ಸಾವರ್ಕರ್ ಎಂದರೆ ಕಿಚ್ಚು, ಸಾವರ್ಕರ್ ಎಂದರೆ ಆತ್ಮಾಭಿಮಾನ, ಸಾವರ್ಕರ್ ಎಂದರೆ ದೇಶಭಕ್ತಿ, ಸಾವರ್ಕರ್ ಎಂದರೆ ಸಮರ್ಪಣೆ. ಆದರ್ಶ, ನಿಷ್ಠೆ, ಸಾಹಸ, ಪರಾಕ್ರಮ, ಸಂಯಮ, ಸಹನಶೀಲತೆ, ಆತ್ಮವಿಶ್ವಾಸ, ಛಲ, ಜಾಣ್ಮೆ, ವಿವೇಕ, ನೇತೃತ್ವ, ಆತ್ಮಾರ್ಪಣೆ ಅವೆಲ್ಲದರ ಸಂಗಮವೇ ವಿನಾಯಕ ದಾಮೋದರ ಸಾವರ್ಕರ್.
ವಿನಾಯಕ ದಾಮೋದರ ಸಾವರ್ಕರ್ ತಮ್ಮ ಸಂಪೂರ್ಣ ಜೀವನವನ್ನೇ ಭಾರತದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟ ಮಹಾನ್ ವಾಗ್ಮಿ, ವಿವಿಧ ವಿಷಯಗಳ ಬಗ್ಗೆ ನಿರರ್ಗಳವಾಗಿ ಬರೆಯಬಲ್ಲ ಲೇಖಕ, ಇತಿಹಾಸಕಾರ, ಕವಿ, ತತ್ವಶಾಸ್ತ್ರಜ್ಞ, ಮತ್ತು ಸಮಾಜಸೇವಕ. ಅವರನ್ನು ಕೆಲವರು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅತಿ ದೊಡ್ಡ ಕ್ರಾಂತಿಕಾರಿ ಯುಗಪುರುಷ.
ಸಾವರ್ಕರ್ ರವರ ಇಡೀ ಜೀವನವೇ ರೋಮಾಂಚಕ ಅದನ್ನು ಓದುವುದು ಬರೆಯುವುದು ಒಂದು ಸಾಹಸವೇ ಸರಿ.
ಬಾಲ್ಯ
ವಿನಾಯಕ ದಾಮೋದರ ಸಾವರ್ಕರ್ ನಾಸಿಕ್ ಸಮೀಪದ ಭಗೂರ್ ಎಂಬ ಹಳ್ಳಿಯಲ್ಲಿ 1883ರ ಮೇ 28ರಂದು ದಾಮೋದರ ಪಂತ್ ಮತ್ತು ರಾಧಾಬಾಯಿಯವರ ಎರಡನೇ ಮಗನಾಗಿ ಜನಿಸಿದರು. ಬಾಲ್ಯದ ದಿನಗಳಲ್ಲೇ ಅವರ ಬೆಳೆಯಸಿರಿ ಮೊಳಕೆಯಲ್ಲಿ ಕಂಡುಬಂತು. ಚಿಕ್ಕಂದಿನಲ್ಲಿನಲ್ಲೇ ಆ ಬಾಲಕ ರಾಮಾಯಣ – ಮಹಾಭಾರತದ ವೀರ ಪುರುಷರ ಆದರ್ಶಗಳನ್ನು ಮೈಗೂಡಿಸಿಕೊಂಡ. ಭಾರತದ ಇತಿಹಾಸದಲ್ಲಿ ಪರಾಕ್ರಮದಿಂದ ಮೆರೆದ ರಾಣಾಸಂಗ, ರಾಣಾಪ್ರತಾಪ, ಶಿವಾಜಿ, ಗುರು ಗೋವಿಂದ್ ಸಿಂಗ್ ಮೊದಲಾದವರ ಜೀವನ ಸಾಧನೆಗಳಿಂದ ಸಾವರ್ಕರ್ ಪ್ರಭಾವಿತರಾದರು. ಭಗವದ್ಗೀತೆ, ಉಪನಿಷತ್ತುಗಳು, ಸಂಸ್ಕೃತ ಗ್ರಂಥಗಳು ಅವರಿಗೆ ಅಧ್ಯಾತ್ಮಿಕ ತಳಹದಿ ನೀಡಿದವು. ಅದ್ವೈತ ವೇದಾಂತ ಅವರ ಶಾಶ್ವತ ಚಿಂತನೆಗಳಿಗೆ ಆಧಾರವಾಯಿತು. ಅವರ ಹಿರಿಯ ಸಹೋದರ ಗಣೇಶಪಂತ್, ಅವರಿಗೆ ಸ್ವಾಮಿ ವಿವೇಕಾನಂದರ ಕೃತಿಗಳನ್ನು ಪರಿಚಯಿಸುವುದರೊಂದಿಗೆ, ಸಾವರ್ಕರ್ ವಿವೇಕಾನಂದರ ನಿಷ್ಣಾತ ಹಿಂಬಾಲಕರಾದರು. ಭಕ್ತಿ ಸಂತರ ಕೊಡುಗೆಗಳೂ ಅವರ ಮೇಲೆ ಪ್ರಭಾವ ಬೀರಿದವು. ಅವರು ಅನ್ಯಧರ್ಮದ ಅಧ್ಯಯನಕ್ಕಾಗಿ ಕುರಾನ್, ಬೈಬಲ್, ಪೈಗಂಬರರ ಮತ್ತು ಕ್ರೈಸ್ತರ ಜೀವನ – ಸಾಧನೆಗಳ ಸಾಹಿತ್ಯವನ್ನು ಅಧ್ಯಯನ ಮಾಡಿದರು. ಇವೆಲ್ಲ ಅವರ ಒಂದು ಸಮಗ್ರ ಧಾರ್ಮಿಕ ಚಿಂತನೆಗೆ ಅನುವು ಮಾಡಿದವು. ಸಾವರ್ಕರ್ ಮೇಲೆ ಸ್ವಾಮಿ ವಿವೇಕಾನಂದರ ಪ್ರಭಾವದ ಒಂದು ವಿಶೇಷ ಅಧ್ಯಯನ ಮಾಡಲಾಗಿದೆ (Manoj Shankar Naik, ‘Savarkar in the Light of Swami Vivekananda’ – 3rd Ed. 2010).ಈ ಪುಸ್ತಕದಲ್ಲಿ ಇದರ ಉಲ್ಲೇಖವಿದೆ.
ಬಾಲ್ಯದಿಂದಲೂ ರಾಷ್ಟ್ರಕ್ಕೆ ಅರ್ಪಿಸಿಕೊಂಡ ಬದುಕು ಅದು. ಚಿಕ್ಕಂದಿನಲ್ಲೇ ‘ಮಿತ್ರಮೇಳ’ವನ್ನು ಸ್ಥಾಪಿಸಿ ಗೆಳೆಯರಿಗೆ ರಾಷ್ಟ್ರೀಯತೆಯ ಪಾಠ ಕಲಿಸುತ್ತಿದ್ದವರು ಅವರು. ಆನಂತರ “ಅಭಿನವ ಭಾರತ”ವನ್ನು ಸ್ಥಾಪಿಸಿ ದೊಡ್ಡ ಕ್ರಾಂತಿಯನ್ನೇ ಹುಟ್ಟುಹಾಕಿದ್ದು ಇತಿಹಾಸ..
ಪ್ರಥಮ ಸ್ವಾತಂತ್ರ್ಯ ಸಂಗ್ರಾಮವನ್ನು ’ಸಿಪಾಯಿ ದಂಗೆ’ ಎಂದು ಹೀಗಳೆಯುತ್ತಿದ್ದವರಿಗೆ, ಅದು ಬರೀ ಜಗಳವಲ್ಲ, ಸ್ವಾತಂತ್ರ್ಯದ ಅಡಿಗಲ್ಲು ಎಂಬುದನ್ನು ಪ್ರಮಾಣ ಸಹಿತವಾಗಿ ನಿರೂಪಿಸಿದ್ದರು. ಅವರ ಆ ಪುಸ್ತಕವೇ, ಪ್ರಕಟಣೆಗೂ ಮುನ್ನವೇ ವಿಶ್ವಾದ್ಯಂತ ನಿಷೇಧಕ್ಕೊಳಗಾಯಿತು.. ಆದರೂ ಆ ಪುಸ್ತಕ ರಹಸ್ಯವಾಗಿ ಭಾರತವನ್ನು ಸೇರಿದ್ದಷ್ಟೇ ಅಲ್ಲ, ಬದಲಾಗಿ ವಿಶ್ವದ ಬಹುತೇಕ ಎಲ್ಲ ಭಾಷೆಗಳಿಗೂ ಅನುವಾದಿತಗೊಂಡಿತು.
ಲಂಡನ್ನಿಗೆ ಬ್ಯಾರಿಸ್ಟರ್ ಪದವಿ ತರಲು ಹೋಗಿದ್ದ ಸಾವರ್ಕರ್, ಮರಳಿ ಬಂದದ್ದು ಕೈತುಂಬ ಕೋಳಗಳನ್ನು ತೊಡಿಸಿಕೊಂಡು..!!
ಅಲ್ಲಿಯೇ, ’ಸಾಗರೋತ್ತರ ಅಭಿನವ ಭಾರತ’ದ ಶಾಖೆಯೊಂದನ್ನು ಸ್ಥಾಪಿಸಿದ್ದರು. ಪಂಡಿತ್ ಶ್ಯಾಮಜಿ ಕೃಷ್ಣವರ್ಮಾರವರು ಕಟ್ಟಿಸಿದ್ದ ’ಭಾರತ ಭವನ’ದಲ್ಲಿ ಪ್ರತಿನಿತ್ಯ ಸಾವರ್ಕರರ ಅಗ್ನಿಜ್ವಾಲೆಯ ಉಪನ್ಯಾಸಗಳು ನಡಿಯುತ್ತಿದ್ದವು. ಅದರಿಂದ ಪ್ರೇರಿತರಾಗಿ ಸ್ವಾತಂತ್ರ್ಯಸಂಗ್ರಾಮಕ್ಕೆ ಧುಮುಕಿದ ತರುಣರು ಅಸಂಖ್ಯ.
ಮದನ್ ಲಾಲ್ ಧಿಂಗ್ರ, ವಿ.ವಿ.ಎಸ್.ಅಯ್ಯರ್, ಮೇಡಂ ಕಾಮಾ ಎಲ್ಲರೂ ಸಾವರ್ಕರರ ಗರಡಿಯಲ್ಲಿ ಪಳಗಿದವರೇ..
ಬ್ರಿಟಿಷ್ ಸರ್ಕಾರದ ವಿರುದ್ಧ ಕೆಲಸಗಳನ್ನು ಮಾಡುತ್ತಿದ್ದ ಆರೋಪದ ಮೇಲೆ ಆಂಗ್ಲರು ಅವರನ್ನು ಬಂಧಿಸಿ ಭಾರತಕ್ಕೆ ಕಳಿಸಲು ತಯಾರು ಮಾಡಿದರು. ಮಾರ್ಗಮಧ್ಯೆ ಹಡಗಿನಿಂದಲೇ ಹಾರಿ, ಮಹಾ ಸಮುದ್ರವನ್ನೇ ಈಜಿ, ಫ಼್ರಾನ್ಸ್ ನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರೂ, ದುರ್ದೈವದಿಂದ ಸಾಧ್ಯವಾಗಲಿಲ್ಲ.
ಭಾರತದಲ್ಲಿ ವಿಚಾರಣೆ ನಡೆದ ಬಳಿಕ ಬರೋಬ್ಬರಿ 50 ವರ್ಷಗಳ ಅಂಡಮಾನಿನ ಕರಿನೀರಿನ ಶಿಕ್ಷೆ ವಿಧಿಸಲಾಯಿತು. ಅದನ್ನೂ ನಿರಮ್ಮಳವಾಗಿ ಸ್ವೀಕರಿಸಿದ ಸಾವರ್ಕರ್ ಅಂಡಮಾನಿನಲ್ಲೂ ರಾಷ್ಟ್ರೀಯತೆಯ ಕಂಪನ್ನು ಪಸರಿಸಿದ ವಾಯು. ತೆಂಗಿನ ನಾರು ಸುಲಿಯುವ, ಗಾನದ ಎಣ್ಣೆ ತೆಗೆಯುವ, ಒಂಟಿಕೋಣೆಯಲ್ಲಿನ ನರಕಯಾತನೆ ಅನುಭವಿಸಿದರೂ, ಬಿಡುವಾದಾಗಲೆಲ್ಲ ಅಲ್ಲಿಯ ಜನರಿಗೆ ದೇಶದ ಪಾಠ ಹೇಳಿಕೊಡುತ್ತಿದ್ದ ಅದ್ಭುತ ವ್ಯಕ್ತಿ. ಸಾವರ್ಕರರ ಸಾಗರ ಲಂಘನ ಈಗಲೂ ಕೇಳುವವರ ಮೈ ಝುಮ್ ಎನ್ನುತ್ತದೆ. ಅದು ತುಂಬಿ ಹರಿಯುತ್ತಿದ್ದ ಸಾಗರ ಸಾವರ್ಕರ್ ಅವರನ್ನು ಬಂಧಿಸಿ ಅಂಡಮಾನಿಗೆ ಕರೆದುಕೊಂಡು ಹೋಗುತ್ತಿದ್ದರು ಆದರೆ ಆ ವೀರ ತರುಣ ಉಪಾಯಮಾಡಿ ಅದರಿಂದ ಪಾರಾಗಿ ದೋಣಿಯಿಂದ ಧುಮುಕಿ ಸಾಗರವನ್ನೇ ಈಜಿ ದಡ ಸೇರಿದರೂ ಮೈ ಪೂರ್ತಿ ಗಾಯ ರಕ್ತ ಆದರೆ ಸಾವರ್ಕರ್ ಧೃತಿಗೆಡಲಿಲ್ಲ. ತಾಯಿ ಭಾರತೀಯ ಸೇವೆಗೆ ಸಿದ್ಧರಾಗಿದ್ದರು.
ಅಂಡಮಾನಿನ ಕೈದಿಗಳಿಗೆ ಉಳಿದವರಂತೆ ಓದಲು, ಬರೆಯಲೂ ಅವಕಾಶವಿರಲಿಲ್ಲ. ಆದರೆ ಸಾವರ್ಕರ್ ಮಾತ್ರ ಸುಮ್ಮನೆ ಕೂಡುವವರಲ್ಲ. ಹೇಗೋ ಒಂದು ಮೊಳೆಯನ್ನು ಸಂಪಾದಿಸಿ ಅದರಿಂದಲೇ ಜೈಲಿನ ಗೋಡೆಗಳ ಮೇಲೆಲ್ಲಾ ದೇಶಭಕ್ತಿಯ ಕವನಗಳನ್ನು ಕೆತ್ತಿ, ಬೇರೆಯವರೂ ಅದನ್ನು ಓದಿ ದೇಶಪ್ರೇಮವನ್ನು ಬೆಳೆಸಿಕೊಳ್ಳುವಂತೆ ಮಾಡುತ್ತಿದ್ದ ಚಾಣಾಕ್ಷರು. ಒಟ್ಟು ಹತ್ತುಸಾವಿರ ಸಾಲುಗಳ ಕಾವ್ಯವನ್ನು ಆ ಜೈಲಿನಲ್ಲೇ ರಚಿಸಿ, ಬಿಡುಗಡೆಯಾದ ಮೇಲೆ “ಕಮಲಾ” ಎಂಬ ಹೆಸರಿನಲ್ಲಿ ಪ್ರಕಟಿಸಿದರು.
ಸಾವರ್ಕರ್ ವಿದ್ಯಾರ್ಥಿಯಾಗಿದ್ದಾಗ ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದ್ದರು. ನಂತರ ಅವರು ತಿಲಕರ ಸ್ವರಾಜ್ಯ ಪಕ್ಷದ ಸದಸ್ಯರಾದರು. ಲಂಡನ್ನಿನಲ್ಲಿದ್ದಾಗ “ಸ್ವತಂತ್ರ ಭಾರತ ಸಮಾಜ” (Free India Society)ವನ್ನು ಸ್ಥಾಪಿಸಿದರು. ಈ ಸಂಸ್ಥೆ ಭಾರತೀಯ ಪಂಚಾಂಗದ ಹಬ್ಬಗಳೇ ಮೊದಲಾದ ಮುಖ್ಯ ತಿಥಿಗಳನ್ನು, ಸ್ವಾತಂತ್ರ್ಯ ಸಂಗ್ರಾಮದ ಮೈಲಿಗಲ್ಲುಗಳನ್ನೂ ಆಚರಿಸುತ್ತಿತ್ತು. ಭಾರತದ ಸ್ವಾತಂತ್ರ್ಯದ ಬಗ್ಯೆ ಮಾತುಕತೆಗಳಿಗಾಗಿ ಮುಡಿಪಾಗಿದ್ದ ಈ ಸಂಸ್ಥೆಯ ಮೇಲೆ ಬ್ರಿಟಿಷ್ ಸತ್ತೆಯ ಕೆಂಗಣ್ಣು ಬೀಳಲು ತಡವಾಗಲಿಲ್ಲ.“ಬ್ರಿಟಿಷ್ ಅಧಿಕಾರಿಗಳ ಬಗೆಗೇ ಆಗಲಿ, ಅವರ ಕಾನೂನುಗಳ ಬಗೆಗೆ ಆಗಲಿ, ಗೊಣಗುವುದರಲ್ಲಿ ಅರ್ಥವಿಲ್ಲ. ಅದಕ್ಕೆ ಕೊನೆಯೂ ಇಲ್ಲ. ನಮ್ಮ ಚಳುವಳಿ ಯಾವುದೇ ನಿರ್ದಿಷ್ಟ ಕಾನೂನನ್ನು ವಿರೋಧಿಸುವುದಕ್ಕಷ್ಟೇ ಸೀಮಿತವಾಗದೆ, ಆ ಕಾನೂನುಗಳನ್ನು ರಚಿಸಿ, ಜಾರಿಗೆ ತರುವ ಹಕ್ಕಿಗಾಗಿ ಇರಬೇಕು. ಅರ್ಥಾತ್, ಸಂಪೂರ್ಣ ರಾಜಕೀಯ ಸ್ವಾತಂತ್ರ್ಯವೇ ನಮ್ಮ ಗುರಿಯಾಗಬೇಕು” ಎಂದು ಸಾವರ್ಕರರು ಹೇಳಿದ್ದರೆಂದು ನಂಬಲಾಗಿದೆ. 1908ರಲ್ಲಿ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ- 1857 ” ಬರೆದಾಗ, ಬ್ರಿಟಿಷ್ ಸರಕಾರವು ತಕ್ಷಣವೇ ಭಾರತ ಮತ್ತು ಬ್ರಿಟನ್ನುಗಳಲ್ಲಿ ಅದರ ಪ್ರಕಾಶನವನ್ನು ನಿರ್ಬಂಧಿಸಿತು. ಮುಂದೆ ಭಿಕಾಜಿ ಕಾಮಾ ಅದನ್ನು ಹಾಲೆಂಡಿನಲ್ಲಿ ಪ್ರಕಾಶಿಸಿದರು. ಅಲ್ಲಿಂದ ಅದನ್ನು ಗುಪ್ತವಾಗಿ ಭಾರತಕ್ಕೆ ಸಾಗಿಸಿ ಬ್ರಿಷರ ವಿರುಧ್ಧ ಸಕ್ರಿಯರಾಗಿದ್ದ ಕ್ರಾಂತಿಕಾರಿಗಳಿಗೆ ಹಂಚಲಾಯಿತು. 1909ರಲ್ಲಿ , ಸಾವರ್ಕರರ ನಿಕಟ ಅನುಯಾಯಿ, ಮದನಲಾಲ್ ಧಿಂಗ್ರಾ, ಆಗಿನ ವೈಸರಾಯ್ ಲಾರ್ಡ್ ಕರ್ಜನ್ನನ ವಧೆಯ ಪ್ರಯತ್ನ ವಿಫಲವಾದ ನಂತರ, ಸರ್ ವಾಯ್ಲೀ ಎಂಬ ಅಧಿಕಾರಿಯನ್ನು ಗುಂಡಿಕ್ಕಿ ಕೊಂದ. ಇದರ ಫಲವಾಗಿ ಉಂಟಾದ ರಾಜಕೀಯ ಗೊಂದಲದಲ್ಲಿ, ಸಾವರ್ಕರ್ ಈ ಘಟನೆಯನ್ನು ಖಂಡಿಸಲು ನಿರಾಕರಿಸಿ , ಎದ್ದು ಕಾಣಿಸಿಕೊಂಡರು. ನಾಸಿಕ್ ಪಟ್ಟಣದ ಕಲೆಕ್ಟರ್ ಎ.ಎಂ.ಟಿ. ಜಾಕ್ಸನ್ ಯುವಕನೊಬ್ಬನ ಗುಂಡಿಗೆ ಬಲಿಯಾದಾಗ, ಸಾವರ್ಕರ್ ಕೊನೆಗೂ ಬ್ರಿಟಿಷ್ ಅಧಿಕಾರಿಗಳ ಬಲೆಯಲ್ಲಿ ಸಿಕ್ಕಿದರು.ಇಂಡಿಯಾ ಹೌಸ್ ನೊಂದಿಗೆ ಸಾವರ್ಕರರ ಸಂಪರ್ಕವನ್ನೇ ನೆಪಮಾಡಿ ಅವರನ್ನು ಈ ಕೊಲೆಯಲ್ಲಿ ಅಪರಾಧಿ ಎಂದು ನಿರ್ಣಯಿಸಲಾಯಿತು. 13ನೇ ಮಾರ್ಚ್ 1910ರಂದು ಅವರ ವಿರುದ್ಧ ಬಂಧನದ ವಾರಂಟ್ ಹೊರಡಿಸಿ, ನಂತರ ಪ್ಯಾರಿಸಿನಲ್ಲಿ ಅವರನ್ನು ಬಂಧಿಸಲಾಯಿತು. ಮಾರ್ಸೇಲ್ಸ್ ನಿಂದ ಪರಾರಿಯಾಗುವ ಅವರ ಧೀರ ಪ್ರಯತ್ನ ವಿಫಲವಾಯಿತು. ಅವರನ್ನು ಹಿಡಿದು ಮುಂಬಯಿಗೆ “ಎಸ್.ಎಸ್.ಮೊರಿಯಾ” ಹಡಗಿನಲ್ಲಿ ತಂದು, ಯೆರವಡಾ ಜೈಲಿನಲ್ಲಿ ಬಂಧಿಸಲಾಯಿತು.ಅವರ ವಿರುದ್ಧದ ಮೊಕದ್ದಮೆಯಲ್ಲಿ , ಆಗಿನ್ನೂ 27ರ ತರುಣನಾಗಿದ್ದ ಅವರಿಗೆ, ಕುಪ್ರಸಿದ್ಧ ಅಂಡಮಾನಿನ ಜೈಲಿನಲ್ಲಿ 50 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲಾಯಿತು. ನಾಲ್ಕು ಜುಲೈ, 1911ರಂದು, ಅವರನ್ನು ಅಂಡಮಾನಿಗೆ ಸಾಗಿಸಲಾಯಿತು. ಸಾವರ್ಕರ್ 1911ರಲ್ಲಿ , ಮತ್ತೆ 1913ರಲ್ಲಿ, ಸರ್ ರೆಜಿನಾಲ್ಡ್ ಕ್ರಾಡ್ಡಾಕ್ ನ ಭೇಟಿಯ ಸಮಯದಲ್ಲಿ ಕ್ಷಮೆಗಾಗಿ ಬ್ರಿಟಿಷ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು. ಆಗಿನ ಬ್ರಿಟಿಷ್ ಆಡಳಿತ ರಾಜಕೀಯ ಖೈದಿಗಳಿಗೆ ಸೆರೆಮನೆಯಲ್ಲಿ ನೀಡುತ್ತಿದ್ದ ಚಿತ್ರಹಿಂಸೆ ಹಾಗೂ ಸಾವರ್ಕರರ ಕೆಡುತ್ತಿದ್ದ ಆರೋಗ್ಯ ಈ ಹಿನ್ನೆಲೆಯಲ್ಲಿ ಸಾವರ್ಕರರ ಕ್ಷಮಾ ಅರ್ಜಿಯನ್ನು ನೋಡಬೇಕು ಎಂದು ಅವರ ಸಮರ್ಥಕರು ಅಭಿಪ್ರಾಯಪಡುತ್ತಾರೆ. ಮತ್ತೆ ಭಾರತದ ಭೂಮಿಗೆ ಹಿಂದಿರುಗಿ , ಬ್ರಿಟಿಷರ ವಿರುದ್ಧ ಹೋರಾಟಕ್ಕೆ ತೊಡಗುವ ಚಾಣಾಕ್ಷ ಉದ್ದೇಶದಿಂದ ಅವರು ಕ್ಷಮೆ ಕೇಳಿರಬಹುದು ಎಂಬ ಅಭಿಪ್ರಾಯವೂ ಇದೆ. ಇದಕ್ಕೆ ವಿರುದ್ಧವಾಗಿ, ಈ ಕ್ರಿಯೆ ಬ್ರಿಟಿಷರ ವಿರುದ್ಧ ಸಾವರ್ಕರರ ಶರಣಾಗತಿ ಎಂದು ಅವರ ಟೀಕಾಕಾರರು ಭಾವಿಸುತ್ತಾರೆ.ಅದು ಹೇಗೇ ಇದ್ದರೂ, ಸಾವರ್ಕರರ ಈ ಕ್ರಮ ಮುಂದೆ ಬಹಳಷ್ಟು ಕಾಲದವರೆಗೆ ವಿವಾದವನ್ನು ಸೃಷ್ಟಿಸಿದ ವಿಷಯಗಳಲ್ಲಿ ಮೊದಲನೆಯದಾಗಿತ್ತು. 1920ರಲ್ಲಿ ವಿಠ್ಠಲಭಾಯಿ ಪಠೇಲ್, ಮಹಾತ್ಮ ಗಾಂಧಿ, ಬಾಲ ಗಂಗಾಧರ ತಿಲಕ ಮುಂತಾದ ಹಿರಿಯ ಧುರೀಣರು ಕೇಂದ್ರೀಯ ಸಂಸತ್ತಿನಲ್ಲಿ ಸಾವರ್ಕರ್ ಹಾಗೂ ಅವರ ಬಿಡುಗಡೆಗಾಗಿ ಒತ್ತಾಯಿಸಿದರು. ಮೇ 12, 1921ರಂದು ಸಾವರ್ಕರರನ್ನು ರತ್ನಾಗಿರಿ ಜೈಲಿಗೆ, ಮತ್ತೆ ಅಲ್ಲಿಂದ ಯೆರವಡಾ ಜೈಲಿಗೆ, ಸಾಗಿಸಲಾಯಿತು. ಅವರು “ಹಿಂದುತ್ವ” ಕೃತಿ ಬರೆದದ್ದು ರತ್ನಾಗಿರಿಯ ಜೈಲಿನಲ್ಲಿದ್ದಾಗ. ಅವರ ಚಟುವಟಿಕೆಗಳಿಗೆ ಹಾಗೂ ತಿರುಗಾಟಕ್ಕೆ ತೀವ್ರ ನಿರ್ಬಂಧಗಳನ್ನು ಹಾಕಿ, ಜನವರಿ 6,1924ರಂದು ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.
ಸಾವರ್ಕರ್ ಸ್ವತಃ ನಾಸ್ತಿಕರಾಗಿದ್ದರೂ ಕೂಡಾ, ಇಷ್ಟವಿಲ್ಲದಿದ್ದರೂ ಹಿಂದೂ ಮಹಾಸಭೆಯ ಅಧ್ಯಕ್ಷ ಪದವನ್ನು ಒಪ್ಪಿಕೊಳ್ಳಬೇಕಾಯಿತು. ಅವರು ಆ ಪದವಿಯಲ್ಲಿ ಇದ್ದ ಏಳು ವರ್ಷಗಳಲ್ಲಿ , ಮಹಾಸಭೆಯನ್ನು ಸ್ವತಂತ್ರ ರಾಜಕೀಯ ಪಕ್ಷವನ್ನಾಗಿ ಬೆಳೆಸಲು ಅಗಾಧ ಕೊಡುಗೆ ನೀಡಿದರು. ಬ್ರಿಟಿಷರು ಜರ್ಮನಿಯ ಮೇಲೆ ಯುದ್ಧ ಹೂಡಿ ಅದರಲ್ಲಿ ಭಾರತವನ್ನೂ ಎಳೆದುಕೊಂಡಾಗ, ಸಾವರ್ಕರ್ “ಮಾನವ ಸ್ವಾತಂತ್ರ್ಯದ ಹಕ್ಕನ್ನು ಕಾಪಾಡುವುದಾಗಿ ಹೇಳಿಕೊಳ್ಳುವ ಬ್ರಿಟಿಷರ ನೀತಿ ಅರ್ಥಹೀನ” ಎಂದರು. ಆದಾಗ್ಯೂ, ಬ್ರಿಟಿಷರಿಗೆ ಜರ್ಮನಿ ಮತ್ತು ಜಪಾನಿನ ವಿರುದ್ಧದ ಯುದ್ಧದಲ್ಲಿ ಸಹಾಯ ಮಾಡುವಂತೆ ಅವರು ಹಿಂದೂ ಸಮಾಜಕ್ಕೆ ಕರೆ ಕೊಟ್ಟರು. ಅವರ ಸಮರ್ಥಕರು ಈ ಕ್ರಮವನ್ನು ಹಿಂದೂ ಸಮಾಜಕ್ಕೆ ಮಿಲಿಟರಿ ತರಬೇತಿ ದೊರಕಿಸಿಕೊಂಡು ಮುಂದೆ ಬ್ರಿಟಿಷರ ಮೇಲೆ ಬೀಳುವ ಉದ್ದೇಶದಿಂದ ತೆಗೆದುಕೊಂಡದ್ದಾಗಿತ್ತು ಎಂದು ಅರ್ಥೈಸಿದರೂ, ಅವರ ವಿರೋಧಿಗಳು ಇದನ್ನು ಬ್ರಿಟಿಷ್ ಹಿತಾಸಕ್ತಿಗಳಿಗೆ ಹೊಂದಿಕೊಳ್ಳುವ ಸಾವರ್ಕರರ ಮತ್ತೊಂದು ಉದಾಹರಣೆಯಾಗಿ ಕಂಡರು. ಸಾವರ್ಕರರ ಅಧ್ಯಕ್ಷತೆಯಲ್ಲಿ ಮಹಾಸಭಾ, 1942 ರ ಭಾರತ ಬಿಟ್ಟು ತೊಲಗಿ ಅಂದೋಲನವನ್ನು ಬೆಂಬಲಿಸಲಿಲ್ಲ. ಕಮ್ಯೂನಿಸ್ಟ್ ಪಾರ್ಟಿ ಹಾಗೂ ಮುಸ್ಲಿಮ್ ಲೀಗ್ ಕೂಡಾ ಈ ಅಂದೋಲನವನ್ನು ಸಮರ್ಥಿಸಲಿಲ್ಲ. ಸ್ವಾತಂತ್ರ್ಯೋತ್ತರ ಭಾರತವು, ಸುಧೃಢವಾಗಿಯೂ, ಒಗ್ಗಟ್ಟಿನಿಂದಲೂ ಹಾಗೂ ಸ್ವಾವಲಂಬಿಯೂ ಆಗಿರಬೇಕೆಂಬ ಅಪೇಕ್ಷೆ ಅವರಿಗಿತ್ತು.
ಭಾರತ ರಾಷ್ಟ್ರ ಹಾಗೂ ಹಿಂದೂ ಧರ್ಮ ಎಂಬ ಪರಿಕಲ್ಪನೆಗಳನ್ನು ಹಿಂದೂ ರಾಷ್ಟ್ರೀಯತಾವಾದದ ದೃಷ್ಟಿಕೋನದಿಂದ ನೋಡಿದ ಈ ಪುಸ್ತಕ ಅತ್ಯಂತ ಪ್ರಭಾವಿಯಾಗಿತ್ತು. ಸಾವರ್ಕರ್ ಸ್ವತಃ ನಿರೀಶ್ವರವಾದಿಯಾಗಿದ್ದು, ಭಾರತದ ಭೂಖಂಡದಲ್ಲಿ ಬೇರು ಬಿಟ್ಟು, ಇಲ್ಲಿನ ಜೀವನದ ಪ್ರತಿಯೊಂದು ಅಂಗದಲ್ಲೂ ಹಾಸುಹೊಕ್ಕಾಗಿರುವ, ವಿಶೇಷ ಜೀವನಧರ್ಮ ಎಂದು ಹಿಂದುತ್ವದ ಪರಿಕಲ್ಪನೆಯನ್ನು ಅರ್ಥೈಸಿದ್ದಾರೆಂಬುದನ್ನು ಗಮನಿಸಬೇಕು. ಅವರ ಇತರ ಕೃತಿಗಳೆಂದರೆ “ಹಿಂದೂ ಪದಪಾದಶಾಹಿ” ಮತ್ತು “ನನ್ನ ಅಜೀವ ಸಾಗಾಟ” (My Transportation for Life). ಆಗಲೇ ಭಾರತದಲ್ಲಿ ಧಾರ್ಮಿಕ ಆಧಾರದ ಮೇಲೆ ಬಿರುಕುಗಳು ಗೋಚರವಾಗತೊಡಗಿತ್ತು. “ಮಾಪಿಳ್ಳೆಗಳ ಬಂದ್” (Muslims’ Strike) ಎಂಬ ಪುಸ್ತಕದಲ್ಲಿ ಕೇರಳದಲ್ಲಿ ಹಿಂದೂಗಳ ಮೇಲೆ ಅವರು ಕಂಡ ಬ್ರಿಟಿಷರ ಹಾಗೂ ಮುಸ್ಲಿಮರ ದೌರ್ಜನ್ಯವನ್ನು ಮತ್ತು “ಗಾಂಧೀ ಗೊಂದಲ” (Gandhi’s Nonsense), ಎಂಬ ಪುಸ್ತಕದಲ್ಲಿ ಗಾಂಧಿಯವರ ರಾಜಕೀಯ ಧೋರಣೆಗಳ ಬಗ್ಯೆ ಟೀಕೆಯನ್ನೂ ಅವರು ಮಾಡಿದರು. *ಈಗಾಗಲೇ ಸಾವರ್ಕರರು ಭಾರತದ ಭವಿಷ್ಯದ ಬಗ್ಯೆ ಗಾಂಧಿಯವರ ಯೋಜನೆಗಳ ಬದ್ಧ ಟೀಕಾಕಾರರಾಗಿ ಹೋಗಿದ್ದರು. ಅವರ ಬೆಂಬಲಿಗರಷ್ಟೇ ಅಲ್ಲ, ಅವರ ಕೆಲವರು ಟೀಕಾಕಾರರು ಕೂಡಾ, ಮರಾಠಿ ಸಾಹಿತ್ಯದ ಅತ್ಯಂತ ಹೃದಯಸ್ಪರ್ಶೀ ಹಾಗೂ ಸ್ಪೂರ್ತಿದಾಯಕ ಕೃತಿಗಳಲ್ಲಿ ಪರಿಗಣಿಸುವ “ಸಾಗರಾ.. ಪ್ರಾಣ ತಳಮಳಲಾ..” ಮತ್ತು “ ಜಯೋಸ್ತುತೆ” (ಸ್ವಾತಂತ್ರ್ಯದ ಸ್ತುತಿ) ಎಂಬ ಮರಾಠೀ ಗೀತೆಗಳನ್ನು ಅವರು ಬರೆದರು. ಇವು ಜನಪ್ರಿಯವಾಗಿದ್ದು, ಇಂದಿಗೂ ಮಹಾರಾಷ್ಟ್ರದಲ್ಲಿ ಕೇಳಸಿಗುತ್ತವೆ. ಅಂಡಮಾನಿನ ಜೈಲಿನಲ್ಲಿದ್ದ ದೀರ್ಘಕಾಲದಲ್ಲಿ, ಅವರಿಗೆ ಪೆನ್ ಹಾಗೂ ಕಾಗದವನ್ನು ನಿಷೇಧಿಸಲಾಗಿತ್ತು. ಸಾವರ್ಕರ್ ತಮ್ಮ ಗೀತೆಗಳನ್ನು ಜೈಲಿನ ಗೋಡೆಗಳ ಮೇಲೆ ಮುಳ್ಳಿನಿಂದ, ಕಲ್ಲುತುಂಡುಗಳಿಂದ ಕೊರೆದರು. ಬಾಕಿ ಸೆರೆಯಾಳುಗಳು ಬಿಡುಗಡೆಯಾಗಿ ಭಾರತಕ್ಕೆ ಬರುವಾಗಿ ತಮ್ಮೊಂದಿಗೆ ತರುವವರೆಗೂ, ಹತ್ತು ಸಾವಿರಕ್ಕೂ ಹೆಚ್ಚಿನ ಪಂಕ್ತಿಗಳನ್ನು ವರ್ಷಾವಧಿ ನೆನಪಿಟ್ಟುಕೊಂಡಿದ್ದರು. ಹಿಂದಿ ಭಾಷೆಯ ಅನೇಕ ನವ ಪದಪುಂಜಗಳನ್ನು ಹುಟ್ಟು ಹಾಕಿದ ಖ್ಯಾತಿ ಅವರಿಗಿದೆ. ಕೆಲವು ಉದಾಹರಣೆಗಳೆಂದರೆ ದಿಗ್ದರ್ಶಕ (ಸರಿಯಾದ ದಾರಿ ತೋರಿಸುವವನು), ಸಾಪ್ತಾಹಿಕ (ವಾರಕ್ಕೊಮ್ಮೆ ಬರುವಂಥಾದ್ದು , ಪತ್ರಿಕೆ ಇತ್ಯಾದಿ) ಹಾಗೂ ಸಂಸದ್ (ಭಾರತದ ಪಾರ್ಲಿಮೆಂಟ್).
ಹಿಂದೂ ಮಹಾಸಭೆಯ ಮೂಲಕ, ಸಾವರ್ಕರ್ ಅಲ್ಪಸಂಖ್ಯಾತರ ಹಿತಾಸಕ್ತಿಗಳಿಗಾಗಿ ಬಹಳ ಕಷ್ಟಪಟ್ಟರು ಎಂದು, ಹೇಳಲಾಗಿದೆ. ಹಿಂದೂ ಹಬ್ಬಗಳ ಆಚರಣೆಯ ಸಂದರ್ಭಗಳಲ್ಲಿ ಸೌಹಾರ್ದತೆಯನ್ನು ಬೆಳೆಸುವ ಉದ್ದೇಶದಿಂದ ಸಾವರ್ಕರ್ ಮುಸ್ಲಿಮರ ಹಾಗೂ ಕ್ರೈಸ್ತರ ಮನೆಗಳಿಗೆ ಭೇಟಿ ನೀಡುತ್ತಿದ್ದರು. ಅಂತರ್ಜಾತೀಯ ವಿವಾಹಗಳನ್ನು ಪ್ರೋತ್ಸಾಹಿಸಿ, ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಬಿ.ಆರ್.ಅಂಬೇಡ್ಕರರಿಗೆ ಸಹಾಯ ಮಾಡಿದರು ಎಂದೂ ಹೇಳಲಾಗಿದೆ. (ಅಸ್ಪೃಶ್ಯರಿಗೆ ದೇವಾಲಯ ಪ್ರವೇಶ ನಿಷಿದ್ಧವಾದ ಆ ಕಾಲದಲ್ಲಿ, ಅದರ ವಿರುದ್ಧವಾಗಿ ಮುಂದೆ ನಿಂತು ಪ್ರವೇಶಕ್ಕೆ ದಾರಿ ಮಾಡಿಕೊಟ್ಟ, ಪತಿತ ಪಾವನ ಮಂದಿರವನ್ನು ಇಂದಿಗೂ ರತ್ನಾಗಿರಿಯಲ್ಲಿ ನೋಡಬಹುದು). ಸಾವರ್ಕರರ ಇತರ ವಿಷಯಗಳಂತೆ ಇದೂ ಕೂಡಾ ವಿವಾದಾಸ್ಪದವಾಗಿದ್ದು, ಕೆಳ ವರ್ಗಗಳನ್ನು ಪ್ರತಿನಿಧಿಸುವ ರಾಜಕೀಯ ಪಂಗಡಗಳು ಇವನ್ನು ಪ್ರಶ್ನಿಸಿವೆ. ಹಿಂದಿಯನ್ನು ಮಾತೃಭಾಷೆಯಾಗಿ ಉಪಯೋಗಿಸಬೇಕೆಂದೂ, ದೇವನಾಗರಿ ಲಿಪಿಯನ್ನು ಮುದ್ರಣಕ್ಕೆ ಸಹಾಯವಾಗುವಂತೆ ಸುಧಾರಿಸಬೇಕೆಂದೂ ಅವರು ಕರೆ ಕೊಟ್ಟಿದ್ದರು.
1966 ಫೆಬ್ರವರಿ 26ರಂದು ಸಾವರ್ಕರ್ ಇಹಲೋಕ ತ್ಯಜಿಸಿದರು. ಮಹಾನ್ ನಾಯಕನ ಸಾವಿಗೆ ದೇಶದ ಜನ ಕಂಬನಿ ಮಿಡಿದರು. ಲಕ್ಷಾಂತರ ಜನ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಯುಗಪುರುಷನಿಗೆ ಶ್ರದ್ದಾಂಜಲಿ ಸಲ್ಲಿಸಿದರು.
ತಮ್ಮ ಜೀವನದುದ್ದಕ್ಕೂ ಶೌರ್ಯ ಸಾಹಸವನ್ನು ಮೆರೆದ ಯುಗಪುರುಷ ಸಾವರ್ಕರ್ ಆದರೆ ವಿಪರ್ಯಾಸವೆಂದರೆ, ನಮ್ಮ ಶಾಲೆಯ ಇತಿಹಾಸ ಪುಸ್ತಕದಲ್ಲಿ ಸಾವರ್ಕರ್ ಬಗ್ಗೆ ಇಲ್ಲವೇ ಇಲ್ಲ. ಸದಾ ದೇಶಕ್ಕಾಗಿ ಪರಿತಪಿಸಿದ ಸಾವರ್ಕರ್ ಬಗ್ಗೆ ಇಂದು ನಮ್ಮ ತರುಣರಿಗೆ ತಿಳಿದಿಲ್ಲ. ತಿಳಿದಿದ್ದರೆ ಅದು ಬೆರಳಣಿಕೆಯಷ್ಟು ಮಂದಿಗೆ ಮಾತ್ರ. ನಿಜವಾದ ನಾಯಕರು (hero) ಯಾರು? ಎಂದು ಕೇಳಿದರೆ ಸಾವರ್ಕರ್ ನಮ್ಮ ನಾಯಕ (hero) ಎಂದು ಧೈರ್ಯವಾಗಿ ಹೇಳುವ ತರುಣರು ಭಾರತಕ್ಕೆ ಬೇಕು. ಸಾವರ್ಕರ್ ಎಂತಹ ಮಹಾನ್ ದೇಶ ಭಕ್ತ ಎಂದು ನಮ್ಮ ಯುವಕರು ತಿಳಿಯಬೇಕು ಆಗ ಮಾತ್ರ ನಾವು ಅಂತಹ ಯುಗಪುರುಷನಿಗೆ ಗೌರವ ಸಲ್ಲಿಸಿದಂತಾಗುತ್ತದೆ.
ಭಾರತ ಮತ್ತೆ ಜಗತ್ತಿನಲ್ಲಿ ಎತ್ತರದ ಸ್ಥಾನಕ್ಕೆ ಹೋಗಬೇಕಾದರೆ, ದಿವ್ಯ ಭವ್ಯ, ಸದೃಢ, ಹಾಗು ಸಾವರ್ಕರರು ಕಂಡ ಅಖಂಡ ಭಾರತ ಮತ್ತೆ ಸಾಕಾರಗೊಳ್ಳಬೇಕಾದರೆ ಸಾವರ್ಕರ್ ರವರು ಪ್ರತಿ ಮನೆ ಮನಗಳನ್ನು ಮುಟ್ಟಬೇಕು. ಅವರ ಸಾಹಸಮಯ ಜೀವನ ತ್ಯಾಗ ಬಲಿದಾನ ನಿಜ ಅರ್ಥದಲ್ಲಿ ಸಾರ್ಥಕವಾದಾಗ ಮಾತ್ರ ಭಾರತ ಮಾತ್ತೆ ವಿಶ್ವಮಾತೆ ಜಗದ್ಗುರುವಾಗಲು ಸಾಧ್ಯ. ಹಾಗಾದರೆ ಬನ್ನಿ ಈ ಯುಗಪುರುಷನಿಗೆ ನಮ್ಮ ನಮನ ಸಲ್ಲಿಸೋಣ.
ವಂದೇ ಮಾತರಂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.