ಹುಬ್ಬಳ್ಳಿ: ಬೆಳ್ಳಂ ಬೆಳಗ್ಗೆ ಬಂದು ಅವ್ರು ನಿಮ್ಮ ಮನೆ ಬಾಗಿಲು ಬಡೆಯಬಹುದು. ಹಾಗೆಂದು ಅವ್ರು ಹಾಲು, ಪೇಪರ್ ಹಾಕುವವರಲ್ಲ. ನಿಮಗೊಂದು ಶುಭಾಶಯ ಕೋರುತ್ತಾರೆ ಅಷ್ಟೆ. ವಿಶೇಷ ಎಂದರೆ ಅದು ’ಇಕೊ ಫ್ರೆಂಡ್ಲಿ’ ಆಗಿರುತ್ತೆ.
ಹೌದು, ಜನ್ಮದಿನ, ಉಪನಯನ, ಮದುವೆ, ಮನೆವಾಸ್ತು, ನಿವೃತ್ತಿ, ವಿಶೇಷ ಸಾಧನೆ, ಪ್ರಶಸ್ತಿ, ಪುರಸ್ಕಾರ ಪಡೆದಾಗ ಹೀಗೇ ವಿಭಿನ್ನ ಸಂದರ್ಭಗಳಲ್ಲಿ ಸಸಿಯೊಂದನ್ನು ನೀಡಿ ಅಭಿನಂದಿಸುವ ಅಪರೂಪದ ಹವ್ಯಾಸ ರೂಢಿಸಿಕೊಂಡವರು ನಗರದ ಬಾಲಚಂದ್ರ ಡಂಗನವರ.
ಮೂಲತಃ ದೈಹಿಕ ಆರೋಗ್ಯಕ್ಕಾಗಿ ಸೈಕ್ಲಿಂಗ್ ಹೋಗುವುದು ಅವರ ದಿನದ ಕಾಯಕ. ಆದರೆ ಪ್ರತಿನಿತ್ಯ ಸೈಕಲ್ ಮೇಲೆ ಹೋಗುವುದು ಬರುವುದು ಮಾಡಿದರೆ ದೇಹಕ್ಕೆ ಉತ್ತಮ, ಆದರೆ ಪರಿಸರಕ್ಕೆ ಏನಾದರೂ ಕೊಡಬೇಕಲ್ಲ ಎನಿಸಿತಂತೆ ಅವರಿಗೆ. ಆಗ ಅಸ್ತಿತ್ವಕ್ಕೆ ಬಂದಿದ್ದೇ ’ಗ್ರೋ ಗ್ರೀನ್ ಪೆಡಲರ್ಸ್’ ಸಂಸ್ಥೆ. ಇದು ಅವರ ಕನಸಿನ ಕೂಸು.
ಸಮಾನ ಮನಸ್ಕರೇ ಇರುವ ಈ ಸಂಸ್ಥೆಯಲ್ಲಿ ಪರಿಸರದ ಬಗ್ಗೆ ಕಾಳಜಿ ಹೆಚ್ಚು. ರಾಜ್ಯದಲ್ಲಿ ಆಗಾಗ ಬಹು ಕಾವು ಪಡೆಯುವ ಕಾವೇರಿ ಹಾಗೂ ಕಳಸಾ-ಬಂಡೂರಿ ಹೋರಾಟಕ್ಕೆ ಬೆಂಬಲಾರ್ಥವಾಗಿ ಸೈಕ್ಲಿಂಗ್ ಜಾಥಾ ಕೈಗೊಂಡ ಹಿರಿಮೆಯೂ ಇವರದು.
ವರ್ಲ್ಡ್ ಕಾರ್ ಡೇ ದಿನದಂದು ಕಾರುಗಳನ್ನು ನಿಲ್ಲಿಸಿ, ಅವರಿಗೊಂದು ಸಸಿಯನ್ನೂ ಕೊಟ್ಟಿದ್ದಾರೆ ಇವರು. ಅನಗತ್ಯವಾಗಿ ಕಾರು ಬಳಸಿ ಪರಿಸರದ ಉಳಿವಿಗೆ ಸಂಚಕಾರ ತರುವುದು ಬೇಡ ಎಂದು ಮನವರಿಕೆ ಮಾಡಿದ್ದಾರೆ. ಇವರ ಕಾರ್ಯಕ್ಕೆ ಅನೇಕರು ಪ್ರಶಂಸಿಸಿದ್ದೂ ಉಂಟು.
ಪ್ರತಿ ತಿಂಗಳೂ ಇವರ ತಂಡದಿಂದ ಒಂದು ಸರ್ಕಾರಿ ಶಾಲೆಗೆ ಸಸಿಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಅಲ್ಲದೇ ಮಕ್ಕಳಿಗೆ ಉಚಿತ ನೋಟ್ಬುಕ್ ಹಾಗೂ ಸ್ವಚ್ಛತೆಯ ಕುರುಹಾಗಿ ಸೋಪ್ ಕೂಡಾ ಕೊಡುವುದನ್ನು ಆರಂಭಿಸಿದ್ದಾರೆ ಗ್ರೋ ಗ್ರೀನ್ ಪೆಡಲರ್ಸ್ ತಂಡದವರು. ಈ ಕುರಿತು ರಾಜ್ಯ ಹಾಗೂ ರಾಷ್ಟ್ರೀಯ ವಾಹಿನಿಗಳಲ್ಲೂ ವರದಿಯಾಗಿದ್ದು ಗಮನಾರ್ಹ.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿಧಾನಪರಿಷತ್ ಸಚಿವ ಬಸವರಾಜ ಹೊರಟ್ಟಿ, ಸಚಿವ ವಿನಯ ಕುಲಕರ್ಣಿ, ಉದ್ಯಮಿ ಪ್ರಕಾಶ ನಾಯಕ್, ಶೌರ್ಯ ಪ್ರಶಸ್ತಿಗೆ ಭಾಜನಳಾದ ಸಿಯಾ ಖೋಡೆ, ವೀರ ಯೋಧ ಹನುಮಂತಪ್ಪನ ಕುಟುಂಬಕ್ಕೆ ಹೀಗೇ ಬಹು ಪರಿಚಿತರಿಗೂ ಶುಭ ಸಂದರ್ಭದಲ್ಲಿ ಸಸಿ ನೀಡಿ ಶುಭ ಕೋರಿದ್ದಾರೆ.
ಕೇವಲ ರಾಜಕಾರಣಿಗಳು, ಶ್ರೀಮಂತರಿಗೆ ಮಾತ್ರ ಇವರ ಪರಿಸರ ಪ್ರೇಮ ಸೀಮಿತವಾಗಿಲ್ಲ. ಕೃಷ್ಣ ತಂಬೂರು ಎಂಬ ವಾಚಮನ್ನ ಮಗ, ರಿಕ್ಷಾ ಚಾಲಕ, ಹೊಟೆಲ್ನ ಮಾಣಿ ಹೀಗೇ ಜನ ಸಾಮಾನ್ಯರ ಬದುಕಿಗೂ ಶುಭ ಕೋರಿದ್ದು ಗಮನಾರ್ಹ.
ತಮ್ಮ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿಯೂ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ ಎನ್ನುತ್ತಾರೆ ಬಾಲಚಂದ್ರ ಡಂಗನವರ. ಇವರ ಸಹೋದರರೊಬ್ಬರು ರಾಜಕೀಯ ಮುಖಂಡರೂ ಹೌದು. ಆದರೆ, ತಮ್ಮ ಕಾರ್ಯದಲ್ಲಿ ಯಾವುದೇ ರಾಜಕೀಯ ಬೆರೆಸದೇ, ನಿರ್ಮಲ ಮನಸ್ಸಿನಿಂದ ಪರಿಸರದ ಒಳಿತಿಗೆ ಅಳಿಲು ಸೇವೆ ಇದು ಎನ್ನುತ್ತಾರೆ ಬಾಲಚಂದ್ರ ಅವರು.
ಸಸಿಯೊಂದಿಗೆ ನಿಮ್ಮ ಮನೆಗೂ ಅವರು ಬರಬಹುದು. ಅವರ ಪರಿಸರ ಸ್ನೇಹಿ ಅಭಿನಂದನೆಗೊಂದು ಬೆನ್ನುತಟ್ಟಿ ಸಾಕು. ಅವರಿಗೆ ಮತ್ತೇನೂ ಅಪೇಕ್ಷೆಗಳಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.