ಮಂಗಳೂರು: ಏಳು ರಾಜ್ಯಗಳಲ್ಲಿ 82 ದಿನಗಳ ಕಾಲ ಸಂಚರಿಸಿದ ಮಂಗಲ ಗೋಯಾತ್ರೆಯ ಮಹಾ ಮಂಗಲ ಕಾರ್ಯಕ್ರಮ ಜ27 ರಿಂದ 29 ರವರೆಗೆ ಮಂಗಳೂರಿನಲ್ಲಿ ನಡೆಯಲಿದೆ.
ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು. ದೇಶೀಯ ಗೋತಳಿಗಳ ಸಂರಕ್ಷಣೆಯ ದಿಶೆಯಲ್ಲಿ ಕೈಗೊಂಡ ಗೋ ಯಾತ್ರೆ 11 ಸಾವಿರ ಕಿಮೀ ಕ್ರಮಿಸಿದೆ. ಈ ಯಾತ್ರೆಯುದ್ಧಕ್ಕೂ ಹಿಂದೂ, ಮುಸ್ಲಿಂ, ಕ್ರೈಸ್ತ ಹಾಗೂ ರಾಜಕೀಯವಾಗಿ ಪಕ್ಷಭೇದ ಮರೆತು ಬೆಂಬಲ ವ್ಯಕ್ತವಾಗಿದೆ. ದೇಶದಲ್ಲಿ ಗೋಹತ್ಯೆಯನ್ನು ನಿಷೇಧಿಸಬೇಕು ಗೋವಂಶವನ್ನು ಉಳಿಸಬೇಕು. ಈ ಮಂಗಲ ಯಾತ್ರೆಯ ಮೂಲಕ ಸರ್ಕಾರಕ್ಕೆ, ಸಮಾಜಕ್ಕೆ ಗೋವನ್ನು ಕಾಪಾಡುವ ಸಂದೇಶ ಹೋಗಬೇಕು. ಗೋಮಾಂಸ ರಫ್ತು ನಿಷೇಧಿಸಬೇಕು ಗೋವು ಕಟುಕರ ವಶವಾಗದೆ ರೈತರ ಬಳಿ ಇರಬೇಕು ಗೋವನ್ನು ಮಾರಾಟ ಮಾಡಿದರೆ ಲಾಭ ಎಂದಾಗದೆ, ಗೋವನ್ನು ಸಾಕುವುದೇ ಲಾಭ ಎಂಬ ಭಾವನೆ ಜನತೆಯಲ್ಲಿ ಮೂಡಬೇಕು. ಎಲ್ಲ ರೋಗಗಳಿಗೆ ಗೋವಿನಲ್ಲಿ ಚಿಕಿತ್ಸೆ ಇದೆ ಎಂಬುದನ್ನು ಎಲ್ಲರೂ ತಿಳಿಯಬೇಕು. ಗೋ ಆರ್ಥಿಕತೆ ಲಾಭದಾಯಕ ಎಂಬುದರ ಅರಿವು ಮೂಡಿಸುವುದು ಈ ಯಾತ್ರೆಯ ಉದ್ದೇಶ ಎಂದು ರಾಘವೇಶ್ವರ ಶ್ರೀಗಳು ಹೇಳಿದರು.
27 ರಂದು ಬೆಳಗ್ಗೆ 7.30 ಕ್ಕೆ ಕೂಳೂರಿನ ಮಂಗಲ ಭೂಮಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 4ಕ್ಕೆ ನಗರದ ಪಡೀಲಿನಿಂದ ಹಸಿರುಹೊರೆ ಕಾಣಿಕೆಯ ಶೋಭಾಯಾತ್ರೆ ನಡೆಯಲಿದೆ. 6.30 ಕ್ಕೆ ಮಂಗಲ ಗೋಯಾತ್ರೆಯ ಶೋಭಾಯಾತ್ರೆ ಕೂಳೂರು ಪ್ರವೇಶಿಸಲಿದೆ ಬಳಿಕ ಗೋಯಾತ್ರಾ ಮಹಾಮಂಗಲದ ಉದ್ಘಾಟನೆ, ಗೋ ಜ್ಯೋತಿ ಪ್ರಜ್ವಲನ, ಗೋದೀಪೋತ್ಸವ ನಡೆಯಲಿದೆ. 28 ರಂದು ಬೆಳಗ್ಗೆ 6.30 ಕ್ಕೆ ಗೋಸಂಕೀರ್ತನೆ ಸಹಿತ ಮಂಗಲ ಭೂಮಿ ಪ್ರದಕ್ಷಿಣೆ, 7.30 ರಿಂದ ವಿವಿಧ ಧಾರ್ಮಿಕ ಸೇವಾ ಕಾರ್ಯಕ್ರಮ, 8 ಗಂಟೆಗೆ ಕಲಾರಾಮ ಉದ್ಘಾಟನೆ, 8.15ಕ್ಕೆ ಗೋ ವಿಶ್ವಕೋಶ ಪ್ರದರ್ಶಿನಿ ಉದ್ಘಾಟನೆ ನಡೆಯುವುದು. 9 ರಿಂದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದ್ದು, ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪಿಜಯರಾಮ ಭಟ್ ಉದ್ಘಾಟಿಸುವರು, ಬಳಿಕ ಭಾರತೀಯ ಗೋತಳಿಗಳು, ಭಾರತೀಯ ಗೋತಳಿಗಳು ಗ್ರಾಮೀಣಾಭಿವೃದ್ಧಿಗೆ ಪೂರಕ, ಪಂಚಗವ್ಯ ಮತ್ತು ಪೇಟೆಂಟ್, ಗೋವು ಆಧಾರಿತ ಸಾವಯವ ಕೃಷಿ, ದೇಸೀ ಗೋವು ಆಧಾರಿತ ಕೃಷಿ, ಸಾವಯವ ಕೃಷಿ, ಅಧಿಕ ಇಳುವರಿ ಮತ್ತು ಗುಣಮಟ್ಟ ಹೆಚ್ಚಿಸುವಿಕೆಯಲ್ಲಿ ಪಂಚಗವ್ಯದ ಪಾತ್ರದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಮಂಡನೆಯಾಗಲಿದೆ. ಬಳಿಕ ಗೋವು ಆಧಾರಿತ ಕೃಷಿಯ ಬಗ್ಗೆ ಅನುಭವ ವಿನಿಮಯ ನಡೆಯಲಿದೆ ಮಧ್ಯಾಹ್ನ2.15 ರಿಂದ ಹಾಲು, ಮೊಸರು, ತುಪ್ಪದ ವೈಶಿಷ್ಟ್ಯಗಳ ಬಗ್ಗೆ ಲಂಡನ್ನ ಪ್ರೊಅಲೆಕ್ಸ್ ಹಾಂಕಿ ಮಾತನಾಡುವರು ಎ2 ಹಾಲು ಮತ್ತು ಭಾರತೀಯ ಗೋವುಗಳ ಹಾಲಿನ ಪೋಷಕಾಂಶಗಳು, ಪಂಚಗವ್ಯ ಮತ್ತು ಆಯುರ್ವೇದ, ಪಂಚಗವ್ಯ ಚಿಕಿತ್ಸೆ, ಪಂಚಗವ್ಯದಿಂದ ಆರೋಗ್ಯ ಮತ್ತು ಪೋಷಕಾಂಶದ ಬಗ್ಗೆ ಚರ್ಚೆ ನಡೆಯಲಿದೆ.
29 ರಂದು ಬೆಳಗ್ಗೆ 10 ಗಂಟೆಗೆ 1500 ಕ್ಕೂ ಅಧಿಕ ಸಂತರ ಮಹಾ ತ್ರಿವೇಣಿ ಸಂಗಮ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಉಪಸ್ಥಿತಿಯಲ್ಲಿ ನಡೆಯಲಿದೆ. ಮೂರು ದಿನಗಳ ಕಾಲ ಅಪರೂಪದ 30 ಕ್ಕೂ ಅಧಿಕ ದೇಶೀಯ ಗೋತಳಿಗಳ ಪ್ರದರ್ಶನ, ಗೋ ಉತ್ಪನ್ನಗಳ ಮಾರಾಟ, ಗೋವಿನ ಬಗ್ಗೆ ಸಮಗ್ರ ಮಾಹಿತಿ ನೀಡುವ ಗೋ ವಿಶ್ವಕೋಶ ದರ್ಶನ, ಗವ್ಯ ಪಾಕೋತ್ಸವ, ಗೋ ತುಲಾಭಾರ, ಗೋ ಸಂಬಂಧಿತ ವಿವಿಧ ಧಾರ್ಮಿಕ ಸೇವೆಗಳಿಗೆ ಅವಕಾಶ ಇದೆ ಎಂದು ಅವರು ಹೇಳಿದರು.
ಫೆಬ್ರವರಿಯಲ್ಲಿ ಬರಗೂರು ತಳಿಗಾಗಿ ಹೋರಾಟ
ಮಲೆಮಹದೇಶ್ವರ ಬೆಟ್ಟದಲ್ಲಿರುವ ಸುಮಾರು 1 ಲಕ್ಷದಷ್ಟು ಬರಗೂರು ಗೋತಳಿಗಳಿಗೆ ಸಂಕಷ್ಟ ಎದುರಾಗಿದೆ. ಅಲ್ಲಿನ ಬೆಟ್ಟದ ಸುತ್ತ ಸರ್ಕಾರಬೇಲಿಯನ್ನು ಹಾಕಿರುವುದರಿಂದ ಬರಗೂರು ತಳಿಗಳು ಮೇವಿಗಾಗಿ ಪರದಾಡುವಂತಾಗಿದೆ, ಅಲ್ಲದೆ ಅಲ್ಲಿನ ಮೂಲನಿವಾಸಿಗಳಾದ 100 ಸೋಲಿಗರ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ಮಲೆಮಹದೇಶ್ವರ ಬೆಟ್ಟದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ರಾಘವೇಶ್ವರ ಶ್ರೀ ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಗೋಯಾತ್ರೆ ಮಹಾಮಂಗಲ ಸಮಿತಿ ಅಧ್ಯಕ್ಷ ವಿನಯ್ ಹೆಗ್ಡೆ, ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.