ಇತಿಹಾಸ ಕಾಲದ ಒಂದು ಪುಟ್ಟ ನಗರ ಕರ್ನಾಟಕದ ಪಶ್ಚಿಮ ಮೂಲೆಯಲ್ಲಿ ಸ್ತಬ್ಧವಾದಂತಿದೆ ಈ ಗದಗ ಪಟ್ಟಣ. ಸುಮಾರು 4656 ಚದರ ಕಿ.ಮೀ ವ್ಯಾಪ್ತಿಯ ಸಣ್ಣ ಪಟ್ಟಣಕ್ಕೆ ಯಥೇಚ್ಛವಾಗಿಯೇನೂ ಪ್ರವಾಸಿಗರು ಬರುವುದಿಲ್ಲ. ಆದರೆ ಗದಗದಲ್ಲಿ ನೋಡುವಂಥ ವಿಶಿಷ್ಟ ವಾಸ್ತುಶಿಲ್ಪಗಳಿವೆ, ವಿವಿಧ ಶೈಲಿಯ ದೇವಸ್ಥಾನಗಳಿವೆ.
11 ನೇ ಶತಮಾನದಲ್ಲಿ ನಿರ್ಮಾಣವಾದ ವೀರನಾರಾಯಣ ದೇವಸ್ಥಾನವು ಗದಗಿನಲ್ಲಿರುವ ಅತ್ಯಂತ ಪ್ರಮುಖ ಧಾರ್ಮಿಕ ತಾಣ. ಮಹಾ ವಿಷ್ಣು ಅಥವಾ ನಾರಾಯಣನಿಗೆ ಈ ದೇವಸ್ಥಾನವು ಅರ್ಪಿತವಾಗಿದೆ. ಯುದ್ಧಕ್ಕೆ ಹೊರಟು ನಿಂತ ಭಂಗಿಯಲ್ಲಿ ಇಲ್ಲಿನ ದೇವರ ವಿಗ್ರಹವಿದೆ. ವೀರನಾರಾಯಣನ ಮೂರ್ತಿಯು ಧೋತಿಯನ್ನು ಉಟ್ಟು, ಚಕ್ರ, ಶಂಖ, ಗಧೆ ಮತ್ತು ಪದ್ಮವನ್ನು ತನ್ನ ನಾಲ್ಕೂ ಕೈಗಳಲ್ಲಿ ಹಿಡಿದು ಯುದ್ಧ ನಿರತ ಭಂಗಿಯಲ್ಲಿದೆ.
ಪ್ರವಾಸಿಗರು ಲಕ್ಷ್ಮಿ ಮತ್ತು ಗರುಡ ಮೂರ್ತಿಯನ್ನು ಮುಖ್ಯ ದೇವರ ವಿಗ್ರಹದ ಅಕ್ಕಪಕ್ಕದಲ್ಲಿ ಕಾಣಬಹುದು. ಈ ದೇವಸ್ಥಾನವನ್ನು ಇತಿಹಾಸದಲ್ಲಿ ಆಸಕ್ತಿ ಮತ್ತು ಧಾರ್ಮಿಕ ಪ್ರಜ್ಞೆಯಿರುವ ಪ್ರವಾಸಿಗರು ನೋಡಬಹುದು. ಪಂಚ ನಾರಾಯಣ ಕ್ಷೇತ್ರಗಳಲ್ಲಿ ಇದೂ ಒಂದು ಎಂದು ಹೇಳಲಾಗಿದೆ. 1117ರಲ್ಲಿ ಹೊಯ್ಸಳ ರಾಜ ಬಿಟ್ಟಿದೇವನಿಂದ ನಿರ್ಮಿತವಾಗಿದೆ. ಈ ದೇವಸ್ಥಾನವನ್ನು ಕಟ್ಟಿದ ನಂತರ ವಿಷ್ಣುವರ್ಧನ ಎಂದು ಹೆಸರು ಬದಲಿಸಿಕೊಂಡು ಶ್ರೀ ರಾಮಾನುಜಾಚಾರ್ಯರ ಪ್ರಭಾವದಿಂದಾಗಿ ಜೈನ ಮತದಿಂದ ವೈಷ್ಣವ ಪಂಥಕ್ಕೆ ಮತಾಂತರಗೊಂಡಿದ್ದ. ಕುಮಾರವ್ಯಾಸ ಇದೇ ದೇವಸ್ಥಾನದಲ್ಲಿ ಕುಳಿತು ಮಹಾಭಾರತವನ್ನು ಕನ್ನಡದಲ್ಲಿ ಬರೆದ ಎಂದು ಹೇಳಲಾಗುತ್ತದೆ.
ವೀರನಾರಾಯಣ ದೇವಸ್ಥಾನದಲ್ಲಿ ವಿವಿಧ ರೀತಿಯ ವಾಸ್ತುಶಿಲ್ಪಗಳಿವೆ. ಚಾಲುಕ್ಯ, ಹೊಯ್ಸಳ ಮತ್ತು ವಿಜಯನಗರದ ವಾಸ್ತುಶಿಲ್ಪದ ಸಮ್ಮಿಶ್ರಣವಿದು. ದೇವಸ್ಥಾನದ ಪ್ರವೇಶದ್ವಾರದಲ್ಲಿರುವ ರಂಗ ಮಂಟಪ ವಿಜಯನಗರ ಶೈಲಿಯದ್ದು. ಗರುಡ ಸ್ತಂಭವು ಹೊಯ್ಸಳ ಶೈಲಿಯದ್ದು. ಒಳ ಮಂಟಪ, ಗರ್ಭಗುಡಿ ಮತ್ತು ಮುಖ್ಯ ಗೋಪುರಗಳು ಚಾಲುಕ್ಯರ ಶೈಲಿಯ ವಾಸ್ತುಶಿಲ್ಪ.
ಐತಿಹಾಸಿಕ ಮಹತ್ವವುಳ್ಳ ವೀರನಾರಾಯಣನ ನಾಡಿಗೆ ಒಮ್ಮೆಯಾದರೂ ಅಡಿ ಇಡೋಣವಲ್ಲವೇ?
– ಲೋಕೇಶ ಹಿರೇಮಠ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.