ನಮ್ಮೆಲ್ಲರ ಬದುಕಿನ ಸಂಕ್ರಮಣ ಕಾಲವಿದು. ಬದಲಾವಣೆಯ ಪರ್ವ. ಅನಾದಿ ಕಾಲದಿಂದ ನಡೆದುಕೊಂಡು ಬಂದ ಶಾಸ್ತ್ರ ಸಂಪ್ರದಾಯಗಳ ಪ್ರಕಾರ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದನ್ನೇ ಮಕರ ಸಂಕ್ರಾಂತಿ ಎನ್ನಲಾಗುತ್ತದೆ.
ಶುಭ ಕಾರ್ಯಕ್ಕೆ ಹೇಳಿ ಮಾಡಿಸಿದ ದಿನ. ಪ್ರಮುಖವಾಗಿ ಸೂರ್ಯನು ತನ್ನ ಪಥವನ್ನು ಬದಲಾಯಿಸುವುದನ್ನು ಸಂಕ್ರಮಣ ಸೂಚಿಸುತ್ತದೆ. ಸೂರ್ಯದೇವನು ತನ್ನ ಏಳು ಕುದುರೆಗಳಿಂದ ಎಳೆಯಲ್ಪಡುವ ಭವ್ಯ ರಥದಲ್ಲಿ ಮಕರ ರಾಶಿಗೆ ಪ್ರವೇಶಿಸುತ್ತಾನೆ ಎಂಬುದು ನಂಬಿಕೆ. ರಥದ ಏಳು ಕುದುರೆಗಳು ಕಾಮನ ಬಿಲ್ಲಿನ ಏಳು ಬಣ್ಣಗಳನ್ನು ಪ್ರತಿನಿಧಿಸುತ್ತವೆ.
ಸೂರ್ಯನ ಪಥ ಬದಲಾವಣೆಯಿಂದ ಇರುಳು ಹೋಗುವುದಲ್ಲದೇ, ಈ ಕಾಲದ ಸಸ್ಯಗಳ ಬೆಳವಣಿಗೆಗೂ ಸಹಕಾರಿ. ವೇದಶಾಸ್ತ್ರದ ಅನ್ವಯ ಇದು ಮನಸ್ಸಿನ ದ್ವಂದ್ವಗಳನ್ನು ಕಳೆದು, ಸ್ವಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ಆದ್ದರಿಂದಲೇ ಇದನ್ನು ಪುಣ್ಯಕಾಲ ಎನ್ನುವರು.
ಈ ಸಮಯದಲ್ಲಿ ಇರುಳಿನ ಅವಧಿಯು ಕಡಿಮೆ ಇದ್ದು ಸೂರ್ಯನ ಬೆಳಕಿನ ಅವಧಿ ಅಧಿಕವಾಗಿರುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ಇದನ್ನು ಸುಗ್ಗಿ ಹಬ್ಬವಾಗಿಯೂ ಆಚರಿಸಲಾಗುತ್ತದೆ. ಹೆಸರು ಬೇಳೆ, ಅಕ್ಕಿ ಮತ್ತು ಬೆಲ್ಲ ಸೇರಿಸಿ ತಯಾರಿಸುವ ಪೊಂಗಲ್ (ಹುಗ್ಗಿ) ಈ ದಿನದ ವಿಶೇಷ. ಈ ಸಂಕ್ರಾಂತಿಯು ವಿವಿಧ ಹೆಸರುಗಳಿಂದ ಗುರುತಿಸಿಕೊಂಡಿದೆ. ಪಂಜಾಬ್ನಲ್ಲಿ ಇದು ಲೋಹರಿ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬೋಗಲಿ ಬಿಹು. ಗುಜರಾತ್ ಮತ್ತು ರಾಜಸ್ಥಾನದಲ್ಲಿ ಉತ್ತರಾಯರ್ಣ (ಗಾಳಿಪಟ ಹಾರಿಸುವ ಹಬ್ಬ), ಕರ್ನಾಟಕ, ಬಿಹಾರ, ಆಂಧ್ರ ಮುಂತಾದ ರಾಜ್ಯಗಳಲ್ಲಿ ಇದನ್ನು ಮಕರ ಸಂಕ್ರಾಂತಿ ಎಂದೂ, ತಮಿಳು ನಾಡಿನಲ್ಲಿ ಪೊಂಗಲ್ ಎಂದೂ ಕರೆಯುವರು.
ಮಕರ ಸಂಕ್ರಾತಿಯ ದಿನ ಪವಿತ್ರ ಸ್ಥಳಗಳಾದ ಪ್ರಯಾಗ, ಉಜ್ಜೈನಿ, ನಾಸಿಕ್ ಹಾಗೂ ಹರಿದ್ವಾರ ಮೊದಲಾದೆಡೆಗಳಲ್ಲಿ ವಿಶೇಷ ಮೇಳಗಳು ಜರುಗುತ್ತವೆ. ಗಂಗಾಸಾಗರ ಮೇಳವೂ ಗಂಗಾ ನದಿಯಲ್ಲಿಯೂ, ಮಾಘ ಮೇಳವು ಪ್ರಯಾಗದಲ್ಲಿಯೂ ಸಂಕ್ರಾಂತಿ ದಿನ ಜರುಗುತ್ತದೆ.
ಹೊಸ ಬೆಳೆಯಾದ ಕಬ್ಬು, ಎಳ್ಳು, ಭತ್ತ ಮುಂತಾದವನ್ನು ಮನೆಗೆ ತಂದು ಅವನ್ನು ದಾನ ಮಾಡಿದ ನಂತರ ಸೇವಿಸುವುದು ನಡೆದು ಬಂದ ರೂಢಿ.
ಕರ್ನಾಟಕದಲ್ಲಿ ಮನೆಯಲ್ಲಿಯೇ ಎಳ್ಳನ್ನು ತಯಾರಿಸಿ, ದೇವರಿಗೆ ನೈವೇದ್ಯ ಮಾಡಿ ಬಂಧುಗಳು, ಮಿತ್ರರು, ಆಪ್ತರು ಹಾಗೂ ಹಿರಿಯರಿಗೆ ಕೊಟ್ಟು ಆಶಿರ್ವಾದ ಪಡೆಯುವ ಸಂಪ್ರದಾಯವಿದೆ. ವೈದ್ಯಕೀಯ ದೃಷ್ಟಿಯಿಂದಲೂ ಎಳ್ಳು ಬೇಲ್ಲ ಸೇವನೆ ಆರೋಗ್ಯಕ್ಕೆ ಹಿತಕರ.
ಪಥ ಬದಲಿಸುವ ಸೂರ್ಯ ಕತ್ತಲೆ ಕಳೆದು ಬೆಳಕು ನೀಡುವ ಸಂದರ್ಭವಿದು. ಸಂಕ್ರಾಂತಿ ಸರ್ವರ ಬಾಳಲ್ಲೂ ಪರಿವರ್ತನೆಯ ಸೊಬಗನ್ನು ತರಲಿ. ಸುಖ ಶಾಂತಿ ನೆಮ್ಮದಿ ನೀಡಲಿ ಎಂದಾಶಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.