ಬೈಂದೂರು: ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರಿಗೆ ಸಮಾನ ನ್ಯಾಯ ನೀಡಬೇಕಾದುದು ನ್ಯಾಯಾಂಗದ ಹೊಣೆ. ಅದಕ್ಕಾಗಿ ಹಲವು ಕಾಯಿದೆಗಳಿವೆ. ಆದರೆ ಅವು ಪುಸ್ತಕದಲ್ಲಿದ್ದರೆ ಸಾಲದು. ಅಗತ್ಯವಿರುವಾಗ ಅನುಷ್ಠಾನಗೊಳ್ಳಬೇಕು. ಅದಾಗಬೇಕಾದರೆ ಎಲ್ಲರಿಗೆ ಕಾನೂನಿನ ಸಾಮಾನ್ಯ ಜ್ಞಾನ ಅಗತ್ಯ ಎಂದು ಕುಂದಾಪುರದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಸುವರ್ಣ ಹೇಳಿದರು. ಸೇವಾ ಸಮಿತಿ ಜನರಿಗೆ ನೀಡುವ ಕಾನೂನು ಸೇವೆಗಳನ್ನು ಅವರು ವಿವರಿಸಿದರು.
ತಾಲೂಕು ಕಾನೂನು ಸೇವಾ ಸಮಿತಿ. ವಕೀಲರ ಸಂಘ, ಅಭಿಯೋಗ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವದ್ಧಿ ಸೇವಾ ಯೋಜನೆ, ’ಸಾಧನಾ’ದ ಸಂಯುಕ್ತ ಆಶ್ರಯದಲ್ಲಿ ಮರವಂತೆಯ ಸಾಧನಾ ಸಮುದಾಯ ಭವನದಲ್ಲಿ ಸೋಮವಾರ ನಡೆದ ಕಾನೂನು ಅರಿವು ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಎ. ಬಿ. ಶೆಟ್ಟಿ ಪ್ರಕರಣಗಳಲ್ಲಿ ಜನರು ರಾಜಿಯಾಗುವುದು ಹೆಚ್ಚು ಸೂಕ್ತ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಹಿರಿಯ ನ್ಯಾಯವಾದಿ ಜಿ. ಸಂತೋಷಕುಮಾರ ಶೆಟ್ಟಿ ಜನನ, ಮರಣ ನೋಂದಣಿಯ ಮಹತ್ವ, ಭೂದಾಖಲೆಗಳ ಅನಿವಾರ್ಯತೆ, ಮರಣಪತ್ರದ ಸ್ವರೂಪ, ಜೀವನಾಂಶ ಪಡೆಯುವಿಕೆ, ವಾಹನ ನೋಂದಣಿ ಮತ್ತು ಚಾಲನಾ ಪರವಾನಿಗೆ ಪಡೆದಿರುವುದರ ಅಗತ್ಯಗಳನ್ನು ವಿವರಿಸಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶಿರಿಯಾರ ಮುರಳೀಧರ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ಕೆ. ಎ. ಸುಗುಣಾ, ಕಾನೂನು ಸೇವಾ ಸಮಿತಿಯ ಸದಸ್ಯ ಎಸ್. ಜನಾರ್ದನ ಮರವಂತೆ, ಸಾಧನಾ ಅಧ್ಯಕ್ಷ ವಿಜಯಕುಮಾರ ಶೆಣೈ ಉಪಸ್ಥಿತರಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸದಾನಂದ ನಾಯ್ಕ್ ಸ್ವಾಗತಿಸಿದರು. ಸಹಾಯಕ ಸರಕಾರಿ ಅಭಿಯೋಜಕಿ ಸುಮಂಗಲಾ ಸಿ. ನಾಯ್ಕ್ ವಂದಿಸಿದರು. ಅಂಗನವಾಡಿ ಮೇಲ್ವಿಚಾರಕಿ ಸವಿತಾ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.