ಮಂಗಳೂರು: ಸಾಮರಸ್ಯ ಸಾಧಿಸುವ ನಿಟ್ಟಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳ ವಿರುದ್ಧ ಪ್ರತಿಭಟನೆ ನಡೆಸುವ ಮೂಲಕ ದ್ವೇಷ ಭಾವನೆ ಹರಡಲು ಯತ್ನಿಸುತ್ತಿರುವ ಮತಾಂಧ ಹಾಗೂ ತೀವ್ರವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆರ್ಎಸ್ಎಸ್ನ ಸಂಘಚಾಲಕ (ಮಂಗಳೂರು) ಸತೀಶ್ ಆಚಾರ್ಯ ಹಾಗೂ ಸಹಸಂಘಚಾಲಕ್ (ಮಂಗಳೂರು) ಸುನೀಲ್ ಆಚಾರ್ಯ ಆಗ್ರಹಿಸಿದ್ದಾರೆ.
ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಮನವಿ ಸಲ್ಲಿಸಿರುವ ಅವರು, ಜ.9 ರಂದು ಮಂಗಳೂರಿನ ಖಾಸಗಿ ಹೊಟೆಲ್ವೊಂದರಲ್ಲಿ ’ರಯಾಂಕ್ಸ್’ ಸಂಘಟನೆ ವತಿಯಿಂದ ಆಯೋಜಿಸಿದ್ದ ಸರ್ವಧರ್ಮ ಸದ್ಭಾವನೆ ಸಂಗೋಷ್ಠಿಯಲ್ಲಿ ಪಾಲ್ಗೊಂಡ ಹಿಂದು ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ನಾಯಕರು ಒಂದಾಗಿ ಸಾಮರಸ್ಯಕ್ಕೆ ಕರೆ ನೀಡಿದ್ದರು. ಪ್ರಚಲಿತ ವಿದ್ಯಮಾನ ಹಾಗೂ ಸಮಸ್ಯೆಗಳ ಮೂಲದ ಬಗ್ಗೆ ಆಳವಾದ ಅಧ್ಯಯನ ಹೊಂದಿರುವ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಂ.ಎನ್.ಕೃಷ್ಣಮೂರ್ತಿಯವರು ಸಾಮಾಜಿಕ ಕಾಳಜಿಯಿಂದ ಹಮ್ಮಿಕೊಂಡ ಕಾರ್ಯಕ್ರಮ ಇದಾಗಿತ್ತು. ಆದರೆ, ಇದರ ವಿರುದ್ಧ ಕೆಲವು ಮತಾಂಧರು ಹಾಗೂ ತೀವ್ರವಾದಿ ಗುಂಪುಗಳು ಪ್ರತಿಭಟನೆ ನಡೆಸುತ್ತಿದ್ದು, ಸಾಮರಸ್ಯ ಕದಡಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಳ್ಳುವ ಇಂಥ ದುಷ್ಟಶಕ್ತಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಲಾಗಿದೆ.
ಈ ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಪಾತ್ರ ಏನೂ ಇಲ್ಲ. ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ನೇತೃತ್ವದ ಸ್ವತಂತ್ರ ಎನ್ಜಿಒ ಆಯೋಜಿಸಿದ ಕಾರ್ಯಕ್ರಮವಾಗಿತ್ತು. ಹಿಂದು ಮತ್ತು ಮುಸ್ಲಿಂ ಏಕತೆಗಾಗಿ ಜಮ್ಮು ಮತ್ತು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಕಳಕಳಿಯಿಂದ ಶ್ರಮಿಸುತ್ತಿರುವ ಇಂದ್ರೇಶ್ಜೀ ಕುಮಾರ್ ಅವರು ಮುಸ್ಲಿಂ ರಾಷ್ಟ್ರೀಯ ಮಂಚ್ ವತಿಯಿಂದ ಭಾಗವಹಿಸಿದ್ದರು. ಆದರೂ ಇದರಲ್ಲಿ ಆರ್ಎಸ್ಎಸ್ನ ಹೆಸರನ್ನು ಅನಗತ್ಯವಾಗಿ ಎಳೆದು ತರಲಾಗಿದೆ. ಇದು ಮಂಗಳೂರಿನಲ್ಲಿ ಅಶಾಂತಿ, ಗಲಭೆ ಸೃಷ್ಟಿಸುವ ಸಂಚಿನ ಭಾಗವಾಗಿದೆ. ಆದ್ದರಿಂದ ಪ್ರತಿಭಟನೆ ಹೆಸರಿನಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸಿದವರ ವಿರುದ್ಧ ಎಫ್ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಇಂದ್ರೇಶ್ಜಿ ಕುಮಾರ್ ಅವರಂಥ ಸಮಾಜ ಸೇವಕರನ್ನು ಭಯೋತ್ಪಾದಕನೆಂದು ದೂಷಿಸಿದ ಯುನಿಸೆಫ್ ರಾಜ್ಯಾಧ್ಯಕ್ಷ ರಫಿಉದ್ದೀನ್ ಕುದ್ರೋಳಿ ಸೇರಿದಂತೆ ಸಂಬಂಧಿಸಿದ ಇತರರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕೆಂದೂ ಮನವಿಯಲ್ಲಿ ತಿಳಿಸಲಾಗಿದೆ.
ಮುಸ್ಲಿಂ ರಾಷ್ಟ್ರೀಯ ಮಂಚ್ ಇದೊಂದು ಪ್ರಜ್ಞಾವಂತರ ಸಂಘಟನೆ. ಮತಾಂಧತೆಯ ವಿರುದ್ಧ ಹೋರಾಡಿ ರಾಷ್ಟ್ರೀಯ ಹಿತ ಕಾಪಾಡುವಲ್ಲಿ ಶ್ರಮಿಸುತ್ತಿದೆ. ಪ್ರಜಾತಂತ್ರದ ಅಡಿಯಲ್ಲೇ ವಿವೇಕಿ ಮುಸ್ಲಿಂ ಪ್ರಮುಖರು ಸಂಘಟನೆ ಮೂಲಕ ಮುಸ್ಲಿಂರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ದ್ವೇಷ ಹಾಗೂ ಉಗ್ರವಾದದ ನಂಟಿನ ಗಂಭೀರ ಆರೋಪ ಹೊತ್ತಿರುವ ಪಾಪ್ಯುಲರ್ ಫ್ರಂಟ್, ಎಸ್ಡಿಪಿಐ ಅಂತಹ ಮತಾಂಧ ಗುಂಪುಗಳು ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಪ್ರಜಾತಂತ್ರಕ್ಕೇ ಒಡ್ಡಿದ ಬೆದರಿಕೆ. ಇದನ್ನು ಎಲ್ಲರೂ ಖಂಡಿಸಬೇಕು.
ಇದು ಪೊಲೀಸ್ ಇಲಾಖೆ ಮತ್ತು ಸಂಘ ಪರಿವಾರದ ನಡುವಿನ ಅಪವಿತ್ರ ಮೈತ್ರಿ ಎಂದೆಲ್ಲ ತಿರುಚಿ ವಿವಾದ ಎಬ್ಬಿಸಿ, ಸಮಾಜದಲ್ಲಿ ತಪ್ಪು ತಿಳಿವಳಿಕೆ ಮತ್ತು ದ್ವೇಷ ಹರಡುವ ಕೃತ್ಯದಲ್ಲಿ ತೊಡಗಿರುವುದು ಖಂಡನೀಯ.ಈ ಕಾರ್ಯಕ್ರಮದಲ್ಲಿ ಮುಸ್ಲಿಂ ಗಣ್ಯರು, ಮೌಲ್ವಿಗಳು ಸ್ವಂತ ವಿವೇಚನೆಯಿಂದ ಪಾಲ್ಗೊಂಡಿರುವುದನ್ನು ಸಹಿಸಲಾಗದೇ ದುಷ್ಟಶಕ್ತಿಗಳು ಈ ರೀತಿ ವರ್ತಿಸುತ್ತಿದ್ದಾರೆ. ಕರಾವಳಿ ಭಾಗದಲ್ಲಿ ಗಲಭೆ ಸೃಷ್ಟಿಸುವ ಹುನ್ನಾರವೂ ಅವರದಾಗಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುಸ್ಲಿಂ ಗಣ್ಯರ ವಾಟ್ಸ್ಅಪ್ ಸಂದೇಶ ಮೂಲಕ ಅಸಹನೆ ಹರಡಿರುವುದನ್ನೂ ಇಲಾಖೆ ಗಮನಿಸಬೇಕೆಂದು ಅವರು ಕೋರಿದ್ದಾರೆ.
ಅಸಹನೆ ವ್ಯಕ್ತಪಡಿಸುವ ಗುಂಪುಗಳ ಹಿನ್ನೆಲೆ ನೋಡಿದಾಗ ಶಾಂತಿ, ಸೌಹಾರ್ದ, ಸಾಮರಸ್ಯ, ಸದ್ಭಾವನೆ ಬಯಸದೇ ಇರುವುದೇ ಈ ನಿಲುವುಗಳಿಗೆ ಕಾರಣ ಎಂಬುದು ಸ್ಪಷ್ಟ. ರಾಜ್ಯದಲ್ಲಿ ಮತೀಯ ದ್ವೇಷದಿಂದಲೇ ಅನೇಕ ಕೊಲೆ, ಅಶಾಂತಿ, ಗಲಭೆ ಸೃಷ್ಟಿಸಿದ ದಾಖಲೆಗಳಿದ್ದು, ಪೊಲೀಸ್ ಇಲಾಖೆ ಮತ್ತು ಸರಕಾರ ಈ ಶಕ್ತಿಗಳ ದುರುದ್ದೇಶ ಅರಿತು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.