ಹುಬ್ಬಳ್ಳಿ: ದನಾಕಾಯಾಕ ಲಾಯಕ್ ಎನ್ನುತ್ತಿದ್ದ ಪಾಲಕರು ಹಾಗೂ ಊರ ಜನರಿಗೆ ಸಾಧನೆ ಮೂಲಕ ಉತ್ತರಿಸಿದ್ದಾರೆ ಅವರು. ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಪ್ರಯೋಗಶೀಲತೆ ಮೆರೆದು ಎಲ್ಲರಿಂದ ಭೇಷ್ ಎನಿಸಿಕೊಂಡ ಸಹೋದರರು ಯುವ ಸಮೂಹಕ್ಕೊಂದು ಮಾದರಿಯಾಗಿದ್ದಾರೆ.
ಧಾರವಾಡ ತಾಲೂಕಿನ ಬೆನಕನಕಟ್ಟಿ ಗ್ರಾಮದ ಶಂಕ್ರಯ್ಯ ಹಾಗೂ ಮಂಜಯ್ಯ ಯರಗಂಬಳಿಮಠ ಸಹೋದರರೇ ಎಲ್ಲರ ಗಮನ ಸೆಳೆಯುತ್ತಿರುವ ಯುವಕರು. ಕ್ರಮವಾಗಿ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಓದಿರುವ ಇವರು, ಸರಸ್ವತಿ ಒಲಿಯದ್ದಕ್ಕೆ ಚಿಂತಿತರಾಗಿದ್ದರಂತೆ. ಇದ್ದ ಸ್ವಲ್ಪ ಜಮೀನನ್ನು ನಂಬಿಕೂಡುವ ಸ್ಥಿತಿ ಇರಲಿಲ್ಲ. ತೀವ್ರ ಬರ. ಇದಕ್ಕೆ ಅವರಿಗೆ ಹೊಳೆದದ್ದು ಹೈನುಗಾರಿಕೆಯ ಐಡಿಯಾ.
ಕೇವಲ ಕೃಷಿಯಿಂದ ಜೀವನ ನಡೆಸುವುದು ಕಷ್ಟ. ಆದರೆ ಹಾಗೆಂದು ಅದರಿಂದ ವಿಮುಖವಾಗದೇ ಕೃಷಿಗೆ ಪೂರಕವಾದ ಪರಿಹಾರವನ್ನು ಕಂಡುಕೊಂಡಿದ್ದು ನಿಜಕ್ಕೂ ಸ್ವಾಗತಾರ್ಹ. ಸಹೋದರರು ಕೂಡಿ ಒಂದು ಜವಾರಿ ಆಕಳು ತಂದು ಹೈನುಗಾರಿಕೆಗೆ 5 ವರ್ಷಗಳ ಹಿಂದೆ ಮುನ್ನುಡಿ ಬರೆದಿದ್ದರು.
ಶಿರಸಿ, ಸಾಂಗ್ಲಿ, ಸಾಂಗೋಲಿ ಮುಂತಾದೆಡೆಯಿಂದ ಆಕಳುಗಳನ್ನು ತಂದಿದ್ದಾರೆ. ಧೇವಣಿ, ರೆಡ್ ಎನ್, ಎಚ್ಎಫ್ ಇತ್ಯಾದಿ ತಳಿಗಳ ಹಸುವನ್ನೂ ಇವರು ಸಾಕಿದ್ದಾರೆ. ಗುಜರಾತಿ ತಳಿಯ ಎಮ್ಮೆಗಳನ್ನೂ ಇವರ ಕೊಟ್ಟಿಗೆಯಲ್ಲಿ ಕಾಣಬಹುದು.
ಒಂದು ಹೊತ್ತಿಗೆ 20 ಲೀಟರ್ನಂತೆ ದಿನಕ್ಕೆ ಒಟ್ಟು 40 ಲೀಟರ್ ಹಾಲು ಲಭ್ಯವಂತೆ. ಅದರಲ್ಲಿ ಒಂದು ಹೊತ್ತಿನ ಹಾಲು ಮಾರಿದ ಹಣ ಹಸುಗಳ ನಿರ್ವಹಣೆಗೆ ಹೋಗುತ್ತದೆ. ಇನ್ನೊಂದು ಹೊತ್ತಿನ ಆದಾಯವು ಉಳಿಯುತ್ತದೆ ಎನ್ನುತ್ತಾರೆ ಶಿವಶಂಕ್ರಯ್ಯ.
ಧಾರವಾಡ ಹುಬ್ಬಳ್ಳಿ ಮಧ್ಯದಲ್ಲಿರುವ ಕೆ.ಎಂ.ಎಫ್ಗೆ ಇವರು ಹಾಲು ಪೂರೈಸುವ ಮೂಲಕ ತಮ್ಮ ಆದಾಯದ ಮೂಲವನ್ನು ಕಂಡುಕೊಂಡಿದ್ದಾರೆ. ಆದರೆ ಶ್ರದ್ಧೆಯಿಂದ ಈ ಕೆಲಸ ಮಾಡಿದರೆ ಖಂಡಿತಾ ಸ್ವಾವಲಂಬಿ ಬದುಕು ಸಾಧಿಸಬಹುದು ಎಂಬುದು ಅವರ ಅಭಿಪ್ರಾಯ.
ಹಸುಗಳ ನಿರ್ವಹಣೆಯೂ ಸವಾಲಿನ ಕೆಲಸವೇ. ಅದರಲ್ಲೂ ಬೇಸಿಗೆಯಲ್ಲಿ ಮೇವುಗಳಿಗೆ ಪರದಾಡುವ ರೈತರ ಪಾಡು ಆ ದೇವರಿಗೇ ಪ್ರೀತಿ. ಇದಕ್ಕೂ ಮಾರ್ಗ ಕಂಡುಕೊಂಡಿರುವ ಯರಗಂಬಳಿಮಠ ಸಹೋದರರು, ತಮ್ಮ ೨ ಎಕರೆ ಭೂಮಿಯನ್ನೇ ಇದಕ್ಕೆ ಉಪಯೋಗಿಸಿಕೊಂಡಿದ್ದಾರೆ.
ಅದರಲ್ಲಿ ನೇಪಿಯರ್, ಗಿನ್ನಿ ಗ್ರಾಸ್, ಬಾರ್ಲಿ, ಕಡ್ಡಿಯ ಹುಲ್ಲನ್ನು ದೇಸಿ ವಿಧಾನದಲ್ಲಿ ತಮ್ಮ ಹೊಲದಲ್ಲೇ ಬೆಳೆಯುತ್ತಾರೆ. ಹುರುಳಿ ನುಚ್ಚು, ಶೇಂಗಾ, ತೌಡು, ಹತ್ತಿಕಾಳು, ಗೋಧಿ ಹಿಟ್ಟುಗಳನ್ನೂ ಹಸುಗಳ ಆಹಾರವಾಗಿ ಬಳಸುತ್ತಾರೆ. ಈ ಮೂಲಕ ಹಾಲಿನ ಉತ್ಪಾದನೆ ಪ್ರಮಾಣ ಹೆಚ್ಚಿಸುವಲ್ಲಿಯೂ ಪ್ರಯತ್ನಿಸುವುದು ಗಮನಾರ್ಹ.
ಎರೆ ಹುಳು ಗೊಬ್ಬರವನ್ನೂ ತಯಾರಿಸುವಲ್ಲಿ ಇವರು ಹಿಂದೆ ಬಿದ್ದಿಲ್ಲ. ತಮ್ಮ ಹೊಲದಲ್ಲಿಯೇ ದನಗಳ ಸಗಣಿ ಹಾಗೂ ಮೂತ್ರ ಪ್ರಮಾಣ ಹೆಚ್ಚು ಲಭ್ಯವಿರುವ ಕಾರಣ, ಗೊಬ್ಬರ ತಯಾರಿಕೆಗೆ ಅನುಕೂಲವಾಗಿದೆ. ಒಂದು ಸಣ್ಣ ತೊಟ್ಟೆ ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ಎಲ್ಲ ತ್ಯಾಜ್ಯವನ್ನೂ ಹಾಕುತ್ತಾರೆ. ನಂತರ ತೊಟ್ಟಿಯಲ್ಲಿ ಎರೆಹುಳು ಬಿಡುತ್ತಾರೆ. ಈ ಮೂಲಕ ಎರೆಹುಳು ಗೊಬ್ಬರ ಸಿದ್ಧ. ಇದನ್ನೂ ಬಳಸಿಯೇ ಹಸುಗಳಿಗೆ ಮೇವು ಬೆಳೆಸುತ್ತಾರೆ. ಬಹು ಫಲವತ್ತಾದ ಹಾಗೂ ಗುಣಮಟ್ಟದ ಹುಲ್ಲಿನ ಬೆಳೆ ಬರುತ್ತದೆ. ಇದನ್ನು ಸೇವಿಸಿದ ಹಸುಗಳು ಉತ್ತಮ ಹಾಲು ಕೊಡುತ್ತವೆ ಎನ್ನುತ್ತಾರೆ ಮಂಜಯ್ಯ ಯರಗಂಬಳಿಮಠ.
ಕಲಿತು ಉದ್ಯೋಗಕ್ಕಾಗಿ ಅಲೆಯುವವರಿಗೆ, ಕಲಿಯದೇ ಕೀಳರಿಮೆಯಿಂದ ಕೊರಗುವವರಿಗೆ ಯರಗಂಬಳಿಮಠ ಸಹೋದರರ ಸ್ವಾವಲಂಬಿ ಬದುಕು ಮಾದರಿ. ಓದು ಒಕ್ಕಾಲು, ಬುದ್ಧಿ ಮುಕ್ಕಾಲು ಎಂಬಂತೆ, ಬದುಕಲು ಓದು ಬೇಕು, ಹಾಗೆಂದು ಬದುಕೇ ಓದಲ್ಲ. ಅದನ್ನೂ ಹೊರತುಪಡಿಸಿಯೂ ನಾವು ಉತ್ತಮ ಬದುಕನ್ನು ನಿರ್ಮಿಸಿಕೊಳ್ಳಬಹುದು ಎಂಬುದಕ್ಕೆ ಇವರೇ ಉದಾಹರಣೆ.
ಇವರಿಗೆ ತಂದೆ-ತಾಯಿ ಇದ್ದಾರೆ. ಇದ್ದ ಒಬ್ಬ ಅಕ್ಕನಿಗೆ ಮದುವೆಯಾಗಿದೆ. ಇದೀಗ ಶಂಕ್ರಯ್ಯ ಹಾಗೂ ಮಂಜಯ್ಯ ಹಸೆಮಣೆ ಏರುವ ವಿಚಾರದಲ್ಲಿದ್ದಾರೆ. ಶಂಕ್ರಯ್ಯಗೆ 29 ವರ್ಷ, ಮಂಜಯ್ಯಗೆ 26. ಸಣ್ಣ ವಯಸ್ಸಿನಲ್ಲೇ ಬದುಕಿನ ಮಾರ್ಗವನ್ನು ಕಂಡುಕೊಂಡ ಅವರ ಸಾಧನೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.