ಕುಸುರಿ ಕೆತ್ತನೆಯ ಶಿಲ್ಪಕಲೆ ಕಂಡಾಗ ಒಂದು ಕ್ಷಣ ಬೆರಗು. ಕಲ್ಲಿನಲ್ಲಿ ಅರಳಿದ ಕಲೆಯನ್ನು ಆಸ್ವಾದಿಸಲು ಒಮ್ಮೆ ನಗರದ ಚಂದ್ರಮೌಳೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಬೇಕು.
ಅವಳಿ ನಗರ ಹುಬ್ಬಳ್ಳಿ -ಧಾರವಾಡದ ಮಧ್ಯ ಇರುವ ಉಣಕಲ್ನ ಒಳಭಾಗದಲ್ಲಿದೆ ಈ ಐತಿಹಾಸಿಕ ದೇವಾಲಯ. ಬಾದಾಮಿ ಚಾಲುಕ್ಯರ ಶೈಲಿಯನ್ನು ಮೈದುಂಬಿ ನಿಂತಿರುವ ದೇವಸ್ಥಾನವನ್ನು ನೋಡುವುದೇ ಒಂದು ಸೊಬಗು.
ಏನಿಲ್ಲವೆಂದರೂ ದಶ ಶತಮಾನಗಳ ಪುರಾತನ ಹಿನ್ನೆಲೆ ಇದಕ್ಕಿದೆ. ತನ್ನ ಅತ್ಯದ್ಭುತ ಶಿಲ್ಪಕಲೆಯಿಂದಲೇ ಇದು ಹೆಸರುವಾಸಿ. ಭಾರತೀಯ ಪುರಾತತ್ವ ಇಲಾಖೆಯು ಸಂರಕ್ಷಿತ ಸ್ಮಾರಕ ಎಂದೂ ಗುರುತಿಸಿಕೊಂಡಿದ್ದು, ಇದರ ರಾಷ್ಟ್ರೀಯ ಪ್ರಾಮುಖ್ಯತೆಗೆ ಸಾಕ್ಷಿ.
ಅಪರೂಪವೆಂಬಂತೆ ನಾಲ್ಕು ಬಾಗಿಲುಗಳುಳ್ಳ ಗರ್ಭಗುಡಿ ಆಕರ್ಷಣೀಯವಾಗಿದೆ. ಈಶಪ್ಪನ ಮುಂದೆ ಬಸಪ್ಪ ಎಂಬ ಮಾತಿಗೆ ಪೂರಕವೆಂಬಂತೆ ನಂದಿ ವಿಗ್ರಹವೂ ಇಲ್ಲಿ ವಿರಾಜಮಾನವಾಗಿದೆ. ನಾಲ್ಕು ಮುಖವುಳ್ಳ ಶಿವಲಿಂಗ ಈ ದೇವಸ್ಥಾನದ ವೈಶಿಷ್ಟ್ಯ.
ದೇವಾಲಯದ ಆವರಣದೊಳಗೆ ಹೆಜ್ಜೆ ಇಟ್ಟರೆ ಸಾಕು ಐತಿಹಾಸಿಕ ಲೋಕಕ್ಕೆ ಕೊಂಡೊಯ್ದ ಅನುಭವ ನೀಡುತ್ತದೆ. ಸುಂದರ ಕೆತ್ತನೆಯ ಕಂಬಗಳನ್ನು ಮತ್ತೆ ಮತ್ತೆ ಮುಟ್ಟಿ ನೋಡಬೇಕೆನಿಸುತ್ತದೆ.
ತುಂಬಾ ಪ್ರಾಚೀನ ದೇಗುಲವಾಗಿದ್ದರಿಂದ ಅಲ್ಲಲ್ಲಿ ತೇಪೆ ಹಚ್ಚುವ ಕೆಲಸವೂ ಆಗಿದೆ. ದೇವಾಲಯದ ಅಂಗಣವೂ ಸ್ವಚ್ಛತೆಯಿಂದ ಕೂಡಿದ್ದು, ಮನಸ್ಸಿಗೆ ಮುದ ನೀಡುತ್ತದೆ.
ಐಹೊಳೆ, ಪಟ್ಟದಕಲ್ಲಿಗೆ ಹೋದಂತೆ ಭಾಸವಾಗುವುದರಲ್ಲಿ ಎರಡು ಮಾತಿಲ್ಲ. ಚಂದ್ರಮೌಳೀಶ್ವರನಿಗೆ ಇಂದಿಗೂ ನಿತ್ಯ ಪೂಜೆ ಸಲ್ಲುತ್ತದೆ. ದಿನ ನಿತ್ಯ ಜನ ಬರುವುದು ಕಡಿಮೆ. ಆದರೆ ಶಿವರಾತ್ರಿಯಂದು ಜನರ ಬರುವಿಕೆ ಹೆಚ್ಚು ಎಂದು ಅಲ್ಲಿನ ವಾಚಮನ್ ಹೇಳುತ್ತಾರೆ.
ಬಹು ಆಯಾಮಗಳಲ್ಲಿ ನಿರ್ಮಿತವಾದ ಐತಿಹಾಸಿಕ ದೇವಸ್ಥಾನವನ್ನೊಮ್ಮೆ ನೋಡುವುದು ನಿಜಕ್ಕೂ ಒಂದು ಸೌಭಾಗ್ಯವೇ ಸರಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.