ಕಲ್ಲಡ್ಕ : ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸಂಪನ್ನಗೊಂಡ ಕ್ರೀಡೋತ್ಸವ ಸಂಭ್ರಮ 3000 ಕ್ಕೂ ಮಿಕ್ಕಿದ ಶಿಶುಮಂದಿರದಿಂದ ಪದವಿ ತರಗತಿ ವರೆಗಿನ ವಿದ್ಯಾರ್ಥಿಗಳು ನಿರಂತರ ಎರಡೂವರೆ ಗಂಟೆಗಳ ವೈವಿಧ್ಯಮಯ ಸಾಮೂಹಿಕ ಪ್ರದರ್ಶನ ಹಾಗೂ ವಿವಿಧ ಕಸರತ್ತುಗಳ ಪ್ರದರ್ಶನ ಮಾಡಿದರು. 200 ಕ್ಕೂ ಮಿಕ್ಕಿದ ಗಣ್ಯ ಅತಿಥಿಗಳು 10 ಸಾವಿರಕ್ಕೂ ಮಿಕ್ಕಿದ ಪ್ರೇಕ್ಷಕರ ಕಣ್ಮನ ತಣಿಸಿ ಆನಂದ ಪರವಶರಾಗುವಂತೆ ಮಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು. ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮೈದಾನದಲ್ಲಿ ವೈವಿಧ್ಯಮಯ ಶಾರೀರಿಕ ಪ್ರದರ್ಶನದ ಮೂಲಕ ಭಾರತ ಭಕ್ತಿಯ ಶಕ್ತಿಯ ಜಾಗೃತವಾಗಿದೆ.
ನಮ್ಮ ಶ್ರೀರಾಮ ವಿದ್ಯಾಸಂಸ್ಥೆಗೆ ಗುರುತಿಸುವ ಆಸೆ ಇಲ್ಲ . ನಮ್ಮನ್ನು ಎಲ್ಲರು ಸ್ವೀಕಾರ ಮಾಡುವಂತೆ ಆಗಬೇಕು, ಕಲ್ಲಡ್ಕವು ದೇಶ ಭಕ್ತಿಯ ಪ್ರತೀಕವಾಗಿದ್ದು ಇಲ್ಲಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಪ್ರತಿನಿಧಿಗಳಾಗಲಿ ಎಂದು ಅಖಿಲ ಭಾರತ ಕುಟುಂಬ ಪ್ರಭೋಧನ್ ಪ್ರಮುಖರಾದ ಸು. ರಾಮಣ್ಣ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಬೌದ್ಧಿಕ್ ಪ್ರಮುಖ್ ಮುಕುಂದ್ ಅವರು ಮಾತಾನಾಡಿ ದೇಶದ ಸಮಸ್ಯೆಗೆ ನಮ್ಮ ದೇಶದ ಭವಿಷ್ಯ ಮುಂದಿನ ಜನಾಂಗದ ಮೇಲೆ ನಿಂತಿದೆ. ದೇಶದ ಶಿಕ್ಷಣ ಸಂಸ್ಥೆಗಳಿಗೆ ಶ್ರೀರಾಮ ವಿದ್ಯಾಕೇಂದ್ರ ಮಾದರಿ ಆಗಬೇಕು ಎಂದರು.
ರಸ್ತೆ ಸಾರಿಗೆ ಹೆದ್ದಾರಿ ಸಚಿವಾಲಯದ ಮಾರ್ಗದರ್ಶಕ ಆರ್. ಸಿ. ಸಿನ್ಹಾ, ಸುಧೀರ್ ಶೆಟ್ಟಿ ಮುಂಬೈ, ಮುಂಬೈ ಸಂಸದ ರಾಹುಲ್ ರಮೇಶ್ ಶೇವಾಲೆ ಮುಂಬೈ, ಆರ್. ಬಿ. ಐ. ವಿದೇಶಿ ವಿನಿಮಯದ ಮುಖ್ಯಸ್ಥ ಎ.ಕೆ. ಪಾಂಡೆ, ಎನ್.ಆರ್.ಐ. ಪೋರಂ ಸೌದಿ ಅರೇಬಿಯ ಸ್ಥಾಪಕ ಅಧ್ಯಕ್ಷ ಬಿ.ಕೆ. ಶೆಟ್ಟಿ, ಶಾಸಕಿ ಶ್ರೀಮತಿ ಶಶಿಕಲಾ ಜೊಲ್ಲೆ ಮಾತಾನಾಡಿ ಕಾರ್ಯಕ್ರಮದ ಬಗ್ಗೆ ಮೆಚ್ಚಿಗೆ ವ್ಯಕ್ತಪಡಿಸಿ ವಿದ್ಯಾಕೇಂದ್ರವು ರಾಷ್ಟ್ರಿಯ ಶಿಕ್ಷಣಕ್ಕೆ ಮಾದರಿಯಾಗಿದೆ ಎಂದರು.
ಶ್ರೀರಾಮ ವಿದ್ಯಾಕೇಂದ್ರದ ಮೈದಾನದಲ್ಲಿ ಪಾಕಿಸ್ಥಾನದ ಗಡಿಯಲ್ಲಿ ಭಾರತೀಯ ಸೈನಿಕರು ನಡೆಸಿದ ಸರ್ಜಿಕಲ್ ದಾಳಿಯ ಹಾಗೂ ಪಾಕ್ ಪ್ರೇರಿತ ಭಯೋತ್ಪಾದಕರ ದುಷ್ಕೃತ್ಯದ ಅಣಕು ಪ್ರದರ್ಶನ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ನವೆಂಬರ್ 13 ರಂದು ಗೋವಾದಲ್ಲಿ ಮಾಡಿದ ಭಾಷಣದ ಪ್ರತಿರೂಪ ಮತ್ತು 500 ಹಾಗೂ 1000 ರೂ. ನೋಟುಗಳ ನಿಷೇಧದ ದಿಟ್ಟ ಹೆಜ್ಜೆಯನ್ನು ಸಮರ್ಥಿಸುವ ಚಿತ್ರಣ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂತು. ಸಾಮೂಹಿಕವಾಗಿ ಭಾರತ್ ಮಾತಾಕಿ ಜೈ, ವಂದೇ ಮಾತರಂ ಘೋಷಣೆಯೊಂದಿಗೆ ಜಯಕಾರ ಹಾಕಿದರು.
ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳ ಸಾಮೂಹಿಕ ಘೋಷ್ ಪ್ರದರ್ಶನದೊಂದಿಗೆ ಆರಂಭಗೊಂಡು ಕಾಲೇಜು ವಿದ್ಯಾರ್ಥಿಗಳ ಕೋವಿ ಸಹಿತ ಸಮತ ಪ್ರದರ್ಶನ ಶಿಸ್ತಿನ ಸೈನಿಕರನ್ನು ನೆನಪಿಸಿತು.
ಹಕ್ಕಿಗಳ ಚಿಲಿಪಿಲಿಗಳಂತೆ ಶಿಶು ಮಂದಿರಗಳ ಪುಟಾಣಿಗಳ ನೃತ್ಯ, ಪ್ರಾಥಮಿಕ ಮಕ್ಕಳ ಜಡೆಕೋಲಾಟ, ಭಾರತೀಯ ನಿಶ್ಯಸ್ತ್ರ ಯುದ್ಧಕಲೆ ಪ್ರದರ್ಶನಗೊಂಡಿತು.
ಎಲ್ಲ ಭೇದ ಮರೆತು ಬನ್ನಿರಿ ನಾವು ಸಮಾನ ಎಂಬ ಹಾಡಿಗೆ ಸಾಮೂಹಿಕ ದೀಪಾರತಿ ಮಾಡುವ ಮೂಲಕ ಡಾ. ಬಿ.ಆರ್ ಅಂಬೇಡ್ಕರ್ ಇವರ 125 ನೇ ಜನ್ಮ ದಿನಾಚರಣೆಯ ಸ್ತಬ್ದ ಚಿತ್ರದೊಂದಿಗೆ ಸಮಾನತೆಯ ಸಂದೇಶ ನೀಡುವಲ್ಲಿ ಯಶಸ್ವಿಯಾಯಿತು. ಯೋಗ ಗುಚ್ಛಗಳ ರಚನೆ ವಿವಿಧ ಯೋಗಾಸನಗಳ ಪ್ರದರ್ಶನವಾಗಿತ್ತು.
ಪ್ರಾಥಮಿಕ ಶಾಲೆಯ 500 ಕ್ಕೂ ಮಿಕ್ಕ ವಿದ್ಯಾರ್ಥಿಗಳು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಹಣತೆ, ಓಂಕಾರ, ತಾವರೆ ರಚನೆಗಳ ಚಿತ್ತಾರ ಮೂಡಿಸಿತು. ಗುಜರಾತ್ ಭಾಷೆಯ ಹಾಡಿಗೆ ಕುಣಿತ ಭಜನೆ, 9 ತಂಡಗಳಲ್ಲಿ ಶ್ರೀ ಕೃಷ್ಣನಲ್ಲಿ ಭಕ್ತಿಭಾವ ಮೂಡಿಸುವಂತಿತ್ತು. ಬಾಟಲಿಗಳ ಮೇಲೆ ಜೋಡಿಸಿದ ತಿರುಗುವ ಮಲ್ಲಕಂಬಗಳಲ್ಲಿ ಯೋಗಾಸನ ಪ್ರದರ್ಶನ ಅದ್ಭುತವಾಗಿತ್ತು.
ಕಾಲೇಜು ವಿದ್ಯಾರ್ಥಿನಿಯರ ಯಕ್ಷಗಾನ ಶೈಲಿಯ ನೃತ್ಯ ಮನಮೋಹಕವಾಗಿತ್ತು.
ಸೈಕಲ್, ಮೋಟಾರು ಸೈಕಲ್ಲುಗಳಲ್ಲಿ ಮಾಡಿದ ಕಸರತ್ತುಗಳು ರೋಮಾಂಚನಕಾರಿಯಾಗಿ ಉಸಿರು ಬಿಗಿಹಿಡಿದು ನೋಡುವಂತೆ ಮಾಡಿತು. ಕಾಲೇಜು ವಿದ್ಯಾರ್ಥಿಗಳಿಂದ ಕೇರಳದ ಚೆಂಡೆ ವಾದನ, ಬೆಂಕಿ ಸಾಹಸ, ಸ್ಕೇಟಿಂಗ್ ಪ್ರದರ್ಶನ, ಕೂಪಿಕಾ ಸಮತೋಲನ ಎಲ್ಲರ ಗಮನ ಸೆಳೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.