ಮನೆಯಲ್ಲಿ ಆ ಪೋಸ್ಟರ್ ಹಾಕಿಕೊಂಡಿದ್ದರೆ ಮುಗೀತು. ಅವರಿಗೆ 2 ವರ್ಷ ಸೆರೆವಾಸ ಗ್ಯಾರಂಟಿ. ಅರೆ ! ಅದ್ಯಾವ ಪೋಸ್ಟರ್ ? ಪೋಸ್ಟರ್ಗೆ ಅಂಥ ಶಕ್ತಿ ಇರಲು ಸಾಧ್ಯವೆ ? ಖಂಡಿತ ಸಾಧ್ಯ. ಸ್ವಾತಂತ್ರ್ಯದ ಯಜ್ಞಕ್ಕೆ ಆಹುತಿಯಾದ ಕ್ರಾಂತಿ ಕುಸುಮಗಳ ಭಾವಚಿತ್ರಗಳಿರುವ ಪೋಸ್ಟರ್ ಅಂಥದೊಂದು ದಿವ್ಯತೆ ಹೊಂದಿತ್ತು. ಕೇಳಿದರೇನೇ ಮೈ ರೋಮಾಂಚನಗೊಳ್ಳುತ್ತೆ.
ಸ್ಯಾಂಡರ್ಸ್ ಹತ್ಯೆ ಹಾಗೂ ಕೇಂದ್ರ ಶಾಸನ ಸಭೆಯಲ್ಲಿ ಬಾಂಬ್ ಎಸೆಯುವ ಮೂಲಕ ಆಂಗ್ಲರಿಗೆ ಎಚ್ಚರಿಕೆ ನೀಡಿದ ಧೀರ ಕುಡಿ ಭಗತ್ ಸಿಂಗ್, ಬಟುಕೇಶ್ವರ್ ದತ್ ಆದಿಯಾಗಿ ಲಾಹೋರ್ ಪಿತೂರಿಯ ಪ್ರಕರಣದಲ್ಲಿ 30ಕ್ಕೂ ಹೆಚ್ಚು ಜನ ಸಿಕ್ಕಿ ಹಾಕಿಕೊಂಡಿದ್ದರು. ಈ ಪಿತೂರಿಗೆ ಸಂಬಂಧಿಸಿದವರ ಭಾವಚಿತ್ರವುಳ್ಳ ಪೋಸ್ಟರ್ ಅದೇ ಲಾಹೋರ್ನಲ್ಲಿಯೇ ಪ್ರಕಟವಾಗಿದ್ದು ವಿಶೇಷ.
ಸ್ವಾತಂತ್ರ್ಯ ಹೋರಾಟಗಾರ 90 ವರ್ಷದ ದಾಮೋದರ್ ಸಬನೀಸ್ ಅವರ ಬಳಿ ಈ ಪೋಸ್ಟರ್ ಸಂಗ್ರಹವಿದೆ. ಸಬನೀಸ್ ಅವರು ಬೆಳಗಾವಿ ಜಿಲ್ಲೆ ಹುಕ್ಕೇರಿ ನಿವಾಸಿ. ಪೋಸ್ಟರ್ ಹಿಂದಿನ ಕಥೆಯನ್ನು ಅವರು ಹೇಳುವಾಗ ಅಖಂಡ ಭಾರತದ ಚಿತ್ರಣ ಸ್ಮೃತಿಪಟಲದ ಎದುರು ಬಾರದೇ ಇರದು. ಲಾಹೋರ್ನಲ್ಲಿಯೇ ಇಂಥದೊಂದು ಪೋಸ್ಟರ್ ಪ್ರಕಟವಾಗಿತ್ತು ಎಂಬುದೇ ಅಂದಿನ ಅಖಂಡ ಭಾರತದ ಇರುವಿಕೆಗೆ ಸಾಕ್ಷಿ. ಆದರೆ ದುರದೃಷ್ಟವಶಾತ್ ಅದೇ ಲಾಹೋರ್ ಇಂದು ಪಾಕ್ ವಶದಲ್ಲಿದೆ ಎನ್ನುತ್ತಾರೆ ಸಬನೀಸ್ ಅವರು.
ಲಾಹೋರ್ ಪಿತೂರಿಗೆ ಸಂಬಂಧಿಸಿದಂತೆ 1929 ರ ಜುಲೈನಲ್ಲಿ ವಿಚಾರಣೆ ಪ್ರಹಸನ ಆರಂಭವಾಗುತ್ತದೆ. ಮೂವತ್ತೆರಡು ಮಂದಿಯಲ್ಲಿ 7 ಮಂದಿ ಮಾಫಿ ಸಾಕ್ಷಿಗಳಾಗಿದ್ದರು. 9 ಮಂದಿ ತಲೆ ಮರೆಸಿಕೊಂಡಿರುವುದಾಗಿ ಪೊಲೀಸರು ಹೇಳಿಕೆ ನೀಡಿದ್ದರು. 16 ಮಂದಿಯನ್ನು ಮಾತ್ರ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು.
1929 ರಲ್ಲಿ ಲಾಹೋರ್ ಪಿತೂರಿ ಪ್ರಕರಣ ನಡೆದಿದೆ ಎಂದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಅಸ್ತಿತ್ವದಲ್ಲಿದ್ದುದು ಅಖಂಡ ಭಾರತ ಎಂಬುದು ಸ್ಪಷ್ಟ. ಅಸಂಖ್ಯ ಅಪ್ಪಟ ರಾಷ್ಟ್ರಪ್ರೇಮಿಗಳು ನೆತ್ತರು ಹರಿಸಿದ್ದು ಅಖಂಡ ಭಾರತದ ಸ್ವಾತಂತ್ರ್ಯದ ಸೌಧ ನಿರ್ಮಾಣಕ್ಕೆ ಎಂಬುದೂ ನಿರ್ವಿವಾದ.
ಸ್ವಾತಂತ್ರ್ಯದ ಸಂಗ್ರಾಮದಲ್ಲಿ ಸಿಂಹಗಳಂತೆ ಘರ್ಜಿಸಿದ, ಬ್ರಿಟಿಷರ ಅಧಿಕಾರಶಾಹಿಯ ವಿರುದ್ಧ ತೊಡೆ ತಟ್ಟಿದ ವೀರ ಹೋರಾಟಗಾರರನ್ನು ಆ ಪೋಸ್ಟರ್ ಒಳಗೊಂಡಿದೆ. ವಿಶೇಷವಾಗಿ ಲಾಹೋರ್ ಪಿತೂರಿ ಪ್ರಕರಣದಲ್ಲಿ ಭಾಗಿಯಾದವರು ಅಲ್ಲಿದ್ದಾರೆ. ಅದನ್ನು ಕಂಡಾಗೆಲ್ಲ ಬ್ರಿಟೀಷರ ರಕ್ತ ಕುದಿಯುತ್ತಿತ್ತು ಅನಿಸುತ್ತದೆ. ಏಕೆಂದರೆ ಹೆಮ್ಮೆಯಿಂದ ಆ ಪೋಸ್ಟರ್ ಹಾಕಿಕೊಂಡ ದೇಶಪ್ರೇಮಿಗೆ ಅವರು ಶಿಕ್ಷೆಯ ಉಡುಗೊರೆ ಕೊಡುತ್ತಿದ್ದರಂತೆ.
ಅಖಂಡ ಭಾರತಕ್ಕೆ ಸಾಕ್ಷಿ ಅಷ್ಟೇ ಅಲ್ಲ, ಕ್ರಾಂತಿಯ ಸಂಕೇತವಾಗಿತ್ತು ಈ ಪೋಸ್ಟರ್. ಅಲ್ಲಿರುವ ಭಾವಚಿತ್ರಗಳು ಬ್ರಿಟಿಷ್ ಪಡೆಗೆ ಸವಾಲೆಸೆಯುವ ಒಂದೊಂದು ದಿವ್ಯ ಶಕ್ತಿಃಪುಂಜಗಳಂತೆ ಪ್ರಖರವಾಗಿದ್ದವು. ಬ್ರಿಟೀಷರ ಅಂತಃಶಕ್ತಿಯನ್ನೇ ಉಡುಗಿಸುವ ತಾಕತ್ತು ಆ ಪೋಸ್ಟರ್ಗೇ ಇತ್ತು ಎನ್ನುವುದಾದರೆ, ಇನ್ನು ಸ್ವತಃ ಅದರಲ್ಲಿನ ಕ್ರಾಂತಿ ಕುಡಿಗಳಲ್ಲಿದ್ದ ಸಾಮರ್ಥ್ಯವನ್ನು ಅಂದಾಜಿಸಬಹುದು.
ಧಾರವಾಡದ ಜನನಿ ಪ್ರತಿಷ್ಠಾನದ ಸಂಗ್ರಹದಲ್ಲಿಯೂ ಈ ಪೋಸ್ಟರ್ ವಿರಾಜಮಾನವಾಗಿದ್ದು, ಅಖಂಡ ಭಾರತ, ಕ್ರಾಂತಿ ಕುಸುಮಗಳ ವೀರ ನೆನಪುಗಳನ್ನು ಹೇಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.