ಕರಂಗಲ್ಪಾಡಿ: ಸ್ಥಳೀಯ ನಾಗರೀಕರು ಹಾಗೂ ಆಟೋ ಚಾಲಕರು ಇಂದು ಕರಂಗಲ್ಪಾಡಿ ಕೂಡು ರಸ್ತೆ ಹಾಗೂ ಸಿ ಜೆ ಕಾಮತ್ ರಸ್ತೆಯಲ್ಲಿ ಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ದಿನಾಂಕ 05-02-2017 ರಂದು ಭಾನುವಾರ ಬೆಳಿಗ್ಗೆ 7.30 ಕ್ಕೆ ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ತದನಂತರ ಸ್ವಚ್ಛ ಕರಂಗಲ್ಪಾಡಿ ತಂಡದ ಮುಖ್ಯಸ್ಥರಾದ ಶ್ರೀ ವಾಸುದೇವ ಎಂ ಆರ್ ನೇತೃತ್ವದಲ್ಲಿ ಸುಮಾರು 60 ಜನರ ತಂಡವನ್ನು ಎರಡು ವಿಭಾಗಗಳಾಗಿ ವಿಂಗಡಿಸಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು. ಸ್ಥಳೀಯ ನಾಗರೀಕರು ಸಿ ಜೆ ಕಾಮತ್ ರಸ್ತೆಯಲ್ಲಿ ಸ್ವಚ್ಛತೆ ಕೈಗೊಂಡರೆ ಆಟೋ ಚಾಲಕರು ಶ್ರೀ ಸತ್ಯನಾರಾಯಣ ಕೆ ವಿ ಮಾರ್ಗದರ್ಶನದಲ್ಲಿ ಕರಂಗಲ್ಪಾಡಿ ಜಂಕ್ಷನ್ ಹಾಗೂ ಮಾರ್ಕೆಟ್ ಬಳಿ ಸ್ವಚ್ಛತೆ ಮಾಡಿದರು. ಕುಡ್ಪಿ ವಿದ್ಯಾ ಶೆಣೈ, ಶ್ರೀಮತಿ ಲಿಲಿ ಪಿಂಟೋ, ಡಾ. ಆನೂಸೂಯಾ ಸೇರಿದಂತೆ ಅನೇಕ ಗೃಹಿಣಿಯರು ಸ್ವಚ್ಛತಾ ಕಾರ್ಯಕಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಕರ್ನಾಟಕ ಪಾಲಿಟೆಕ್ನಿಕ್: ಕೆಪಿಟಿ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಕೆಪಿಟಿ ಪರಿಸರದಲ್ಲಿ ಸ್ವಚ್ಛತೆ ಕೈಗೊಂಡರು. ಸ್ವಚ್ಛ ಮಂಗಳೂರು ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಹಾಗೂ ಎನ್ನೆಸ್ಸೆಸ್ ಅಧಿಕಾರಿ ಶ್ರೀ ಸಂತೊಷಕುಮಾರ್ ಪಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ಉಪನ್ಯಾಸಕ ಶ್ರೀ ಸುರಜ್ ಪಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮೂರು ಗುಂಪುಗಳಾಗಿ ವಿಂಗಡಿಸಿಕೊಂಡು ಸ್ವಚ್ಛತೆಯನ್ನು ಕೈಗೊಂಡರು. ಮೊದಲ ಗುಂಪು ಕೆಪಿಟಿ ವೃತ್ತವನ್ನು ಶುಚಿಗೊಳಿಸಿತು. ಎರಡನೇ ತಂಡ ಕಾಲೇಜಿನ ಆವರನ ಗೋಡೆಯ ಸುತ್ತಮುತ್ತ ಬೆಳೆದಿದ್ದ ಹುಲ್ಲನ್ನು ಕತ್ತರಿಸಿ ತೆಗೆದು ಶುಚಿಗೊಳಿಸಿತು. ಮೂರನೇ ಗುಂಪು ಏರಪೋರ್ಟ್ ರಸ್ತೆಯಲ್ಲಿ ಸ್ವಚ್ಛತೆಯನ್ನು ಕೈಗೊಂಡಿತು. ವಿದ್ಯಾರ್ಥಿಗಳಾದ ರಾಜೇಂದ್ರ ಡಿ ಎಸ್, ಜಿತೇಶ್ ಹಾಗೂ ಪ್ರತೀಕ್ಷಾ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಸ್ವಯಂ ಸ್ಫೂರ್ತಿಯಿಂದ ಅಭಿಯಾನದಲ್ಲಿ ಭಾಗವಹಿಸಿದರು.
ಜೆಪ್ಪು: ಭಗಿನಿ ಸಮಾಜ ಹಾಗೂ ಸ್ಥಳಿಯ ನಾಗರಿಕರ ಸಹಭಾಗಿತ್ವದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಯಮಿ ಶ್ರೀ ಬಿ ಸುಧಾಮಣಿ ಹಾಗೂ ಶಿಕ್ಷಕಿ ಶ್ರೀಮತಿ ಗ್ರೇಸಿ ರೋಚಿ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮೀ ಮಾರ್ಗದರ್ಶನದಲ್ಲಿ ಭಗಿನಿ ಸಮಾಜದ ವಿದ್ಯಾರ್ಥಿಗಳು ಜೆಪ್ಪು ಮಾರ್ಕೆಟ್ ವೃತ್ತ, ಮೋರ್ಗನ್ಸ್ ಗೇಟ್ ಹಾಗೂ ಭಗಿನಿ ಸಮಾಜದ ಮುಂಭಾಗದ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಅಲ್ಲದೇ ಸಂಯೋಜಕಿ ಶ್ರೀಮತಿ ರತ್ನ ಆಳ್ವ ನೇತೃತ್ವದಲ್ಲಿ ಸುಮಾರು 350 ಮನೆಗಳಿಗೆ ತೆರಳಿ ಸ್ವಚ್ಛತೆಯ ಜಾಗೃತಿ ಕರಪತ್ರ ವಿತರಿಸಿದರು. ಭಗಿನಿ ಸಮಾಜದ ಅಕ್ಕಪಕ್ಕದ ಗೋಡೆಗಳಿಗೆ ಅಂಟಿಸುತ್ತಿದ್ದ ಭಿತ್ತಿಪತ್ರಗಳನ್ನು ಕಿತ್ತು ಬಣ್ಣ ಬಳಿಯಲಾಗಿದೆ. ಮುಂದಿನ ಬಾರಿ ಅದರ ಮೇಲೆ ಸ್ವಚ್ಛತೆಯ ಕುರಿತಂತೆ ಸುಂದರ ಚಿತ್ರ ಬರೆದು ಅಂದಗೊಳಿಸುವ ಕಾರ್ಯ ನಡೆಯಲಿದೆ. ಶ್ರೀ ಸುರೇಶ್ ಶೆಟ್ಟಿ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿದರು.
ಕೋಟೆಕಾರ್ : ಅಯ್ಯಪ್ಪ ಭಜನಾ ಮಂದಿರದ ಸದಸ್ಯರಿಂದ ಕೋಟೆಕಾರ್ ಜಂಕ್ಷನ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಗುರುಸ್ವಾಮಿ ಶ್ರೀ ಲಿಂಗಪ್ಪ ಗಟ್ಟಿ ಹಾಗೂ ಸೋಮೇಶ್ವರ ತಾಲೂಕ ಪಂಚಾಯತ್ ಸದಸ್ಯ ಶ್ರೀ ರವಿಶಂಕರ್ ಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಕೋಟೆಕಾರ್ ಜಂಕ್ಷನ್ ಪರಿಸರ ಹಾಗೂ ಅಲ್ಲಿರುವ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿದರು. ಶ್ರೀ ಜಿತೇಂದ್ರ ಕಾರ್ಯಕ್ರಮವನ್ನು ಸಂಯೋಜಿಸಿದರು.
ಸ್ವಚ್ಛ ಪುತ್ತೂರು : ರಾಮಕೃಷ್ಣ ಮಿಷನ್ ಆಯೋಜಿಸುತ್ತಿರುವ ಸ್ವಚ್ಛ ಪುತ್ತೂರು ಇಂದು ಬೋಳುವಾರ್ ಜಂಕ್ಷನ್ನಿನಲ್ಲಿ ಜರುಗಿತು. ಮಕ್ಕಳ ಹಕ್ಕು ಹೋರಾಟಗಾರ ನಿರ್ದೇಶಕ ಶ್ರೀ ಅಬ್ದುಲ್ ಖಾದರ್ ಹಾಗೂ ಉಪನ್ಯಾಸಕಿ ಹರಿಣೀ ಪುತ್ತೂರಾಯ ಅಭಿಯಾನಕ್ಕೆ ಚಾಲನೆ ನೀಡಿದರು. ಬೋಳುವಾರ ಮೂರೂ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಅಲ್ಲಿದ್ದ ಚರಂಡಿಗಳನ್ನು ಸ್ವಚ್ಛಗೊಳಿಸಿ ಅಲ್ಲಲ್ಲಿ ಕಿತ್ತುಹೊಗಿದ್ದ ಚರಂಡಿಯನ್ನು ಹೊಸ ಕಲ್ಲಿನ ಸ್ಲಾಬ್ ಬಳಸಿ ಮುಚ್ಚಲಾಯಿತು. ಶ್ರೀ ಪದ್ಮನಾಭ ಪ್ರಭು ಮತ್ತು ಶ್ರೀ ಶಿವಪ್ರಸಾದ್ ಭಟ್ ಸೇರಿದಂತೆ ಸುಮಾರು ೮೫ ಜನರು ಸ್ವಚ್ಛತೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಶ್ರೀ ಕೃಷ್ಣ ಉಪಾಧ್ಯಾಯ ಹಾಗೂ ಶ್ರೀ ಶ್ಯಾಮ್ ಸುದರ್ಶನ್ ಭಟ್ ಹೊಸಮೂಲೆ ಅಭಿಯಾನವನ್ನು ಸಂಯೋಜಿಸಿದರು.
ವಿಶೇಷ ಕಾರ್ಯ : ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ 200 ಅಭಿಯಾನಗಳನ್ನು ಯಶಸ್ವಿಯಾಗಿ ಪೂರೈಸಿದ ನೆನಪಿಗಾಗಿ ಹಂಪಣಕಟ್ಟೆ ಸಿಗ್ನಲ್ ನಿಂದ ಕ್ಲಾಕ್ ಟವರ್ ವರೆಗಿನ ಒಂದು ಸಾವಿರ ಅಡಿಗೂ ಮಿಕ್ಕಿದ ಉದ್ದದ ಗೋಡೆಗೆ ಕಲರ್ ಫುಲ್ ಪೇಂಟಿಂಗ್ ಮಾಡಿ ನಗರದ ಅಂದವನ್ನು ಹೆಚ್ಚಿಸುವ ಕಾರ್ಯ ಭರದಿಂದ ಸಾಗಿದೆ. ಆದಿತತ್ತ್ವ ಆರ್ಟ್ ಸಹಯೋಗದಲ್ಲಿ ಕಳೆದೆರಡು ದಿನಗಳಿಂದ ಕಲಾವಿದರಾದ ಶ್ರೀ ವಿಕ್ರಮ ಶೆಟ್ಟಿ ಹಾಗೂ ಶ್ರೀ ಶೈಲೇಶ್ ಕೋಟ್ಯಾನ್, ಮಹಾಲಸಾ ಆರ್ಟ್ ಸ್ಕೂಲ್ ನ ಸುಮಾರು 25 ಜನ ಸಹ ಕಲಾವಿದರೊಂದಿಗೆ ಗೋಡೆಗಳನ್ನು ಸ್ವಚ್ಛಗೊಳಿಸಿ, ಸುಂದರ ಚಿತ್ರ ಬರೆದು ಅಂದಗೊಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಕರಾವಳಿಯ ಸಂಸ್ಕೃತಿ, ಶಿಕ್ಷಣ, ಪರಿಸರ, ಸ್ವಚ್ಚತೆ, ಅರೋಗ್ಯ ಮತ್ತಿತರ ವಿಷಯಗಳನ್ನಾಧರಿಸಿ ಕ್ರಿಯಾತ್ಮಕವಾಗಿ ಚಿತ್ರಗಳನ್ನು ಬಿಡಿಸಲಾಗುತ್ತಿದೆ. ಮುಂದಿನ ವಾರ ನಡೆಯುವ 200 ಅಭಿಯಾನದ ಆಚರಣೆಯ ಹೊತ್ತಿಗೆ ಸಂಪೂರ್ಣಗೊಳ್ಳಲಿದೆ. ಈ ಅಭಿಯಾನಕ್ಕೆ ಎಂಆರ್ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಧನ ಸಹಾಯ ನೀಡಿ ಪ್ರೋತ್ಸಾಹಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.