ಪುತ್ತೂರು: ಸ್ವಾತಂತ್ರ್ಯ ದೊರೆತು ಆರು ದಶಕಗಳು ಸಂದರೂ ಗ್ರಾಮೀಣ ಭಾಗದ ಮೂಲಭೂತ ಅವಶ್ಯಕತೆಗಳ ಕೊರತೆ ಈಗಲೂ ಕಾಡುತ್ತಿದೆ. ಮೂಲಭೂತ ಅವಶ್ಯಕತೆಗಳಾದ ರಸ್ತೆ, ನೀರು, ಆಶ್ರಯ ಮೊದಲಾದ ಸಮಸ್ಯೆಗಳು ಈಗಲೂ ಕಾಡುತ್ತಿದೆ. ಇಂತಹ ಅವಶ್ಯಕತೆಗಳಲ್ಲೊಂದಾದ ಸಂಪರ್ಕ ರಸ್ತೆಯ ದುಸ್ಥಿತಿಯಿಂದ ಸವಣೂರು, ಪುಣ್ಚಪ್ಪಾಡಿ, ಕುಮಾರಮಂಗಲದ ಭಾಗದ ಜನತೆ ತೊಂದರೆಗೊಳಪಡುವಂತಾಗಿದೆ.
ಬೆಳಂದೂರು ಜಿ.ಪಂ.ವ್ಯಾಪ್ತಿಯ ಸವಣೂರು-ಕುಮಾರಮಂಗಲ-ಮಾಡಾವು ಸಂಪರ್ಕ ರಸ್ತೆಯು ತೀರಾ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ದೊಡ್ಡ ಗಾತ್ರದ ಹೊಂಡಗಳಾಗಿದ್ದು ಈ ರಸ್ತೆಯಲ್ಲಿ ಸಾಗುವ ವಾಹನ ಚಾಲಕರಿಗೆ ಸವಾಲಾಗಿ ಪರಿಣಮಿಸಿದೆ. ಈ ಹಿಂದೆ ಈ ರಸ್ತೆಯ ಹೊಂಡಗಳಿಗೆ ತೇಪೆ ಹಚ್ಚುವ ಕಾಮಗಾರಿ ನಡೆದಿದೆಯಾದರೂ ಅದರ ಗುಣಮಟ್ಟ, ಮಳೆಯ ಕಾರಣದಿಂದಾಗಿ ರಸ್ತೆಯಲ್ಲಿ ಮತ್ತೆ ಹೊಂಡ ಸೃಷ್ಟಿಯಾಗಿದೆ.
ರಸ್ತೆಬದಿಯ ಮರದಿಂದ ರಸ್ತೆ ಹಾನಿ: ಈ ರಸ್ತೆಯ ಎರಡೂ ಬದಿಯಲ್ಲಿಯೂ ಭಾರಿ ಗಾತ್ರದ ಮರಗಳಿದ್ದೂ ಇದರಿಂದ ಮಳೆನೀರು ರಸ್ತೆಯ ಮೇಲೆ ಬೀಳುವುದರಿಂದ ರಸ್ತೆ ಹದಗೆಡಲು ಕಾರಣವಾಗಿದೆ ಎನ್ನುತ್ತಾರೆ ಈ ಭಾಗದ ಜನರು. ಈ ರಸ್ತೆಯ ಬದಿಯಲ್ಲಿರುವ ಮರಗಳನ್ನು ತೆರವುಗೊಳಿಸಿದರೆ ರಸ್ತೆಯು ಹಾನಿಯಾಗುವದನ್ನು ತಪ್ಪಿಸಬಹುದಿತ್ತು ಎನ್ನುವುದು ಈ ಬಾಗದ ಜನತೆಯ ಅಭಿಪ್ರಾಯ. ಅಲ್ಲದೆ ರಸ್ತೆಯು ಹಾದುಹೋಗುವ ಹಲವೆಡೆ ಗಿಡ, ಮರಗಳು ರಸ್ತೆಗೆ ತಾಗಿಕೊಂಡರೂ ಇದರ ಪರಿಹಾರಕ್ಕೆ ಯಾರೂ ಪ್ರಯತ್ನಿಸಿದಂತಿಲ್ಲ.
ಈ ರಸ್ತೆಯು ಈಗ ಜಿ.ಪಂ.ವ್ಯಾಪ್ತಿಯಲ್ಲಿದ್ದು ಇದನ್ನು ಲೋಕೋಪಯೋಗಿ ಇಲಾಖೆಗೊಳಪಡಿಸುವ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕಳೆದ ಹಲವು ವರ್ಷಗಳಿಂದಲೂ ಕೇಳಿಬರುತ್ತಿರುವ ಮಾತು. ಆದರೆ ಬಳಿಕ ಈ ವಿಷಯ ಕುರಿತಂತೆ ಯಾವುದೇ ಕೆಲಸಗಳು ಕಾರ್ಯಗತವಾದ ಕುರಿತು ಯಾವುದೇ ಮಾಹಿತಿ ಈವರೆಗೆ ಲಭ್ಯವಾಗಿಲ್ಲ. ಅಲ್ಲದೆ ಈ ರಸ್ತೆಯನ್ನು ಅಭಿವೃದ್ಧಿಗೊಳಿಸುವಂತೆ ಜಿ.ಪಂ.ಸರಕಾರಕ್ಕೆ ಸಲ್ಲಿಸಲು ಸವಣೂರು ಗ್ರಾ.ಪಂ.ಸಭೆಯಲ್ಲಿ ಹಲವು ಬಾರಿ ನಿರ್ಣಯ ಕೈಗೊಳ್ಳಲಾಗಿದೆಯಾದರೂ ರಸ್ತೆಯ ಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ.
ಈ ರಸ್ತೆಯು ಸವಣೂರಿನಿಂದ ಕುಮಾರಮಂಗಲ ಮೂಲಕ ಮಾಡಾವುಗೆ ಸಂಪರ್ಕ ಕಲ್ಪಿಸಲು ಪ್ರಮುಖ ರಸ್ತೆಯೂ ಇದಾಗಿದೆ. ಈ ರಸ್ತೆಯ ದುರವಸ್ಥೆಯಿಂದ ರಿಕ್ಷಾ ಚಾಲಕರು ಈ ರಸ್ತೆಯಲ್ಲಿ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ಈ ರಸ್ತೆಯಲ್ಲಿ ಜನತೆಯ ಬೇಡಿಕೆ ಮೇರೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ಕೂಡ ಬೆಳಿಗ್ಗೆ ಹಾಗೂ ಸಂಜೆ ಓಡಾಟ ನಡೆಸುತ್ತಿದೆ. ಬಸ್ನಲ್ಲಿ ಒಮ್ಮೆ ಈ ರಸ್ತೆಯಲ್ಲಿ ಪ್ರಯಾಣಿಸಿದರೆ ಸೊಂಟ ನೋವು ಗ್ಯಾರಂಟಿ. ಅಷ್ಟೂ ಹದೆಗೆಟ್ಟಿದೆ ಈ ರಸ್ತೆ. ಕೂಡಲೇ ಈ ರಸ್ತೆಯ ದುರಸ್ತಿ ಕುರಿತು ಗಮನಹರಿಸುವಂತೆ ಈ ರಸ್ತೆಯ ಬಳಕೆದಾರರು ಒತ್ತಾಯಿಸಿದ್ದಾರೆ. ಈ ರಸ್ತೆಯನ್ನು ಮರು ಡಾಮರೀಕರಣ ಮಾಡುವಲ್ಲಿ ಸಂಬಂಧಪಟ್ಟ ಇಲಾಖೆ ಗಮನಹರಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.