ಮುಂಬೈ : ಮುಂಬೈಯ ಪ್ರಸಿದ್ಧ, ಸುಮಾರು 300 ವರ್ಷಗಳ ಹಳೆಯ ಹಾಜಿ ಅಲಿ ದರ್ಗಾಗೆ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಐತಿಹಾಸಿಕ ತೀರ್ಪನ್ನು ಪ್ರಕಟಿಸಿದೆ.
ಈ ತೀರ್ಪು ನಿಜವಾದ ಅರ್ಥದಲ್ಲಿ ನೂರ್ ಜಹಾನ್ ಸಫಿಯಾ ನಿಯಾಜ್ ಎಂಬ ಮಹಿಳಾ ಹೋರಾಟಗಾರ್ತಿ ಹೋರಾಟಕ್ಕೆ ಸಂದ ಜಯ.
ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಮುಖ್ಯಸ್ಥೆಯಾಗಿರುವ ಅವರು ದರ್ಗಾಗೆ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂದು ಸತತ 4 ವರ್ಷಗಳಿಂದ ನಿರಂತರ ಹೋರಾಟವನ್ನು ನಡೆಸುತ್ತಾ ಬಂದಿದ್ದಾರೆ.
ಬಾಂಬೆ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ತೀರ್ಪಿನಿಂದ ಅತೀವ ಸಂತೋಷವಾಗಿದ್ದು, ಸಾಂವಿಧಾನಿಕ ಮೌಲ್ಯ ಎತ್ತಿ ಹಿಡಿದ ನ್ಯಾಯಾಲಯಕ್ಕೆ ಧನ್ಯವಾದ ಎಂದಿದ್ದಾರೆ.
ಆರಂಭದಲ್ಲಿ ಸಹಿ ಸಂಗ್ರಹದ ಮೂಲಕ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಸದಸ್ಯರು ದರ್ಗಾ ಪ್ರವೇಶಕ್ಕೆ ಹೋರಾಟ ಆರಂಭಿಸಿದರು. ಬಳಿಕ ಅಲ್ಪಸಂಖ್ಯಾತ ಸಮಿತಿ, ರಾಜ್ಯ ಮಹಿಳಾ ಸಮಿತಿ, ಅಲ್ಪಸಂಖ್ಯಾತ ಸಚಿವರುಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಇವರು ಯಾರೂ ಈ ಬಗ್ಗೆ ಆಸಕ್ತಿ ತೋರಿಸದ ಹಿನ್ನಲೆಯಲ್ಲಿ ಟ್ರಸ್ಟಿಗಳನ್ನು ಭೇಟಿಯಾದರು. ಅವರೂ ಇವರ ಬೇಡಿಕೆಗೆ ಬಗ್ಗದ ಕಾರಣ ಅನಿವಾರ್ಯವಾಗಿ ಬೇರೆ ದಾರಿ ಇಲ್ಲದೆ ನ್ಯಾಯಾಲಯದ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸಿದರು.
ಸುದೀರ್ಘ ಹೋರಾಟದ ಫಲವಾಗಿ ಇದೀಗ ಅವರಿಗೆ ನ್ಯಾಯ ಸಿಕ್ಕಿದೆ.
ಇದೊಂದು ಐತಿಹಾಸಿಕ ತೀರ್ಪಾಗಿದ್ದು, ಪವಿತ್ರ ಸ್ಥಳಗಳು ತಾರತಮ್ಯ ಮಾಡುವ ಜಾಗವಲ್ಲ ಎಂಬುದನ್ನು ಜನ ಈಗಲಾದರೂ ಮನಗಾಣಬೇಕಿದೆ ಎಂದು ನೂರ್ ಜಹಾನ್ ಹೇಳುತ್ತಾರೆ.
ಆದರೆ ಹಾಜಿ ಅಲಿ ದರ್ಗಾ ಮಂಡಳಿ ಸದಸ್ಯರು ತೀರ್ಪಿನ ವಿರುದ್ಧ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.