ಕೊನೆಗೂ ಅಸಲಿಯತ್ತು ತೋರಿಸಿದ ಪನ್ನೀರ್ ಸೆಲ್ವಂ, ಶತಾಯ ಗತಾಯ ಅಧಿಕಾರದ ಕುರ್ಚೆ ಏರಲೇಬೇಕು ಎಂದು ರೆಸಾರ್ಟ್ ರಾಜಕಾರಣಕ್ಕೂ ಸೈ ಎಂದ ಅಮ್ಮನ ಆಪ್ತೆ ಶಶಿಕಲಾ, ಸಿಕ್ಕಿದ್ದೇ ಅವಕಾಶವೆಂದು ಅಲ್ಲಿಲ್ಲಿ ಕಾಣಿಸಿಕೊಂಡ ಶಾಸಕರು. ಇನ್ನೇನು ಕುರ್ಚಿ ಆಟ ಅಂತಿಮ ಹಣಾಹಣಿಗೆ ಬಂದು ನಿಂತಾಗ, ಕರ್ನಾಟಕದ ಮೇಲ್ಮನವಿಗೆ ಸ್ಪಂದಿಸಿದ ಸುಪ್ರೀಂ ಶಶಿಕಲಾ ಅವರಿಗೆ ಜೈಲು ಶಿಕ್ಷೆ ಕರುಣಿಸಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ತಪ್ಪಿತಸ್ಥೆ ಎಂದು ನಿರ್ಣಯವಾಗಿದ್ದೇ ತಡ ಸಿಎಂ ಆಗುವ ಅವರ ಕನಸು ನುಚ್ಚು ನೂರಾಗಿದೆ. ಪರಿಣಾಮ ಪನ್ನೀರ್ ಸೆಲ್ವಂ ಅವರನ್ನು ಪಕ್ಷದ ಪ್ರಾಥಮಿಕ ಸ್ಥಾನದಿಂದಲೇ ವಜಾ ಮಾಡಿದ್ದಾರೆ ಶಶಿಕಲಾ. ಎಡಪ್ಪಾಡಿ ಕೆ. ಪಳನಿ ಸ್ವಾಮಿ ಅವರನ್ನು ಶಾಸಕಾಂಗ ಸಭೆಯ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಶಶಿಕಲಾ ಅವರ ಅನುಪಸ್ಥಿತಿಯಲ್ಲಿ ಪಕ್ಷ ಮುನ್ನಡೆಸುವ ಜವಾಬ್ದಾರಿಯನ್ನು ಜಯಲಲಿತಾ ಅವರ ಸಹೋದರ ಜೆ.ದೀಪಕ್ ಅವರಿಗೆ ನೀಡುವ ಲಕ್ಷಣಗಳು ಗಾಢವಾಗಿವೆ.
ತಮಿಳುನಾಡಿನ ಪ್ರಸ್ತುತ ರಾಜಕೀಯ ಬೆಳವಣಿಗೆಗೆ ವಿಭಿನ್ನ ಆಯಾಮಗಳಿವೆ. ರಾಷ್ಟ್ರೀಯ ಪಕ್ಷಗಳಿಗೆ ಸದಾ ಸೆಡ್ಡು ಹೊಡೆಯುತ್ತಲೇ ಇದ್ದ ನೆಲದಲ್ಲೀಗ ಬದಲಾವಣೆಯ ಕುರುಹು ಕಂಡು ಬಂದಿದೆ. ಸಡಿಲವಾದ ಪ್ರಾದೇಶಿಕ ಪಕ್ಷಗಳ ಅಡ್ಡಾದಲ್ಲಿ ರಾಷ್ಟ್ರೀಯ ಪಕ್ಷಗಳು ತಳವೂರಲು ಇನ್ನಿಲ್ಲದ ಕಸರತ್ತು ನಡೆಸಿವೆ ಎನ್ನಲಾಗಿದೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ನಟರಾಜನ್ ಅವರ ವಿರುದ್ಧ ಆದಾಯ ಮೀರಿದ ಆಸ್ತಿ ಕುರಿತ ಪ್ರಕರಣದ ತೀರ್ಪನ್ನು ಇಡೀ ದೇಶವೇ ಕುತೂಹಲದಿಂದ ಕಾಯುತ್ತಿತ್ತು. ತೀರ್ಪಿನ ಪರಿಣಾಮ ಮತ್ತೆ 4 ವರ್ಷ ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುವ ಸರದಿ ಶಶಿಕಲಾ ಪಾಲಿಗೆ ಬಂದಿದೆ ಎನ್ನಬಹುದು. ಶಶಿಕಲಾ ಜೊತೆ ಸುಧಾಕರನ್ ಹಾಗೂ ಇಳವರಸಿಯೂ ಜೈಲು ಸೇರಲಿದ್ದಾರೆ.
ಕರ್ನಾಟಕದ ಹೈಕೋರ್ಟ್ ಶಶಿಕಲಾ ಅವರನ್ನು ದೋಷಮುಕ್ತಗೊಳಿಸಿ 2015ರಲ್ಲಿ ಆದೇಶಿಸಿತ್ತು. ಈ ಆದೇಶದ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿತ್ತು. ಜಯಲಲಿತಾ ಮತ್ತು ಶಶಿಕಲಾ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪಿನಲ್ಲಿ ಲೋಪವಾಗಿದೆ ಎಂದು ಅಂದಿನ ಸರ್ಕಾರಿ ಪರ ಅಭಿಯೋಜಕ ಬಿ.ವಿ.ಆಚಾರ್ಯ ಹೇಳಿದ್ದರು. ಅವರ ಸಲಹೆ ಮೇರೆಗೆ ಕರ್ನಾಟಕ ಸರ್ಕಾರ ತಮಿಳುನಾಡಿನ ವಿರೋಧದ ನಡುವೆಯೂ ಸುಪ್ರೀಂನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ಕರ್ನಾಟಕದ ಜೀವನದಿ ಕಾವೇರಿ ವಿವಾದದಲ್ಲಿ ಸದಾ ಮೈಲುಗೈ ಸಾಧಿಸುತ್ತಲೇ ಆಗಾಗ ಕ್ಯಾತೆ ತೆಗೆಯುತ್ತಿದ್ದ ತಮಿಳುನಾಡಿನ ರಾಜಕೀಯ ಚದುರಂಗದಾಟಕ್ಕೆ ಇದೀಗ ಪರೋಕ್ಷವಾಗಿ ಕರ್ನಾಟಕದ ನಡೆ ಶಾಕ್ ಕೊಟ್ಟಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.