ನವದೆಹಲಿ: ಲಕ್ನೋದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹತನಾದ ಇಸಿಸ್ ಉಗ್ರ ಸೈಫುಲ್ಲಾನ ಶವವನ್ನು ಸ್ವೀಕರಿಸಲು ಆತನ ತಂದೆ ನಿರಾಕರಿಸಿದ್ದು, ದೇಶದ್ರೋಹಿ ನಮ್ಮ ಮಗನಲ್ಲ ಎಂದಿದ್ದಾರೆ. ಅವರ ಈ ನಿಲುವನ್ನು ಶ್ಲಾಘಿಸಿರುವ ಬಿಜೆಪಿ ಭಯೋತ್ಪಾದನೆಯನ್ನು ವೈಭವೀಕರಿಸುವ ಕಾಶ್ಮೀರಿಗಳು ಇವರನ್ನು ನೋಡಿ ಕಲಿಯಬೇಕು ಎಂದಿದೆ.
‘ದೇಶದ್ರೋಹಿಯ ಶವವನ್ನು ನಾವು ಸ್ವೀಕರಿಸುವುದಿಲ್ಲ ಎಂದಿರುವ ಸೈಫುಲ್ಲಾ ತಂದೆ ಸರ್ತಾಝ್ರನ್ನು ನಾವು ಅಭಿನಂದಿಸುತ್ತೇವೆ, ಉಗ್ರರ ಶವವನ್ನು ಹೊತ್ತು ಮೆರವಣಿಗೆ ಮಾಡುವ ಕಾಶ್ಮೀರಿಗರಿಗೆ ಇದು ದೊಡ್ಡ ಪಾಠ’ ಎಂದು ಬಿಜೆಪಿ ಮುಖಂಡ ಎಸ್.ಪ್ರಕಾಶ್ ಹೇಳಿದ್ದಾರೆ.
ಮೃತ ಸೈಫುಲ್ಲಾ ಮತ್ತು ಆತನ ಸಂಗಡಿಗರು ಇಸಿಸ್ ಉಗ್ರ ಸಂಘಟನೆಯ ನಂಟನ್ನು ಹೊಂದಿದ್ದು, ದೇಶದಾದ್ಯಂತ ದೊಡ್ಡ ಮಟ್ಟದ ದಾಳಿಗಳನ್ನು ನಡೆಸಲು ಯೋಜನೆ ರೂಪಿಸಿದ್ದರು. ಉಜ್ಜೈನಿ ರೈಲು ಸ್ಫೋಟ ನಡೆಸುವ ಮೂಲಕ ತಮ್ಮ ವಿಧ್ವಂಸಕ ಕೃತ್ಯಗಳಿಗೆ ಅವರು ಅಭ್ಯಾಸವನ್ನೂ ಆರಂಭಿಸಿದ್ದರು. ಆದರೆ ಭಯೋತ್ಪಾದನ ವಿರೋಧಿ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಇವರ ಎಲ್ಲಾ ಯೋಜನೆ ಬುಡಮೇಲಾಗಿದೆ. ಸೈಫುಲ್ಲಾ ಎನ್ಕೌಂಟರ್ಗೆ ಬಲಿಯಾಗಿದ್ದು, ಇತರ ಐವರು ಬಂಧಿತರಾಗಿದ್ದಾರೆ.
ಆದರೆ ಇದೀಗ ಸೈಫುಲ್ಲಾ ತಂದೆ ಸರ್ತಾಝ್ ಅವರು ಮಗನ ಶವವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ‘ದೇಶದ್ರೋಹಿ ನಮ್ಮ ಮಗನಾಗಿರುವುದಕ್ಕೆ ಸಾಧ್ಯವಿಲ್ಲ, ನಾವು ಭಾರತೀಯರು, ಇಲ್ಲೇ ಹುಟ್ಟಿದ್ದೇವೆ, ನಮ್ಮ ಹಿರಿಯರೂ ಇಲ್ಲೇ ಹುಟ್ಟಿದ್ದರು. ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಾತ ನಮ್ಮ ಮಗನಾಗಲು ಸಾಧ್ಯವಿಲ್ಲ’ ಎನ್ನುವ ಮೂಲಕ ಅವರು ಉಗ್ರರನ್ನು ಬೆಂಬಲಿಸುವವರಿಗೆ ಉತ್ತಮ ಸಂದೇಶ ರವಾನಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.