ಕನ್ನಡದ ಕುಲಕೋಟಿಗೆ ಭಕ್ತಿಯೊಂದಿಗೆ ಜೀವನ ದರ್ಶನ
ಹೊಸ ಬಗೆಯ ಮನರಂಜನಾ ಕಾರ್ಯಕ್ರಮಗಳ ದಿಗ್ದರ್ಶನ
ಬೆಂಗಳೂರು: ಕನ್ನಡದ ಟಿವಿ ಲೋಕದಲ್ಲಿ ಒಂದು ಹೊಸ ಮನ್ವಂತರ. ಮೊದಲ ಬಾರಿಗೆ ಅಪ್ಪಟ ಕನ್ನಡದ ಭಕ್ತಿವಾಹಿನಿ ಶುಭಾರಂಭಗೊಳ್ಳುತ್ತಿದೆ. ಇದೇ ಏಪ್ರಿಲ್ 2 ರಂದು ಕನ್ನಡ ನಾಡಿನ ಮನೆ-ಮನಗಳಲ್ಲಿ ‘ಐಸಿರಿ’ ಚಾನೆಲ್ ತೆರೆದುಕೊಳ್ಳಲಿದೆ. ಭಕ್ತಿಯೊಂದಿಗೆ ಜೀವನ ದರ್ಶನ ಮಾಡಿಸಲು; ಭಕ್ತಿಯೊಂದಿಗೆ ಹೊಸ ಬಗೆಯ ಕಾರ್ಯಕ್ರಮಗಳ ದಿಗ್ದರ್ಶನ ಮಾಡಿಸಲು ‘ಐಸಿರಿ’, ಕನ್ನಡದ ಮೊಟ್ಟಮೊದಲ ಭಕ್ತಿವಾಹಿನಿ ಸಜ್ಜಾಗಿದೆ.
ಏಪ್ರಿಲ್ 2 ರಂದು ಸಂಜೆ 6 ಗಂಟೆಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ಪ್ರಧಾನಿ ಶ್ರೀ ಎಚ್.ಡಿ.ದೇವೇಗೌಡ ಅವರು ಐಸಿರಿ ಭಕ್ತಿ ಚಾನೆಲ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಕೇಂದ್ರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರು ಈ ಅಭೂತಪೂರ್ವ ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಮಂತ್ರಾಲಯ ಶ್ರೀ ಗುರುರಾಘವೇಂದ್ರ ಮಠದ ಶ್ರೀ ಸುಬುದೇಂದ್ರ ತೀರ್ಥ ಶ್ರೀಪಾದರು, ಬೇಲಿಮಠ ಸಂಸ್ಥಾನದ ಶ್ರೀ ಶಿವರುದ್ರ ಮಹಾಸ್ವಾಮೀಜಿ ಅವರು ಆಶೀರ್ವಚನ ನೀಡುವರು. ಅಧ್ಯಾತ್ಮ ಚಿಂತಕ ಡಾ.ಪಾವಗಡ ಪ್ರಕಾಶ ರಾವ್, ಅಧ್ಯಾತ್ಮ ಗುರು ಬ್ರಹ್ಮಾಂಡಗುರು ಶ್ರೀ ನರೇಂದ್ರಬಾಬು ಶರ್ಮಾ, ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್, ವಿಜಯಾ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ನಾಗೇಶ್ವರ ರಾವ್, ಇ-ಡಿಜಿಟಲ್ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸೋಮಶೇಖರ್ ಅವರು ಶುಭ ಹಾರೈಸಲಿದ್ದಾರೆ. ಖ್ಯಾತ ಚಲನಚಿತ್ರ ನಟರಾದ ಡಾ.ಶ್ರೀನಾಥ್ ಮತ್ತು ಶ್ರೀ ರವಿಶಂಕರ್ ಅವರು ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮನೆಮಂದಿಗೆ ಇಷ್ಟವಾಗುವ ಒಂದು ಸುಸಂಸ್ಕೃತ; ಭಕ್ತಿ-ಮನರಂಜನೆಯ ಒಂದು ಗಮ್ಯ ನೆಲೆಯಾಗಿ ‘ಐಸಿರಿ’ ಭಕ್ತಿ ಚಾನೆಲ್ ಮೂಡಿಬರಲಿದೆ. ಆಧುನಿಕ ಜೀವನ ಶೈಲಿಯಿಂದ ಮರೀಚಿಕೆಯಾಗಿರುವ ಮನದ ನೆಮ್ಮದಿ, ಆನಂದದ ಮೂಲವನ್ನು ತೋರಿಸುವ; ಅಧ್ಯಾತ್ಮ ಲೋಕದ ಸಿರಿಯನ್ನು ಬೊಗಸೆಯಲ್ಲಿ ಹಿಡಿದು ಕೊಡುವ ಪ್ರಯತ್ನವನ್ನು ಐಸಿರಿ ಮಾಡಲಿದೆ. ವಿವಿಧ ಕ್ಷೇತ್ರಗಳ ವಿದ್ವಾಂಸರು, ಚಿಂತಕರು, ಕನ್ನಡದ ಈ ಮೊದಲ ಭಕ್ತಿ ಚಾನೆಲ್ನ ಮೂಲಕ ವೀಕ್ಷಕರಿಗೆ ತಮ್ಮ ಅನುಭವವನ್ನು ಧಾರೆ ಎರೆಯಲಿದ್ದಾರೆ.
ಕನ್ನಡದ ಗರ್ಭಗುಡಿ, ಬಸವನಗುಡಿ ಗಾಂಧಿ ಬಜಾರ್ನ ಪಶ್ಚಿಮ ಆಂಜನೇಯ ದೇವಸ್ಥಾನದ ರಸ್ತೆಯಲ್ಲಿ ಸ್ಥಾಪಿಸಲಾಗಿರುವ ಅತ್ಯಾಧುನಿಕ ಸ್ಟುಡಿಯೊ ಮೂಲಕ ಐಸಿರಿ ಭಕ್ತಿ’ಯ ವಿನೂತನ ಕಾರ್ಯಕ್ರಮಗಳು ಪ್ರಸಾರಗೊಳ್ಳಲಿವೆ.
‘ಐಸಿರಿ’ಯ ಗುಡಿಯಲ್ಲಿ…
ಪ್ರಾತಃಸ್ಮರಾಮಿ: ಬೆಳಗ್ಗೆ 6 ಗಂಟೆಗೆ ಪ್ರಾತ:ಸ್ಮರಾಮಿಯೊಂದಿಗೆ ದಿನದ ಶುಭಾರಂಭ. ಆಯಾಯ ವಾರದಲ್ಲಿ ಪೂಜಿಸಲ್ಪಡುವ ದೇವರುಗಳ ನಾಮಸ್ಮರಣೆ ಮಾಡುವ ಸುಪ್ರಭಾತಗಳೊಂದಿಗೆ ಜೀವನದ ಆರಂಭ. ಭಕ್ತಿಭಾವದ ಪರಿಮಳದೊಂದಿಗೆ ಪ್ರತಿಮನೆಯಲ್ಲೂ ನವೋಲ್ಲಾಸದ ಸೂರ್ಯೋದಯವಾಗಬೇಕು ಎಂಬುದು ಈ ಕಾರ್ಯಕ್ರಮದ ಆಶಯ.
ಮಂತ್ರಪುಷ್ಪ: ವೇದಮಂತ್ರಗಳ ವೈಶಿಷ್ಟ್ಯ, ಅವುಗಳ ಮಹತ್ವವನ್ನು ತಿಳಿಸುವ ಪ್ರಯತ್ನ ಈ ಕಾರ್ಯಕ್ರಮದ ಮೂಲಕ ನಡೆಯಲಿದೆ.
ಯೋಗಕ್ಷೇಮ: ಶರೀರಕ್ಕೆ ವ್ಯಾಯಾಮ, ಮನಸ್ಸಿಗೆ ಸಂಯಮ, ವ್ಯಕ್ತಿತ್ವಕ್ಕೆ ಆಯಾಮ ನೀಡುವ ಯೋಗವನ್ನು ಹೊಸ ಶೈಲಿಯಲ್ಲಿ ಪ್ರಸ್ತುತಪಡಿಸಲಿದೆ ‘ಯೋಗಕ್ಷೇಮ’ ಕಾರ್ಯಕ್ರಮ.
ಶ್ರೀನುಡಿ: ಕರ್ನಾಟಕದಲ್ಲಿ ಜ್ಞಾನ ಮತ್ತು ಅನ್ನ ದಾಸೋಹ ನಡೆಸುವ ಸಹಸ್ರ ಸಹಸ್ರ ಮಠಗಳಿವೆ ಅವುಗಳನ್ನು ನಡೆಸುವ ನಿಷ್ಕಾಮ ಯೋಗಿಗಳಿದ್ದಾರೆ. ಅಂಥವರ ಅನುಭಾವಾಮೃತದ ಸವಿಯನ್ನು ಪ್ರೇಕ್ಷಕರು ಈ ಕಾರ್ಯಕ್ರಮದ ಮೂಲಕ ಸವಿಯಬಹುದು.
ಭಕ್ತಿ ಬ್ರಹ್ಮಾಂಡ: ಇದು ನೇರ ಪ್ರಸಾರ ಕಾರ್ಯಕ್ರಮ. ಬ್ರಹ್ಮಾಂಡ ಗುರೂಜಿ ಎಂದೇ ಖ್ಯಾತರಾಗಿರುವ ಶ್ರೀ ನರೇಂದ್ರಬಾಬು ಶರ್ಮಾ ಅವರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ತಮ್ಮದೇ ಶೈಲಿಯಲ್ಲಿ ವೀಕ್ಷಕರ ಪ್ರಶ್ನೆಗಳಿಗೆ ಸ್ಪಂದಿಸಿ, ಅವರ ಕಷ್ಟ-ನಷ್ಟಗಳಿಗೆ ಸಾಂತ್ವನ ನೀಡಲಿದ್ದಾರೆ.
ಆರಾಧನಾ: ಕನ್ನಡ ಚಲನಚಿತ್ರಗಳ ಭಕ್ತಿಗೀತೆಗಳನ್ನು ಆಧರಿಸಿದ ಕಾರ್ಯಕ್ರಮ ಇದು.
ಐಸಿರಿ ಕಿಚನ್: ಭಾರತೀಯ ಸಂಸ್ಕೃತಿಯಲ್ಲಿ ಆಹಾರ ತಯಾರಿಕೆಯೂ ಒಂದು ಸಂಸ್ಕೃತಿ. ನಮ್ಮ ಆಹಾರ ಮತ್ತು ಸಂಸ್ಕೃತಿಯನ್ನು ಹೇಳುತ್ತದೆ. ಪರಂಪರೆಯನ್ನು ಆಧರಿಸಿದ ಅಡುಗೆ ಕಾರ್ಯಕ್ರಮ ಇದಾಗಿದ್ದು, ಆಧುನಿಕ ಅಡುಗೆಗೆ ಭಕ್ತಿಯ ವ್ಯಂಜನ ಸೇರ್ಪಡೆಗೊಂಡ ವಿನೂತನ ಪಾಕ ಇಲ್ಲಿ ಸಿದ್ಧಗೊಳ್ಳಲಿದೆ.
ದಾಸ ಸಿರಿ: ಕರುನಾಡಿನಲ್ಲಿ ಭಕ್ತಿಯ ರಸಧಾರೆಯನ್ನೇ ಹರಿಸಿದ ದಾಸವರೇಣ್ಯರು ರಚಿಸಿದ ಕೀರ್ತನೆಗಳನ್ನು ಆಧರಿಸಿದ ಕಾರ್ಯಕ್ರಮ ಇದು. ಮನಸ್ಸಿಗೆ ಮುದನೀಡುವ; ಭಕ್ತಿಯ ಭಾವದಲ್ಲಿ ನಮ್ಮ ಮನಸ್ಸನ್ನು ವಿಹರಿಸುವಂತೆ ಮಾಡುವ ದಾಸರ ಕೀರ್ತನೆಗಳನ್ನು ಖ್ಯಾತ ಗಾಯಕರು ಈ ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಿದ್ದಾರೆ.
ವಚನಸಿರಿ: 12ನೇ ಶತಮಾನದದಲ್ಲಿ ವಚನಕಾರರು ನಡೆಸಿದ ಸಾಮಾಜಿಕ, ಅಧ್ಯಾತ್ಮಿಕ ಕ್ರಾಂತಿಗೆ ಸಂಗೀತದ ಸ್ಪರ್ಶ ನೀಡುವ ಕಾರ್ಯಕ್ರಮ ಇದು. ಆಧುನಿಕ ಜೀವನಕ್ಕೆ ವಚನಗಳು ನೀಡುವ ಸಂದೇಶಗಳೇನು ಎಂಬುದನ್ನು ಮನಮುಟ್ಟುವಂತೆ ಖ್ಯಾತಗಾಯಕರು ವಚನ ಸುಧೆಯನ್ನು ಹರಿಸಲಿದ್ದಾರೆ.
ನಿವೇದನೆ: ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಷಷ್ಟ್ಯಬ್ದಿ ಹೀಗೆ ಶುಭ ಕಾರ್ಯಕ್ರಮಗಳಂದು ವೀಕ್ಷಕರು ಬಯಸುವ ದೇವಸ್ಥಾನದಲ್ಲಿ ಅವರ ಹೆಸರಲ್ಲಿ ಅರ್ಚನೆ ಮಾಡಿಸಿ ಅವರ ಮನೆಬಾಗಿಲಿಗೆ ಪ್ರಸಾದ ತಲುಪಿಸುವ ವಿಭಿನ್ನ- ವಿನೂತನ ಕಾರ್ಯಕ್ರಮ ಇದು.
ನಿಜದರ್ಶನ: ಖ್ಯಾತ ಅಧ್ಯಾತ್ಮಚಿಂತಕರಾದ ಡಾ.ಪಾವಗಡ ಪ್ರಕಾಶ ರಾವ್ ಅವರೊಂದಿಗೆ ವೀಕ್ಷಕರು ನಡೆಸುವ ಧರ್ಮಜಿಜ್ಞಾಸೆ ಇದು. ಧಾರ್ಮಿಕ ಆಚರಣೆ; ಪೌರಾಣಿಕ ಪಾತ್ರಗಳ ಬಗ್ಗೆ ವೀಕ್ಷಕರ ಸಂದೇಹಗಳಿಗೆ ಡಾ ಪಾವಗಡ ಪ್ರಕಾಶ್ ರಾವ್ ಅವರು ಈ ಕಾರ್ಯಕ್ರಮದಲ್ಲಿ ಉತ್ತರಿಸಲಿದ್ದಾರೆ.
ವಿವಿಧ ದೇವ-ದೇವತೆಯರ ಸಹಸ್ರನಾಮಾವಳಿ ಆಲಿಸುವ ‘ನಾಮಸ್ಮರಣೆ’ ; ಪುರಾಣ, ತತ್ವಶಾಸ್ತ್ರ ಮತ್ತು ಜೀವನಕ್ಕೆ ಬೆಳಕು ನೀಡುವಂತಹ ವಿಷಯಗಳನ್ನು ಆಧರಿಸಿದ ‘ಪ್ರವಚನ ಪರ್ವ’ ಕಾರ್ಯಕ್ರಮ; ಯಡತೊರೆಯ ಶ್ರೀ ಶಂಕರಭಾರತಿ ಸ್ವಾಮೀಜಿ ಅವರಿಂದ ಶ್ರೀ ಶಂಕರಾಚಾರ್ಯ ವಿರಚಿತ ‘ಸೌಂದರ್ಯ ಲಹರಿ’ಯ ವ್ಯಾಖ್ಯಾನ; ಯುವಜನರಿಗಾಗಿ ಸ್ಫೂರ್ತಿದಾಯಕ, ಪ್ರೇರಣಾದಾಯಕ ‘ಏಳಿ ಎದ್ದೇಳಿ’;
‘ಭಜನ್ ಸಾಗರ್’ ಕಾರ್ಯಕ್ರಮದ ಮೂಲಕ ಆಧುನಿಕ ಜೀವನಕ್ರಮಕ್ಕೆ ಭಜನೆಯಿಂದ ಆಗುವ ಸತ್ಪರಿಣಾಮಗಳ ಪರಿಚಯ; ‘ಗುಡಿಗೋಪುರ’ ದಲ್ಲಿ ವಿವಿಧ ಪುಣ್ಯಕ್ಷೇತ್ರಗಳ ದರ್ಶನ, ನಿತ್ಯ ಬದುಕಿನಲ್ಲಿ ಪಠಿಸುವ ಸ್ತೋತ್ರಗಳನ್ನು ಕಲಿಸುವ ‘ಸ್ತೋತ್ರ ದೀಪಿಕಾ’ ಹೀಗೆ ವೈವಿಧ್ಯಮಯ ಭಕ್ತಿ-ಮನರಂಜನಾ ಪ್ರಧಾನ ಕಾರ್ಯಕ್ರಮಗಳ ಮೂಲಕ ಐಸಿರಿ ಭಕ್ತಿವಾಹಿನಿ ಕನ್ನಡದ ಮನೆ-ಮನೆಗೆ ತಲುಪಲು ಸಜ್ಜಾಗಿದೆ.
ಸುದ್ದಿ ಚಾನೆಲ್ಗಳು, ಮನರಂಜನಾ ಚಾನೆಲ್ಗಳ ಭರಾಟೆಯ ನಡುವೆಯೂ ಕನ್ನಡ ನಾಡಿನ ಸಮಸ್ತ ವೀಕ್ಷಕರಿಗೆ ಕೇವಲ ಕರ್ನಾಟಕವಲ್ಲ, ಇಡೀ ಭಾರತದ ಭಕ್ತಿ ಮಾರ್ಗವನ್ನು ಐಸಿರಿ ಪರಿಚಯಿಸಲಿದೆ. ಅಲ್ಲದೆ ಹಬ್ಬ ಹರಿದಿನಗಳು, ಉತ್ಸವಗಳು, ಜಾತ್ರೆಗಳ ವಿಶೇಷ ದಿನಗಳ ನೇರಪ್ರಸಾರದಂತಹ ವಿಶಿಷ್ಟ ಕಾರ್ಯಕ್ರಮಗಳೂ ಐಸಿರಿಯಲ್ಲಿ ಮೂಡಿಬರಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.