ನರಸಿಂಹ ಜಯಂತಿಯು ವೈಶಾಖ ಶುಕ್ಲ ಚತುರ್ದಶಿಯಂದು ಆಚರಿಸಲಾಗುತ್ತದೆ. ವಿಷ್ಣುವಿನ ಹತ್ತು ಅವತಾರಗಳಲ್ಲಿ ನರಸಿಂಹ ಅವತಾರವೂ ಒಂದು. ಪುರಾಣಗಳ ಪ್ರಕಾರ ನರಸಿಂಹ ಅವತಾರವನ್ನು ಬಲು ಮುಖ್ಯ ಮತ್ತು ವೈಶಿಷ್ಟ್ಯವಾಗಿ ಪರಿಗಣಿಸಲಾಗುತ್ತದೆ. ಇಂದೇ ಭಗವಾನ್ ವಿಷ್ಣುವು ನರಸಿಂಹ ಅವತಾರವನ್ನು ತಳೆದು ಹಿರಣ್ಯಕಶ್ಯಪುವನ್ನು ಕೊಂದ ದಿನ. ಇದಕ್ಕೂ ಒಂದು ಐತಿಹ್ಯವಿದೆ.
ಭೂಪಾಲಕನಾದ ಶ್ರೀವಿಷ್ಣು ತನ್ನ ಮಡದಿ ಶ್ರೀಲಕ್ಷ್ಮೀಯೊಂದಿಗೆ ಏಕಾಂತದಲ್ಲಿ ಇರುತ್ತಾನೆ. ಇದೇ ಸಂದರ್ಭ ಋಷಿಗಳ ಆಗಮನವಾಗುತ್ತದೆ. ಆಗ ದ್ವಾರಪಾಲಕರಾದ ಜಯ-ವಿಜಯರು ವೈಕುಂಠ ಪ್ರವೇಶಿಸಲು ಋಷಿಗಳನ್ನು ತಡೆಯುತ್ತಾರೆ. ಪರಿ ಪರಿಯಾಗಿ ಹೇಳಿ ಅವರಿಗೆ ವೈಕುಂಠ ಪತಿ ಶ್ರೀ ವಿಷ್ಣುವಿನ ದರ್ಶನ ಮಾಡದಂತೆ ತಡೆಯುತ್ತಾರೆ. ಇದರಿಂದ ಕುಪಿತಗೊಂಡ ಋಷಿಗಳು ಭೂಲೋಕದಲ್ಲಿ ಜನಿಸುವಂತೆ ಜಯ-ವಿಜಯರಿಗೆ ಶಾಪ ನೀಡುತ್ತಾರೆ. ಇದೇ ಸಂದರ್ಭ ಋಪಿಗಳು ತಮಗೆ ನೀಡಿದ ಶಾಪದ ಬಗ್ಗೆ ದ್ವಾರಪಾಲಕರಾದ ಜಯ-ವಿಜಯರು ವಿಷ್ಣುವಿಗೆ ತಿಳಿಸುತ್ತಾರೆ. ಶಾಪ ವಿಮೋಚನೆಗೆ ಬೇಡಿದಾಗ ವಿಷ್ಣುವು ನೀವು ನನ್ನ ಸ್ನೇಹಿತರಾಗಿ ಬಂದು ಏಳು ಜನ್ಮವನ್ನು ಪಡೆದು ಶಾಪ ವಿಮೋಚನೆ ಮಾಡುತ್ತಿರೋ ಅಥವಾ ಮೂರು ಜನ್ಮಗಳಲ್ಲಿ ತನ್ನ ಶತ್ರುಗಳಾಗಿ ಬಂದು ಶಾಪ ವಿಮೋಚನೆ ಮಾಡಿಕೋಳ್ಳುತ್ತೀರೋ? ಎಂದು ಕೇಳಿದಾಗ ಅವರು ನಾವು ನಿನ್ನ ಶತ್ರುಗಳಾಗಿ ಬಂದು ಶಾಪ ವಿಮೋಚನೆ ಮಾಡಿಕೊಳ್ಳುತ್ತೇವೆ ಎಂದರು. ಅದರ ಫಲವೇ ಹಿರಣ್ಯಾಕ್ಷ ಮತ್ತು ಹಿರಣ್ಯ ಕಶಿಪುವಿನ ಜನನ.
ಹಿರಣ್ಯ ಕಶ್ಯಪುವಿಗೆ ಮದುವೆಯಾಗಿ ಪುತ್ರ ಸಂತತಿ ಪ್ರಾಪ್ತಿಯಾಗುತ್ತದೆ. ಆತನ ಹೆಸರೇ ಪ್ರಹ್ಲಾದ. ಇದೇ ಸಂದರ್ಭ ಆ ಮಗುವಿಗೆ ನಾರದರು ಗರ್ಭಾವಸ್ಥೆಯಲ್ಲಿ ಶ್ರೀಹರಿಯ ಮೇಲೆ ಭಕ್ತಿ ಮೂಡುವಂತೆ ಮಾಡುತ್ತಾರೆ. ಹಿರಣ್ಯ ಕಶ್ಯಪು ಹರಿಯನ್ನು ದ್ವೇಷಿಸುವ ಕಾರಣ ಪ್ರಹ್ಲಾದನಿಗೆ ಹರಿಯನ್ನು ಭಜಿಸದಂತೆ ಹೇಳುತ್ತಾನೆ. ಅದನ್ನು ಕೇಳದೇ ಪ್ರಹ್ಲಾದ ಶ್ರೀಹರಿಯನ್ನು ಭಜಿಸಿ ಪೂಜಿಸುತ್ತಾನೆ. ಇದರಿಂದ ಕೋಪಗೊಂಡ ಹಿರಣ್ಯ ಕಶ್ಯಪು ಪ್ರಹ್ಲಾದನಿಗೆ ಹಲವು ಕಿರುಕುಳವನ್ನು ಕೊಡುತ್ತಾನೆ. ಆಗ ಪ್ರಹ್ಲಾದ ವಿಷ್ಣುವಿನ ಅನುಗ್ರಹದಿಂದ ಕಷ್ಟಗಳಿಂದ ಪಾರಾಗುತ್ತಾನೆ.
ಕೊನೆಗೊಂದು ದಿನ ಪ್ರಹ್ಲಾದನ ಭಕ್ತಿಯನ್ನು ಪರೀಕ್ಷಿಸಲು ದುಷ್ಟನಾದ ಹಿರಣ್ಯಕಶ್ಯಪು ಮಗನನ್ನು ಕರೆದು ಹರಿಯನ್ನು ತೋರಿಸು ಎಂದು ಹೇಳದಾಗ ಅತ ಸರ್ವಾಂತರ್ಯಾಮಿ ಎಲ್ಲೆಲ್ಲೂ ಇದ್ದಾನೆ. ಆತ ಅರಮನೆಯಲ್ಲಿದ್ದ ಕಂಬಗಳಲ್ಲಿಯೂ ಇದ್ದಾನೆ ಎಂದು ಪ್ರತಿ ಕಂಬಗಳನ್ನು ತೋರಿಸಿ ಹೇಳುತ್ತಾನೆ. ಆಗ ಕುಪಿತಗೊಂಡ ಹಿರಣ್ಯಕಶ್ಯಪು ಕೊನೆಗೆ ಒಂದು ಕಂಬವನ್ನು ಗದಾಪ್ರಹಾರದಿಂದ ಒಡೆಯುತ್ತಾನೆ. ಆಗ ಕಂಬದಿಂದ ಉದ್ಭವಿಸಿದವನೇ ಶ್ರೀ ಉಗ್ರನರಸಿಂಹ. ಶ್ರೀ ಹರಿಯು ನರಸಿಂಹ ರೂಪಿಯಾಗಿ ಬರಲು ಕಾರಣವೊಂದಿದೆ. ಅದೇ ಹಿರಣ್ಯಕಶ್ಯಪುವಿಗೆ ಪ್ರಾಪ್ತವಾದ ಬ್ರಹ್ಮ ದೇವನ ವರ.
ಹಿರಣ್ಯಕಶ್ಯಪನು ತನ್ನನ್ನು ಮೇಲೆ ಅಥವಾ ಕೆಳಗೆ, ಮನುಷ್ಯನಿಂದ ಅಥವಾ ಪ್ರಾಣಿಯಿಂದ, ಅಸ್ತ್ರಗಳಿಂದ ಅಥವಾ ಅಯುಧಗಳಿಂದ ಒಳಗೂ ಅಲ್ಲ ಹೊರಗೂ ಅಲ್ಲದೇ, ಬೆಳಗ್ಗೆಯೂ ಅಲ್ಲ, ಸಂಜೆಯೂ ಅಲ್ಲದೇ ಸಾವು ಬರಬಾರದು ಎಂಬ ವರ ಪಡೆದಿದ್ದ. ಆದುದರಿಂದ ವಿಷ್ಣುವು ನರನೂ ಅಲ್ಲದ ಪ್ರಾಣಿಯೂ ಅಲ್ಲದ ನರಸಿಂಹ ಅವತಾರ ತಾಳಿ ಹಿರಣ್ಯಕಶ್ಯಪುವನ್ನು ಒಳಗೂ ಅಲ್ಲದೇ, ಹೊರಗೂ ಅಲ್ಲದೇ ಹೊಸ್ತಿಲ ಮೇಲೆ, ಮೇಲೂ ಅಲ್ಲ ಕೆಳಗೂ ಅಲ್ಲದಂತೆ ನರಸಿಂಹನು ತನ್ನ ತೊಡೆಯ ಮೇಲೆ ಇಟ್ಟು ಆತನ ಹೊಟ್ಟೆಯ ಮಧ್ಯದಲ್ಲಿ ಅಸ್ತ್ರಗಳಿಂದ ಅಥವಾ ಅಯುಧಗಳಿಂದಲ್ಲದೆ ತನ್ನ ನಖಗಳಿಂದ, ಬೆಳಗ್ಗೆಯೂ ಅಲ್ಲ ಸಂಜೆಯೂ ಅಲ್ಲದೇ ತ್ರಿಸಂಧ್ಯಾ ಕಾಲದಲ್ಲಿ ನರಸಿಂಹನ ರೂಪದಲ್ಲಿ ಬಂದು ಹಿರಣ್ಯಕಶ್ಯಪುವನ್ನು ಸಂಹರಿಸುತ್ತಾನೆ. ವೈಶಾಖ ಮಾಸದ ಸ್ವಾತಿ ನಕ್ಷತ್ರದ ಶನಿವಾರದಂದು ನರಸಿಂಹ ಜಯಂತಿ ಒದಗಿ ಬಂದರೆ ಬಲು ಶ್ರೇಷ್ಠೆವೆನ್ನಲಾಗುತ್ತದೆ. ಕಾರಣ ಸ್ವತಃ ನರಸಿಂಹ ಸ್ವಾತಿ ನಕ್ಷತ್ರದಲ್ಲಿ ಜನಿಸಿದ ಎಂದು ಪ್ರತೀತಿಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.