ಮಂಗಳೂರು : ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಿ ಅಲ್ಲಿ ವಂಚನೆಗೊಳಗಾಗಿ ಮರಳಿ ಊರಿಗೂ ಬರಲಾಗದೆ ಸಂಕಷ್ಟದಲ್ಲಿದ್ದ ಜಗದೀಶ್ ಪೂಜಾರಿಯವರು ಸಂಸದ ನಳಿನ್ ಕುಮಾರ್ ಕಟೀಲ್ರವರ ನೆರವಿನಿಂದಾಗಿ ಸ್ವದೇಶಕ್ಕೆ ಸುರಕ್ಷಿತವಾಗಿ ತಲುಪಿದ್ದಾರೆ.
2 ತಿಂಗಳುಗಳ ಹಿಂದೆ ಅಡುಗೆ ಕೆಲಸಕ್ಕೆಂದು ಕುವೈಟ್ಗೆ ತೆರಳಿದ್ದ ಮೂಡಬಿದ್ರಿಯ ಜಗದೀಶ್ ಪೂಜಾರಿಯವರಿಗೆ ಅಲ್ಲಿ ಹೋದ ನಂತರ ತಾನು ವಂಚನೆಗೊಳಗಾಗಿರುವ ವಿಷಯ ತಿಳಿದಿದೆ. ಅಲ್ಲಿ ಇವರಿಂದ ಅಡುಗೆ ಕೆಲಸದ ಬದಲಾಗಿ ಕೂಲಿ ಕೆಲಸ ಮಾಡಿಸಲಾಗುತ್ತಿತ್ತು. ಕೆಲಸ ಮಾಡಲು ನಿರಾಕರಿಸಿದರೆ ದೈಹಿಕ ಹಿಂಸೆ ನೀಡಲಾಗುತ್ತಿತ್ತು. ತನಗೆ ನಿಗದಿಪಡಿಸಿದ ಸಂಬಳ 60 ಸಾವಿರದ ಬದಲಾಗಿ 30 ಸಾವಿರವನ್ನಷ್ಟೆ ಕೊಡಲಾಗಿತ್ತು.
ಅವರ ಪಾಸ್ ಪೋರ್ಟ್ನ್ನು ತೆಗೆದಿಟ್ಟಿದ್ದ ಮಾಲಕ ಊರಿಗೆ ವಾಪಾಸು ಬರಲು ಬಿಡುತ್ತಿರಲಿಲ್ಲ. ಕೊನೆಗೆ ಹೇಗೋ ಅವರ ಕಣ್ಣು ತಪ್ಪಿಸಿ ಪೋನ್ ಮುಖಾಂತರ ಮಿತ್ರ ಸಂದೇಶ್ ಅವರನ್ನು ಸಂಪರ್ಕಿಸಿದ ಜಗದೀಶ್ ಅವರ ಬಳಿ ಸಹಾಯವನ್ನು ಕೇಳಿದ್ದಾರೆ.
ಸಂದೇಶ್ ಮತ್ತು ಅವರ ಮಿತ್ರರಾದ ಅವೀಕ್ಷಿತ್ರ ಮುಖಾಂತರ ಸಂಸದ ನಳಿನ್ ಕುಮಾರ್ ಕಟೀಲ್ರವರ ಸಹಾಯವನ್ನು ಯಾಚಿಸಿದೆ. ಈ ಹಿಂದೆಯೂ ಹಲವಾರು ಬಾರಿ ಕಷ್ಟಕ್ಕೆ ಸ್ಪಂದಿಸಿರುವ ಸಂಸದ ನಳಿನ್ ಅವರು ನಮ್ಮ ಕೋರಿಕೆಗೆ ಕೂಡಲೇ ಸ್ಪಂದಿಸಿ ಕೇಂದ್ರ ವಿದೇಶಾಂಗ ಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್ರವರೊಂದಿಗೆ ಮಾತುಕತೆ ನಡೆಸಿ ಜಗದೀಶ್ರವರಿಗೆ ನೆರವಾಗುವಂತೆ ವಿನಂತಿಸಿಕೊಂಡಿದ್ದರು.
ಈ ಮಧ್ಯೆ ಜಗದೀಶ್ Kuwait Indian Embassy ಯಲ್ಲಿ ಮಾಲಕನಿಂದ ತನಗಾದ ಅನ್ಯಾಯದ ಬಗ್ಗೆ ದೂರು ದಾಖಲಿಸಿದ್ದರು. ಜಗದೀಶ್ರನ್ನು ತನ್ನ ಬಳಿಯಿರಿಸಿಕೊಂಡ ಅಲ್ಲಿನ Embassy ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ. ಇಂತಹ ಹಲವಾರು ಪ್ರಕರಣಗಳು ಅಲ್ಲಿ ದಾಖಲಾಗಿದ್ದು ಇಲಾಖೆ ಈ ಪ್ರಕರಣದ ಬಗ್ಗೆ ವಿಶೇಷ ಗಮನವನ್ನು ಕೊಟ್ಟಿರಲಿಲ್ಲ.
ಇದೀಗ ಸಂಸದ ನಳಿನ್ ಅವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಭಾರತೀಯ ವಿದೇಶಾಂಗ ಕಾರ್ಯಾಲಯ Kuwait Indian Embassy ಯ ಮೇಲೆ ಜಗದೀಶ್ರವರ ಬಿಡುಗಡೆಗಾಗಿ ಒತ್ತಡವನ್ನು ಹೇರಿತು. ಇದರ ಫಲವಾಗಿ ಕಾರ್ಯಪ್ರವೃತ್ತರಾದ ಅಲ್ಲಿಯ ಅಧಿಕಾರಿಗಳು ಮಾಲಿಕನನ್ನು ವಿಚಾರಣೆಗೆ ಕರೆಸಿಕೊಂಡು ಜಗದೀಶ್ ಅವರ ಪಾಸ್ಪೋರ್ಟ್ ವಶಪಡಿಸಿಕೊಂಡು ಕಾನೂನು ಪ್ರಕಾರ ಜಗದೀಶ್ ಅವರಿಗೆ ಭಾರತಕ್ಕೆ ಮರಳಲು ನೆರವಾಗಿದೆ.
ಜಗದೀಶ್ ಪೂಜಾರಿ ಪ್ರಕರಣದಿಂದ ಭಾರತೀಯ ವಿದೇಶಾಂಗ ಕಾರ್ಯಾಲಯ ಈ ರೀತಿ ಸಂಕಷ್ಟಕ್ಕೊಳಗಾದ ಅನೇಕ ಅಮಾಯಕ ಭಾರತೀಯರ ನೆರವಿಗೆ ಧಾವಿಸಿದ್ದು Kuwait Indian Embassy ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಸಂಕಷ್ಟದಲ್ಲಿರುವ ಭಾರತೀಯರ ನೆರವಿಗೆ ಸಹಕರಿಸಲು ನೆರವಾಗಲಿದೆ.
ನನ್ನ ಮಿತ್ರ ಜಗದೀಶ್ ಪೂಜಾರಿ ಅವರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಲು ಸಹಕರಿಸಿದ ನಮ್ಮ ಸಂಸದರಿಗೆ, ನಮ್ಮ ವಿದೇಶಾಂಗ ವ್ಯವಹಾರ ಇಲಾಖೆಗೆ, ಹಾಗೂ ಈ ಎಲ್ಲಾ ಕೆಲಸದಲ್ಲಿ ನಮಗೆ ಸಹಕರಿಸಿದ ನನ್ನ ಮಿತ್ರ ಅವೀಕ್ಷಿತ್ರವರಿಗೆ ಈ ಸಂದರ್ಭದಲ್ಲಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದು ಸಂದೇಶ್ ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.