ಅರಣ್ಯಾಧಿಕಾರಿಗಳ ಕಾರ್ಯವೇ ಸವಾಲಿನದ್ದು, ಪ್ರತಿನಿತ್ಯ ಕಾಡಿನ ಮೂಲೆ ಮೂಲೆಯನ್ನು ಅಲೆಯಬೇಕು, ಅಲ್ಲಿನ ವಾತಾವರಣ, ಪರಿಸ್ಥಿತಿ ಹೇಗೆ ಇದ್ದರೂ ಅದಕ್ಕೆ ಹೊಂದಿಕೊಳ್ಳಬೇಕು. ಅಪಾಯದ ಸ್ಥಿತಿಯಲ್ಲೂ ವನ್ಯಜೀವಿಗಳ, ಕಡುಗಳ್ಳರ ಚಲನವಲನ ಗಮನಿಸಬೇಕು. ಅದರಲ್ಲೂ ಮಹಿಳೆಯಾಗಿದ್ದರೆ ಸವಾಲುಗಳು ಇನ್ನಷ್ಟು ಅಧಿಕವಾಗಿರುತ್ತದೆ.
ಎಲ್ಲಾ ಅರಣ್ಯಾಧಿಕಾರಿಗಳ ರೀತಿಯೇ 49 ವರ್ಷದ ಪಿ.ಜಿ ಸುಧಾ ಅವರು ಎರ್ನಾಕುಲಂನ ಕುಟ್ಟಂಪುಝ ರೇಂಜ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಳಿಗ್ಗೆ ಕರ್ತವ್ಯ ನಿಮಿತ್ತ ಕಾಡಿಗೆ ತೆರಳಿದರೆ ಸೂರ್ಯಾಸ್ತವಾಗುವ ಹೊತ್ತಿಗೆ ಹಿಂದಿರುಗುತ್ತಾರೆ. ಇವರದ್ದು ಒಂಟಿ ಮಹಿಳಾ ಪಡೆ. ಒಬ್ಬಂಟಿಯಾಗಿಯೇ ಎಲ್ಲಾ ಸವಾಲುಗಳನ್ನು ಎದುರಿಸಿ ಅರಣ್ಯವನ್ನು ರಕ್ಷಿಸುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೇ ಕಾಡಿನೊಳಗಿನ ಬುಡಕಟ್ಟು ಕುಟುಂಬಗಳಿಗೆ 497 ಶೌಚಾಲಯವನ್ನು ನಿರ್ಮಿಸಿಕೊಟ್ಟು ಬಯಲು ಶೌಚ ಮುಕ್ತಗೊಳಿಸಿದ ಹೆಗ್ಗಳಿಕೆ ಇವರದ್ದು. ಅದಕ್ಕಾಗಿ ಇವರು ಕೇರಳ ಮುಖ್ಯಮಂತ್ರಿಯಿಂದ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಕೇರಳವನ್ನು ದೇಶದ ಎರಡನೇ ಬಯಲುಶೌಚಮುಕ್ತ ರಾಜ್ಯ ಮಾಡುವಲ್ಲಿ ಇವರ ಕೊಡುಗೆಯೂ ಅಪಾರವಿದೆ ಎಂಬುದು ಇಲ್ಲಿ ಗಮನಾರ್ಹ.
‘ಬುಡಕಟ್ಟು ಕಾಲೋನಿಗಳಲ್ಲಿ ಬದುಕು ದುಸ್ತರವಾಗಿದೆ, ಅತೀ ಕಡಿಮೆ ಸೌಕರ್ಯ ಇಲ್ಲಿ ಇದೆ. ಇವರನ್ನು ತಲುಪಬೇಕಾದರೆ ನಾವು ಕನಿಷ್ಠ 3 ಗಂಟೆಯಾದರೂ ನಡೆಯಬೇಕು’ ಎಂದು ಸುಧಾ ಹೇಳುತ್ತಾರೆ.
ಬಯಲು ಶೌಚಕ್ಕೆ ಹೊಂದಿಕೊಂಡಿರುವ, ರಸ್ತೆಗಳೇ ಇಲ್ಲದ ಬುಡಕಟ್ಟು ಕಾಲೋನಿಗಳಲ್ಲಿ ಶೌಚಾಲಯ ನಿರ್ಮಿಸುವ ಕಾರ್ಯ ಅಷು ಸುಲಭದ್ದಾಗಿರಲಿಲ್ಲ, ಅದಕ್ಕಾಗಿ ಇವರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ.
ಏಕಾಂಗಿ ಅರಣ್ಯಾಧಿಕಾರಿಯಾಗಿ ಅರಣ್ಯವನ್ನೂ ಕಾವಲು ಕಾಯುತ್ತಾ, ಬುಡಕಟ್ಟು ಜನರನ್ನೂ ಉದ್ಧಾರ ಮಾಡುತ್ತಾ ಕರ್ತವ್ಯ ನಿರ್ವಹಿಸುತ್ತಿರುವ ಸುಧಾ ಅವರ ಸಾಹಸ, ಧೈರ್ಯ ಮತ್ತು ಕಾರ್ಯ ಮೆಚ್ಚುವಂತಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.