ಮೋದಿ ಅಲೆ ರಾಜ್ಯದಲ್ಲಿ ಇಲ್ಲ ಎನ್ನುತ್ತಲೇ ಜೆಡಿಎಸ್ ಬಗ್ಗೆ ಒಲವು ತೋರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಕಂಡಾಗ, ಮೋದಿ-ಷಾ ಜೋಡಿಗೆ ಕಾಂಗ್ರೆಸ್ ಅಕ್ಷರಶಃ ಬೆದರಿತೆ ಎಂಬ ಸಂಶಯ ಕಾಡದಿರದು.
ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಶತಾಯ ಗತಾಯ ಬಿಜೆಪಿಗೆ ಮಣ್ಣು ಮುಕ್ಕಿಸಬೇಕು ಎಂದು ಜೆಡಿಎಸ್ ಹಾಗೂ ಕಾಂಗ್ರೆಸ್ ಕೂಡಿ ರಣತಂತ್ರ ಹೂಡಲು ಮುಂದಾಗಿವೆ. ರಾಷ್ಟ್ರವಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರತವನ್ನು ಬೆರಗು ಗಣ್ಣಿನಿಂದ ನೋಡುವಂತೆ ಮಾಡುವಲ್ಲಿ ಯಶಸ್ವಿಯಾದ ಪ್ರಧಾನಿ ಮೋದಿ ಅಲೆ ಇತ್ತೀಚೆಗೆ ನಡೆದ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಸಾಬೀತಾಗಿದೆ. ದೇಶದಲ್ಲಿ ಇತ್ತೀಚೆಗೆ ನಡೆದ 10 ಉಪ ಚುನಾವಣೆಗಳಲ್ಲಿ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಆದರೆ ಕರ್ನಾಟಕದಲ್ಲಿ ನಡೆದ ಎರಡು ಕ್ಷೇತ್ರಗಳಲ್ಲಿ ಕೈ ಮೇಲಾಗಿದ್ದು ಸುಳ್ಳಲ್ಲ.
ಬಿಜೆಪಿಗೆ ಸೋಲಿಗೆ ಕಾರಣಗಳು ಹಲವು. ಆದರೆ ಮೇಲ್ನೋಟಕ್ಕೆ ಕಾಣಿಸುವಂತೆ ಜೆಡಿಎಸ್ ಮಾತ್ರ ಸ್ಪರ್ಧೆಗೆ ನಿಲ್ಲದೇ, ತಟಸ್ಥವಾಗಿರುವ ಮೂಲಕ ಕಾಂಗ್ರೆಸ್ ಗೆಲುವಿಗೆ ಸಹಕರಿಸಿದ್ದು ಸುಳ್ಳಲ್ಲ. ಪ್ರತಿಯಾಗಿ ಸಿದ್ದರಾಮಯ್ಯನವರು, ಕಾಂಗ್ರೆಸ್ ಗೆಲುವಿಗೆ ಜೆಡಿಎಸ್ ಕಾರಣ ಎಂದು ಬಹಿರಂಗವಾಗೇ ಹೇಳಿದ್ದೂ ಅಲ್ಲದೇ, ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗೆ ಧನ್ಯವಾದ ಸಲ್ಲಿಸಿ ಬರುವುದಾಗಿಯೂ ಹೇಳಿ ಕೃತಜ್ಞತೆ ಮೆರೆದಿದ್ದರು.
ದೇವೇಗೌಡರು ಹಾಗೂ ಸಿದ್ದರಾಮಯ್ಯ ಮೂಲತಃ ಜನತಾ ಪರಿವಾರದಲ್ಲೇ ಇದ್ದವರು. ಆದರೆ ಕ್ರಮೇಣ ಪರಸ್ಪರ ವೈರತ್ವವೂ ಅಷ್ಟೇ ಗಾಢವಾಗಿ ಮಾರ್ಪಟ್ಟಿತು. ರಾಜಕೀಯ ನಿಂತ ನೀರಲ್ಲ ಎನ್ನುವಂತೆ, ಪರಿಸ್ಥಿತಿಗೆ ತಕ್ಕಂತೆ ತನ್ನ ಬಣ್ಣ ಬದಲಾಯಿಸಿಕೊಳ್ಳುವ ವೈಶಿಷ್ಟ್ಯವೂ ರಾಜಕೀಯಕ್ಕಿದೆ. ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯನವರು ಹಾಗೂ ಜೆಡಿಎಸ್ ವರಿಷ್ಠ ದೇವೇಗೌಡರ ನಡುವಿನ ಪ್ರಸ್ತುತ ಸಂಬಂಧ ಮೈತ್ರಿಯ ಲಕ್ಷಣಗಳನ್ನು ಒತ್ತಿ ಹೇಳುತ್ತಿವೆ.
ಒಡಿಶ್ಶಾದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು, ಕರ್ನಾಟಕದಲ್ಲಿ ಕಮಲವನ್ನು ಅರಳಿಸಲೇಬೇಕು ಎಂದು ಪಣತೊಟ್ಟಿರುವುದಾಗಿ ಹೇಳಿದ್ದಾರೆ. ಅಂದರೆ ಮೋದಿ ಹಾಗೂ ಅಮಿತ್ ಶಾ ಚುನಾವಣಾ ಪ್ರಚಾರಕ್ಕೆ ಖುದ್ದು ಬರುವುದು ನಿಶ್ಚಿತ. ಅವರ ಜೋಡಿಗೆ ಜನರನ್ನು ಮೋಡಿ ಮಾಡುವ ಎಂಥ ತಾಕತ್ತು ಹೊಂದಿದೆ ಎಂಬ ಅರಿವು ಸಿದ್ದರಾಮಯ್ಯನವರಿಗೆ ಇಲ್ಲದಿಲ್ಲ. ಪರಿಣಾಮ ಈಗಾಗಲೇ ಮೈತ್ರಿಗೆ ಮುನ್ನುಡಿಯನ್ನು ಬರೆಯಲು ಪ್ರಯತ್ನಿಸುತ್ತಿದ್ದಾರೆ.
ಉಪ ಚುನಾವಣೆಯ ಗೆಲುವು ಸಹಜವಾಗಿ ಕಾಂಗ್ರೆಸ್ನ ವಿಶ್ವಾಸವನ್ನು ವೃದ್ಧಿಸಿದೆ. ರಾಜ್ಯದಲ್ಲಿ ಮೋದಿ ಅಲೆ ಇಲ್ಲ, ಆಡಳಿತ ವಿರೋಧಿ ಅಲೆಯೂ ಇಲ್ಲ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಆದರೆ ವಾಸ್ತವ ಕಾಂಗ್ರೆಸ್ ಹಾಗೂ ಜೆಡಿಎಸ್ಗೆ ಗೊತ್ತಾಗಿದೆ. ಗುಂಡ್ಲುಪೇಟೆ ಹಾಗೂ ನಂಜನಗೂಡಿನಲ್ಲಿ ಬಿಜೆಪಿ ಸೋತಿದ್ದರೂ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿದ ಮತಗಳಿಗಿಂತಲೂ ಹೆಚ್ಚು ಮತಗಳನ್ನು ಗಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಬಿಜೆಪಿ ಧ್ವಜ ಊರುವ ಲಕ್ಷಣಗಳು ಬಲವಾಗಿ ಕಂಡುಬರುತ್ತಿವೆ. ಅಷ್ಟರಮಟ್ಟಿಗೆ ಬಿ.ಎಸ್. ಯಡಿಯೂರಪ್ಪನವರೂ ಸಫಲರಾಗಿದ್ದಾರೆ ಎನ್ನಬಹುದು.
ಅಲ್ಲದೇ ಕುಮಾರಸ್ವಾಮಿ ಅವರು, ಉತ್ತರ ಕರ್ನಾಟಕವನ್ನು ಗುರಿಯನ್ನಾಗಿಟ್ಟುಕೊಂಡು ಹುಬ್ಬಳ್ಳಿಯಲ್ಲೊಂದು ಮನೆಯನ್ನೂ ಮಾಡಿದ್ದಾರೆ. ಬಿಜೆಪಿ ಭದ್ರಕೋಟೆ ಎನಿಸಿಕೊಂಡಿರುವ ಹುಬ್ಬಳ್ಳಿ -ಧಾರವಾಡ ಕ್ಷೇತ್ರಗಳಲ್ಲಿ ತೆನೆ ಹೊತ್ತ ಮಹಿಳೆಯ ಭವಿಷ್ಯ ರೂಪಿಸಲು ಕುಮಾರಣ್ಣ ಯೋಚಿಸಿದ್ದಾರೆ.
ಹೀಗೇ ಪರಸ್ಪರ ಸಹಕಾರ, ಒಳ ಒಪ್ಪಂದ ಅಥವಾ ಅನಧಿಕೃತ ಘಟಬಂಧನ್ಗೆ ಮುಂದಾಗುವ ಮೂಲಕ, ಜೆಡಿಎಸ್ ಕಾಂಗ್ರೆಸ್ ಬಿಜೆಪಿಗೆ ಸೆಡ್ಡು ಹೊಡೆಯಲು ಸಜ್ಜಾಗುತ್ತಿವೆ. ಬೃಹತ್ ಅಲೆಯನ್ನೇ ಸೃಷ್ಟಿಸಬಲ್ಲ ಮೋದಿ-ಶಾ ಜೋಡಿಯ ಆರ್ಭಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಈಗಿನಿಂದಲೇ ಹರಸಾಹಸ ಪಡುತ್ತಿದೆ. ಈ ಮೈತ್ರಿಗೆ ಕುಮಾರಸ್ವಾಮಿಯವರ ಒಪ್ಪಿಗೆ ಇದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.
2018 ರ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್-ಜೆಡಿಎಸ್ ಕೈ ಕುಲುಕುವ ಸಾಧ್ಯತೆ ದಟ್ಟವಾಗಿದೆ. ಕ್ಷಣ ಕ್ಷಣಕ್ಕೆ ಬದಲಾಗುವ ರಾಜಕೀಯ ದಿಕ್ಕುಗಳು ಕ್ರಮೇಣ ಹೇಗೇ ಸಾಗುತ್ತಿವೆಯೋ ಎಂಬುದನ್ನು ಕಾದು ನೋಡಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.