ಬೆಂಗಳೂರು: ಸಚಿವ ಸಂಪುಟದಿಂದ ಕೈಬಿಟ್ಟಿದ್ದ ಮಾಜಿ ಸಚಿವ ಅಂಬರೀಷ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಇದೀಗ ಅಸಮಾಧಾನಗೊಂಡಿದ್ದ ಇನ್ನೋರ್ವ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನ ಸಭೆ ಉಪ ಚುನಾವಣೆಯಲ್ಲಿ ಗೆದ್ದರೂ ನೈಜ ಫಲಿತಾಂಶ ಮುಖ್ಯಮಂತ್ರಿಯವರಿಗೆ ಗೊತ್ತಿದ್ದಂತಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಬಿಜೆಪಿ ಮತಗಳಿಕೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿದೆ. ಮಾಜಿ ಸಿ.ಎಂ ಯಡಿಯೂರಪ್ಪನವರ ಕಾರ್ಯತಂತ್ರದ ಫಲವಾಗಿ ಕಾಂಗ್ರೆಸ್ ಕೋಟೆಯಲ್ಲಿ ಕಮಲ ಅರಳುವ ಎಲ್ಲ ಲಕ್ಷಣಗಳು ಗೋಚರಿಸಿದ್ದಂತೂ ಸುಳ್ಳಲ್ಲ.
ಇನ್ನೊಂದೆಡೆ ಕಾಂಗ್ರೆಸ್ನ ಹಿರಿಯ ನಾಯಕ ಎಸ್.ಎಂ.ಕೃಷ್ಣ ಬಿಜೆಪಿಗೆ ಬಂದದ್ದು ಫಲಿತಾಂಶದ ಮೇಲೆ ಸದ್ಯಕ್ಕೆ ಪರಿಣಾಮ ಬೀರಿಲ್ಲ ನಿಜ. ಆದರೆ ಇದೇ ರೀತಿ ಎಚ್.ವಿಶ್ವನಾಥ್ ಅವರೂ ಕೂಡಾ ಪಕ್ಷ ತೊರೆಯುವ ಮಾತುಗಳು ಕೇಳಿ ಬರುತ್ತಿವೆ. ರಾಷ್ಟ್ರಮಟ್ಟದಲ್ಲಿಯೂ ಕೈಯಿಂದ ಕಮಲಕ್ಕೆ ಜಾರುವವರ ಸಂಖ್ಯೆ ಹೆಚ್ಚಾಗಿದೆ. ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಂತಿರುವ ಸಿದ್ದರಾಮಯ್ಯನವರು ಮುಂಬರುವ ವಿಧಾನಸಭೆ ಚುನಾವಣೆಗೆ ವ್ಯವಸ್ಥಿತವಾಗಿ ಸಜ್ಜಾಗುತ್ತಿದ್ದಾರೆ ಎನಿಸುತ್ತಿದೆ.
ಪಕ್ಷದ ನಾಯಕರ ಅಸಮಾಧಾನಗಳನ್ನು ದೂರ ಮಾಡುವ ಮೂಲಕ ಪಕ್ಷಾಂತರ ತಡೆಯುವುದು ಹಾಗೂ ಮುಂದಿನ ಚುನಾವಣೆಗೆ ಎಲ್ಲರ ವಿಶ್ವಾಸ ಗಳಿಸುವ ಮೂಲಕ ಅಖಾಡಕ್ಕೆ ಇಳಿಯುವ ತಂತ್ರ ಎದ್ದು ಕಾಣುತ್ತಿದೆ.
ವಿಶೇಷವಾಗಿ ಮೈಸೂರು ಹಾಗೂ ಮಂಡ್ಯ ಭಾಗದಲ್ಲಂತೂ ಎಸ್.ಎಂ.ಕೃಷ್ಣ, ಅಂಬರೀಷ್ ಹಾಗೂ ಎಚ್.ವಿಶ್ವನಾಥ್ ಅವರು ಪ್ರಭಾವಿಗಳೆಂಬುದಂತೂ ಸತ್ಯ. ಈ ಹಿಂದೆ ಅಂಬರೀಷ್ ಅವರನ್ನೂ ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ಇದೀಗ ಮತ್ತೆ ಅವರಿಗೆ ಸಚಿವ ಪಟ್ಟ ನೀಡುವ ಸಾಧ್ಯತೆ ಇದೆ ಎಂಬ ವರದಿಗಳೂ ಬರುತ್ತಿವೆ.
ಸಚಿವ ಸಂಪುಟದಿಂದ ಕೈಬಿಡಲಾಗಿದ್ದ ಸತೀಶ್ ಜಾರಕಿಹೊಳಿ ಅವರಂತೂ ತಮ್ಮ ಅಸಮಾಧಾನವನ್ನು ಬಹಿರಂಗವಾಗೇ ಹೊರಹಾಕಿದ್ದು, ಶ್ರೀನಿವಾಸ್ ಪ್ರಸಾದ್ ಅವರಿಗಿಂತ ಮೊದಲೇ ತಾವೇ ರಾಜಿನಾಮೆ ನೀಡಬೇಕಿತ್ತು ಎಂದೂ ಹೇಳಿಕೆ ನೀಡಿದ್ದರು. ಈ ಎಲ್ಲ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರು ಇದೀಗ, ಜಾರಕಿಹೊಳಿ ಅವರೊಂದಿಗೆ ಮಾತುಕತೆ ನಡೆಸಿದ್ದು ಸಮಾಧಾನ ಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಮೊದಲು ಸಿ.ಎಂ.ಇಬ್ರಾಹಿಂ ಅವರನ್ನು ಪಕ್ಷದಿಂದ ಹಾರದಂತೆ ನೋಡಿಕೊಂಡ ಸಿದ್ದರಾಮಯ್ಯನವರು ಇದೀಗ, ಅಂಬರೀಷ್ ಹಾಗೂ ಸತೀಶ ಜಾರಕಿಹೊಳಿ ಅವರನ್ನು ಸಮಾಧಾನ ಪಡಿಸುವ ನಿಟ್ಟಿನಲ್ಲಿ ಪ್ರಯತ್ನಿಸಿರುವುದು ಕಂಡು ಬಂದಿದೆ. ಇವೆಲ್ಲದರ ನಡುವೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಹಾಗೂ ಸಚಿವ ಸಂಪುಟ ವಿಸ್ತರಣೆ ಕಸರತ್ತಿನಲ್ಲೂ ಸಿ.ಎಂ.ಸಿದ್ದರಾಮಯ್ಯನವರು ಎಚ್ಚರಿಕೆಯ ಹೆಜ್ಜೆ ಇಡುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.