ರಾಜ್ಯದಲ್ಲಿ ತುಂಬಾ ಹೈ ವೋಲ್ಟೇಜ್ನಲ್ಲಿ ನಡೆಯುತ್ತಿರುವ ಉಪ ಚುನಾವಣಾ ಕಣದಲ್ಲಿ ಝಣ ಝಣ ಸದ್ದು ಇನ್ನಿಲ್ಲದಂತೆ ಕೇಳಿ ಬರುತ್ತಿದ್ದು, ಬೇಂದ್ರೆ ಅಜ್ಜನ ಕುರುಡು ಕಾಂಚಾಣ ಕುಣಿಯುತ್ತಲಿತ್ತ, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತ ಎಂಬ ಸಾಲುಗಳು ನೆನಪಿಗೆ ಬರುವಂತಾಗಿದೆ.
ಹೌದು. ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನ ಸಭಾ ಉಪ ಚುನಾವಣೆ ರಂಗೇರಿದ್ದು, ಅಲ್ಲಲ್ಲಿ ಹಣ ಹಂಚಿಕೆಯ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಕಾಂಗ್ರೆಸ್ ಮುಖಂಡೆ ಲಕ್ಷ್ಮೀ ಹೆಬ್ಬಾಳ್ಕರ್ ಗುಂಡ್ಲುಪೇಟೆ ಸಮೀಪದ ಅಣ್ಣೂರುಕೆರೆ ಎಂಬ ಗ್ರಾಮದಲ್ಲಿ ಹಣ ಹಂಚಿದ್ದಾಗಿ ವಿದ್ಯುನ್ಮಾನ ಮಾಧ್ಯಮ ವರದಿ ಮಾಡಿವೆ. ಬಿಜೆಪಿ ಈಗಾಗಲೇ ಈ ಕುರಿತ ವಿಡಿಯೊ ಬಿಡುಗಡೆ ಮಾಡಿದ್ದೂ ಅಲ್ಲದೇ, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದೆ.
ಸರ್ಕಾರಿ ಅಧಿಕಾರಿ ಕಾರಿನಲ್ಲೂ ಲಕ್ಷಗಟ್ಟಲೇ ಹಣ ಇರುವುದನ್ನು ಇಂದು ಬಿಜೆಪಿಯವರು ಪತ್ತೆ ಹಚ್ಚಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗದ ಮನೋಜ್ ಕರ್ಜಗಿಯವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೈಸೂರು ನಿವಾಸಕ್ಕೇ ಭೇಟಿ ನೀಡಿರುವ ಕೆಲ ಗುಂಪುಗಳು ಪ್ರಚಾರಕ್ಕೆ ಹಣ ನೀಡುವಂತೆ ಕೋರಿದ್ದಾರಂತೆ. ಇದರಿಂದಲೂ ಸಿದ್ದರಾಮಯ್ಯನವರು ತೀವ್ರ ಮುಜುಗುರ ಅನುಭವಿಸುವಂತಾಗಿದೆ.
ಕಾಂಗ್ರೆಸ್ ಮಹಿಳಾ ಘಟಕ ಮುಖ್ಯಸ್ಥೆ ಲಕ್ಷ್ಮೀ ಹೆಬ್ಬಾಳಕರ ಅವರು ಕಾರ್ಯಕರ್ತರಿಗೆ ಹಣ ಹಂಚಿರುವ ಕುರಿತು ಬಿಜೆಪಿ ಆರೋಪಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಅವರೋರ್ವ ಮಹಿಳೆ ಎನ್ನುವ ಕಾರಣಕ್ಕೆ ಈ ರೀತಿ ಆರೋಪಿಸಲಾಗುತ್ತಿದೆ. ಈ ಆರೋಪದಲ್ಲಿ ಹುರುಳಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ನಾವು ಯಾವುದೇ ರೀತಿಯಿಂದಲೂ ಹಣ ಹಂಚಿಲ್ಲ ಎಂದು ಸಿದ್ದರಾಮಯ್ಯನವರು ಹೇಳಿದರೆ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ, ಅದರ ತನಿಖೆಗೆ ಚುನಾವಣಾ ಆಯೋಗವೇ ಇದೆ ಎಂದು ಜಿ.ಪರಮೇಶ್ವರ ಹೇಳಿದ್ದಾರೆ.
ಆರೋಗ್ಯ ಖಾತೆ ಸಚಿವ ಯು.ಟಿ.ಖಾದರ್ ಅವರ ಕಾರಿನ ಚಾಲಕ ವ್ಯಕ್ತಿಯೋರ್ವನಿಗೆ ಹಣ ಹಂಚಿದ್ದು, ಜಿಲ್ಲಾ ಪಂಚಾಯ್ತಿಯ ಕಾಂಗ್ರೆಸ್ ಸದಸ್ಯನ ಬಳಿ ಪತ್ತೆಯಾದ 1.20 ಲಕ್ಷ ಹಣ ಹೀಗೇ ಹಣದ ಸುದ್ದಿ ಜೋರಾಗಿಯೇ ಸದ್ದು ಮಾಡುತ್ತಿದೆ.
ಹಣ, ಹೆಂಡ ಹಾಗೂ ಉಡುಗೊರೆ ನೀಡುವುದನ್ನು ತಡೆಯುವ ಕುರಿತು ಬಿಜೆಪಿ ವಿಶೇಷ ತಂಡಗಳನ್ನೂ ರಚಿಸಿದೆಯಂತೆ. ಹಣ ಹಂಚಿಕೆಯ ಕುರಿತು ಆರೋಪ ಪ್ರತ್ಯಾರೋಪಗಳು ಸಹಜವಾಗಿವೆ. ಇನ್ನೊಂದೆಡೆ ಚುನಾವಣಾ ಆಯೋಗವು ಪಾರದರ್ಶಕತೆಗೋಸ್ಕರ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಲೇ ಬಂದಿದೆ. ಕೆಲವರು ಚಾಪೆ ಕೆಳಗೆ ನುಸುಳಿದರೆ, ಇನ್ನು ಕೆಲವರು ರಂಗೋಲಿಯ ಕೆಳಗೆ ನುಸುಳ ಬಲ್ಲೆವು ಎನ್ನುವಂತಾಗಿದೆ. ಏನೇ ಆಗಲಿ ಕುರುಡು ಕಾಂಚಾಣ ಪ್ರಜಾಪ್ರಭುತ್ವ ವ್ಯವಸ್ಥೆಗೊಂದು ಕಪ್ಪು ಚುಕ್ಕೆ. ಹಣ ಹಂಚಿದವರ ಮುಖಕ್ಕೆ ಹೊಡೆದಂತೆ ಮತದಾರ ತೀರ್ಪು ನೀಡಿದರೆ, ಅದಕ್ಕಿಂತ ಪ್ರಜಾಪ್ರಭುತ್ವದ ಯಶಸ್ಸು ಇನ್ನೊಂದಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.