ವಯಸ್ಸಾದ ತಂದೆ ತಾಯಿಯರನ್ನು ಒಂಟಿಯಾಗಿಸುವುದು, ಮನೆಯಿಂದ ಹೊರಹಾಕುವುದು ಇಂದಿನ ಕಾಲದ ಕಠೋರ ವಾಸ್ತವ. ಹಲವಾರು ಸಂಖ್ಯೆಯ ಹಿರಿಯ ನಾಗರಿಕರು ಇಂದು ದೈಹಿಕ, ಮಾನಸಿಕ ಹಿಂಸೆಗೊಳಗಾಗುತ್ತಿದ್ದಾರೆ. ಹಲವಾರು ಮಂದಿ ಮಕ್ಕಳಿಂದ ದೂರವಾಗಿ ವೃದ್ಧಾಶ್ರಮ ಸೇರಿದ್ದಾರೆ.
ಇಂತಹ ವೃದ್ಧರ ಸೇವೆಗೆಂದೇ ತಮ್ಮ ಜೀವನವನ್ನು ಮುಡುಪಾಗಿಟ್ಟವರು ಡಾ.ಉದಯ್ ಮೋದಿ. ಮುಂಬಯಿಯ ಬೈಯಂದರ್ನಲ್ಲಿ ಉಚಿತ ಆಹಾರ ಸೇವೆಯನ್ನು ಆರಂಭಿಸಿರುವ ಇವರು, ಇದರ ಮೂಲಕ 500 ಮಂದಿ ಅನಾಥ ವೃದ್ಧರಿಗೆ ಪ್ರತಿನಿತ್ಯ ಆಹಾರ ಒಗಿಸುತ್ತಾರೆ.
ವೈದ್ಯಕೀಯ ವೃತ್ತಿಗೆಂದು ಗುಜರಾತ್ನಿಂದ ಮುಂಬಯಿಗೆ ಆಗಮಿಸಿದ್ದ ಇವರಿಗೆ ಮಕ್ಕಳಿಂದ ದೂರವಾದ ವೃದ್ಧರ ಸೇವೆ ಮಾಡುವ ಪ್ರೇರಣೆ ಕೊಟ್ಟಿದ್ದು ಒರ್ವ 78 ವರ್ಷದ ವಯೋವೃದ್ಧ ಮತ್ತು ಆತನ ರೋಗಪೀಡಿತ ಪತ್ನಿ. ಹಸಿವಿನಿಂದ ಕಂಗೆಟ್ಟು ಜೇಬಲ್ಲಿ ನಯಾಪೈಸೆಯಿಲ್ಲದೆ ಇವರ ಬಳಿ ಬಂದು ಆಹಾರಕ್ಕಾಗಿ ಇವರು ಅಂಗಲಾಚಿದ್ದರು. ಅಲ್ಲಿಂದ ಮೋದಿಯವರ ವೃದ್ಧರ ಸೇವೆ ಆರಂಭವಾಯಿತು.
ಅನಾಥ ವೃದ್ಧರಿಗೆಂದೇ ಇವರು ‘ಶ್ರವಣ್ ಟಿಫಿನ್ ಸರ್ವಿಸ್’ನ್ನು ಆರಂಭಿಸಿದರು. ಪುರಾಣದಲ್ಲಿ ಬರುವ ತಂದೆ ತಾಯಿಯರನ್ನು ಹೆಗಲಲ್ಲಿ ಹೊತ್ತು ತೀರ್ಥಯಾತ್ರೆ ಮಾಡಿಸಿದ ಶ್ರವಣ ಕುಮಾರನೇ ಇವರಿಗೆ ಈ ಹೆಸರಿಡಲು ಪ್ರೇರಣೆ. ಮೊದಲು ತಮ್ಮ ಮನೆಯಿಂದಲೇ ತಮ್ಮ ಹೆಂಡತಿ ಮಾಡಿದ ಆಹಾರವನ್ನು ಅನಾಥ ವೃದ್ಧರಿಗೆ ಹಂಚುತ್ತಿದ್ದರು. ಇದೀಗ 11 ಟಿಫಿನ್ ಸರ್ವಿಸ್ ಇವರು ಆರಂಭಿಸಿದ್ದು, 500ವೃದ್ಧರಿಗೆ ನಿತ್ಯ ಆಹಾರ ಹಂಚಲಾಗುತ್ತದೆ.
6 ಚಪಾತಿ ಮತ್ತು ಪದಾರ್ಥ ಒಂದೊಂದು ಟಿಫಿನ್ನಲ್ಲಿರುತ್ತದೆ. ಡಯಾಬಿಟಿಸ್ ರೋಗಿಗಳಿಗೆ ಪ್ರತ್ಯೇಕ ಆಹಾರ ಮಾಡಲಾಗುತ್ತದೆ. ಟಿಫಿನ್ ಹಂಚಲು ಕಾರ್ಮಿಕರನ್ನೂ ಇಟ್ಟುಕೊಂಡಿದ್ದಾರೆ. ಇದಕ್ಕಾಗಿ 3 ಲಕ್ಷ ರೂಪಾಯಿಗಳನ್ನು ತಮ್ಮ ಜೇಬಿನಿಂದಲೇ ಇವರು ವ್ಯಹಿಸುತ್ತಾರೆ.
ವಯಸ್ಸಾದವರು ನಿರ್ಲಕ್ಷ್ಯಕ್ಕೆ ಒಳಗಾಗುವ ಇಂತಹ ಕಾಲದಲ್ಲಿ ಮೋದಿಯಂತಹ ಮಹಾನ್ ಸೇವಕ ಸಿಗುವುದು ಅತಿ ವಿರಳ. ಅನಾಥ ವೃದ್ಧರಿಗಾಗಿ ಅವರು ಮಾಡುತ್ತಿರುವ ಕಾರ್ಯ ಇತರರಿಗೆ ಮಾದರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.