- ಕಳಸಾ ಬಂಡೂರಿ ಹೋರಾಟಕ್ಕೂ ಬೆಂಬಲ
- ವಿವಿಧ ಮಹತ್ವದ ದಿನಗಳ ವಿಶಿಷ್ಟ ಆಚರಣೆ
- ದೇಶಕ್ಕಾಗಿ ನಡಿಗೆ, ಜಾಗೋ ಹಿಂದೂಸ್ತಾನಿಯ ರೂವಾರಿ
- ವಿದ್ಯೆಯೊಂದಿಗೆ ಸಂಸ್ಕಾರವನ್ನೂ ನೀಡುವ ಅಪರೂಪದ ಸೇವೆ
ದಾನಗಳಲ್ಲಿ ವಿದ್ಯಾದಾನವೂ ಶ್ರೇಷ್ಠವಂತೆ. ಈ ಮಾತಿಗೆ ಪೂರಕವಾಗಿ ವಾಣಿಜ್ಯ ನಗರಿಯಲ್ಲಿ ಉಚಿತ ಮನೆ ಪಾಠ ಎಂಬ ಜ್ಞಾನಗಂಗೆ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದಾಳೆ. ಇದರ ರೂವಾರಿ ಸಾಮಾಜಿಕ ಕಾರ್ಯಕರ್ತ ಚಂದ್ರಶೇಕರ ಗೋಕಾಕ.
ಆರ್ಥಿಕವಾಗಿ ದುರ್ಬಲರು ಹಾಗೂ ಕೊಳಗೇರಿ ಪ್ರದೇಶದ ಮಕ್ಕಳಿಗೆ ಉಚಿತವಾಗಿ ಸಂಸ್ಕಾರಯುತ ಶಿಕ್ಷಣ ನೀಡುವುದೇ ಜ್ಞಾನಗಂಗೆಯ ಧ್ಯೇಯ. ಒಂದು ದಶಕದ ಗಡಿ ದಾಟಿದ ಅಪರೂಪದ ಸಂಸ್ಥೆಯ ಕಾರ್ಯವೈಖರಿ ನಿಜಕ್ಕೂ ಮಾದರಿ.
ಸಾವಿರಾರು ವಿದ್ಯಾರ್ಥಿಗಳ ಬಾಳಲ್ಲಿ ಜ್ಞಾನದ ದೀವಿಗೆ ಹಚ್ಚಿದ ಈ ಸಂಸ್ಥೆ 80 ಗ್ರಾಮಗಳಲ್ಲಿ 160 ಕ್ಕೂ ಹೆಚ್ಚು ತರಬೇತಿ ಕೇಂದ್ರಗಳನ್ನು ಹೊಂದಿದೆ. ಹುಬ್ಬಳ್ಳಿ ಗ್ರಾಮೀಣ ಹಾಗೂ ತಾಲೂಕು ಪ್ರದೇಶದಲ್ಲಿ ಹೆಚ್ಚು ಕಾರ್ಯವ್ಯಾಪ್ತಿ ಹೊಂದಿದೆ. 5 ಸಾವಿರಕ್ಕೂ ಹೆಚ್ಚು ಮಕ್ಕಳು ಇದರ ಸದುಪಯೋಗ ಪಡೆಯುತ್ತಿದ್ದಾರೆ.
ಮಕ್ಕಳ ಶಾಲಾ ಅವಧಿಯ ನಂತರ ಇಲ್ಲಿ ತರಬೇತಿ ನೀಡಲಾಗುತ್ತದೆ. ಕೇವಲ ಪುಸ್ತಕದ ಬದನೆಕಾಯಿಯಿಂದ ಬಾಳು ಬೆಳಗದು ಎಂದರಿತ ಗೋಕಾಕರು, ಗುರು ಹಿರಿಯರಿಗೆ ಗೌರವ ನೀಡುವುದು, ರಾಷ್ಟ್ರ ಜಾಗೃತಿ, ಸ್ವದೇಶಾಭಿಮಾನ, ನಾಡು, ನುಡಿಯ ಬಗ್ಗೆ ಉತ್ತಮ ಚಿಂತನೆ, ಅಧ್ಯಾತ್ಮ, ಕ್ರೀಡೆ ಹೀಗೇ ವೈವಿಧ್ಯಮಯ ವಿಷಯಗಳನ್ನು ಅಲ್ಲಿ ಬೋಧಿಸುವ ವ್ಯವಸ್ಥೆ ಮಾಡಿದ್ದಾರೆ.
ಊರ ಮುಂದಿನ ದೇವಸ್ಥಾನಗಳೇ ಎಷ್ಟೋ ಕಡೆಗೆ ಜ್ಞಾನಗಂಗೆಯ ತರಬೇತಿ ಕೇಂದ್ರಗಳಾಗಿವೆ. ಬದುಕಿನ ಶಿಕ್ಷಣವನ್ನು ನೀಡುವ ಆ ಕೇಂದ್ರಗಳು ಅಕ್ಷರಶಃ ಜ್ಞಾನದೇಗುಲಗಳೇ ಬಿಡಿ. ಅಧ್ಯಾತ್ಮಿಕ ಚಿಂತನೆಗಳಿಗೂ ಅಲ್ಲಿ ಅವಕಾಶವಿದ್ದು, ಹಿರಿಯರು, ಅನುಭಾವಿಗಳು ಮಕ್ಕಳ ಸಕಾರಾತ್ಮಕ ಮನೋಬಲ ವೃದ್ಧಿಗೆ ಕಟಿಬದ್ಧರಾಗಿದ್ದಾರೆ.
’ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲು ಗುರುವು’ ಎಂಬ ಮಾತಿನಂತೆ, ಜ್ಞಾನಗಂಗೆ ವಿದ್ಯಾರ್ಥಿಗಳಿಗೆ ಮನೆಯಂತೆಯೇ ಇದೆ. ಮಾತೃಹೃದಯದ ಶಿಕ್ಷಕಿಯರು ಜನನಿಯಂತೆ ಕಾಳಜಿವಹಿಸುತ್ತಿದ್ದಾರೆ. ಮಹಿಳಾ ಶಿಕ್ಷಕಿಯರಿಗೆ ಪುಟ್ಟ ಉದ್ಯೋಗದ ಅವಕಾಶವೂ ಇಲ್ಲಿ ಸಿಕ್ಕಂತಾಗಿದೆ.
ವಿದ್ಯಾದಾನವೇನೋ ಶ್ರೇಷ್ಠ, ಆದರೆ ದಾನ ಮಾಡಲು ಕೇವಲ ವಿದ್ಯೆ ಇದ್ದರೆ ಸಾಲದು. ಅದಕ್ಕೇ ಲಕ್ಷ್ಮೀ ಕಟಾಕ್ಷವೂ ಬೇಕಲ್ಲ ಎಂದರೆ, ದಾನಿಗಳು ಆ ಭಾರವನ್ನು ಕಡಿಮೆ ಮಾಡುತ್ತಲೇ ಬಂದಿದ್ದಾರೆ ಎನ್ನುತ್ತಾರೆ ಜ್ಞಾನಗಂಗೆಯ ಸಂಸ್ಥಾಪಕ ಅಧ್ಯಕ್ಷ ಚಂದ್ರಶೇಖರ ಗೋಕಾಕ.
ನಗರದ ಸೆಟ್ಲಮೆಂಟ್, ಜೋಳದ ಓಣಿ, ರುದ್ರಾಕ್ಷಿ ಮಠ, ಬಮ್ಮಾಪುರ ಓಣಿ, ನಾರಾಯಣ ಪೇಟ, ಚನ್ನಪೇಟ, ಶಿರಗುಪ್ಪಿ, ಇಂಗಳ ಹಳ್ಳಿ, ರೇವಡಿಹಾಳ, ಗಂಗಿವಾಳ, ಕುರಡಿಕೇರಿ, ಅಂಚಟಗೇರಿ ರಾಂಪುರ, ಗಿರಿಯಾಲ, ತರ್ಲಘಟ್ಟ, ನೂಲ್ವಿ, ಹಳಿಯಾಳ, ಕಡಪಟ್ಟಿ ಹೀಗೇ ತರಬೇತಿ ಕೇಂದ್ರಗಳ ಪಟ್ಟಿ ದೊಡ್ಡದಿದೆ.
ಉದ್ಯಮಿಗಳು, ಸಮಾಜ ಸೇವಕರು, ನೌಕರರು, ಶಿಕ್ಷಣ ಪ್ರೇಮಿಗಳು, ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಬದುಕುತ್ತಿರುವವರು ಎಲ್ಲರೂ ಜ್ಞಾನಗಂಗೆಗೆ ದಾನ ಮಾಡುತ್ತಾರೆ. ಕೆಲವರು ಉಚಿತ ನೋಟ್ ಪುಸ್ತಕ, ಓದುವ ಸಾಮಗ್ರಿ ಹೀಗೇ ಲಕ್ಷಗಟ್ಟಲೇ ಬೆಲೆ ಬಾಳುವ ವಸ್ತುಗಳನ್ನು ದಾನ ಮಾಡಿದವರನ್ನು ನೆನಪಿಸಿಕೊಳ್ಳುತ್ತಾರೆ ಗೋಕಾಕರು.
ಇದು ನನ್ನ ಕಲ್ಪನೆಯ ಕೂಸು. ಇಂದು ಸಾಕಷ್ಟು ಪ್ರಮಾಣದಲ್ಲಿ ಬೆಳೆದಿದೆ. 5 ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಇದರ ಸದ್ವಿನಿಯೋಗ ಮಾಡಿಕೊಳ್ಳುತ್ತಿದ್ದಾರೆ. ನೂರೆಂಟು ಭಾಗ್ಯಕ್ಕಿಂತಲೂ ವಿದ್ಯಾಭಾಗ್ಯ ನೀಡಿದರೆ ಸಮಾಜದ ಭವಿಷ್ಯ ಉಜ್ವಲವಾಗುವುದು ಎಂಬುದೇ ನಮ್ಮ ಧ್ಯೇಯ.
ಚಂದ್ರಶೇಖರ ಗೋಕಾಕ, ಮುಖ್ಯಸ್ಥರು, ಜ್ಞಾನಗಂಗಾ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.