ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಸರ್ವಸ್ವವನ್ನೂ ನಮ್ಮ ಮಾತೃ ಭೂಮಿಯ ರಕ್ಷಣೆಗೆ ಸಮರ್ಪಿಸಿದ ಅನೇಕ ಜನರ ನಡುವೆ ಈ ಮಹಾತಾಯಿ ವೀರ ರಾಣಿ ಅವಂತಿಬಾಯಿ ಮರೆಯಲಾಗದ ಅನರ್ಘ್ಯ ರತ್ನ. ರಾಮ್ಘಡದ ರಾಜ ವಿಕ್ರಮಾದಿತ್ಯ ಸಿಂಹನ ಧರ್ಮ ಪತ್ನಿಯೇ ಅವಂತೀಬಾಯಿ. ಮಧ್ಯಪ್ರದೇಶದ ಲೋಧಿ ಕುಟುಂಬಸ್ಥಳಾಗಿದ್ದಳು. ಈಕೆಯು ಸುಶೀಲವತಿಯು ಸುಂದರಿಯೂ ಸೌಜನ್ಯವತಿಯಾಗಿದ್ದಳು. ಪತಿಯ ಜೊತೆಗೂಡಿ ರಾಜ್ಯಡಳಿತವನ್ನು ಅತ್ಯಂತ ನಿಷ್ಠಾವಂತಳಾಗಿ ನೋಡಿಕೊಳ್ಳುತ್ತಿದ್ದಳು.
ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಕೊಚ್ಚಿಕೊಳುತ್ತಿದ್ದ ಬ್ರಿಟೀಷರ ಕಣ್ಣು ರಾಮ್ಘಡದ ಮೇಲೆ ಬಿದ್ದಿತು. ಪರಾಕ್ರಮಿ ರಾಜ ವಿಕ್ರಮಾದಿತ್ಯನು ತನ್ನ ರಾಜ್ಯವನ್ನು ಉಳಿಸಿಕೊಳ್ಳಲು ಸಕಲ ಪ್ರಯತ್ನವನ್ನೂ ಮಾಡಿದ. ಬ್ರಿಟೀಷ್ ಸೈನ್ಯ ಹಾಗು ವಿಕ್ರಮಾದಿತ್ಯನ ಸೇನೆಯ ನಡುವ ಘೋರ ಯುದ್ಧವಾಯಿತು. ಆದರೆ ಕೊನೆಯಲ್ಲಿ ರಾಜ ವಿಕ್ರಮಾದಿತ್ಯ ಪರಾಭವಗೊಂಡನು. ರಾಮಘಡ ಸೋತಿತು. ಮಹಾರಾಜ ವಿಕ್ರಮಾದಿತ್ಯನಿಗೆ ಸಂತಾನವಿಲ್ಲದ ಕಾರಣ, ಬ್ರಿಟೀಷರು ಮಹಾರಾಣಿ ಅವಂತಿಬಾಯಿಯನ್ನು ಸಿಂಹಾಸನವನ್ನೇರಲು ಬಿಡಲಿಲ್ಲ. ಆದರೆ ಧೃತಿಗೆಡದ ಆಕೆ ಬ್ರಿಟೀಷರನ್ನು ತಮ್ಮ ಮಾತೃಭೂಮಿಯಿಂದ ಓಡಿಸಲು ಪಣತೊಟ್ಟು ನಿಂತಳು.
ತನ್ನ ರಾಜ್ಯದ ಎಲ್ಲರನ್ನು ಸೇರಿಸಿ ಬ್ರಿಟೀಷರು ಭಾರತೀಯರ ವಿರುದ್ಧ ಮಾಡುತ್ತಿರುವ ಅನ್ಯಾಯದ ಬಗ್ಗೆ ಧ್ವನಿಯೆತ್ತಿ ನಿಂತಳು. ಎಲ್ಲರಲ್ಲೂ ಜಾಗೃತಿ ಮೂಡಿಸುವ ಕಾರ್ಯವನ್ನು ಪ್ರಾರಂಭಿಸಿದಳು. ಬ್ರಿಟೀಷ್ ಸರ್ಕಾರಕ್ಕೆ ಈ ವಿಷಯ ತಲುಪಿತು. ಆಗಿನ ವೈಸ್ರಾಯ್ ಆಗಿದ್ದ ಕೇನಿಂಗ್ ಹಿಸ್ಟ್ರಿಗೆ ತಳವಳ ಶುರುವಾಯಿತು. ಒಬ್ಬ ಹೆಂಗಸು ಬ್ರಿಟೀಷರ ವಿರುದ್ಧ ನಿಂತಿದ್ದನ್ನು ಕಂಡು ಆಶ್ಚರ್ಯಪಟ್ಟನು. ರಾಮ್ಘಡದ ಬ್ರಿಟೀಷ್ ಆಡಳಿತಗಾರರನ್ನು ಮತ್ತು ಪೊಲೀಸರನ್ನು ಕರೆಸಿ ಆಕೆಗೆ ಹಾಗು ಆಕೆಯನ್ನು ಬೆಂಬಲಿಸುವವರಿಗೂ ಶಿಕ್ಷೆ ನೀಡುವುದಾಗಿ ಎಚ್ಚರಿಸುವಂತೆ ಮತ್ತೆ ಇದು ಮುಂದುವರೆಸದಂತೆ ಕಾನೂನು ಜಾರಿಗೊಳಿಸಲು ತಿಳಿಸಿದ.
ರಾಮ್ಘಡದ ಆಡಳಿತಕಾರರು ಹಾಗು ಪೊಲೀಸರು ತಮ್ಮ ದೊರೆಯ ಅಪ್ಪಣೆ ಪಾಲಿಸಲು ಮಹಾರಾಣಿ ಅವಂತಿಬಾಯಿಯನ್ನು ಕಾಣಲು ಆಕೆಯ ಆಸ್ಥಾನಕ್ಕೆ ಬಂದರು. ಮಹಾರಾಣಿಯನ್ನು ಕಂಡು ಆಕೆಗೆ ವೈಸ್ರಾಯ್ ಹೇಳಿದ ಮಾತನ್ನು ಹೇಳಿ ರಾಜ್ಯದ ಜನರಿಗೆ ಎಚ್ಚರಿಕೆ ನೀಡಿದರು.
ಆದರೆ ಬ್ರಿಟೀಷರ ನೆರಳನ್ನು ಕಂಡರೂ ಕೆಂಡಾಮಂಡಲಗೊಳ್ಳುತ್ತಿದ್ದ ಮಹಾರಾಣಿಯು ಎದ್ದು ನಿಂತು “ಬೇಕಾದ ಹಾಗೆ ಹೊಸ ಕಾನೂನು ಜಾರಿ ಮಾಡಿ ನಿಮಿಷ ನಿಮಿಷಕ್ಕೆ ಬಣ್ಣ ಬದಲಾಯಿಸಿ ಮಾತನಾಡುವ ನಿಮಗೆ ನಮ್ಮ ಈ ಪವಿತ್ರ ಭೂಮಿಯಲ್ಲಿ ಇರಲು ಯಾವ ಅಧಿಕಾರವೂ ಇಲ್ಲ, ನಿಮ್ಮ ದರ್ಪ ಅಹಂಕಾರವನ್ನು ಮೆಟ್ಟಿಕ್ಕಲು ನಮ್ಮ ರಾಜ್ಯದ ಪ್ರತಿಯೊಬ್ಬರೂ ಸಿದ್ಧರಿದ್ದಾರೆ” ಎಂದು ಸಿಂಹಿಣಿಯಂತೆ ಘರ್ಜಿಸಿದಳು.
ಆಕೆಯ ಮಾತು ಕೇಳಿಸಿಕೊಂಡ ಬ್ರಿಟೀಷ್ ಅಧಿಕಾರಿಗಳು ಕಳವಳಗೊಂಡರು. ತಮ್ಮ ವೈಸ್ರಾಯ್ಗೆ ಈ ವಿಷಯವನ್ನು ತಿಳಿಸಿದರು. ಆಕೆಯ ಈ ವೀರನುಡಿಯನ್ನು ದಿಟ್ಟ ಹೆಜ್ಜೆಯನ್ನು ಕಂಡು ವೈಸ್ರಾಯ್ಗೆ ಕೋಪ ತಾರಕಕ್ಕೇರಿತು. ಆಕೆಯನ್ನು ಬಂಧಿಸಲು ಸ್ವತಃ ತಾನೇ ತೆರಳಿದ. ರಾಮ್ಘಡದ ಕೋಟೆಗೆ ಹೋದ ವೈಸ್ರಾಯ್ ಮತ್ತವನ ಸೈನ್ಯಕ್ಕೆ ರಾಣಿ ಸಿಗಲಿಲ್ಲ. ಆಕೆ ಅದ್ಯಾವುದೋ ಕಾಡಿನ ಹತ್ತಿರ ಇರುವ ಮಾಹಿತಿ ರಾಜಭಟರಿಂದ ತಿಳಿಯಿತು. ಈ ರೀತಿ ಮಹಾರಾಣಿ ಮೂರು ನಾಲ್ಕು ಬಾರಿ ಚಾಣಾಕ್ಷತನದಿಂದ ಪಾರಾಗಿ ನಾಲ್ಕು ಸಾವಿರ ಯುವಕ ಯುವತಿಯರನ್ನು ಮಾತೃಭೂಮಿಯ ರಕ್ಷಣೆಗಾಗಿ ಸಿದ್ಧ ಪಡಿಸಿದಳು. ಈ ಯುವಕ ಯುವತಿಯರಿಗೆ ಕತ್ತಿವರಸೆ, ಕುದುರೆ ಓಡಿಸುವುದು, ಮತ್ತಿತರ ಶಸ್ತ್ರಾಭ್ಯಾಸದ ಜೊತೆ ರಾಜನೀತಿ ಶಾಸ್ತ್ರವನ್ನು ಹೇಳಿಕೊಟ್ಟಳು. 1857ರ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ವಿಶಾಲ ಸೈನ್ಯವನ್ನೇ ಸಿದ್ಧಗೊಳಿಸಿದ ವೀರ ರಾಣಿ ಈಕೆ.
1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರರಾಣಿ ಅವಂತಿಬಾಯಿ ತನ್ನ ವಿಶಾಲ ಸೈನ್ಯದೊಂದಿಗೆ ಬ್ರಿಟೀಷರ ವಿರುದ್ಧ ಕಾದಾಡಿದಳು. ಆದರೆ ನೀಚ ಬುದ್ಧಿಯ ವೈಸ್ರಾಯ್ ಆಕೆಯನ್ನು ಹಿಂದಿನಿಂದ ಶೂಟ್ ಮಾಡಿ ಆಕೆಯನ್ನು ಕೊಂದುಬಿಟ್ಟನು. ಬ್ರಿಟೀಷರ ವಿರುದ್ಧ ಹೋರಾಡುತ್ತಾ ಮಾರ್ಚ್ 20 ರಂದು ಭಾರತ್ ಮಾತಾ ಕೀ ಜೈ ಎಂದು ಘರ್ಜಿಸುತ್ತಾ ಭಾರತಾಂಬೆಗಾಗಿ ತನ್ನ ಪ್ರಾಣವನ್ನೇ ಸಮರ್ಪಿಸಿದ ಅನರ್ಘ್ಯ ರತ್ನ ಈಕೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.