ವಾಯು ಮಾಲಿನ್ಯದಿಂದ ದೆಹಲಿ ತತ್ತರಿಸುತ್ತಿದೆ. ಅಕ್ಷರಶಃ ಪರಿಸರ ವಿಷಪೂರಿತ ಎನ್ನುವಷ್ಟರ ಮಟ್ಟಿಗೆ ಮಾಲಿನ್ಯ ವ್ಯಾಪಿಸಿದೆ. ಆದರೆ ಇಂಥ ಮಾಲಿನ್ಯಕ್ಕೇ ಸೆಡ್ಡು ಹೊಡೆಯುವಂತೆ ನಿಂತಿರುವುದು ಒಂದು ಬ್ಯುಸಿನೆಸ್ ಸೆಂಟರ್ ಎಂಬುದು ವಿಶೇಷ.
ಅದು ಪಹಾರ್ಪುರ್ ಬ್ಯುಸಿನೆಸ್ ಸೆಂಟರ್. ಕಳೆದೆರಡು ದಶಕದ ಹಿಂದೆ ಜನ್ಮ ತಾಳಿದ 6 ಮಹಡಿಯ ವಾಣಿಜ್ಯಿಕ ಕಟ್ಟಡ. ಈ ಕಟ್ಟಡದ ಅಲ್ಲಲ್ಲಿ ನೂರಾರು ಪುಟಾಣಿ ಗಿಡಗಳು ಪರಿಸರ ಸ್ನೇಹದ ಕುರುಹಾಗಿ ವಿರಾಜಮಾನವಾಗಿವೆ. ಶುದ್ಧ ಗಾಳಿ ವೃದ್ಧಿಗೆ ಸಹಕಾರಿಯಾಗಿವೆ.
ಕಮಲ್ ಮಿತ್ತಲ್ ಈ ಬ್ಯುಸಿನೆಸ್ ಸೆಂಟರ್ನ ಮುಖ್ಯಸ್ಥ. 1992 ರ ವೇಳೆಯಲ್ಲಿ ಇವರು ಶ್ವಾಸಕೋಶ ತೊಂದರೆಯಿಂದ ಬಳಲುತ್ತಿದ್ದರು. ಪರಿಣಾಮ ದೆಹಲಿಯನ್ನೇ ತೊರೆಯುವಂತೆ ವೈದ್ಯರು ಅವರಿಗೆ ಸಲಹೆ ನೀಡಿದ್ದರು. ಆದರೆ, ಸವಾಲಿನಿಂದ ಹಿಂದೆ ಸರಿಯದ ಮಿತ್ತಲ್ ಅವರು, ಅಲ್ಲಿಯೇ ಇದ್ದುಕೊಂಡು ಶುದ್ಧ ಗಾಳಿ ಸೃಷ್ಟಿ ಪ್ರಕ್ರಿಯೆಗೆ ಮುಂದಾದರು. ಅದರ ಪ್ರತಿಫಲವೇ ಬ್ಯುಸಿನೆಸ್ ಸೆಂಟರ್ ಪರಿಸರ ಸ್ನೇಹಿ ಹಿರಿಮೆಗೆ ಪಾತ್ರವಾಗಿದ್ದು.
ಗಾಳಿಯನ್ನು ಶುದ್ಧೀಕರಿಸುವ ಸಾಮರ್ಥ್ಯ ಇರುವ ಗಿಡಗಳ ಬಗ್ಗೆ ಮಿತ್ತಲ್ ಅಧ್ಯಯನ ನಡೆಸಿದರು. ಅವುಗಳಿಗೆ ತಮ್ಮ ಬ್ಯುಸಿನೆಸ್ ಸೆಂಟರ್ನಲ್ಲಿ ಅವಕಾಶ ನೀಡಿದರು. ವಿಶೇಷ ಎಂದರೆ ಕಚೇರಿಯಲ್ಲಿ ಕೆಲಸ ಮಾಡುವ ಒಬ್ಬರಿಗೆ ನಾಲ್ಕರ ಲೆಕ್ಕದಲ್ಲಿ, ಸಸಿಗಳನ್ನು ಇರಿಸಲಾಗಿದೆ. ಪರಿಣಾಮ ಒಟ್ಟು 1200 ಸಸಿಗಳು ಬ್ಯುಸಿನೆಸ್ ಸೆಂಟರ್ನ ಪರಿಸರ ಸ್ನೇಹಕ್ಕೆ ಸಾಕ್ಷಿಯಾಗಿವೆ.
ವಾಯುಮಾಲಿನ್ಯ ಸಮಸ್ಯೆಯಿಂದ ಭಾರತದಲ್ಲಿ ಒಂದು ಮಿಲಿಯನ್ ಜನ ಮರಣ ಹೊಂದುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ. ಇದಕ್ಕೊಂದು ಪರಿಹಾರ ಹುಡುಕಬೇಕು ಎಂಬ ನಿಟ್ಟಿನಲ್ಲಿಯೇ ಈ ಕಾರ್ಯಕ್ಕೆ ಮುಂದಾದೆ. ಎಲ್ಲರಿಗೂ ಶುದ್ಧ ಗಾಳಿಯೇ ಲಭಿಸುವಂತಾಗಲಿ ಎಂದು ಆಶಿಸುತ್ತಾರೆ ಕಮಲ್ ಮಿತ್ತಲ್.
ಪರಿಸರದಲ್ಲಿನ ಅಶುದ್ಧ ಗಾಳಿ ಸಂಸ್ಕರಿಸಿದ ಶುದ್ಧೀಕರಣ ಪ್ರಕ್ರಿಯೆ ಮೂಲಕ ಸ್ವಚ್ಛವಾಗುತ್ತದೆ. ನಂತರ 6ನೇ ಮಹಡಿಯ ಮೇಲ್ಭಾಗದಲ್ಲಿರುವ ಗ್ರೀನ್ ಹೌಸ್ ನಲ್ಲಿರುವ ಗಿಡಗಳಿಂದ ಅದು ಬಿಡುಗಡೆಯಾಗುತ್ತದೆ. ಕಾರ್ಬನ್ ಮೊನಾಕ್ಸೈಡ್, ಫಾರ್ಮಾಲ್ಡಿಹೈಡ್ ಮತ್ತು ಬ್ಯಾಕ್ಟಿರೀಯಾವನ್ನು ಹೊಡೆದೋಡಿಸುವುದೇ ಇದರ ಉದ್ದೇಶವಂತೆ.
ಅಭಿವೃದ್ಧಿಯ ಹೆಸರಿನಲ್ಲಿ ಕಾಂಕ್ರೀಟ್ ಕಟ್ಟಡಗಳಲ್ಲದೇ ರಸ್ತೆಗಳು ನಿರ್ಮಾಣವಾಗುತ್ತಿವೆ. ಪರಿಣಾಮ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರದೆ ಇರದು. ಇದಕ್ಕೊಂದು ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಿದ ಪಹಾರ್ಪುರ್ ಬ್ಯುಸಿನೆಸ್ ಸೆಂಟರ್ನ ಮಿತ್ತಲ್ ಅವರ ಕಾರ್ಯ ಮಾದರಿಯೇ ಸರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.