ಇನ್ನೇನು ಡಿಸೆಂಬರ್ ತಿಂಗಳು ಮುಗಿಯಿತು-ಬರುವುದೇ ಆಂಗ್ಲರ ಹೊಸ ವರ್ಷಾರಂಭ ಜನವರಿ ತಿಂಗಳಿಂದ. ಅದು ಈಗ ವಿಶ್ವವ್ಯಾಪಿಯಾಗಿದೆ. ಎಲ್ಲರೂ ಅಂದೇ ಹೊಸ ವರ್ಷವನ್ನು ಆಚರಿಸುತ್ತಾರೆ. ಅದರಲ್ಲೂ ಭಾರತೀಯರೇನೂ ಹೊರತಲ್ಲ.
ನಮ್ಮ ಹೊಸವರ್ಷ ಇರುವುದೇ ಬೇರೆ, ನಾವು ಆಚರಿಸುವ ದಿನವೇ ಬೇರೇ. ಏಕೆ ನಾವು ನಮ್ಮನ್ನು, ನಮ್ಮ ಸಂಸ್ಕೃತಿಯನ್ನು ಜಾಣವಾಗಿ ಮರೆಯುತ್ತಿದ್ದೇವೆ? ನಮಗೆಲ್ಲ ನಿಜವಾಗಲೂ ನಾಚಿಕೆಯಾಗಬೇಕು. ನಮ್ಮ ಹೊಸ ವರ್ಷಾಚರಣೆ ಯುಗಾದಿಯ ಪವಿತ್ರ ಪಾಡ್ಯದಂದು ಹೊಸವರ್ಷದ ಹೊಸಪರ್ವ ಶುರುವಾಗುತ್ತದೆ. ಅದು ನಮಗೆಲ್ಲ ಗೊತ್ತು. ಆದರೂ ಜನವರಿ 1 ಬಂದಾಗ ಹ್ಯಾಪಿ ನ್ಯೂ ಇಯರ್ ಎಂದು ಸಂದೇಶ, ಗ್ರೀಟಿಂಗ್ಸ್, ಉಡುಗೊರೆ ನೀಡುತ್ತೇವೆ. ಶುಭಾಶಯವನ್ನು ವಿನಿಮಯ ಮಾಡಿಕೊಳ್ಳುತ್ತೇವೆ! ಎಂತಹ ವಿಚಿತ್ರ.
ಅಲ್ಲರೀ, ಆಂಗ್ಲರು ಆಚರಿಸುವ ಹೊಸವರ್ಷಕ್ಕೂ ಸನಾತನ ಭಾರತ ಆಚರಿಸುವ ಹೊಸವರ್ಷಕ್ಕೂ ಎಷ್ಟೊಂದು ಅಜಗಜಾಂತರ ವ್ಯತ್ಯಾಸವಿದೆ ಗೊತ್ತೇ? ಅದೂ ಅಲ್ಲದೇ ಆಂಗ್ಲರು ಆಚರಿಸುವ ಹೊಸವರ್ಷದಲ್ಲಿ ಯಾವುದೇ ಹೊಸತನವಿಲ್ಲ. ಬದಲಾವಣೆಯ ಗಾಳಿಯಂತೂ ಇಲ್ಲವೇ ಇಲ್ಲ. ನಮ್ಮ ಚೈತ್ರಮಾಸದಂದು ಚೈತ್ರದ ಚಂದ್ರಮನಂತೆ ಇಡೀ ಜಗತ್ತು ಹೊಳೆಯುತ್ತಿರುತ್ತದೆ. ಅರ್ಥಾತ್ ಭೂದೇವಿ ಹಸಿರು ಸೆರಗನ್ನು ಹೊದ್ದು ಎಲ್ಲರ ಕಂಗಳಲ್ಲಿ ಹೊಸತನದ ಹಸಿರಾದ ನೆನಪನ್ನು ಇಟ್ಟಿರುತ್ತಾಳೆ. ಹೊಸತನವೆಂದು ಬೆಳೆಯುವ ಸಸ್ಯರಾಶಿಗಳು, ಚಿಗುರುವ ಚಿಗುರುಗಳು, ಮೊಗ್ಗುಗಳು ಹೂವುಗಳಾಗಿ ಬಿರಿದು ಚೆಲುವಿನಿಂದ ಅಲುಗಾಡುತ್ತ ಗಾಳಿಯೊಂದಿಗೆ ಎಲ್ಲೆಡೆ ಹರಡುವ ಸುವಾಸನೆ, ಗೊಂಚಲುಗಳಾಗಿ ಬೆಳೆದ ಎಳೆಮಿಡಿಗಳು, ಎಲ್ಲೆಡೆ ಸಂತಸವ ಹಾಡುವ ಪಕ್ಷಿಗಳು, ಸುಖದಿಂದ ಮೇಯುವ ಗೋವುಗಳು, ರೈತರು ತಮ್ಮ ಹೊಲಗಳಿಗೆ ಹೊಸ ಕಾಳುಗಳನ್ನು ಬಿತ್ತುವ ಮೊದಲು ಪ್ರಾರ್ಥಿಸುವ ದಿನ. ಅಂತಹದು ನಮ್ಮ ಹೊಸವರ್ಷ.
ಅದೇ ಆಂಗ್ಲಮಾಸದಲ್ಲಿ ಯಾವ ಹೊಸತನವೂ ಇಲ್ಲ, ಅದೇನನ್ನು ಹೊಸದನ್ನು ಅವರು ಕಂಡಿದ್ದಾರೋ ಗೊತ್ತಿಲ್ಲ. ಪ್ರಕೃತಿ ಮಾತ್ರ ಹಳೆಯ ತನ್ನ ಪೊರೆಗಳನ್ನು ಕಳಚಿ ಹಣ್ಣಾದ ಎಲೆಗಳನ್ನು ಉದುರಿಸಿ ನಿಲ್ಲುವ ಚಳಿಗಾಲ. ಚಿಗುರು ಸಹಿತ ಮೂಡಣ ಗಾಳಿಗೆ ಬೆಂದು ಹೋಗುವ ಕಾಲ. ಚರ್ಮಗಳು ಸುಕ್ಕುಗಟ್ಟುವ ಕಾಲ. ಯಾಕ್ರೀ ನಾವು ಅರ್ಥವಿರದ ಆಚರಣೆಯನ್ನು ಮಾಡಬೇಕು ಹೇಳಿ. ಆತ್ಮಾವಲೋಕನವನ್ನು ಮಾಡಿಕೊಳ್ಳಿ. ಬರಡು ಭೂಮಿಗಳಾಗಿ ಹಸಿರು ಓಯಸಿಸ್ನಂತೆ ಅಲ್ಲಲ್ಲಿ ಕಾಣುತ್ತಿರುತ್ತದೆ. ಯಾವ ಪ್ರಾಣಿ-ಪಕ್ಷಿಗಳಿಗೂ ಆ ಚಳಿಗಾಲದಂದು ಆಹಾರಸಮಸ್ಯೆ ಎದುರಿಸುತ್ತವೆ.
ಡಿಸೆಂಬರ್ 31ರ ರಾತ್ರಿ ಬಂತೆಂದರೆ ಇಡೀ ರಾತ್ರಿ ಜಾಗರಣೆ; ಎಲ್ಲ ಕ್ಲಬ್-ಪಬ್ಗಳು ಹೌಸ್ಫುಲ್ ಆಗಿರುತ್ತವೆ. ಆ ಇಡೀ ರಾತ್ರಿ ಕಂಠಪೂರ್ತಿ ಕುಡಿದು-ತಿಂದು ಕುಣಿದು ಕುಪ್ಪಳಿಸುತ್ತಾರೆ. ಇದು ಸಭ್ಯತೆಯ ಲಕ್ಷಣವಲ್ಲ, ಹೊಸವರ್ಷ ಈ ರೀತಿ ಬರಮಾಡಿಕೊಳ್ಳುವ ರೀತಿ ಸರಿಯಲ್ಲ. ಮತ್ತು ಆ ದಿನ ಗಲಾಟೆಗಳು ನಡೆದು ಶಾಂತಿಯನ್ನು ಕದಡಲಾಗುತ್ತದೆ. ಈ ಸಂಸ್ಕೃತಿ ನಮಗೆ ಬೇಡ. ದೀಪ ಆರಿಸುವ ಸಂಸ್ಕೃತಿ ನಮಗೆ ಬೇಡ; ದೀಪಹಚ್ಚುವ ಸನಾತನ ಸಂಸ್ಕೃತಿಯು ನಮಗೆ ಬೇಕು. ಅದು ಎಂದಿಗೂ ಶಾಂತಿ, ಸಮಾಧಾನ, ಸಹಬಾಳ್ವೆಗೆ ಸಹಕಾರಿ ಅದೆಂದಿಗೂ ನಿತ್ಯನೂತನ…
ಎಷ್ಟು ಶಾಲಾ ಚಿಣ್ಣರಿಗೆ ನಮ್ಮ ಸನಾತನ ಮಾಸಗಳನ್ನು ಕಲಿಸಿಕೊಡುತ್ತಿದ್ದಾರೆಂದು ನೋಡಿದರೆ ಅದರ ಫಲಿತಾಂಶ ಸೊನ್ನೆ. ಚೈತ್ರ-ವೈಶಾಖ ಹೇಳು ಎಂದರೆ ಹಾಗಂದರೇನು ಎಂದು ಮುಗ್ಧವಾಗಿ ಕೇಳುತ್ತಾರೆ. ನಮ್ಮ ಭಾರತೀಯ ಕಾಲಗಣನೆ ನಮಗೆ ಗೊತ್ತಿಲ್ಲ. ವಿದೇಶದವರದ್ದನ್ನು ಅಧ್ಯಯನ ಮಾಡಿ ನೆನಪಿಡುವ ನಮ್ಮ ಭಾರತದ ಬುದ್ದಿವಂತರಷ್ಟು ಉದಾರಿಗಳು ಈ ಜಗತ್ತಿನಲ್ಲಿ ಸಿಗಲಿಕ್ಕಿಲ್ಲ.
ನಮಗಂತ ಆಚರಣೆಗಳು ಬೇಕಿಲ್ಲ ನಮ್ಮ ಪಂಚಾಂಗಗಳಲ್ಲಿ ಪ್ರತಿಯೊಂದು ದಿನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿದಿನವೂ ಒಂದಾದರೂ ವಿಶಿಷ್ಠ ಆಚರಣೆ ಸಿಗುತ್ತದೆ. ನಮ್ಮ ದಿನಾಚರಣೆಗಳು ಏಕೆ ವಿಶ್ವವ್ಯಾಪಿಯಾಗಬಾರದು ಸ್ವಲ್ಪ ಯೋಚಿಸಿ. ದೀಪಾವಳಿಯನ್ನು ವಿಶ್ವದ ಅನೇಕ ಕಡೆಗಳಲ್ಲಿ ಆಚರಿಸುತ್ತಾರೆ. ಅಮೇರಿಕದಲ್ಲಂತೂ ದೀಪಾವಳಿಯಂದು ಸಾರ್ವತ್ರಿಕ ರಜೆ ಘೋಷಿಸಿದ್ದು ನಮ್ಮ ಹಬ್ಬಗಳ ಮಹತ್ವದ ಬಗ್ಗೆ ಇರುವ ಹಿರಿಮೆ. ನಾವು ಚೈತ್ರಮಾಸದಂದು ಆಚರಿಸುವತ್ತ ಮನಸು ಮಾಡೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.