ಮದುವೆ ಆಗದ ಅವೆಷ್ಟೋ ಜೀವಗಳು ಒಂಟಿತನದ ಬದುಕು ಸಾಗಿಸುತ್ತಿವೆ. ಬಾಳ ಸಂಗಾತಿಯೇ ಇಲ್ಲದ ಬದುಕಿಗೆ ಸ್ವಾರಸ್ಯವಾದರೂ ಹೇಗೇ ಬಂದೀತು? ಅದರಲ್ಲೂ ಇದೀಗ ಪರಸ್ಪರ ವಧು ವರರ ಅಪೇಕ್ಷೆಗಳಲ್ಲಿ ಬದಲಾವಣೆಯಾಗಿದ್ದು, ವಯಸ್ಸು ಮೀರಿ ಮದುವೆಯಾಗದೇ ಉಳಿದವರೂ ಇಲ್ಲಿ ಅನೇಕ. ಆದರೆ 79 ವರ್ಷದ ಅವಿವಾಹಿತ ಅಜ್ಜಿಯೊಬ್ಬಳು ಅಪರೂಪದ ಬದುಕಿಗೆ ಮಾದರಿ ಆಗಬಹುದು ಎಂಬುದೇ ಈ ಲೇಖನದ ಆಶಯ.
ಮಹಾರಾಷ್ಟ್ರದ ಪುಣೆ ಇವಳ ವಾಸಸ್ಥಳ. ಇವಳಿಗೆ ಮದುವೆಯೇ ಆಗಿಲ್ಲ. ಕಾರ್ ಡ್ರೈವಿಂಗ್ ಹಾಗೂ ಸ್ಕೂಟರ್ ಓಡಿಸುವುದೆಂದರೆ ಅಜ್ಜಿಗೆ ಬಹು ಇಷ್ಟ. ಪುಣೆಯಲ್ಲಿ ರಸ್ತೆ ಟ್ರಾಫಿಕ್ ನಿಯಂತ್ರಣದಲ್ಲಿ ಪೊಲೀಸರಿಗೆ ಸಹಕರಿಸುವುದು ಇವರ ದಿನನಿತ್ಯದ ಕಾಯಕ. ’ನಿರ್ಧಾರ್’ ಎಂಬ ಟ್ರಸ್ಟ್ ಅಡಿಯಲ್ಲಿ ಕೆಲಸ ಪ್ರಾರಂಭಿಸಿರುವ ಇವರು, 2000ನೇ ಇಸ್ವಿಯಲ್ಲಿ ’ಸ್ಕೂಲ್ ಗೇಟ್ ವಾಲಂಟೀರ್ಸ್’ ಎಂಬ ವಿನೂತನ ಯೋಜನೆಯೊಂದನ್ನು ಪರಿಚಯಿಸುತ್ತಾರೆ. ಪ್ರತಿ ದಿನವೂ ಮೂರು ಶಾಲೆಗಳ ಬಳಿ ಹೋಗುವ ಇವರು, ಮಕ್ಕಳನ್ನು ಟ್ರಾಫಿಕ್ ತೊಂದರೆಯಿಂದ ಹೊರತರುತ್ತಾರೆ.
ಈ ಕುರಿತು ಹ್ಯುಮನ್ಸ್ ಆಫ್ ಪುಣೆ ಎಂಬ ಫೇಸ್ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದು, ಅಜ್ಜಿ ತಾನು ಮದುವೆಯಾಗದ ಕುರಿತು ಚಿಕ್ಕದಾಗಿ ಬರೆದುಕೊಂಡಿದ್ದಾರೆ. ಚಹಾ ಹಿಡಿದುಕೊಂಡು ಹುಡುಗನನ್ನು ನೋಡಲು ಹೋಗುವುದು ಆಗಿನ ಸಂಪ್ರದಾಯವಾಗಿತ್ತು. ಆದರೆ ಅದು ಅಜ್ಜಿಗೆ (ಆಗ ಹದಿಹರೆಯದ ವಧುವೇ ಆಗಿದ್ದಳು ಅಜ್ಜಿ) ಇಷ್ಟವಿರಲಿಲ್ಲ. ಮುಂದೆ ಕೆಲವರನ್ನು ಇಷ್ಟಪಟ್ಟಳಂತೆ, ಆದರೆ ಹೇಳಿಕೊಳ್ಳಲಿಲ್ಲ. ಹೀಗೇ ಕಾಲ ಕಳೆದುಹೋಯಿತು. ಆದರೆ ಸಮಾಜದಲ್ಲಿ ಉತ್ತಮ ಸಂಬಂಧ ಹೊಂದಿದ್ದ ಅಜ್ಜಿಗೆ ಯಾವತ್ತೂ ಒಂಟಿತನ ಕಾಡಲೇ ಇಲ್ಲವಂತೆ.
ಅಜ್ಜಿಯ ಸಾಧನೆ
ಡೈವಿಂಗ್ ಅಜ್ಜಿಗೆ ಬಲು ಪ್ರೀತಿ. ಅನೇಕ ರ್ಯಾಲಿಗಳಲ್ಲಿ ಭಾಗವಹಿಸಿರುವ ಅಜ್ಜಿ, ಅನೇಕ ಬಹುಮಾನ, ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾಳಂತೆ. 1970 ರಲ್ಲಿ ನಾಗಪುರದಿಂದ ಮುಂಬೈಗೆ (896 ಕಿ.ಮೀ) ತನ್ನ ವೆಸ್ಪಾ ಸ್ಕೂಟರ್ನಲ್ಲಿ ತೆರಳಿದ್ದು ಅಜ್ಜಿಯ ಮೊದಲ ರ್ಯಾಲಿಯಂತೆ. ಈ ರ್ಯಾಲಿಯಲ್ಲಿ ಭಾಗವಹಿಸಿದವರಲ್ಲಿ ಇಡೀ ಭಾರತದಲ್ಲಿಯೇ ಅವಳೊಬ್ಬಳೇ ಮಹಿಳೆ. ಹೀಗೇ ಅನೇಕ ಪ್ರದೇಶಗಳಿಗೆ ತನ್ನ ಅಂಬಾಸಿಡರ್ ಹಾಗೂ ಬೈಕ್ ಮೂಲಕ ತೆರಳಿದ್ದು ಉಂಟಂತೆ. ಟ್ರಾಫಿಕ್ ಕಂಟ್ರೋಲ್ ಕೆಲಸದಿಂದ ನಿವೃತ್ತರಾದ ಮೇಲೆ, ಡ್ರೈವಿಂಗ್ಗೆ ಹೆಚ್ಚಿನ ಆದ್ಯತೆ ನೀಡುತ್ತಾಳಂತೆ ಅಜ್ಜಿ.
ಮದುವೆಯಾಗಿಲ್ಲ ಎಂದು ಹುಚ್ಚು ಹಿಡಿಸಿಕೊಂಡವರೆಷ್ಟೋ. ಮದುವೆ ಆಗಿ ಹುಚ್ಚು ಹಿಡಿಸಿಕೊಂಡವರೆಷ್ಟೋ ಗೊತ್ತಿಲ್ಲ. ಆದರೆ ಮದುವೆಯೂ ಜೀವನದ ಒಂದು ಪ್ರಧಾನ ಘಟ್ಟ. ಬದುಕಿನ ಕಷ್ಟ ಸುಖಗಳ ಹಂಚಿಕೆಗೊಂದು ವೇದಿಕೆ ಸಂಸಾರ. ಆದರೆ ಅದೇ ಬದುಕಲ್ಲ. ಅದನ್ನು ಹೊರತುಪಡಿಸಿಯೂ ಜೀವನ ಸಾರ್ಥಕಗೊಳಿಸಬಹುದು ಎಂಬುದಕ್ಕೆ 79 ಹರೆಯದ ಅವಿವಾಹಿತ ಅಜ್ಜಿ ಮಾದರಿಯಾಗಬಲ್ಲರೇ ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.