ಮಂಗಳೂರು : ವಿಶ್ವ ಕೊಂಕಣಿ ಕೇಂದ್ರದಿಂದ ಪ್ರವರ್ತಿತ ವಿದ್ಯಾರ್ಥಿವೇತನ ನಿಧಿಯ ಫಲಾನುಭವಿಗಳಿಂದ ಸ್ಥಾಪಿಸಲಾದ ವಿಶ್ವ ಕೊಂಕಣಿ ಅಲ್ಯುಮ್ನಿ ಸಂಘವು ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಯುವಜನರಿಗಾಗಿ ಪ್ರೇರಣಾ ಎಂಬ ಒಂದು ದಿನದ ಸಮಾವೇಶವನ್ನು ಫೆಬ್ರುವರಿ 18 ರಂದು ಮಂಗಳೂರಿನ ಟಿ.ವಿ.ರಮಣ ಪೈ ಸಭಾಭವನದಲ್ಲಿ ಆಯೋಜಿಸಿದೆ. ವಿಶ್ವ ಕೊಂಕಣಿ ಕೇಂದ್ರದ ವಿಶನ್ ಟಿ.ವಿ.ಎಮ್ ಕಾರ್ಯಕ್ರಮದ ಅಂಗವಾಗಿರುವ ಈ ಸಮಾವೇಶವನ್ನು ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಬ್ರಿಗೇಡಿಯರ್ ಸಿ.ಎಮ್.ಎಫ್. ಪ್ರಭುರವರು ಉದ್ಘಾಟಿಸಲಿದ್ದಾರೆ. ಕೊಕೊಕೋಲಾ ಇಂಡಿಯಾ ಮತ್ತು ಸೌತ್ ವೆಸ್ಟ್ ಏಶಿಯಾದ ಅಧ್ಯಕ್ಷರಾಗಿರುವ ವೆಂಕಟೇಶ ಕಿಣಿಯವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದು ಮುಖ್ಯ ಅತಿಥಿಯಾಗಿ ಸಿ.ಎನ್.ಬಿ.ಸಿ. ಟಿ.ವಿ. 18 ಇದರ ಸಂಪಾದಕಿಯಾಗಿರುವ ಸೋನಿಯಾ ಶೆಣೈ, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಚಿಂತಕ, ಪದ್ಮಶ್ರೀ ಪುರಸ್ಕೃತ ಟಿ.ವಿ.ಮೋಹನದಾಸ ಪೈಯವರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭವು ಜರಗಲಿದೆ. ವಿಶ್ವ ಕೊಂಕಣಿ ಅಲ್ಯುಮ್ನಿ ಸಂಘದ ಅಧ್ಯಕ್ಷ ದಿನೇಶ ಪೈರವರು ಸ್ವಾಗತ ಭಾಷಣ ಮಾಡಲಿರುವರು.
ಒಂದು ವಾರ್ಷಿಕ ಸಮಾವೇಶವನ್ನಾಗಿ ರೂಪಿಸುವ ನಿಟ್ಟಿನಲ್ಲಿ ೨೦೧೫ರಲ್ಲಿ ಪ್ರಾರಂಭಿಸಲಾದ ಪ್ರೇರಣಾವನ್ನು ಪ್ರತಿವರ್ಷ ವಿವಿಧ ಔದ್ಯಮಿಕ ರಂಗಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಆಹ್ವಾನಿಸಿ ಅವರು ತಮ್ಮ್ಮ ಸಾಧನೆಯ ಹಾದಿಯಲ್ಲಿನ ಅನುಭವಗಳನ್ನು ವಿದ್ಯಾರ್ಥಿ ಹಾಗೂ ಯುವಜನರೊಂದಿಗೆ ಹಂಚಿಕೊಳ್ಳಲು ಅನುವಾಗುವಂತೆ ಹಮ್ಮಿಕೊಳ್ಳಲಾಗುತ್ತದೆ.
ಫೆಬ್ರುವರಿ 18 ರಂದು ಜರಗಲಿರುವ ಪ್ರೇರಣಾದ 2017 ರ ಆವೃತ್ತಿಯಲ್ಲಿ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಬ್ರಿಗೇಡಿಯರ್ ಸಿ.ಎಮ್.ಎಫ್. ಪ್ರಭು, ಕೊಕೊಕೋಲಾ ಇಂಡಿಯಾ ಮತ್ತು ಸೌತ್ ವೆಸ್ಟ್ ಏಶಿಯಾದ ಅಧ್ಯಕ್ಷರಾಗಿರುವ ವೆಂಕಟೇಶ ಕಿಣಿ, ಸಿ.ಎನ್.ಬಿ.ಸಿ. ಟಿ.ವಿ. 18 ಇದರ ಸಂಪಾದಕಿಯಾಗಿರುವ ಸೋನಿಯಾ ಶೆಣೈ, ಐ.ಎಫ್.ಎಮ್.ಆರ್ ಕ್ಯಾಪಿಟಲ್ ಸಂಸ್ಥೆಯ ಆಡಳಿತ ನಿರ್ದೇಶಕಿ ಕ್ಷಮಾ ಫೆರ್ನಾಂಡಿಸ್, ನವದೆಹಲಿಯ ಭರೋಸಾ ಕ್ಲಬ್ನ ಸ್ಥಾಪಕ ಪ್ರಕಾಶ ಪೈ, ಮ್ಯಾಜಿಕ್ ಬ್ರಿಕ್ಸ್ ನೌ ಇದರ ಸಂಪಾದಕಿ ಫಾಯೆ ಡಿಸೋಜಾ, ಮಂಗಳೂರಿನ ಏ.ಜೆ. ಹಾಸ್ಪಿಟಲ್ ಇದರ ಯುರಾಲಜಿ ವಿಭಾಗದ ಮುಖ್ಯಸ್ಥರಾಗಿರುವ ಡಾ. ಸುನಿಲ್ ಶೆಣೈರವರುಗಳು ಅವರ ಅನುಭವಗಳಿಂದ ವಿದ್ಯಾರ್ಥಿಗಳು ಹಾಗೂ ಯುವಜನರನ್ನು ಪ್ರೇರೇಪಿಸಲಿದ್ದಾರೆ. ಚಿಂತಕ, ವಾಗ್ಮಿ ಟಿ.ವಿ.ಮೋಹನದಾಸ ಪೈರವರು ಸಮಾರೋಪ ಭಾಷಣವನ್ನು ನೀಡಲಿದ್ದಾರೆ.
ಪ್ರೇರಣಾದ ಪ್ರಯೋಜನವನ್ನು ಎಲ್ಲಾ ಸ್ಥಳೀಯ ವಿದ್ಯಾರ್ಥಿಗಳಿಗೆ ಒದಗಿಸುವ ನಿಟ್ಟಿನಲ್ಲಿ ಯಾವುದೇ ವಿದ್ಯಾರ್ಥಿಗಳೂ ಭಾಗವಹಿಸಲು ಅನುವು ಮಾಡಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಉಚಿತ ಪ್ರವೇಶ ಪತ್ರಗಳಿಗಾಗಿ ಆಯೋಜಕರನ್ನು ಸಂಪರ್ಕಿಸಬಹುದು. ಈ ಕಾರ್ಯಕ್ರಮವನ್ನು ವಿಶ್ವ ಕೊಂಕಣಿ ಅಲ್ಯುಮ್ನಿ ಅಸೋಸಿಯೇಶನ್ ಹಾಗೂ ವಿಶ್ವ ಕೊಂಕಣಿ ಕೇಂದ್ರವು ಆಯೋಜಿಸುತ್ತಿದೆ.
ತಾವು ಪಡೆದುದನ್ನು ಸಮಾಜಕ್ಕೆ ಮತ್ತೆ ನೀಡುವ ಆಶಯದಿಂದ ಪ್ರೇರೇಪಿತವಾಗಿರುವ ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯ ಫಲಾನುಭವಿಗಳಿಂದ ಸ್ಥಾಪಿಸಲಾದ ವಿಶ್ವ ಕೊಂಕಣಿ ಅಲ್ಯುಮ್ನಿ ಅಸೋಸಿಯೇಶನ್ನ ಸದಸ್ಯರು ಇಂದು ವಿಶ್ವದಾದ್ಯಂತ ಅನೇಕ ಕಾರ್ಪೋರೇಟ್ ಸಂಘಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಂಕಣಿ ಭಾಷಿಕ ಸಮುದಾಯವು ಈ ಪ್ರಾಂತ್ಯದ ಸರ್ವತೋನ್ಮುಖ ಅಭಿವೃದ್ಧಿಗೆ ಕಳೆದ ಶತಮಾನದಲ್ಲಿ ವಹಿಸಿದ ಪಾತ್ರದ ಪರಂಪರೆಯನ್ನು ಮುಂದುವರೆಸುತ್ತಾ, ವಿಶ್ವ ಕೊಂಕಣಿ ಅಲ್ಯುಮ್ನಿ ಅಸೋಸಿಯೇಶನ್ ಈ ಪ್ರಾಂತ್ಯದ ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಮತ್ತು ನಾವಿನ್ಯಶೀಲತೆಯನ್ನು ಪ್ರೇರೇಪಿಸುವ ಸಲುವಾಗಿ ಒಂದು ವೇದಿಕೆಯನ್ನು ರೂಪಿಸುವ ನಿಟ್ಟಿನಲ್ಲಿ ಪ್ರೇರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ.
ಪ್ರೇರಣಾದಲ್ಲಿ ಮಾತನಾಡಲಿರುವ ಸಾಧಕರ ಕಿರುಪರಿಚಯ:
1. ಸೋನಿಯಾ ಶೆಣೈ: ಸಿಎನ್ಬಿಸಿ ಟಿವಿಯ ಮೂಲಕ ಔದ್ಯಮಿಕ ವಾರ್ತೆಗಳ ಆಸಕ್ತರಿಗೆ ಚಿರಪರಿಚಿತರಾಗಿರುವ ಸೋನಿಯಾ ಶೆಣೈ ಸುಮಾರು ಐದು ವರ್ಷಗಳಿಂದ ಭಾರತೀಯ ಬಂಡವಾಳ ಮಾರುಕಟ್ಟೆಗೆ ಪರಿಣಾಮ ಬೀರುವ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ವಿದ್ಯಾಮಾನಗಳನ್ನು ವಿಶ್ಲೇಷಿಸುತ್ತಿರುವ ಪ್ರತಿಭಾನ್ವಿತರು. ಭಾರತದಾದ್ಯಂತ ಶೇರುವಿನಿವೇಶಕರಲ್ಲಿ ಜಾಗೃತಿಯನ್ನು ಮೂಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಚಳುವಳಿಯ ಒಂದು ಕ್ರಿಯಾಶೀಲ ಭಾಗವಾಗಿರುವರು.
2. ವೆಂಕಟೇಶ ಕಿಣಿ: ಸೇಲ್ಸ್ ಮತ್ತು ಮಾರ್ಕೆಟಿಂಗ್ ಹಾಗೂ ಆಡಳಿತದಲ್ಲಿ 24 ವರ್ಷಗಳ ಸುದೀರ್ಘ ಅನುಭವವಿರುವ ವೆಂಕಟೇಶ ಕಿಣಿಯವರು ಐಐಎಮ್ ಅಹಮದಾಬಾದ್ ನಿಂದ ಪದವೀಧರರಾದ ಬಳಿಕ ತನ್ನ ಕಾರ್ಪೋರೇಟ್ ಅಭಿಯಾನವನ್ನು ಏಶಿಯನ್ ಪೈಂಟ್ಸ್ ಮತ್ತು ಐಟಿಸಿಗಳಂತಹ ಬೃಹತ್ ಸಂಸ್ಥೆಗಳಿಂದ ಆರಂಭಸಿದವರು. ಪ್ರಸಕ್ತ ಕೊಕೊಕೋಲಾ ಕಂಪನಿಯ ಭಾರತ, ಬಾಂಗ್ಲಾದೇಶ, ಭೂತಾನ, ಮಾಲ್ದೀವ್ಸ್, ನೇಪಾಲ್ ಮತ್ತು ಶ್ರೀಲಂಕಾಗಳನ್ನೊಳಗೊಂಡ ಭಾರತ ಮತ್ತು ನೈಋತ್ಯ ಏಶಿಯಾ ವ್ಯವಹಾರ ವಿಭಾಗದ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಪಾನೀಯ ವ್ಯಾಪಾರ ರಂಗದ ಅನೇಕ ಸಂಘಟನೆಗಳಲ್ಲೂ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
3. ಪ್ರಕಾಶ ಪೈ: ಭಾರತೀಯ ಆರ್ಥಿಕ ಮತ್ತು ಪಾವತಿ ಸಾಫ್ಟವೇರ್ ರಂಗದಲ್ಲಿ ಸುಮಾರು 25 ವರ್ಷಕ್ಕೂ ಮೀರಿದ ಅನುಭವವಿರುವ ಪ್ರಕಾಶ ಪೈಯವರನ್ನು ಪಾವತಿ ತಂತ್ರಜ್ಞಾನರಂಗದ ಒಬ್ಬ ಸ್ಥಾಪಕ ಸದಸ್ಯನೆಂದು ಕರೆಯಬಹುದು. ಐಐಟಿ ದೆಹಲಿಯಿಂದ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ ನ್ಯೂಕ್ಲಿಯಸ್ ಸಾಫ್ಟವೆರ್ ಸಂಸ್ಥೆಯನ್ನು ಸೇರಿ ಸಂಸ್ಥೆಯು ಆರ್ಥಿಕ ತಂತ್ರಜ್ಞಾನರಂಗದ ಮುಂಚೂಣಿಗೇರುವಲ್ಲಿ ಇವರು ಸಹಕಾರಿಯಾದರು. ಆಬಳಿಕ ನೋಕಿಯಾ ಕಂಪನಿಯ ಮೊಬೈಲ್ ವ್ಯಾಲೆಟ್ ವಿಭಾಗವನ್ನು ಪ್ರಾರಂಭಿಸಿ ಲಾಭದಾಯಕವಾಗಿಸಿದರು. ಪ್ರಸಕ್ತ ಪ್ರಕಾಶ ಪೈಯವರು ಒಂದು ಸ್ಟಾರ್ಟಪ್ ಸಂಸ್ಥೆಯ ಸಹಸ್ಥಾಪಕರಾಗಿ ಜನಸಾಮಾನ್ಯರ ಬಳಿಗೆ ಆರ್ಥಿಕ ಸೇವೆಗಳನ್ನು ಒಯ್ಯುವ ಉದ್ದೇಶವನ್ನಿಟ್ಟುಕೊಂಡ ಆಧುನಿಕ ರೋಬೊ ಅಡ್ವಾಯ್ಸರಿ ರಂಗದ ಏಳಿಗಾಗಿ ಶ್ರಮಿಸುತ್ತಿದ್ದಾರೆ.
4. ಡಾ. ಸುನಿಲ್ ಶೆಣೈ: ಎಫ್ಎಮ್ಸಿ ಪುಣೆಯಲ್ಲಿ ವೈದ್ಯಕೀಯ ಪದವಿಯ ಬಳಿಕ ಪಿಜಿಐಎಮ್ಆರ್ ಚಂಡೀಗಢದಲ್ಲಿ ಎಂ.ಎಸ್. ಹಾಗೂ ದೆಹಲಿಯ ಏಐಐಎಮ್ಎಸ್ ನಲ್ಲಿ ಎಮ್.ಸಿಎಚ್. ಪದವಿಗಳನ್ನು ಹೊಂದಿರುವ ಡಾ. ಸುನಿಲ್ ಶೆಣೈಯವರು ಮಣಿಪಾಲದ ಕೆ.ಎಂ.ಸಿ. ಹಾಗೂ ಮಂಗಳೂರಿನ ಫಾದರ್ ಮುಲ್ಲರ್ಸ್ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿದ ಬಳಿಕ ಪ್ರಸಕ್ತ ಏ.ಜೆ. ಆಸ್ಪತ್ರೆಯ ಯುರಾಲಜಿ ವಿಭಾಗದ ಮುಖ್ಯಸ್ಥರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
5. ಫಾಯೆ ಡಿಸೋಜಾ: ಭಾರತದ ಮೊದಲ 24/7 ನಾಗರಿಕ ಗೃಹನಿರ್ಮಾಣೋದ್ಯಮದ ಚ್ಯಾನೆಲ್ ಆಗಿರುವ ಮ್ಯಾಜಿಕ್ ಬ್ರಿಕ್ಸ್ ನೌ ಇದರ ಸಂಪಾದಕಿ ಹಾಗೂ ಇಟಿ ನೌ ಚ್ಯಾನಲ್ನ ಪರ್ಸನಲ್ ಫಿನಾನ್ಸ್ ಮತ್ತು ರಿಯಲ್ ಎಸ್ಟೇಟ್ ವಿಭಾಗದ ಸಂಪಾದಕಿಯಾಗಿರುವ ಫಾಯೆ ಡಿ’ಸೊಜಾ ಪತ್ರಕರ್ತೆಯಾಗಿ, ಪ್ರಸ್ತುತಿಕಾರಿಣಿಯಾಗಿ ಹಾಗೂ ಆರ್ಥಿಕ ಹೂಡಿಕೆಯ ಸಲಹೆಗಾರರಾಗಿ 14 ವರ್ಷಕ್ಕೂ ಮಿಕ್ಕಿದ ಅನುಭವವನ್ನು ಹೊಂದಿರುವವರು.
6. ಕ್ಷಮಾ ಫೆರ್ನಾಂಡಿಸ್: ತಮ್ಮ ಬಿಎಸ್ಸಿ ಪದವಿ, ಎಂಬಿಎ ಮತ್ತು ಪಿಹೆಚ್ಡಿಯನ್ನು ಗಳಿಸಿದ ಬಳಿಕ ಕ್ಷಮಾ ಫೆರ್ನಾಂಡಿಸ್ ಗೋವಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್ನಲ್ಲಿ ಉಪನ್ಯಾಸಕಿಯಾಗಿ ತಮ್ಮ ವೃತ್ತಿಯನ್ನು ಆರಂಭಿಸಿದವರು. ತಮ್ಮ ಆಸಕ್ತಿಯ ಆರ್ಥಿಕ ವಿನಿಯೋಗ ರಂಗದಲ್ಲಿ ಐಎಫ್ಎಂ, ಸಿಎಮ್ಇ, ಎನ್ಎಸ್ಇಐಟಿ ಮತ್ತು ಹಣಕಾಸು ಇಲಾಖೆಯಲ್ಲಿ ಸಲಹೆಗಾರರಾಗಿ ಸೇವೆಯನ್ನು ಸಲ್ಲಿಸಿದರು. ಆ ಬಳಿಕ ಅವರು ಐಎಫ್ಎಮ್ಆರ್ ಕ್ಯಾಪಿಟಲ್ ಎಂಬ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಒಡನಾಡಿಯಾದರು. ಪ್ರಸಕ್ತ ಈ ಸಂಸ್ಥೆಯ ಆಡಳಿತ ನಿರ್ದೇಶಕಿಯಾಗಿರುವ ಕ್ಷಮಾ ಫೆರ್ನಾಂಡಿಸ್ ಇದುವರೆಗೆ 5 ಬಿಲಿಯ ಡಾಲರ್ಗಳಿಗೂ ಅಧಿಕ ವಿತರಣೆಯಲ್ಲಿ ನಿರ್ಣಾಯಕರಾಗಿದ್ದು ನೂರು ಮಿಲಿಯ ಡಾಲರ್ಗೂ ಅಧಿಕ ಬಂಡವಾಳವನ್ನು ವಿಶ್ವದ ಪ್ರಸಿದ್ಧ ಹೂಡಿಕೆ ಸಂಸ್ಥೆಗಳಿಂದ ಸಂಗ್ರಹಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ.
7. ಶ್ರೀ ಟಿ.ವಿ.ಮೋಹನದಾಸ ಪೈ: ಅಕ್ಷಯಪಾತ್ರೆ, ಬಿಪ್ಯಾಕ್ ಮುಂತಾದ ಯೋಜನೆಗಳ ಮೂಲಕ ಶಿಕ್ಷಣ, ಸಾರ್ವಜನಿಕ ಸವಲತ್ತುಗಳು ಮತ್ತು ಸಾರ್ವಜನಿಕ ಅಭಿಪ್ರಾಯಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿರುವ ಶ್ರೀ ಟಿ.ವಿ. ಮೋಹನದಾಸ್ ಪೈ ರವರು ಭಾರತದಲ್ಲಿ ಉದ್ಯಮಶೀಲತೆಯ ಉತ್ತೇಜನೆಯನ್ನು ಪ್ರತಿಪಾದಿಸುತ್ತಾರೆ. ಭಾರತವನ್ನು ಸ್ಟಾರ್ಟಪ್ ಕ್ಯಾಪಿಟಲ್ ಆಗಿ ರೂಪಿಸುವಲ್ಲಿ ಯುವಜನತೆಯು ನಿರ್ಣಾಯಕ ಪಾತ್ರವನ್ನು ವಹಿಸಲಿದೆ ಎಂದು ಧೃಡವಾಗಿ ನಂಬುವ ಮೋಹನದಾಸ ಪೈ ಇದರಿಂದ ದೇಶದ ಅಭಿವೃದ್ಧಿಯ ಗತಿಯು ಹೆಚ್ಚಲಿದೆ ಎಂದು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.