ರಾಮಕೃಷ್ಣ ಮಿಷನ್ ಕಳೆದೆರಡು ವರುಷಗಳಿಂದ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನವನ್ನು ಆಯೋಜಿಸುತ್ತಿದೆ. ಜನರಲ್ಲಿ ಸ್ವಚ್ಛತೆಯ ಭಾವನೆ ಮೂಡಿಸುವ ಸಲುವಾಗಿ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಚ್ಛತೆಯ ಜಾಗೃತಿಯನ್ನುಂಟು ಮಾಡಲು ಪ್ರಯತ್ನಿಸುತ್ತಿದೆ. ಮೂರನೇ ಹಂತದಲ್ಲಿ ಸುಮಾರು ಅರವತ್ತು ತಂಡಗಳು ಈ ಅಭಿಯಾನದಲ್ಲಿ ಕೈಜೋಡಿಸಿ ಸ್ವಚ್ಛ ಮಂಗಳೂರಿನ ವ್ಯಾಪಕತೆಯನ್ನು ವಿಸ್ತಾರಗೊಳಿಸಿವೆ. 3ನೇ ಹಂತದಲ್ಲಿ ಸುಮಾರು 400 ಸ್ವಚ್ಛತಾ ಅಭಿಯಾನಗಳನ್ನು ಯೋಜಿಸಲಾಗಿತ್ತು. ಇದೀಗ ನಿರಂತರವಾಗಿ 23 ವಾರಗಳನ್ನು ಪೂರೈಸಿ, 260 ಅಭಿಯಾನಗಳನ್ನು ಪೂರ್ಣಗೊಳಿಸಿದೆ.
ಸ್ವಚ್ಛತೆಯ ಜೊತೆ ಜೊತೆಗೆ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿರುವುದು ಈ ಅಭಿಯಾನದ ವಿಶೇಷವಾಗಿದೆ. ಮಕ್ಕಳಿಗಾಗಿ ಕಲಾಶಿಬಿರಗಳು, ಸ್ವಚ್ಛ ಮನಸ್ಸು ಕಾರ್ಯಕ್ರಮಗಳು, ಕಾಲೇಜು ಯುವಕರಿಗಾಗಿ ಸ್ವಚ್ಛತೆಯ ಕುರಿತ ಕಾರ್ಯಾಗಾರಗಳು, ಗೃಹಿಣಿಯರಿಗಾಗಿ ಸ್ವಚ್ಛ ಗೃಹ ಮತ್ತು ಘನತ್ಯಾಜ್ಯ ನಿರ್ವಹಣೆಯ ಕುರಿತ ಮಾಹಿತಿ ಶಿಬಿರಗಳು, ಮನೆಮನೆ ಭೇಟಿ ನೀಡಿ ಸ್ವಚ್ಛತೆಯ ಜಾಗೃತಿ ಕಾರ್ಯ, ಸ್ವಚ್ಛ ಭಾರತ ಜಾಥಾಗಳು, ದೂರದರ್ಶನ, ರೇಡಿಯೋ ಕಾರ್ಯಕ್ರಮಗಳು ಹಾಗೂ ಪತ್ರಿಕೆಗಳ ಮೂಲಕ ಜನಮಾನಸದಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗಿದೆ.
ಈ ನಿಟ್ಟಿನಲ್ಲಿ ರಾಮಕೃಷ್ಣ ಮಿಷನ್ ಈ ಬಾರಿ ಸ್ವಚ್ಛತೆಗಾಗಿ ಜಾದೂ! ಎಂಬ ವಿನೂತನ ಜಾಗೃತಿ ಜಾಥಾ ಆಯೋಜಿಸುತ್ತಿದೆ. ಶ್ರೀಕುದ್ರೋಳಿ ಗಣೇಶ್ ಮತ್ತು ತಂಡದವರಿಂದ ಸುಮಾರು 30 ಪ್ರದರ್ಶನಗಳನ್ನು ನಿರಂತರವಾಗಿ ಹದಿನೈದು ದಿನಗಳ ಕಾಲ ನಗರದ ಸುತ್ತಮುತ್ತ್ಲ ಹಮ್ಮಿಕೊಂಡು, ಶುಚಿತ್ವದ ಮಹತ್ವವನ್ನು ಜಾದೂ ಕಲೆಯ ತಂತ್ರಗಾರಿಕೆಯ ಮೂಲಕ ರಂಜನೀಯವಾಗಿ ತಿಳಿಸುವ ಪ್ರಯತ್ನವಿದು.
ಈ ಜಾದೂ ಪ್ರದರ್ಶನಕ್ಕಾಗಿ ಬಸ್ ಚಾಸಿಯನ್ನು ಬಳಸಿಕೊಂಡು ಟ್ಯಾಬ್ಲೋ ಮಾದರಿಯಲ್ಲಿ ವಾಹನವೊಂದನ್ನು ರೂಪಿಸಲಾಗಿದೆ. ಇದರಲ್ಲಿಯೇ ವೇದಿಕೆ, ಧ್ವನಿವರ್ಧಕ, ದೂರದರ್ಶನ, ಹಾಗೂ ಜಾದೂ ಪ್ರದರ್ಶನಕ್ಕೆ ಬೇಕಾದ ಪರಿಕರಗಳನ್ನು ಇಟ್ಟುಕೊಳಲು ವ್ಯವಸ್ಥೆ ಮಾಡಲಾಗಿದೆ. ಪ್ರತಿದಿನ ಸಂಜೆ 4:30 ರಿಂದ 5:30 ಪ್ರಥಮ ಪ್ರದರ್ಶನ ಹಾಗೂ 6:30 ರಿಂದ 7:30 ದ್ವಿತೀಯ ಪ್ರದರ್ಶನ ದಂತೆ ದಿನಂಪ್ರತಿ ಎರಡು ಪ್ರದರ್ಶನಗಳು ಜರುಗಲಿವೆ. ಈಗಾಗಲೇ ಅಲ್ಲಲ್ಲಿ ಮೂವತ್ತು ತಂಡಗಳಿಗೆ ಪ್ರಚಾರದ ಹಾಗೂ ಕಾರ್ಯಕ್ರಮದ ಆಯೋಜನೆಯ ಜವಾಬ್ದಾರಿಯನ್ನು ವಹಿಸಿಕೊಡಲಾಗಿದೆ. ಪ್ರತಿ ತಂಡ ಸುಮಾರು ಎರಡು ಸಾವಿರ ಜನರಿಗೆ ಕರಪತ್ರ ತಲುಪಿಸಿ ಆಹ್ವಾನಿಸಬೇಕಾಗಿ ಯೋಜಿಸಲಾಗಿದೆ. ಈ ಜಾದೂ ಅಭಿಯಾನವು ಮಂಗಳಾದೇವಿಯ ರಾಮಕೃಷ್ಣ ಮಿಷನ್ ನಲ್ಲಿ, ಎಪ್ರಿಲ್ 2, 2017 ಭಾನುವಾರದಂದು ಸಂಪನ್ನಗೊಳ್ಳಲಿದೆ.
ಮಾರ್ಚ್ 19 ರಂದು ಸಂಜೆ 5 ಗಂಟೆ ಸುಮಾರಿಗೆ ಪಣಂಬೂರು ಕಡಲತೀರದಲ್ಲಿ ಈ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಸ್ವಾಮಿ ಜಿತಕಾಮಾನಂದಜಿ ಸಾನಿಧ್ಯದಲ್ಲಿ ಮಂಗಳೂರಿನ ಮಹಾಪೌರರಾದ ಶ್ರೀಮತಿ ಕವಿತಾ ಸನಿಲ್ ಅವರು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂಆರ್ಪಿಎಲ್ ಡಿಜಿಎಂ ಶ್ರೀಹರೀಶ್ ಬಾಳಿಗಾ ಹಾಗೂ ಶ್ರೀಯತೀಶ್ ಬೈಕಂಪಾಡಿ ಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.