ಚಿಂದಿ ಆಯುವ ಮಕ್ಕಳಲ್ಲೂ ಕನಸುಗಳನ್ನು ತುಂಬುವ ಸಾಹಸದಲ್ಲಿ ಅದ್ವೈತ್ ದಂಡ್ವತೆ ಯಶಸ್ವಿಯಾಗಿದ್ದಾರೆ. ಅದರಲ್ಲೂ ಯುವ ಮನಸುಗಳನ್ನು ಅರಳಿಸುವ ಅಪರೂಪದ ಕಾರ್ಯ ಅದ್ವೈತ್ ಮಾಡಿದ್ದಾರೆ.
ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ನಿವಾಸಿ ಅವರು (29). 2013 ರಲ್ಲಿ ವರ್ಧಿಷ್ಣು ಎಂಬ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಅವರ ಸಾಧನೆಯ ಪಥ ಆರಂಭವಾಗುತ್ತದೆ. ಚಿಂದಿ ಆಯುವ ನೂರಾರು ಮಕ್ಕಳಿಗೆ ವರ್ಧಿಷ್ಣು ಒಂದು ಅಪ್ಪಟ ಮನೆಯೇ ಹೌದು.
ಅದ್ವೈತ್ ಅವರ ಕನಸಿಗೆ ಬೆನ್ನೆಲುಬಾಗಿ ನಿಂತವರು ಅವರ ಪತ್ನಿ ಪ್ರಣಾಳಿ ಸಿಸೊಡಿಯಾ. ನಿರ್ಗತಿಕ ಮಕ್ಕಳಿಗಾಗಿಯೇ ಜೀವನ ಮುಡಿಪಿಟ್ಟ ಅದ್ವೈತ್, ಸಂಸ್ಥೆ ಆರಂಭಿಸಿ 4 ವರ್ಷವಾಗಿದೆಯಷ್ಟೇ. ಆದರೆ, ಅದರ ಸಾಧನೆ ಅಪಾರ.
ಜಿಲ್ಲೆಯಲ್ಲಿನ ಮಕ್ಕಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಪರಿಸ್ಥಿತಿ ಅರ್ಥ ಮಾಡಿಕೊಳ್ಳಲು ಸಾಮಾಜಿಕ ಪ್ರಯೋಗವೊಂದಕ್ಕೆ ಅದ್ವೈತ್ ಮುಂದಾಗುತ್ತಾರೆ. ಆಗ ಅವರಿಗೆ ಮಕ್ಕಳ ಅವಶ್ಯಕತೆ ಅರ್ಥವಾಗುತ್ತದೆ. ತಕ್ಷಣವೇ ಸಹಾಯವಾಣಿಯೊಂದನ್ನೂ ಆರಂಭ ಮಾಡುತ್ತಾರೆ ಅವರು. ಅಲ್ಲದೇ ಅವರಿಗೆ ಶಿಕ್ಷಣದ ಅವಶ್ಯಕತೆ ಇದೆ ಎಂದು ತಿಳಿದು ಅದಕ್ಕೂ ಮುನ್ನುಡಿ ಬರೆಯುತ್ತಾರೆ.
15 ವರ್ಷದೊಳಗಿನ ಮಕ್ಕಳು, 15 ರಿಂದ 30 ವರ್ಷದವರು ಹಾಗೂ 30 ರ ಮೇಲಿನವರು ಎಂದು 3 ವಿಧದ ಬೋಧನಾ ಕ್ರಮವನ್ನು ರಚಿಸುತ್ತಾರೆ. ಶಿಕ್ಷಣದೊಂದಿಗೆ ಮಕ್ಕಳ ಆರೋಗ್ಯದ ಕಡೆಗೂ ಹೆಚ್ಚಿನ ಒತ್ತು ನೀಡಿದ್ದಾರೆ.
ಕ್ರಮೇಣ 15 ವರ್ಷದ ಒಳಗಿನ ಮಕ್ಕಳ ಸಂಖ್ಯೆ 120 ಕ್ಕೆ ಹೆಚ್ಚುತ್ತದೆ. ಆದ್ದರಿಂದ ವರ್ಧಿಷ್ಣು, ಆನಂದ ಘರ್ ಎಂಬ ಇನ್ನೊಂದು ಸಂಸ್ಥೆಯೊಂದಿಗೆ ಕೈ ಜೋಡಿಸುತ್ತದೆ. ಈ ಮಕ್ಕಳೆಲ್ಲ ಮುನ್ಸಿಪಲ್ ಶಾಲೆಗೆ ಹೋಗುವವರು. ಅಲ್ಲಿಯ ಶಾಲೆ ಬಿಟ್ಟ ಮಕ್ಕಳ ಲೆಕ್ಕ ಹಾಕಿದರೆ ಶೇ.90.
ಇದೀಗ ವಿವಿಧ ಕಂಪನಿಗಳ ಬೆಂಬಲವೂ ವರ್ಧಿಷ್ಣುವಿಗೆ ಇದೆ. ಇದರಲ್ಲಿ ಒಟ್ಟು 12 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದ್ವೈತ್ ಹಾಗೂ ಪ್ರಣಾಳಿ ಸಂಪೂರ್ಣ ವ್ಯವಸ್ಥಾಪನೆಯ ಜವಾಬ್ದಾರಿ ಹೊತ್ತಿದ್ದಾರೆ. ಪೂರ್ಣಾವಧಿ ಹಾಗೂ ಅರೆಕಾಲಿಕ ಶಿಕ್ಷಕರೂ, ವೈದ್ಯರು, ಆಪ್ತ ಸಮಾಲೋಚಕರ ಸಹಕಾರವೂ ಇಲ್ಲಿದೆ.
ಸಾಮಾಜಿಕ ಕಾರ್ಯಕರ್ತ ಡಾ. ಅಭಯ್ ಬಂಗ್ ಎಂಬುವರ ಬದುಕೇ ಅದ್ವೈತ್ಗೆ ಪ್ರೇರಣೆಯಂತೆ. ಶಿಶು ಮರಣವನ್ನು ತಡೆಯುವಲ್ಲಿ ಡಾ.ಅಭಯ್ ಬಂಗ್ ಅವರ ಸಂಶೋಧನೆ ಹಾಗೂ ಅವರ ಕಾರ್ಯ ಬಹು ಮಾದರಿಯಾಗಿತ್ತಂತೆ.
ಸಾಮಾಜಿಕ ಪರಿವರ್ತನೆಗೆ ಒಬ್ಬರ ಬದುಕು ಇನ್ನೊಬ್ಬರಿಕೆ ಪ್ರೇರಕ, ಸ್ಪೂರ್ತಿಯಾದಾಗ, ಪ್ರಗತಿ ಸಹಜವಾಗೇ ರೂಪು ತಳೆಯುತ್ತದೆ ಎಂಬುದಕ್ಕೆ ಅದ್ವೈತ್ ಜ್ವಲಂತ ಉದಾಹರಣೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.