ದೇಶ ಹಾಗೂ ರಾಜ್ಯಾದ್ಯಂತ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಸಾರಿಗೆ ಸಂಸ್ಥೆಗಳ ಕಾರ್ಮಿಕ ಒಕ್ಕೂಟಗಳು ಬಂದ್ಗೆ ಕರೆ ನೀಡಿದ್ದು ಸಾರಿಗೆ ಬಸ್ಗಳು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ರಸ್ತೆಗೆ ಇಳಿದಿಲ್ಲ.
ಮುಷ್ಕರ ಯಾಕೆ?
ಕೇಂದ್ರ ಸರ್ಕಾರ ರಸ್ತೆ ಸುರಕ್ಷತೆ ಮತ್ತು ವಾಹನ ನಿರ್ವಹಣೆಗೆ ಹೆಚ್ಚು ಒತ್ತು ನೀಡುವ ‘ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ -2015’ನ್ನು ಜಾರಿಗೆ ತರಲು ಮುಂದಾಗಿದೆ. ಈ ಮಸೂದೆ ಜಾರಿಗೆ ವಿರೋಧಿಸಿ ಗುರುವಾರ ದೇಶವ್ಯಾಪಿ ಸಾರಿಗೆ ಸಂಸ್ಥೆಗಳು, ವಿವಿಧ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದೆ.
‘ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ -2015’ರಲ್ಲಿ ಏನೇನಿದೆ.?
ಕಾರ್ಮಿಕರ ಕೆಂಗಣ್ಣಿಗೆ ಗುರಿಯಾಗಿರುವ ‘ರಸ್ತೆ ಸಾರಿಗೆ ಮತ್ತು ಸುರಕ್ಷತಾ ಮಸೂದೆ -2015’ರಲ್ಲಿರುವ ಅಂಶಗಳು ಯಾವುದು, ವಾಹನ ಸವಾರರು ರಸ್ತೆ ನಿಯಮವನ್ನು ಉಲ್ಲಂಘಿಸಿದರೆ ಅವರಿಗೆ ಎಷ್ಟು ಶಿಕ್ಷೆಯಾಗುತ್ತದೆ..? ವಿರೋಧ ಬಂದ ಬಳಿಕ ಮಸೂದೆಯಲ್ಲಿ ಏನೇನು ಬದಲಾವಣೆಯಾಗಿದೆ ಎನ್ನುವ ಕಿರು ಮಾಹಿತಿ ಇಲ್ಲಿದೆ.
ಸಿಗ್ನಲ್ ಜಂಪ್ ಮಾಡಿದ್ರೆ ಲೈಸೆನ್ಸ್ ರದ್ದಾಗುತ್ತೆ!
ಹೊಸ ಕಾಯ್ದೆಯ ಪ್ರಕಾರ ಸಿಗ್ನಲ್ ಜಂಪ್ (ಸೆಕ್ಷನ್ 305) ಮಾಡಿದ್ರೆ 1ನೇ ಬಾರಿ 500 ರೂ., 2 ಬಾರಿ 1000ರೂ. ಮೂರನೇ ಬಾರಿ 1500 ರೂ. ದಂಡ ಮತ್ತು 1 ತಿಂಗಳು ಲೈಸೆನ್ಸ್ ರದ್ದುಗೊಳ್ಳಲಿದೆ
ಸೀಟ್ ಬೆಲ್ಟ್ ಹಾಕದಿದ್ದರೆ ಪರ್ಮಿಟ್ ಕ್ಯಾನ್ಸಲ್!
307 ಸೆಕ್ಷನ್ ಪ್ರಕಾರ ಸೀಟ್ ಬೆಲ್ಟ್ ಹಾಕದಿದ್ದರೆ 1ನೇ ಬಾರಿ 500 ರೂ., 2ನೇ ಬಾರಿ 1000 ರೂ. ಮತ್ತು ಮೂರನೇ ಬಾರಿ 1500 ರೂ. ದಂಡ ಮತ್ತು 1 ತಿಂಗಳು ಲೈಸೆನ್ಸ್ ಅಮಾನತು ಅಥವಾ ಪರ್ಮಿಟ್ ರದ್ದು
ಆಕ್ಸಿಡೆಂಟ್ ಮಾಡಿದ್ರೆ 1 ಲಕ್ಷ ರೂ. ಫೈನ್!
ಅಪಘಾತ ಮಾಡಿದ್ರೆ ಸೆಕ್ಷನ್ 323(3)ರ ಪ್ರಕಾರ ಯಾವುದೇ ಅಪಘಾತವಾದಾಗ ಗಾಯಗೊಂಡಲ್ಲಿ ಅಥವಾ ಸಾವನ್ನಪ್ಪಿದ್ದಲ್ಲಿ 1 ಲಕ್ಷ ರೂ. ದಂಡ ಮತ್ತು 4 ವರ್ಷ ಜೈಲು ಶಿಕ್ಷೆಯಾಗಲಿದೆ.
ಇನ್ಷೂರೆನ್ಸ್ ಇಲ್ಲದೇ ವಾಹನ ಚಾಲನೆ ಮಾಡಿದ್ರೂ ಕಷ್ಟ!
ಸೆಕ್ಷನ್ ೩೦೪ರ ಪ್ರಕಾರ ಲಘು ವಾಹನ ಮತ್ತು ಮೂರು ಚಕ್ರದ ವಾಹನ ಸವಾರರು ಇನ್ಷೂರೆನ್ಸ್ ಇಲ್ಲದೇ ವಾಹನ ಚಾಲನೆ ಮಾಡಿದರೆ 20 ಸಾವಿರ ರೂ. ದಂಡ, 6 ತಿಂಗಳು ಜೈಲು ಶಿಕ್ಷೆ ಮತ್ತು 6 ತಿಂಗಳು ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು. ಮಧ್ಯಮ ಮತ್ತು ಭಾರೀ ವಾಹನಗಳಿಗೆ 25 ಸಾವಿರ ರೂ. ದಂಡ 6 ತಿಂಗಳು ಜೈಲು ಶಿಕ್ಷೆ, 6 ತಿಂಗಳು ವಾಹನ ಮುಟ್ಟುಗೋಲು ಹಾಕಿಕೊಳ್ಳಬಹುದು.
ಹೆಲ್ಮೆಟ್ ಧರಿಸದಿದ್ದರೆ 1 ತಿಂಗಳು ಲೈಸೆನ್ಸ್ ಸಿಗಲ್ಲ!
ಸೆಕ್ಷನ್ 308 ಪ್ರಕಾರ ಮೊದಲನೇ ಬಾರಿ 500 ರೂ., 2ನೇ ಬಾರಿ 1 ಸಾವಿರ ರೂ. ಮತ್ತು 3ನೇ ಬಾರಿ 1500ರೂ. ದಂಡ ಮತ್ತು 1 ತಿಂಗಳ ಲೈಸೆನ್ಸ್ ಅಮಾನುತು
ರಸ್ತೆ ಸಾರಿಗೆ ನಿಗಮಗಳ ಬಗ್ಗೆ ಮಸೂದೆಯಲ್ಲಿ ಏನು ಹೇಳಲಾಗಿದೆ?
ಮೋಟಾರು ವಾಹನ ಕಾಯ್ದೆ 1988ರಲ್ಲಿ ರಾಷ್ಟ್ರಿಕೃತ ರಸ್ತೆಗಳಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಪರ್ಮಿಟ್ ನೀಡಬೇಕೆಂಬ ನಿಯಮವಿದೆ. ಒಂದೊಮ್ಮೆ ಮಸೂದೆ ಕಾಯಿದೆಯಾಗಿ ಜಾರಿಗೆ ಬಂದಲ್ಲಿ ಸಾರಿಗೆ ನಿಗಮಗಳು ಈ ವಿಶೇಷ ಸ್ಥಾನಮಾನದಿಂದ ವಂಚಿತವಾಗುತ್ತದೆ. ಅಷ್ಟೇ ಅಲ್ಲದೇ ಆರ್ಟಿಸಿ ಕಾಯ್ದೆ 1950ನ್ನು ರದ್ದು ಮಾಡಲಾಗುತ್ತದೆ. ಹೀಗಾಗಿ ಪ್ರಯಾಣಿಕರ ಸಾರಿಗೆ ಪರ್ಮಿಟ್ ಪಡೆಯಲು ಟೆಂಡರ್ ಪದ್ಧತಿ ಅಳವಡಿಸಲಾಗುತ್ತದೆ. ಖಾಸಗಿ, ಸಾರ್ವಜನಿಕ, ಖಾಸಗಿ ಸಹಭಾಗಿತ್ವ ಹಾಗೂ ವಿದೇಶಿ ಕಂಪೆನಿಗಳ ಜೊತೆ ಹರಾಜಿನಲ್ಲಿ ಭಾಗವಹಿಸಿ ಮಾರ್ಗಗಳ ಪರ್ಮಿಟ್ ಪಡೆಯಬೇಕಾಗುತ್ತದೆ. ವಿದೇಶದಲ್ಲಿರುವಂತೆ ನಿರ್ವಾಹಕ ರಹಿತವಾಗಿ ಪ್ರಯಾಣಿಕ ಸಾರಿಗೆಯನ್ನು ಓಡಿಸುವ ಪ್ರಸ್ತಾಪ ಈ ಮಸೂದೆಯಲ್ಲಿದೆ.
ಕಾರ್ಮಿಕ ಒಕ್ಕೂಟಗಳು ಪ್ರತಿಭಟನೆ ನಡೆಸುತ್ತಿರುವುದು ಯಾಕೆ?
ದಂಡದ ಪ್ರಮಾಣ ಹೆಚ್ಚಳದ ಜೊತೆಗೆ ಸಣ್ಣ ತಪ್ಪು ಮಾಡಿದರೂ ವಾಹನ ಚಾಲಕರು ಜೈಲಿನಲ್ಲಿ ಇರಬೇಕಾಗುತ್ತದೆ. ಜೊತೆಗೆ ವಾಹನ ಸಹ ಮುಟ್ಟುಗೋಲಾಗುತ್ತದೆ. ಇದು ಕಾರ್ಮಿಕರಿಗೆ ಮತ್ತು ಸಾರಿಗೆ ಮಾಲೀಕರಿಗೆ ದೊಡ್ಡ ತಲೆನೋವಾಗಿದೆ. ಅಷ್ಟೇ ಅಲ್ಲದೇ ಟೆಂಡರ್ ಮೂಲಕ ಪರವಾನಿಗೆಯನ್ನು ಪಡೆಯುವುದಕ್ಕೆ ಇವರ ಭಾರೀ ವಿರೋಧವಿದೆ. ಸಾರಿಗೆಯನ್ನು ಸಂಪೂರ್ಣ ರಾಷ್ಟ್ರೀಕರಣ ಮಾಡಬೇಕಾದ ಸರ್ಕಾರ ದೊಡ್ಡ ದೊಡ್ಡ ಖಾಸಗಿ ಕಂಪೆನಿಗಳಿಗೆ ಮಣಿದು ಖಾಸಗಿಕರಣ ಮಾಡಲು ಹೊರಟಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲ ರಾಜ್ಯಗಳ ಸಾರಿಗೆ ನಿಗಮವನ್ನು ಹಂತ ಹಂತವಾಗಿ ಮುಚ್ಚಲು ಈ ಮಸೂದೆ ಅವಕಾಶ ನೀಡುತ್ತಿದೆ ಎನ್ನುವ ಆರೋಪ ಕಾರ್ಮಿಕ ಒಕ್ಕೂಟಗಳದ್ದು.
ಒಂದು ವೇಳೆ ಹರಾಜಿನ ಮೂಲಕ ಪರ್ಮಿಟ್ ಪಡೆದ ಖಾಸಗಿ ಕಂಪೆನಿಗಳು ತಮಗೆ ಲಾಭ ಬರುವ ಮಾರ್ಗಗಳಲ್ಲಿ ವಾಹನ ಓಡಿಸಿದರೆ ಸಾವಿರಾರು ಹಳ್ಳಿಗಳು ವಾಹನ ಸೌಲಭ್ಯದಿಂದ ವಂಚಿರಾಗುತ್ತಾರೆ. ವಾಹನಗಳ ದುರಸ್ತಿ ಸಾರಿಗೆ ಪ್ರಾಧಿಕಾರ ಮಂಜೂರು ಮಾಡಿದ ವರ್ಕ್ ಶಾಪ್ನಲ್ಲಿ ಆಗಬೇಕು. ವಾಹನ ತಯಾರು ಮಾಡುವ ಕಂಪೆನಿಗಳ ಲಾಬಿಗೆ ಮಣಿದ ಕಾರಣ ಈ ಅಂಶವನ್ನು ಮಸೂದೆಯಲ್ಲಿ ಸೇರಿಸಿದೆ. ಒಂದು ವೇಳೆ ಇದೇನಾದರೂ ಜಾರಿಯಾದಲ್ಲಿ ಸಾರಿಗೆ ನಿಗಮಗಳ ವರ್ಕ್ ಶಾಪ್ಗಳನ್ನು ಮುಚ್ಚಿಸಬೇಕಾಗುತ್ತದೆ. ಇದರಿಂದಾಗಿ ಸಾವಿರಾರು ಸಿಬ್ಬಂದಿ ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಕಾರ್ಮಿಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಈ ಮಸೂದೆ ಮಾಡಲು ಹೊರಟಿದ್ದು ಯಾಕೆ?
ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಕಾರು ಅಪಘಾತದಲ್ಲಿ ಮೃತಪಟ್ಟ ಬಳಿಕ ಎನ್ಡಿಎ ಸರ್ಕಾರ ಈ ಮಸೂದೆಯನ್ನು ಜಾರಿಗೆ ತರಲು ಮುಂದಾಗಿದೆ. ಅಪಘಾತ ಪ್ರಮಾಣ ತಗ್ಗಿಸಲು ಮತ್ತು ಸಾರಿಗೆ ಇಲಾಖೆಗಳಲ್ಲಿನ ಭ್ರಷ್ಟಾಚಾರ ತಪ್ಪಿಸಲು ದೇಶದೆಲ್ಲೆಡೆ ಏಕರೂಪದ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಈ ಮಸೂದೆಯನ್ನು ಸಿದ್ಧಪಡಿಸಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡುವ ಪ್ರತಿಯೊಂದು ಅಂಶವು ದಾಖಲಾಗಬೇಕು ಮತ್ತು ವ್ಯಕ್ತಿ ಒಂದೇ ಒಂದು ಚಾಲನಾ ಪರವಾನಗಿ ಹೊಂದಿರುವಂತೆ ನೋಡಿಕೊಳ್ಳುವುದು ಈ ಮಸೂದೆಯ ಪ್ರಮುಖ ಅಂಶ. ಸಾರಿಗೆಯಿಂದ ದೇಶಕ್ಕೆ ಬೊಕ್ಕಸಕ್ಕೆ ಆದಾಯ ತರುವ ಉದ್ದೇಶದಿಂದ ಕೆಲ ಬದಲಾವಣೆ ಮಾಡಿದೆ.
ಮಸೂದೆಯಲ್ಲಿ ಬದಲಾವಣೆಯಾದ ಅಂಶಗಳು ಯಾವುದು?
ಮಸೂದೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೆಲ ಬದಲಾವಣೆಗಳನ್ನು ಕೇಂದ್ರ ಸರ್ಕಾರ ಮಾಡಿದೆ. ಪ್ರಮುಖವಾಗಿ ದಂಡ ಪ್ರಮಾಣವನ್ನು ತಗ್ಗಿಸಿದೆ. ಕರಡಿನಲ್ಲಿ ಅತಿ ವೇಗದ ಚಾಲನೆಗೆ 5 ಸಾವಿರ ರೂ.ನಿಂದ 12,500 ರೂ.ವರೆಗೆ ದಂಡ ವಿಧಿಸಲಾಗಿತ್ತು. ಇದನ್ನು 1ರಿಂದ 6 ಸಾವಿರ ರೂ.ಗೆ ತಗ್ಗಿಸಲಾಗಿದೆ. ಮದ್ಯಪಾನ ಮಾಡಿ ಚಾಲನೆ ಮಾಡಿದರೆ 30,೦೦೦ ರೂ. ವರೆಗೆ ದಂಡ ಮತ್ತು 12 ರಿಂದ 18 ತಿಂಗಳು ಜೈಲು ಶಿಕ್ಷೆ ವಿಧಿಸುವ ಅವಕಾಶ ಇತ್ತು. ಇದನ್ನು 10 ರಿಂದ ರೂ 20ಸಾವಿರ ರೂ. ವರೆಗ ದಂಡ 1ರಿಂದ 6 ತಿಂಗಳವರೆಗೆ ಜೈಲು ಶಿಕ್ಷೆಗೆ ತಗ್ಗಿಸಲಾಗಿದೆ. ನಿರ್ಲಕ್ಷ್ಯದ ಚಾಲನೆಯಿಂದ ಮಗುವಿನ ಸಾವಿಗೆ ಕಾರಣವಾದರೆ, ಚಾಲಕನಿಗೆ 3 ಲಕ್ಷ ರೂ.ವರೆಗೆ ದಂಡ ಮತ್ತು 7 ವರ್ಷ ಜೈಲು ಶಿಕ್ಷೆ ವಿಧಿಸುವ ಪ್ರಸ್ತಾವ ಇತ್ತು. ಇದನ್ನು 50 ಸಾವಿರ ರೂ. ದಂಡ ಮತ್ತು 1 ವರ್ಷ ಜೈಲು ಶಿಕ್ಷೆಗೆ ಇಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.