ್ ಬಳಸಿ.
https://play.google.com/store/apps/details?id=karnataka.koushalya.mission
source : http://www.kaushalkar.com/
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.