ಧಾರವಾಡ: ಆಧ್ಯಾತ್ಮ ತತ್ವ, ಪರಂಪರೆ ಹೊಂದಿದೆ ದೇಶ ಭಾರತ. ಭಗವಂತನ ಮಾರ್ಗದಲ್ಲಿ ಹೋಗಲು ಕರ್ಮ ಯೋಗ, ಜ್ಞಾನ ಯೋಗ ಹೀಗೆ ಅನೇಕ ಮಾರ್ಗಗಳಿವೆ. ಅದರಲ್ಲಿ ಭಕ್ತಿ ಯೋಗಕ್ಕೆ ಹೆಚ್ಚಿನ ಮಹತ್ವವಿದೆ. ಹೀಗಾಗಿ ಪ್ರತಿಯೊಬ್ಬರು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ಇಚಲಕರಂಜಿಯ ಭಕ್ತಿಯೋಗಾಶ್ರಮದ ಶ್ರೀ ಮಹೇಶ್ವರಾನಂದ ಸ್ವಾಮೀಜಿ ಹೇಳಿದರು.
ಅವರು ನಗರದ ಕರ್ನಾಟಕ ಕಾಲೇಜ್ ಮೈದಾನದಲ್ಲಿ ಗುರುವಾರ ಜರುಗಿದ ಯೋಗ, ಆರೋಗ್ಯ ಹಾಗೂ ಭಕ್ತಿ ಯೋಗದ ದರ್ಶನ ಪ್ರವಚನದಲ್ಲಿ ಮಾತನಾಡಿದರು.
ನಮ್ಮ ಮನೆ ನಿಂತಿರುವುದು ನಾಲ್ಕು ಕಂಬಗಳ ಮೇಲಾಗಲಿ, ನಾಲ್ಕು ಗೋಡೆಗಳ ಮೇಲಾಗಲಿ ಅಲ್ಲ. ಸಾವಿರ ಕಷ್ಟಗಳಿದ್ದರೂ ನಾಲ್ಕು ಜನರನ್ನ ಒಂದಡೆ ಕೂಡಿಸಿ ಇಡ್ತಾದಲ್ಲ ಅದು ಪ್ರೀತಿ. ಈ ನಮ್ಮ ಬದುಕು ನಿಂತಿರುವುದು ಪ್ರೀತಿಯ ಮೇಲೆ ಎಂಬುದನ್ನು ಯಾರೊಬ್ಬರು ಮರೆಯಬಾರದು ಎಂದರು.
ನಮ್ಮ ದೇಶದಲ್ಲಿ ಅನೇಕ ಸಂತರು, ಶರಣರು ಭಕ್ತಿ ಪಂಥದಲ್ಲಿ ಆಗಿ ಹೋಗಿದ್ದಾರೆ. ದೇವರನ್ನು ನಂಬಿ ಬದುಕಿರುವ ದೇಶ ಇದು. ನಮ್ಮ ಸುತ್ತಮುತ್ತವಿರುವ ಜಗತ್ತನ್ನ ನೋಡಿ ಅನುಭವಿಸೋದೆ ದೇವರು. ನಮ್ಮ ನಮ್ಮ ಮನೆಗಳು ಸಣ್ಣದಿರಬಹುದು, ಇಲ್ಲವೇ ದೊಡ್ಡದಿರಬಹುದು. ಆದ್ರೆ ದೇವರ ಜಗಲಿ ಇಲ್ಲದ ಮನೆಯಿಲ್ಲ ಎಂಬುದನ್ನು ನೆನಪಿರಲಿ ಎಂದರು.
ಕಾಶ್ಮೀರದ ಒಡೆಯ ಮಹಾದೇವ ಭೂಪಾಲ್ ತನ್ನ ರಾಜ್ಯ, ಸಂಪತ್ತು ಎಲ್ಲವನ್ನು ತ್ಯಾಗ ಮಾಡಿ ಕಲ್ಯಾಣಕ್ಕೆ ಬಂದು ಬಸವಣ್ಣನವರ ಸನ್ನಿಧಿಯಲ್ಲಿ ಮೋಳಿಗೆ ಮಾರಯ್ಯನಾಗಿ ತಲೆಯ ಮೇಲೆ ಕಟ್ಟಿಗೆ ಹೊತ್ತು ಸಾಗಿ ಅದರಲ್ಲಿ ಬಂದ ಹಣದಲ್ಲಿ ಶರಣರಿಗೆ ದಾಸೋಹ ಮಾಡಿಸಿ, ಕಾಲ ಕಳೆದು ತನ್ನ ಜೀವನವನ್ನು ಸಾರ್ಥಕ ಮಾಡಿಕೊಂಡನೋ ಆ ರೀತಿ ನಾವು ಸಣ್ಣ ಸಣ್ಣ ವಸ್ತುಗಳನ್ನು ತ್ಯಾಗ ಮಾಡಿ, ಅಂತರಂಗದ ಆತ್ಮವನ್ನು ಸತ್ಯದ ಪ್ರೀತಿಗಾಗಿ ತ್ಯಾಗ ಮಾಡಿ ಬದುಕಿನ ಇಚ್ಛೆಯನ್ನ ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.
ಯೋಗ ದರ್ಶನ ಮಾಡಿಸಿದ ವಚನಾನಂದ ಶ್ರೀ
ಬೆಂಗಳೂರಿನ ಶ್ವಾಸ ಸಂಸ್ಥೆಯ ಯೋಗ ಗುರು ಶ್ರೀ ವಚನಾನಂದ ಶ್ರೀಗಳು ಬಸ್ಸರಿಕಾ, ನಾಡಿ ಶೋಧನಾ ಹಾಗೂ ಬ್ರಾಮರಿ ಆಸನಗಳನ್ನು ಮಾಡಿಸುವ ಮೂಲಕ ಯೋಗದ ಮಹತ್ವ ತಿಳಿಸಿ ಕೊಟ್ಟರು.
ತ್ರಿಕೋಟಾ ವಿರಕ್ತ ಮಠದ ಶ್ರೀ ಚೆನ್ನಮಲ್ಲಿಕಾರ್ಜುನ ಶ್ರೀಗಳು ಅಲ್ಲಮ ಪ್ರಭುಗಳ ತೋರಿದ ಭಕ್ತಿ ಪಥದಲ್ಲಿ ನಮ್ಮನ್ನೆಲ್ಲಾ ಶ್ರೀ ಸಿದ್ದೇಶ್ವರ ಶ್ರೀಗಳು ಕರೆದುಕೊಂಡು ಹೊಂಟಾರ. ಅವರು ತೋರಿದ ದಾರಿಯಲ್ಲಿ ನಾವೆಲ್ಲಾ ನಡೆದು ಆನಂದ ಪಡೋದು, ಅಂತಹ ಮಹಾನ್ ಶ್ರೀಗಳ ಜೊತೆಗೆ ಇರೋದು ಒಂದು ದೊಡ್ಡ ಭಾಗ್ಯ ಎಂದರು.
ಬಾಲೇ ಹೊಸೂರಿನ ದಿಂಗಾಲೇಶ್ವರ ಶ್ರೀ, ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು, ವಿಜಯಾನಂದ ಸರಸ್ವತಿ ಶ್ರೀಗಳು, ಆತ್ಮಾನಂದ ಶ್ರೀಗಳು ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ತಪೋವನದ ಅಧ್ಯಕ್ಷರಾದ ಡಾ. ಗುರುಲಿಂಗ ಕಾಪಸೆ, ಪ್ರವಚನ ಸೇವಾ ಸಮಿತಿಯ ಬಿ.ಡಿ. ಪಾಟೀಲ ಉಪಸ್ಥಿತರಿದ್ದರು. ಶ್ರದ್ಧಾ ಮೂರಶಿಳ್ಳಿ ಪ್ರಾರ್ಥಿಸಿದರು. ಶಂಭು ಹೆಗಡ್ಯಾಳ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.