ಬಳ್ಳಾರಿ : ಪ್ರತಿಯೋರ್ವ ಸ್ತ್ರೀ ತನ್ನ ವಿಕಸಿತ ಸದ್ಗುಣ ಮತ್ತು ಸಂಸ್ಕಾರಯುತ ಶಾರೀರಿಕ, ಮಾನಸಿಕ, ಬೌದ್ಧಿಕ ಶಕ್ತಿಗಳೊಂದಿಗೆ ಸಮಾಜದ ಹಿತಕ್ಕಾಗಿ ಕೆಲಸ ಮಾಡುವ ಉದ್ದೇಶದಿಂದ ಏಪ್ರಿಲ್ 16 ರಿಂದ ಏಪ್ರಿಲ್ 30 ರ ವರೆಗೆ ರಾಷ್ಟ್ರ ಸೇವಿಕಾ ಸಮಿತಿ ಉತ್ತರ ಪ್ರಾಂತದ ಶಿಕ್ಷಾ ವರ್ಗವನ್ನು ಆಯೋಜಿಸಲಾಗಿದೆ. 15 ದಿನಗಳ ಕಾಲ ನಡೆಯುವ ಈ ವರ್ಗವು ಏಪ್ರಿಲ್ 16 ರಿಂದ ಪ್ರಾರಂಭವಾಗಲಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ವರ್ಗ ಕಾರ್ಯವಾಹಿಕಾ ವಾಣಿ ಜೋಷಿ ಮತ್ತು ವರ್ಗಾಧಿಕಾರಿ ಪೂನಮ್ ಬಾಗ್ರೇಚಾ ಅವರು, ಸಾವಿರ ವರ್ಷಗಳ ಆಕ್ರಮಣ, ದಾಸ್ಯಗಳ ಕಾರಣದಿಂದ ಅನೇಕ ರೀತಿಯ ವಿಕೃತಿ ಮೌಢ್ಯಗಳಿಂದ ತುಂಬಿದ ಈ ಸಮಾಜದಲ್ಲಿ ಶ್ರದ್ಧೆ, ಐಕ್ಯತೆ ನಿರ್ಮಾಣ ಮಾಡುವಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಶ್ರಮಿಸುತ್ತಿದೆ. ಮಹಿಳಾ ಉದ್ಯೋಗ ಕೇಂದ್ರಗಳು, ಅನಾಥಾಲಯಗಳು, ಹಾಸ್ಟೆಲ್ಗಳು, ಬಾಲವಿಕಾಸ ಕೇಂದ್ರಗಳು, ಸಂಸ್ಕಾರ ಕೇಂದ್ರಗಳು, ಸೇವಾ ಪ್ರಕಲ್ಪಗಳ ಮೂಲಕ ಸಮಿತಿ ಸಮಾಜದ ಆಗು-ಹೋಗುಗಳಿಗೆ ಸ್ಪಂದಿಸುತ್ತಾ ಬರುತ್ತಿದೆ. ಈ ಪವಿತ್ರ ಕಾರ್ಯಕ್ಕೆ ಅಗತ್ಯವಾದ ಪರಿಶ್ರಮ ಮತ್ತು ತ್ಯಾಗವನ್ನು ಮಾಡಬಲ್ಲ ಕಾರ್ಯಕರ್ತೆಯರನ್ನು ರೂಪಿಸಲು ಸಮಿತಿಯು ನೂರಾರು ಶಾಖೆಗಳನ್ನು ತೆರೆದು ನಿರಂತರವಾಗಿ ಶ್ರಮಿಸುತ್ತಿದೆ.
ಈ ಬಾರಿ ಬಳ್ಳಾರಿ ನಗರದ ತಾಳೂರು ರಸ್ತೆಯಲ್ಲಿರುವ ಬಾಲಭಾರತಿ ಕೇಂದ್ರೀಯ ವಿದ್ಯಾಲಯದಲ್ಲಿ ಏ.16ರಿಂದ ರಾಷ್ಟ್ರ ಸೇವಿಕಾ ಸಮಿತಿ ಶಿಕ್ಷಾವರ್ಗ ಪ್ರಾರಂಭವಾಗಲಿದೆ. 15 ದಿನಗಳ ಕಾಲ ನಡೆಯುವ ಈ ನಿವಾಸಿ ತರಬೇತಿ ವರ್ಗದಲ್ಲಿ ಮೂರು ಹಂತಗಳ ಶಿಕ್ಷಣ ನೀಡಲಾಗುತ್ತಿದೆ. ಏ.30ರಂದು ಇದರ ಸಮಾರೋಪ ಸಮಾರಂಭ ಜರುಗಲಿದೆ. ಈ ವರ್ಗದಲ್ಲಿ ಉತ್ತರ ಕರ್ನಾಟಕದ 13 ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಸೇವಿಕೆಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ದಿನಚರಿ:
ವರ್ಗದ ದಿನಚರಿ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಪ್ರಾರಂಭಗೊಳ್ಳಲಿದೆ. ರಾತ್ರಿ 10-30ರ ತನಕ ಅನ್ಯೋನ್ಯ ಚಟುವಟಿಕೆಗಳ ಮೂಲಕ ಯೋಗ, ಸೂರ್ಯ ನಮಸ್ಕಾರ, ಕರಾಟೆ, ದಂಡದ ಪ್ರಯೋಗಗಳು, ಸ್ವದೇಶಿ ಆಟಗಳು, ಸಾಮೂಹಿಕ ಸಂಚಲನದ ಮೂಲಕ ಆರೋಗ್ಯವಂತ ಶರೀರ ಹೊಂದುವ ಕ್ರಮ ತಿಳಿಸಿಕೊಡಲಾಗುತ್ತದೆ. ವಯಸ್ಸು, ವಿದ್ಯಾರ್ಹತೆ ಆಧರಿಸಿ ಚಿಕ್ಕ ಚಿಕ್ಕ ಗುಂಪುಗಳಲ್ಲಿ ಸಮಾಜದ ಆಗು ಹೋಗುಗಳ ಬಗ್ಗೆ ಚರ್ಚೆ, ರಾಷ್ಟ್ರಪ್ರೇಮ, ದೇಶಭಕ್ತಿ ಗೀತೆಗಳು, ರಂಗೋಲಿ, ಕರಕುಶಲ ಕಲೆ, ಸಾಮೂಹಿಕ ಪ್ರಾರ್ಥನೆ, ಈ ನೆಲದ ಕುರಿತು ಶ್ರದ್ಧೆ, ಭಕ್ತಿ ಹೆಚ್ಚಿಸುವ, ಆತ್ಮವಿಶ್ವಾಸ ದೃಢಗೊಳಿಸುವ, ಒಟ್ಟಾಗಿ ಬದುಕುವ ಅನುಭವಿಕ ಶಿಕ್ಷಣ ನೀಡಲಾಗುತ್ತದೆ.
ಖ್ಯಾತನಾಮರ ಸಂದರ್ಶನ:
ಈ ಶಿಕ್ಷಾ ವರ್ಗಕ್ಕೆ ಖ್ಯಾತ ಮಹಿಳಾ ಚಿಂತಕರು, ಉಪನ್ಯಾಸಕಿಯರು, ರಾಷ್ಟ್ರ ಸೇವಿಕಾ ಸಮಿತಿ ರಾಷ್ಟ್ರೀಯ ಪದಾಧಿಕಾರಿಗಳು ಈ ವರ್ಗವನ್ನು ಸಂದರ್ಶಿಸಲಿದ್ದಾರೆ. ಪ್ರಯಾಣದ ಖರ್ಚು, ರಾಷ್ಟ್ರ ಸೇವಿಕಾ ಸಮಿತಿ ಸಮವಸ್ತ್ರ ಖರೀದಿ, ವರ್ಗದ ಶುಲ್ಕ ಇವೆಲ್ಲವನ್ನು ಶಿಕ್ಷಾರ್ಥಿಗಳು ತಾವೇ ಸ್ವಂತವಾಗಿ ಭರಿಸಬೇಕು. 11 ವರ್ಷ ಮೇಲ್ಪಟ್ಟ ಬಾಲಿಕೆಯರು, ಮಹಿಳೆಯರಿಗಾಗಿ ಏ.26ರಂದು ಪ್ರಾರಂಭಿಕ ಶಿಬಿರ ಮತ್ತು ಗೃಹಿಣಿಯರಿಗಾಗಿ ಏ.28ರಿಂದ ಮೂರು ದಿನಗಳ ಕಾಲ ಮಾತೃ ಶಿಬಿರಗಳನ್ನೂ ಆಯೋಜಿಸಲಾಗಿದೆ. ಏ.17ರಂದು ವರ್ಗದ ಉದ್ಘಾಟನೆಯನ್ನು ರಂಗ ಕಲಾವಿದೆ ಡಾ.ಸುಭದ್ರಮ್ಮ ಮನ್ಸೂರು ನೆರವೇರಿಸುವರು. ಇದರ ಸಮಾರೋಪ ಸಮಾರಂಭ ಏ.30ರಂದು ನಡೆಯಲಿದೆ. ಅಂದು ನಗರದಲ್ಲಿ ಆಕರ್ಷಕ ಪಥ ಸಂಚಲನ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ವಾಣಿ ಜೋಷಿ, ವರ್ಗ ಕಾರ್ಯವಾಹಿಕಾ 94489 39294 ಅವರನ್ನು ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.