ಬೆಂಗಳೂರು: ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ನಡೆಯಲಿರುವ ಉಪ ಚುನಾವಣೆ ಅಕ್ಷರಶಃ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಒಂದೆಡೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಪ್ರಚಾರದಲ್ಲಿ ಮುಂಚೂಣಿಯಲ್ಲಿದ್ದರೆ, ಇನ್ನೊಂದೆಡೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದಿನಿಂದ ಪ್ರಚಾರ ಕಣಕ್ಕೆ ಇಳಿಯುವುದಾಗಿ ಹೇಳಿದ್ದಾರೆ.
ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದ್ದೂ ಅಲ್ಲದೇ, ರಾಜಸ್ಥಾನದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಾಗಾಲೋಟ ಮುಂದುವರೆದಿದೆ. ಬಹು ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯೊಂದಿಗೆ, ಖಡಕ್ ಸನ್ಯಾಸಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಅಲೆಯೂ ಸಾಥ್ ನೀಡುತ್ತಿದೆ. ಪರಿಣಾಮ ಗುಜರಾತ್ನಲ್ಲಿ ನಡೆಯಲಿರುವ ಚುನಾವಣೆಗೆ ಯೋಗಿಯೇ ಸ್ಟಾರ್ ಪ್ರಚಾರಕ.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿದ್ದರಾಮಯ್ಯನವರಿಗೆ ಸೆಡ್ಡು ಹೊಡೆದು ಹೊರ ಬಂದ ಶ್ರೀನಿವಾಸ್ ಪ್ರಸಾದ್, ಬಿಜೆಪಿ ರಾಜ್ಯಾಧ್ಯಕ್ಷ ಬಿಎಎಸ್ವೈಗೆ ಇದು ಅಕ್ಷರಶಃ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ವಿವಿಧ ರಾಜ್ಯಗಳಲ್ಲಿನ ರಾಜಕೀಯ ಫಲಿತಾಂಶಗಳು ಕರ್ನಾಟಕದ ಉಪ ಚುನಾವಣೆಯ ಮೇಲೆ ಪರಿಣಾಮ ಬೀರದೇ ಇರದು. ಅದರಲ್ಲೂ ಸಿ.ಎಂ.ಸಿದ್ದರಾಮಯ್ಯನವರ ಅನೇಕ ಭಾಗ್ಯಗಳು ಟೀಕೆಗೆ ಒಳಗಾಗಿವೆ. ಇತ್ತೀಚೆಗೆ ಅವರು ಮಂಡಿಸಿದ ಆಯವ್ಯಯದಲ್ಲಿ ರೈತರ ಸಾಲ ಮನ್ನಾ ಮಾಡದ ಕಾರಣ ಅವರ ವಿರುದ್ಧ ರೈತರ ಆಕ್ರೋಶ ಮಡುಗಟ್ಟಿದೆ. ಅಲ್ಲದೇ ಸ್ವಪಕ್ಷೀಯರ ಛಾಟೀ ಏಟುಗಳು, ವಿರೋಧಗಳೂ ಸಿದ್ದರಾಮಯ್ಯನವರ ನಿದ್ದೆಗೆಡಿಸಿರಲೂ ಸಾಕು.
ಏಪ್ರಿಲ್ 9ಕ್ಕೆ ಉಪ ಚುನಾವಣೆ ದಿನಾಂಕ ನಿಗದಿಯಾಗಿದೆ. ಆಮಿಷ ಒಡ್ಡುವುದು, ಮತದಾರರನ್ನು ಓಲೈಸುವುದು ಸೇರಿದಂತೆ ಇನ್ನಿಲ್ಲದಂತೆ ಅಕ್ರಮಗಳು ಸುದ್ದಿ ಮಾಡುತ್ತಿವೆ. ಶತಾಯ ಗತಾಯ ವಿಜಯದ ಮಾಲೆ ಧರಿಸಲೇ ಬೇಕು ಎಂಬ ಹಟತೊಟ್ಟು ಉಭಯ ರಾಷ್ಟ್ರೀಯ ಪಕ್ಷಗಳ ಘಟಾನುಘಟಿಗಳು ಚುನಾವಣಾ ಪ್ರಚಾರಕ್ಕಿಳಿಯುತ್ತಿರುವುದು ಕಣವನ್ನು ಇನ್ನಷ್ಟು ರಂಗೇರಿಸಿದೆ.
ಜಾತಿ, ಮತಗಳ ಸಂಕೋಲೆಯಿಂದ ಮತದಾರ ಪ್ರಭು ಹೊರಬರುತ್ತಿರುವುದಕ್ಕೆ ಉತ್ತರ ಪ್ರದೇಶ ಆದಿಯಾಗಿ ಪಂಚರಾಜ್ಯಗಳ ಚುನಾವಣೆಯೇ ಸಾಕ್ಷಿ. ಪ್ರಜ್ಞಾವಂತ ಮತದಾನಕ್ಕೆ ಕರ್ನಾಟಕ ನಿಜಕ್ಕೂ ಹೆಸರುವಾಸಿ.
ನಂಜನಗೂಡು ಹಾಗೂ ಗುಂಡ್ಲುಪೇಟೆ ಚುನಾವಣೆಯ ಫಲಿತಾಂಶ ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿದೆ. ರಾಜ್ಯ, ರಾಷ್ಟ್ರಮಟ್ಟದಲ್ಲಿ ನಿರ್ದಿಷ್ಟ ನಾಯಕತ್ವದಿಂದ ಕಾಂಗ್ರೆಸ್ ಕೊರಗುತ್ತಿದ್ದರೆ, ಸ್ಟಾರ್ ಪ್ರಚಾರಕರು, ಧೀಮಂತ ನಾಯಕರನ್ನು ಹೊಂದಿರುವ ಬಿಜೆಪಿ ಗೆಲುವಿನ ವಿಶ್ವಾಸದಲ್ಲಿ ತೇಲುತ್ತಿದೆ.
ಬಹುಕುತೂಹಲ ಕೆರಳಿಸಿರುವ ಈ ಉಪ ಚುನಾವಣೆ ಯಾರ ಕೊರಳಿಗೆ ಗೆಲುವಿನ ಹಾರ ಹಾಕುವುದೋ ಕಾದು ನೋಡೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.