News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಮಗೆ ನಮ್ಮ ಮೋದಿ ಯಾವಾಗ ಸಿಗ್ತಾರೆ?

Modi_Reganಈ ಬಾರಿಯ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಅತೀ ಹೆಚ್ಚು ನಿಂದನೆಗೊಳಗಾದ ರಾಜಕಾರಣಿ ಯಾರು? ಅದೇ ರೀತಿ ಅತೀ ಹೆಚ್ಚು ಪ್ರಚಾರ ಪಡೆದ ಜನಪ್ರಿಯ ರಾಜಕಾರಣಿ ಯಾರು?

– ಈ ಎರಡು ಪ್ರಶ್ನೆಗಳಿಗೂ ಉತ್ತರ ಒಂದೇ. ಅದೆಂದರೆ, ನರೇಂದ್ರ ಮೋದಿ. ಮೋದಿ ನಿಂದನೆಗೊಳಗಾದಷ್ಟು ಇನ್ನಾರೂ ಆಗಿಲ್ಲ. ಅದೇ ರೀತಿ ಮೋದಿಗೆ ದೊರಕಿದಷ್ಟು ಪ್ರಚಾರ ಬೇರೆ ಯಾವ ರಾಜಕಾರಣಿಗೂ ದೊರಕಿಲ್ಲ. ಮೋದಿಯ ರ್‍ಯಾಲಿ, ಸಭೆಗಳಿಗೆ ಕಿಕ್ಕಿರಿದು ಸೇರಿದಷ್ಟು ಜನರು ಇನ್ನಾವ ಸಭೆಯಲ್ಲೂ ಕಂಡು ಬರಲಿಲ್ಲ.

ರಾಜಕೀಯ ಕ್ಷೇತ್ರದಲ್ಲಿ ಟೀಕೆ, ನಿಂದನೆ ಸಹಜ. ಆದರೆ ಅದೆಲ್ಲವೂ ಒಂದು ಮಿತಿಯಲ್ಲಿರಬೇಕಾದುದು ರಾಜಕೀಯದ ಸಭ್ಯತೆಗೆ ಸಂಕೇತ. ಈ ಬಾರಿ ಮಾತ್ರ ರಾಜಕೀಯದ ಸಭ್ಯತೆಯನ್ನು ಗಾಳಿಯಲ್ಲಿ ತೂರಲಾಗಿದೆ. ಮನಸ್ಸಿಗೆ ಬಂದಂತೆ ಟೀಕೆಗಳು ಎಲುಬಿಲ್ಲದ ನಾಲಿಗೆಯಿಂದ ಹರಿದು ಹೊರಬಂದಿವೆ. ಸೋನಿಯಾ ಗಾಂಧಿ, ರಾಹುಲ್ ಸೇರಿದಂತೆ ಕಾಂಗ್ರೆಸ್‌ನ ಹಲವು ಮುಖಂಡರು ಮೋದಿಯನ್ನು `ಮೌತ್ ಕಾ ಸೌದಾಗರ್’ (ಸಾವಿನ ವ್ಯಾಪಾರಿ) ಎಂದು ಜರೆದರು. ಮೋದಿ ಒಬ್ಬ ಕೋಮುವಾದಿ ಎಂದು ಟೀಕಿಸಿದವರಿಗೆ ಲೆಕ್ಕವೇ ಇಲ್ಲ. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದೂ ಇರ್ಲಿ ತಗಾ ಎಂಬಂತೆ `ಮೋದಿ ನರಹಂತಕ’ ಎಂದು ಘೋಷಿಸಿಯೇ ಬಿಟ್ಟರು! ಕೆಲವೇ ತಿಂಗಳ ಹಿಂದೆ ಸಿದ್ದು ಇದೇ `ನರಹಂತಕ’ನೊಂದಿಗೆ ದೆಹಲಿಯ ಮುಖ್ಯಮಂತ್ರಿಗಳ ಸಭೆಯೊಂದರಲ್ಲಿ ಕೈಕುಲುಕಿ, ಶುಭಾಶಯ ಹೇಳಿದ್ದರು. ಕಾಂಗ್ರೆಸ್‌ನ ಕೇಂದ್ರ ಸಚಿವ ಬೇನಿ ಪ್ರಸಾದ್ ವರ್ಮಾ ಅವರಿಗೆ ಹೋದಲ್ಲೆಲ್ಲ ಮೋದಿ ಮೋದಿ… ಎಂಬ ಶಬ್ದ ಮಾತ್ರ ಕಿವಿಯಲ್ಲಿ ಅನುರಣಿಸತೊಡಗಿದಾಗ ಕೋಪ ತಾರಕಕ್ಕೇರಿ, `ಎಲ್ಲರೂ ಮೋದಿ ಮೋದಿ ಎಂದು ಭಜನೆ ಮಾಡುತ್ತಾರೆ. ಈ ಮೋದಿ ಮನುಷ್ಯನೇ ಅಲ್ಲ , ಆತ ಒಂದು ಮೃಗ’ ಎಂದು ತೀರ್ಪನ್ನೇ ಕೊಟ್ಟುಬಿಟ್ಟರು! ಇನ್ನು ಸಹರಾನ್‌ಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ `ಇದು ಉತ್ತರ ಪ್ರದೇಶ, ಗುಜರಾತ್ ಅಲ್ಲ. ಇಲ್ಲಿ ಶೇ. 22ರಷ್ಟು ಮುಸ್ಲಿಮರಿದ್ದಾರೆ. ಮೋದಿ ಇಲ್ಲಿ ಬಾಲ ಬಿಚ್ಚಿದರೆ ಆತನನ್ನು ಕೊಚ್ಚಿ ಕೊಚ್ಚಿ ಹಾಕುವೆ’ ಎಂದು ಅಬ್ಬರಿಸಿದ್ದು ನಮಗೆ ಗೊತ್ತೇ ಇದೆ. ನಮ್ಮ ಜ್ಞಾನಪೀಠಿ ಸಾಹಿತಿ ಯು.ಆರ್. ಅನಂತಮೂರ್ತಿ ಅವರಿಗೆ ಮೋದಿ ಹೆಸರನ್ನು ದಿನಕ್ಕೊಮ್ಮೆ ಧ್ಯಾನಿಸದಿದ್ದರೆ ನಿದ್ದೆಯೇ ಬರುವುದಿಲ್ಲ. ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗುತ್ತಾರೆಂದು ಗೊತ್ತಾದ ಕೂಡಲೇ ಅನಂತಮೂರ್ತಿ `ಮೋದಿ ಪ್ರಧಾನಿಯಾದರೆ ನಾನು ಈ ದೇಶದಲ್ಲೇ ಇರೋದಿಲ್ಲ’ ಎಂಬ ಹೇಳಿಕೆಯನ್ನು ಒಗೆದೇ ಬಿಟ್ಟರು. ಆದರೆ ಇತ್ತೀಚೆಗೆ ಮೋದಿ ಪ್ರಧಾನಿಯಾಗುವುದು ಖಾತರಿ ಎನಿಸಿದಾಗ, `ನಾನೇನೂ ಈ ದೇಶಬಿಟ್ಟು ಹೋಗಲಾರೆ. ಮೋದಿಯೊಬ್ಬ ಸರ್ವಾಧಿಕಾರಿ’ ಎಂದು ತಮ್ಮ ಮೊದಲಿನ ಹೇಳಿಕೆಗೆ ಜಾಣತನದ ತಿದ್ದುಪಡಿಯನ್ನು ಅವರೇ ಮಾಡಿದರು. ಪಿ. ಚಿದಂಬರಮ್ ಇದ್ದಿದ್ದರಲ್ಲೇ ಕಾಂಗ್ರೆಸ್‌ನ ಒಬ್ಬ ಸಭ್ಯ ಸಚಿವ ಎಂದು ಹೆಸರು ಪಡೆದವರು. ಆದರೆ ಅವರು ಕೂಡ ಮೋದಿ ವಿರುದ್ಧ ಇತ್ತೀಚೆಗೆ ಹರಿಹಾಯ್ದಿದ್ದಾರೆ. ತಮಿಳುನಾಡಿನ ರ್‍ಯಾಲಿಯೊಂದರಲ್ಲಿ ಮೋದಿ ಚಿದಂಬರಂ ಅವರಿಗೆ `ರೀಕೌಂಟಿಂಗ್ ಮಿನಿಸ್ಟರ್’ ಎಂದು ಲೇವಡಿ ಮಾಡಿದ್ದರು. (ಚಿದಂಬರಂ ಶಿವಗಂಗಾ ಕ್ಷೇತ್ರದಿಂದ ಮತಗಳ ಮರು ಎಣಿಕೆ ಆದಾಗ ಮಾತ್ರ ಗೆದ್ದಿದ್ದರು.) ಮೋದಿ ಲೇವಡಿಯನ್ನು ಸೀರಿಯಸ್ಸಾಗಿ ತೆಗೆದುಕೊಂಡ ಚಿದಂಬರಂ ಮೋದಿಯನ್ನು `ಎನ್‌ಕೌಂಟರ್ ಸಿಎಂ’ ಎಂದು ಖಾರವಾಗಿ ಟೀಕಿಸಿದ್ದರು. ಕೇವಲ 4 ದಿನಗಳ ಹಿಂದೆ ಅಕಸ್ಮಾತ್ ಬಾಯಿ ತೆರೆದ ನಮ್ಮ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ, `ದೇಶದಲ್ಲಿ ಎಲ್ಲೂ ಮೋದಿ ಅಲೆ ಇಲ್ಲ. ಅದು ಕೇವಲ ಮಾಧ್ಯಮದ ಸೃಷ್ಟಿ’ ಎಂದು ಅಪ್ಪಣೆ ಕೊಡಿಸಿದ್ದರು. ಅವರ ಈ `ಅಪ್ಪಣೆ’ಯ ಬಿಸಿ ಆರುವ ಮುನ್ನವೇ, ಪ್ರಧಾನಿ ಸಿಂಗ್ ಅವರ ಕಿರಿಯ ಸಹೋದರ ದಲ್ಜೀತ್ ಸಿಂಗ್ ಕೊಹ್ಲಿ ಅಮೃತಸರದ ಮೋದಿ ರ್‍ಯಾಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದು ಎಂತಹ ಕಾಕತಾಲೀಯ! ಮೋದಿ ಅಲೆ ಇಲ್ಲದಿದ್ದರೆ ಪ್ರಧಾನಿ ಸಿಂಗ್ ಅವರ ಸಹೋದರ ಬಿಜೆಪಿಗೆ ಸೇರುವ ಅನಿವಾರ್ಯತೆಯಾದರೂ ಏನಿತ್ತು? ಅವರು ಕಾಂಗ್ರೆಸ್ ತೊರೆದಿದ್ದಾದರೂ ಏಕೆ?

ಹೀಗೆ ಮೋದಿಯನ್ನು ಹಿಗ್ಗಾಮುಗ್ಗಾ ಟೀಕಿಸುವವರ, ನಿಂದಿಸುವವರ ಪಟ್ಟಿ ಸಾಕಷ್ಟು ಉದ್ದವಿದೆ. ಮೋದಿಯನ್ನು ನ್ಯಾಯಾಲಯದ ಕಟಕಟೆಯಲ್ಲಿ ಹೇಗಾದರೂ ಎಳೆದು ತಂದು ನಿಲ್ಲಿಸಬೇಕೆಂದು ಹರಸಾಹಸಪಟ್ಟ ತೀಸ್ತಾ ಸೆಟಲ್‌ವಾಡ್ ಕೊನೆಗೂ ಸೋತು ಸುಣ್ಣವಾಗಬೇಕಾಯಿತು. ಸುಪ್ರೀಂಕೋರ್ಟ್ ಸ್ವತಃ `ಗೋಧ್ರೋತ್ತರ ಗಲಭೆಯಲ್ಲಿ ನರೇಂದ್ರ ಮೋದಿಯ ಪಾತ್ರವಿಲ್ಲ’ ಎಂದು ತೀರ್ಪು ನೀಡಿದ್ದು ಆಕೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದರೂ ಬಿಡದೆ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ಮತ್ತೆ ಕೋರ್ಟಿಗೆ ಹೋಗಿ ಮೋದಿ ವಿರುದ್ಧ ಆರೋಪ ಹೊರಿಸುವ ಅದೇ ಹಳೆ ಚಾಳಿಯನ್ನು ಆಕೆ ಮುಂದುವರಿಸಿದ್ದಾಳೆ. ಕೆಲವು ಪೂರ್ವಗ್ರಹಪೀಡಿತ, ಎಡಪಂಥೀಯ ಪತ್ರಕರ್ತರೂ ಮೋದಿ ವಿರುದ್ಧ ಆಗಾಗ ಟೀಕೆಗಳ ಸುರಿಮಳೆ ಸುರಿಸುತ್ತಲೇ ಇರುತ್ತಾರೆ. ಆದರೆ ಈ ಟೀಕೆಗಳು ಈಗ ಸಂಪೂರ್ಣ ಮೊನಚು ಕಳೆದುಕೊಂಡಿವೆ. ಮಾಧ್ಯಮಗಳು ಮೋದಿ ವಿರುದ್ಧ ಎಸಗುವ ಯಾವುದೇ ಟೀಕೆಗಳಿಗೂ ಈಗ ಕವಡೆಯ ಕಿಮ್ಮತ್ತೂ ಇಲ್ಲದಂತಾಗಿದೆ. ಹೊಸದೇನಾದರೂ ಟೀಕಾಸ್ತ್ರ ಬಿಡಬೇಕೆಂದು ಮಾಧ್ಯಮದ ಕೆಲವು ಮಂದಿ ಹಾಗೂ ಬುದ್ಧಿಜೀವಿಗಳು ಹೊಂಚು ಹಾಕುತ್ತಲೇ ಇದ್ದರೂ ಪ್ರಯೋಜನವಾಗುತ್ತಿಲ್ಲ. ಅವರೆಲ್ಲರ ಮೊಗದಲ್ಲಿ ಮತ್ತೆ ಮತ್ತೆ ಕಂಡುಬರುತ್ತಿರುವುದು ಬರೀ ಹತಾಶೆ, ನಿರಾಶೆ.

ಮೋದಿ ವಿರುದ್ಧದ ಟೀಕೆಗಳಿಗೆ ಬಹುಶಃ ಅಂತ್ಯ ಇಲ್ಲವೇನೊ. ಆದರೆ ಮೋದಿ ಈ ಟೀಕೆಗಳಿಗೆ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ. ಕಳೆದ 12 ವರ್ಷಗಳಿಂದ ಅವರ ವಿರುದ್ಧ ಈ ಟೀಕಾಸ್ತ್ರಗಳು ತೂರಿ ಬರುತ್ತಲೇ ಇವೆ. ಅದಕ್ಕೆಲ್ಲ ತಲೆ ಕೆಡಿಸಿಕೊಂಡಿದ್ದರೆ ಮೋದಿ 3 ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆ ಆಗುತ್ತಲೇ ಇರಲಿಲ್ಲ. ಗುಜರಾತನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲೂ ಸಾಧ್ಯವಿರುತ್ತಿರಲಿಲ್ಲ. ಇರಲಿ, ಈಗ ಮೋದಿಯ ಪ್ರಚಾರದ ವಿಷಯಕ್ಕೆ ಬರೋಣ. ಈ ಬಾರಿಯ ಚುನಾವಣೆಯಲ್ಲಿ ಮೋದಿ ಪಡೆದಷ್ಟು ಪ್ರಚಾರ ಇನ್ನಾರಿಗೂ ದೊರಕಿಲ್ಲ. ಮೋದಿಗೆ ದೊರಕಿದ ಪ್ರಚಾರದ ಕಾಲು ಭಾಗ ಕೂಡ ಸೋನಿಯಾ ಅಥವಾ ರಾಹುಲ್ ಗಾಂಧಿಗೆ ಸಿಕ್ಕಿಲ್ಲ. ಮೋದಿ ಸಭೆಗಳಿಗೆ ಜನರು ಜೇನ್ನೊಣದಂತೆ ಹರಿದು ಬರುತ್ತಾರೆ. ಸೋನಿಯಾ ಅಥವಾ ರಾಹುಲ್ ಗಾಂಧಿ ಸಭೆಗಳು ಜನರಿಲ್ಲದೆ ಭಣಗುಟ್ಟುತ್ತಿರುತ್ತವೆ. ಮೋದಿ ಇದುವರೆಗೆ ದೇಶದುದ್ದಕ್ಕೆ ಪಾಲ್ಗೊಂಡ ಸುಮಾರು 129 ರ್‍ಯಾಲಿಗಳಲ್ಲಿ ಭಾಗವಹಿಸಿದವರ ಸಂಖ್ಯೆ ಹತ್ತಿರ ಹತ್ತಿರ 2 ಕೋಟಿ ಜನರು. ಚುನಾವಣೆ ಮುಗಿಯುವ ವೇಳೆಗೆ ಮೋದಿ ಸುಮಾರು 200-250 ರ್‍ಯಾಲಿಗಳಲ್ಲಿ ಪಾಲ್ಗೊಳ್ಳುವ ಯೋಜನೆಯಿದ್ದು 25 ಕೋಟಿಗೂ ಹೆಚ್ಚು ಜನರು ಈ ರ್‍ಯಾಲಿಗಳಿಗೆ ಹರಿದುಬರುವ ಸಾಧ್ಯತೆ ಇದೆ. ಮೊನ್ನೆ ಮೋದಿ ವಾರಾಣಸಿಯಲ್ಲಿ ನಾಮಪತ್ರ ಸಲ್ಲಿಸುವುದಕ್ಕೆ ಮುನ್ನ ನಡೆದ ರೋಡ್‌ಶೋನಲ್ಲಿ ಭಾಗವಹಿಸಿದ ಅಭಿಮಾನಿಗಳ ಸಂಖ್ಯೆಯೇ ಬರೋಬ್ಬರಿ 3 ಲಕ್ಷ. (ಇದು `ಟೈಮ್ಸ್ ಆಫ್ ಇಂಡಿಯಾ’ ಎಂಬ ಕಾಂಗ್ರೆಸ್ ಪರವಾಗಿರುವ ಪತ್ರಿಕೆಯ ಮುಖಪುಟದಲ್ಲಿ ಏ. 25 ರಂದು ಪ್ರಕಟವಾದ ಚಿತ್ರಸಹಿತ ವರದಿ!)

ಜನರೇಕೆ ಹೀಗೆ ಮೋದಿ ಹಿಂದೆ ಬೀಳುತ್ತಿದ್ದಾರೆ? ಮೋದಿ ಕಂಡರೆ ಅವರಿಗೇಕೆ ಅಷ್ಟೊಂದು ಆಕರ್ಷಣೆ? ಸಮಾಜಶಾಸ್ತ್ರಜ್ಞ ಶಿವ ವಿಶ್ವನಾಥನ್ ಅವರ ವಿಶ್ಲೇಷಣೆ ಹೀಗಿದೆ: `The AAP is going to people and the BJP is saying people are coming to them and Rahul Gandhi failing to attract attention, Modi is riding strong’ ಮೋದಿ ರ್‍ಯಾಲಿಗಳಿಗೆ ಜನರೇ ಆಕರ್ಷಿತರಾಗಿ ಬರುತ್ತಿದ್ದಾರೆ. ಅವರನ್ನು ಕರೆತರುವ ಪ್ರಯತ್ನವನ್ನು ಬಿಜೆಪಿಯೇನೂ ಮಾಡುತ್ತಿಲ್ಲ. ಕಾಂಗ್ರೆಸ್ ರ್‍ಯಾಲಿಗಳಿಗೆ ಕರೆತರುವ ಪ್ರಯತ್ನ ಮಾಡಿದರೂ ಜನರೇ ಬರುತ್ತಿಲ್ಲ.

ಇದರಿಂದ ಹತಾಶಗೊಂಡಿರುವ ಕಾಂಗ್ರೆಸ್ ಇದೀಗ ತನ್ನ ಕೊನೆಯ ಬ್ರಹ್ಮಾಸ್ತ್ರವಾಗಿ, ತೃತೀಯ ರಂಗದ ಬೆಂಬಲದೊಂದಿಗೆ ಈ ಬಾರಿ ಕೇಂದ್ರದಲ್ಲಿ ಮತ್ತೆ ಸರ್ಕಾರ ರಚಿಸುವುದಾಗಿ ಹೇಳಿಕೊಂಡಿದೆ. ಅಂದರೆ ಸ್ವಂತ ಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲವೆಂಬುದನ್ನು ಅದು ತಾನಾಗಿಯೇ ಒಪ್ಪಿಕೊಂಡಂತಾಗಿದೆ. ತೃತೀಯ ರಂಗ ಸಮ್ಮತಿಸಿದರೆ ಅದರ ನೇತೃತ್ವ ತಾನು ವಹಿಸುವೆ ಎಂದು ಶರಣಾಗತಿಯ ಹೇಳಿಕೆ ನೀಡಿದೆ. ಕಾಂಗ್ರೆಸ್‌ನ ಹತಾಶ ಸ್ಥಿತಿಗೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ?

ಮೋದಿ ಕುರಿತು ಪಕ್ಷಾತೀತ ಅಭಿಪ್ರಾಯ ವ್ಯಕ್ತಪಡಿಸಿದ ಅನೇಕ ಗಣ್ಯರೂ ಇದ್ದಾರೆ. `ಉತ್ತಮ ಆಡಳಿತ ಮತ್ತು ಸಮೃದ್ಧಿಗಾಗಿ ನಾನು ಮೋದಿಯವರನ್ನು ಬೆಂಬಲಿಸುತ್ತೇನೆ’ ಎಂದು ಹೇಳಿದವರು ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ. `ಜನರು ಮೋದಿಯವರನ್ನು ಒಪ್ಪುತ್ತಾರೆ. ಏಕೆಂದರೆ ಅವರು ಆಡಿದ ಮಾತನ್ನು ಅನುಷ್ಠಾನಕ್ಕೆ ತರುವಲ್ಲಿ ಬದ್ಧತೆ ತೋರಿಸುತ್ತಾರೆ. ಅವರೊಬ್ಬ ದೂರದೃಷ್ಟಿಯ ನಾಯಕ’ ಎಂದವರು ಬಯೋಕಾನ್ ಕಂಪೆನಿ ನಿರ್ದೇಶಕಿ ಕಿರಣ್ ಮಜುಂದಾರ್ ಷಾ. `ಮೋದಿಯವರನ್ನು ದೇವರು ನಮಗಾಗಿಯೇ ಕಳುಹಿಸಿಕೊಟ್ಟಿದ್ದಾನೆ. ಅವರು ಮುಂದಿನ ಪ್ರಧಾನಿಯಾಗಲಿದ್ದಾರೆ’ – ಹೀಗೆಂದವರು ಪ್ರಸಿದ್ಧ `ತುಘಲಕ್’ ಪತ್ರಿಕೆ ಸಂಪಾದಕ ಚೋ. ರಾಮಸ್ವಾಮಿ. ಇನ್ನು ಪ್ರಮುಖ ಷೇರು ಕಂಪೆನಿ ಸಿಎಲ್‌ಎಸ್‌ಎ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟೋಫರ್ ವುಡ್ `ಗುಜರಾತ್ ಮುಖ್ಯಮಂತ್ರಿ ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿರುವುದು ಭಾರತದ ಷೇರು ಮಾರುಕಟ್ಟೆಗೆ ಬಹುದೊಡ್ಡ ಆಶಾಕಿರಣ’ ಎಂದಿದ್ದಾರೆ.

ಈ ದೇಶದಲ್ಲಿ ಮಾತ್ರವಲ್ಲ. ಮೋದಿಯವರನ್ನು ಬೆಂಬಲಿಸುವ, ಅವರು ಪ್ರಧಾನಿಯಾಗಲೆಂದು ಹಾರೈಸುವ ಗಣ್ಯರ ಧ್ವನಿ ಈಗ ಸಾಗರದಾಚೆಯಿಂದಲೂ ಕೇಳಿ ಬರತೊಡಗಿದೆ. ಅಮೆರಿಕದ ಖ್ಯಾತ ಲೇಖಕ ಡೇವಿಡ್ ಕೋಹನ್ ಅಲ್ಲಿನ The Daily Caller ಎಂಬ ಆನ್‌ಲೈನ್ ಪತ್ರಿಕೆಯಲ್ಲಿ ಮೋದಿ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್‌ರನ್ನು ಹೋಲಿಸಿ ಲೇಖನ ಬರೆದಿದ್ದಾರೆ. ಈ ಲೇಖನ ಬಹುಬೇಗ ಪ್ರಚಾರಗೊಂಡು ಭಾರತೀಯ ಓದುಗರನ್ನು ವಿಸ್ಮಯದಲ್ಲಿ ಕೆಡವಿತ್ತು. ಕೋಹನ್ ಅವರ ಲೇಖನದ ಕೆಲವು ಅಂಶಗಳು ಕುತೂಹಲಕರ:- ಮೋದಿ ಮತ್ತು ರೇಗನ್ ಇಬ್ಬರೂ ಬಡಕುಟುಂಬದಿಂದ ಬಂದವರು. ಇಬ್ಬರೂ ಜನಪ್ರಿಯ ಮತ್ತು ಯಶಸ್ವೀ ರಾಜ್ಯ ನಾಯಕರು. ಮೋದಿ ರೇಗನ್ ಅವರಂತೆಯೇ ಮುಕ್ತ ಮಾರುಕಟ್ಟೆ ಅರ್ಥಶಾಸ್ತ್ರದ ಓರ್ವ ಉತ್ತಮ ಪ್ರತಿಪಾದಕ. `ಮೋದಿನೋಮಿಕ್ಸ್’ ಎಂಬ ಪದ `ರೇಗನೋಮಿಕ್ಸ್’ ಎಂಬ ಪದದ ರೀತಿಯಲ್ಲೇ ಇದೆ. ಈ ಇಬ್ಬರು ನಾಯಕರ ನಡುವೆ ಕಂಡುಬರುವ ಸಮಾನ ಅಂಶವೆಂದರೆ ಅವರ ಟೀಕಾಕಾರರ ಬಗೆಗಿನದು. ಅಮೆರಿಕದಂತೆ ಭಾರತದಲ್ಲಿಯೂ ಸಾಂಸ್ಕೃತಿಕವಾಗಿ ಮೇಲ್ವರ್ಗದವರಿದ್ದಾರೆ. ಅವರು ಈಗಲೂ ಯುರೋಪಿನ ತಮ್ಮ ವಸಾಹತುಗಳ ದೊರೆಗಳನ್ನು ಕೊಂಡಾಡುವಂಥವರು. ಭಾರತದ ಈ ಸಾಂಸ್ಕೃತಿಕ ಮೇಲ್ವರ್ಗದ ಜನ ಮೋದಿಯನ್ನು ಇಂಚಿಂಚು ಕೂಡ ತಿರಸ್ಕಾರದಿಂದ ನೋಡುತ್ತಾರೆ. ಅಮೆರಿಕದ ಸಾಂಸ್ಕೃತಿಕ ಮೇಲ್ವರ್ಗ ರೇಗನ್‌ರನ್ನು ಹಾಗೆಯೇ ಕೀಳಾಗಿ ಕಂಡಿತ್ತು. ರೇಗನ್ ಆಧುನಿಕತೆಯ ಸೂಕ್ಷ್ಮಗಳಿಲ್ಲದ ಒಬ್ಬ ಸರಳ ಮನುಷ್ಯ. ಆತ ಅಧ್ಯಕ್ಷರಾಗುವುದು ಏನೇನೂ ಸರಿಯಿಲ್ಲ ಎಂಬುದು ಅಮೆರಿಕದ ಮೇಲ್ವರ್ಗದವರ ನಂಬಿಕೆಯಾಗಿತ್ತು. ರೇಗನ್ ಅಧಿಕಾರಕ್ಕೆ ಬಂದರೆ ಭಾರೀ ಅನಾಹುತವಾದೀತೆಂದು ಎಚ್ಚರಿಕೆ ನೀಡಲಾಗಿತ್ತು. ಆದರೆ ಮುಂದೇನಾಯಿತು ಎಂಬುದು ಈಗ ಇತಿಹಾಸ. ಸೋವಿಯತ್ ಸಾಮ್ರಾಜ್ಯ ಕುಸಿದಾಗ ರೇಗನ್ ಟೀಕಾಕಾರರಿಗೆ ಏನು ಹೇಳುವುದೆಂದೇ ತಿಳಿಯಲಿಲ್ಲ.’

ಡೇವಿಡ್ ಕೋಹನ್ ತಮ್ಮ ಲೇಖನದಲ್ಲಿ `ಮೋದಿ ಭಾರತದ ರೇಗನ್ ಆಗ್ತಾರಾ?’ ಎಂದು ಪ್ರಶ್ನಿಸುತ್ತಾ, ಅದಕ್ಕೆ ಉತ್ತರವನ್ನೂ ಅವರೇ ನೀಡಿದ್ದಾರೆ: `ರೇಗನೋಮಿಕ್ಸ್‌ನ ಕಾಲದಲ್ಲಿ ಬದುಕಿದ ನನಗೆ ಅನ್ನಿಸುವ ಮಾತೆಂದರೆ, ಭಾರತದ ಮುಂದೆ ವಿಪುಲವಾದ ಆರ್ಥಿಕ ಅವಕಾಶಗಳಿದ್ದಾಗಲೂ ಇಲ್ಲಿನ ನಕಲಿ ಸಮಾಜವಾದದಿಂದಾಗಿ ಯಾವುದೇ ಸಾಧನೆ ಸಾಧ್ಯವಾಗಲಿಲ್ಲ. ಮೋದಿನೋಮಿಕ್ಸ್‌ನಿಂದ ಅಂತಹ ಸಾಧನೆ ಸಾಧ್ಯ ಎಂಬುದು ನನ್ನ ನಂಬಿಕೆ. ಮೋದಿ ಅವರ ನೇತೃತ್ವದಲ್ಲಿ ಗುಜರಾತ್ ಸಾಧಿಸಿದ ಪ್ರಗತಿ ಸಮಾಜದ ಎಲ್ಲ ವರ್ಗಗಳಿಗೆ, ವಿಶೇಷವಾಗಿ ಬಡವರಿಗೆ ವರದಾನವಾಗಿ ಪರಿಣಮಿಸಿದೆ ಎನ್ನುವ ಪುರಾವೆ ನಮ್ಮ ಮುಂದಿದೆ.’

`ನಮಗೆ ನಮ್ಮ ಮೋದಿ ಯಾವಾಗ ಸಿಗ್ತಾರೆ?’ – ಇದು ಡೇವಿಡ್ ಕೋಹನ್ ಅವರ ಲೇಖನದ ಕೊನೆಯ ವಾಕ್ಯ. ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಭಾರತದ ಪ್ರಜ್ಞಾವಂತರದ್ದೂ ಇದೇ ಪ್ರಶ್ನೆ. ನಮಗೆ ನಮ್ಮ ಮೋದಿ ಮೇ 16ರ ಬಳಿಕ ಸಿಗಲಿದ್ದಾರೆ. ಅವರ ಸಮರ್ಥ ಸಾರಥ್ಯದಲ್ಲಿ ಭಾರತ ಪ್ರಗತಿಯ ಹೊಸ ಹೆಜ್ಜೆ ಇಡಲಿದೆ ಎಂದು ಕೋಟ್ಯಂತರ ಮಂದಿ ಹಾರೈಸುತ್ತಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top