ಬಂಟ್ವಾಳ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕೇವಲ ಪಟ್ಲರ ಸಂಘಟನೆಯಲ್ಲ, ಅದು ಕಲಾವಿದರ, ಕಲಾಭಿಮಾನಿಗಳ ಸಂಘಟನೆ. ಪ್ರತಿಯೊಬ್ಬರ ಮನೆ, ಮನೆಯಲ್ಲೂ ಇದರ ಸದಸ್ಯರಿರಬೇಕೆನ್ನುವ ಸದುದ್ದೇಶದಿಂದ ಇದನ್ನು ಪ್ರಾರಂಭಿಸಲಾಗಿದೆ. ಅಶಕ್ತ ಕಲಾವಿದರು ಹಾಗೂ ಅವರ ಕುಟುಂಬಕ್ಕೆ ನೆರವು ನೀಡುವುದೇ ಇದರ ಮೂಲ ಉದ್ದೇಶವಾಗಿದೆ ಎಂದು ಫೌಂಡೇಶನ್ನ ಸ್ಥಾಪಕಾಧ್ಯಕ್ಷ, ಯುವ ಭಾಗವತ ಪಟ್ಲ ಸತೀಶ್ ಶೆಟ್ಟಿ ಹೇಳಿದರು.
ಅವರು ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಸರಪಾಡಿ ವಲಯ ಸಮಿತಿ ಉದ್ಘಾಟನೆ ಹಾಗೂ ಯಕ್ಷಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೃತ್ತಿಯಲ್ಲಿ ವೈದ್ಯರಾಗಿರುವ ಡಾ| ಬಾಲಚಂದ್ರ ಶೆಟ್ಟಿ ಅವರ ನೇತೃತ್ವದ ತಂಡ ನಮ್ಮ ಸಂಘಟನೆಗೆ ಕೈಜೋಡಿಸಿರುವುದಕ್ಕೆ ಅವರಿಗೆ ಸಂಘಟನೆ ಆಭಾರಿಯಾಗಿರುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವೇ|ಮೂ| ಎಸ್. ವಿಜಯಕೃಷ್ಣ ಐತಾಳ್ ಮಾತನಾಡಿ, ಯಕ್ಷಗಾನ ಎನ್ನುವುದು ವ್ಯಾಕರಣ ಬದ್ಧ ಶಾಸ್ತ್ರ. ಇಲ್ಲಿನ ಭಾಗವತರು ಸೂತ್ರಧಾರರಾಗಿ ಕಾರ್ಯನಿರ್ವಹಿಸುತ್ತಾರೆ. ಆದರೆ ಪಟ್ಲ ಸತೀಶ್ ಶೆಟ್ಟಿಯವರು ಭಾಗವತಿಕೆಯ ಜತೆಗೆ ಟ್ರಸ್ಟ್ ಸ್ಥಾಪಿಸಿ ಅಶಕ್ತರಿಗೆ ನೆರವಾಗುತ್ತಿರುವುದು ಶ್ಲಾಘನೀಯ ಎಂದರು.
ಯಕ್ಷಗಾನ ವಿದ್ವಾಂಸ ಡಾ| ಪ್ರಭಾಕರ ಜೋಶಿ ಮಾತನಾಡಿ, ಪ್ರತಿಷ್ಠಿತ ವ್ಯಕ್ತಿಗಳು ತಮಗಿರುವ ತಾರಾಮೌಲ್ಯವನ್ನು ತಮಗಾಗಿಯೇ ಉಪಯೋಗಿಸುತ್ತಾರೆ. ಆದರೆ ಪಟ್ಲ ಸತೀಶ್ ಶೆಟ್ಟಿ ಅವರು ಅಶಕ್ತರ ಉದ್ಧಾರಕ್ಕಾಗಿ ತನ್ನ ಮೌಲ್ಯವನ್ನು ಬಳಸಿಕೊಳ್ಳುತ್ತಿರುವುದು ವಿಸ್ಮಯವೇ ಸರಿ ಎಂದರು.
ಈ ಸಂದರ್ಭದಲ್ಲಿ ವಲಯದ ವತಿಯಿಂದ ಪಟ್ಲ ಸತೀಶ್ ಶೆಟ್ಟಿ ಅವರನ್ನು ಗೌರವಿಸಿ ಟ್ರಸ್ಟ್ಗೆ 50 ಸಾವಿರ ರೂ.ಗಳ ನಿಧಿ ಸಮರ್ಪಿಸಲಾಯಿತು. ವೇದಿಕೆಯಲ್ಲಿ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಅಡ್ಯಾರ್, ವಿಹಿಂಪ ಬಂಟ್ವಾಳ ಅಧ್ಯಕ್ಷ ಅರುಣ್ಕುಮಾರ್ ಶೆಟ್ಟಿ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹರೀಶ್ ಪೂಂಜಾ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಸಂಪತ್ ಸುವರ್ಣ, ಬಾಚಕೆರೆ ಕ್ಷೇತ್ರದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ದಂತವೈದ್ಯ ಡಾ| ವಿಶುಕುಮಾರ್ ಶೆಟ್ಟಿ, ಬಂಟ್ವಾಳ ವರ್ತಕರ ವಿ.ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಜೈನ್, ಉದ್ಯಮಿ ನವೀನ್ ವಿ.ಶೆಟ್ಟಿ ಮುಂಬಯಿ ಉಪಸ್ಥಿತರಿದ್ದರು.
ಫೌಂಡೇಶನ್ನ ಸರಪಾಡಿ ವಲಯದ ಸಂಚಾಲಕ ಸರಪಾಡಿ ಅಶೋಕ ಶೆಟ್ಟಿ ಸ್ವಾಗತಿಸಿ, ಅಧ್ಯಕ್ಷ ಡಾ| ಬಾಲಚಂದ್ರ ಶೆಟ್ಟಿ ಮಿಯಾರು ವಂದಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಉದಯಕುಮಾರ್ ಜೈನ್ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಶರಸೇತು ಬಂಧ ತಾಳಮದ್ದಳೆ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.