ಪ್ರತಿ ವರ್ಷ ಫೆಬ್ರವರಿ 28 ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ. ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ – ಹೀಗೆ ಅನೇಕ ಚಟುವಟಿಕೆಗಳನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ದೇಶದ ವಿವಿಧೆಡೆ ಹಮ್ಮಿಕೊಳ್ಳಲಾಗುತ್ತದೆ. ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ.
ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ. ವಿ. ರಾಮನ್ ಅವರ ಅಪೂರ್ವ ಸಾಧನೆಯ ನೆನಪಿನಲ್ಲಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಗುರುತಿಸಲಾಗಿದೆ. ಅವರು 1928 ರ ಫೆಬ್ರವರಿ 28 ರಂದು ‘ರಾಮನ್ ಎಫೆಕ್ಟ್’ ಎಂದೇ ಪ್ರಸಿದ್ಧವಾದ ತಮ್ಮ ಅಧ್ಯಯನದ ವಿವರಗಳನ್ನು ಜಗತ್ತಿಗೆ ತಿಳಿಸಿದ್ದರು. ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಸಿ. ವಿ. ರಾಮನ್ ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್ ಎಂದು. ಅವರು ಜನಿಸಿದ್ದು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ, 1888 ರ ನವೆಂಬರ್ 7ರಂದು. ಅವರ ತಂದೆ ಚಂದ್ರಶೇಖರ ಅಯ್ಯರ್ ಗಣಿತ ಹಾಗೂ ಭೌತವಿಜ್ಞಾನದ ಶಿಕ್ಷಕರಾಗಿದ್ದರು. ನೋಬೆಲ್ ಪ್ರಶಸ್ತಿ ಪಡೆದ ಮತ್ತೋರ್ವ ವಿಜ್ಞಾನಿ ಸುಬ್ರಹ್ಮಣ್ಯಂ ಚಂದ್ರಶೇಖರ್ ಅವರು ಸಿ. ವಿ. ರಾಮನರ ಸ್ವಂತ ಅಣ್ಣನ ಮಗ.
ಅಂದಿನ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಮುಗಿಸಿದ ರಾಮನ್, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಸ್ಥಾನ ಗಳಿಸುವ ಮೂಲಕ ಕಲ್ಕತ್ತೆಯಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಜನರಲ್ ಆಗಿ ನೇಮಕಗೊಂಡರು. ಸರಕಾರದಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಅವರಲ್ಲಿ ವಿಜ್ಞಾನದ ಕಡೆಗಿನ ತುಡಿತ ಹಾಗೆಯೇ ಉಳಿದಿತ್ತು. ಅದರ ಪರಿಣಾಮವಾಗಿ ಅವರು ತಮ್ಮ ಹುದ್ದೆಯನ್ನು ತ್ಯಜಿಸಿ ಕಲ್ಕತ್ತಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದರು, ಮುಂದೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಿರ್ದೇಶಕರಾಗಿ ಬೆಂಗಳೂರಿಗೆ ಬಂದವರು ತಮ್ಮ ಕೊನೆಯ ಉಸಿರಿನ ತನಕ ವಿವಿಧ ಸಂಶೋಧನೆಗಳಲ್ಲಿ ಮಗ್ನರಾಗಿದ್ದರು.
ಇಂತಹ ಮಹಾನ್ ವಿಜ್ಞಾನಿಯನ್ನು ದೇಶದ ಪ್ರತಿಯೊಬ್ಬರಿಗೂ ಪರಿಚಯಿಸಬೇಕು ಭಾರತದ ವೈಜ್ಞಾನಿಕ ಶಕ್ತಿ ಜಗತ್ತಿಗೆ ತಿಳಿಯಬೇಕು ಎಂಬ ಮೂಲ ಉದ್ದೇಶದಿಂದ ಇಂದಿನ ದಿನವನ್ನು ವಿಶೇಷವಾಗಿ ವಿಜ್ಞಾನಿಗಳಿಗೆ ಸಮರ್ಪಿತವಾಗಿದೆ. ಇದರ ಜೊತೆಗೆ ಈ ದೇಶದ ಆರ್ಥಿಕ, ಶೈಕ್ಷಣಿಕ, ಕೈಗಾರಿಕಾಭ್ಯುದಯದ ಆಧಾರ ಸ್ಥಂಭಗಳು.
ಸಿ.ವಿ. ರಾಮನ್ ಕೇವಲ ವಿಜ್ಞಾನಿಗಳಾಗಿರದೆ ಸಮಾಜ ವಿಜ್ಞಾನಿಗಳಾಗಿ ಎಂದು ಕರೆ ನೀಡಿ ಸಮಾಜದ ಅಭ್ಯುದಯಕ್ಕೆ ನಮ್ಮ ದೇಶದ ವಿಜ್ಞಾನಿಗಳು ಶ್ರಮಿಸಲಿ ಭಾರತವನ್ನು ಮತ್ತೆ ತಮ್ಮ ಶಕ್ತಿಯ ಮೂಲಕ ಜಗದ್ಗುರುವನ್ನಾಗಿಸಲಿ ಎಂದು ಆಶಿಸುತ್ತ ಭವ್ಯ ದಿವ್ಯ ಸದೃಢ ಸಮೃದ್ಧಭಾರತವನ್ನು ಕಾಣುವ ಪರಿಕಲ್ಪನೆಯೂ ದಿಟ್ಟ ಸಂಕಲ್ಪವೂ ಹೌದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.