2001 ರಿಂದ 2017 ರ ಜನವರಿ ಅವಧಿಯಲ್ಲಿ ಒಟ್ಟು 304 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಸ್ಸಾಂ ಸರ್ಕಾರ, ಎಜಿಪಿ ಶಾಸಕ ರಾಮೇಂದ್ರ ನಾರಾಯಣ್ ಕಲಿತಾ ಅವರಿಗೆ ಸಲ್ಲಿಸಿದ ಲಿಖಿತ ಹೇಳಿಕೆಯಲ್ಲಿ ತಿಳಿಸಿದೆ.
ಈ ಕುರಿತು ಆಂಗ್ಲ ಅಂತರ್ಜಾಲ ಮಾಧ್ಯಮವೊಂದು ವರದಿ ಮಾಡಿದೆ. ಪ್ರತಿ ತಿಂಗಳಿಗೆ ಒಬ್ಬರಂತೆ ಅಸ್ಸಾಂನಲ್ಲಿ ಇದುವರೆಗೂ 304 ಜನ ವಿದ್ಯಾರ್ಥಿಗಳು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ತಜ್ಞರ ಪ್ರಕಾರ, ಪೋಷಕರ ಅತಿಯಾದ ನಿರೀಕ್ಷೆ, ಶೈಕ್ಷಣಿಕ ಒತ್ತಡಗಳೇ ಆತ್ಮಹತ್ಯೆಗೆ ಮೂಲ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪೋಷಕರೊಂದಿಗಿನ ಸಂಬಂಧ, ಪ್ರೇಮ ಸಂಬಂಧಗಳೂ ಅಲ್ಲದೇ, ಕೆಲವು ಕ್ಷುಲ್ಲಕ ಕಾರಣಗಳಿಗೂ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
2015 ರಲ್ಲಿ ಆಕಸ್ಮಿಕ ಹಾಗೂ ಆತ್ಮಹತ್ಯೆ ಕುರಿತಂತೆ ದಿ ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯುರೋ (ಎನ್ಸಿಆರ್ಬಿ)ದ ಇತ್ತೀಚಿನ ವರದಿ ಪ್ರಕಾರ, 18 ರಿಂದ 30 ವರ್ಷದೊಳಗಿನ ಯುವಜನತೆ ಹೆಚ್ಚು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ. 32.8 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಕಾರಣ ತಮ್ಮ ಜೀವಕಳೆದುಕೊಂಡಿದ್ದಾರೆ. ಅದರಲ್ಲೂ ಹೆಚ್ಚಾಗಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ವರದಿ ಹೇಳಿದೆ.
ಎನ್ಸಿಆರ್ಬಿ ಪ್ರಕಾರ, 2015 ರಲ್ಲಿ 14 ವರ್ಷ ವಯಸ್ಸಿಗಿಂತ ಕೆಳಗಿನವರು 790 ವಿದ್ಯಾರ್ಥಿಗಳು, 678 ವಿದ್ಯಾರ್ಥಿನಿಯರು, 14 ರಿಂದ 18 ವರ್ಷ ವಯಸ್ಸಿನವರಲ್ಲಿ 3672 ಹುಡುಗರು ಹಾಗೂ 4268 ಹುಡುಗಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪಂಕಜ್ ಬರ್ಮನ್ ಎಂಬ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ರೈಲು ಹಳಿಗೆ ಬಿದ್ದು ಜೀವಕಳೆದುಕೊಂಡಿದ್ದು ಅವನಿಗಿದ್ದ ಪರೀಕ್ಷಾ ಒತ್ತಡಕ್ಕೆ ಸಾಕ್ಷಿ ಎನ್ನಲಾಗಿದೆ. ಮನೋವೈದ್ಯ ಜಯಂತ ದಾಸ್ ಅವರು ಹೇಳುವಂತೆ, ಶೇ.55 ರಷ್ಟು ಆತ್ಮಹತ್ಯೆಗಳು ಮಾನಸಿಕ ಖಿನ್ನತೆಯಿಂದ ಉಂಟಾಗುತ್ತವೆ. ಅಲ್ಲದೇ ಆತ್ಮಹತ್ಯೆಗೆ ಅನೇಕ ಕಾರಣಗಳಿದ್ದು ಅತಿಯಾದ ಸ್ಪರ್ಧಾತ್ಮಕ ಮನೋಭಾವ ಹಾಗೂ ಪೋಷಕರ ನಿರೀಕ್ಷೆಗಳನ್ನು ನಾವು ಅಲ್ಲಗಳೆಯುವಂತಿಲ್ಲ ಎಂದಿದ್ದಾರೆ.
ಆಪ್ತಸಮಾಲೋಚನೆ ಮೂಲಕ ಈ ರೀತಿಯ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಬಹುದು ಎಂದು ಡಾ.ದಾಸ್ ಅಭಿಪ್ರಾಯಪಟ್ಟಿದ್ದಾರೆ. ಇಂದು ಅವೆಷ್ಟೋ ಶಾಲೆಗಳಲ್ಲಿ ಆಪ್ತ ಸಮಾಲೋಚಕರೇ ಇಲ್ಲದಿರುವುದು ಮಾತ್ರ ವಿಪರ್ಯಾಸ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.