ಮೊನ್ನೆ ಬ್ರೆಜಿಲ್ನ ರಿಯೋಡಿಜೈನೇರೋದಲ್ಲಿ ಆರಂಭಗೊಂಡ ಒಲಿಂಪಿಕ್ಸ್ ಉದ್ಘಾಟನಾ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದೆ. ಭಾಗವಹಿಸಿದ ದೇಶಗಳ ಹೆಸರು ಇಂಗ್ಲಿಷ್ ವರ್ಣಮಾಲೆಯ ಅನುಕ್ರಮಣಿಕೆಯಂತೆ ಬಂದಾಗ, ಆಯಾ ದೇಶದ ಕ್ರೀಡಾಳುಗಳು ಸಂಭ್ರಮದಿಂದ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ’ಇಂಡಿಯಾ’ ಎಂಬ ಘೋಷಣೆ ಮೊಳಗಿದೊಡನೆ ನಮ್ಮ ಭಾರತದ ಕ್ರೀಡಾಪಟುಗಳು ಸಂಭ್ರಮದಿಂದ ಹೆಜ್ಜೆ ಹಾಕಿದರು. ಆಗ ನನಗನಿಸಿದ್ದು-ಇಂಡಿಯಾ ಬದಲಿಗೆ ಭಾರತ ಎಂದಿದ್ದರೆ ನಮ್ಮ ಕ್ರೀಡಾಪಟುಗಳಿಗೆ ಇನ್ನಷ್ಟು ಬೇಗ ಮೆರವಣಿಗೆ ನಡೆಸಲು ಅವಕಾಶ ಸಿಗುತ್ತಿತ್ತಲ್ಲ ಎಂದು.
ದೇಶಕ್ಕೆ ಸ್ವಾತಂತ್ರ್ಯ ದೊರಕಿ 70 ವರ್ಷಗಳೇ ಸಂದಿವೆ. ಈ 70 ವರ್ಷಗಳ ದೀರ್ಘ ಕಾಲದಲ್ಲಿ ನಾವು ನಮ್ಮದೇ ಸ್ವತಂತ್ರದೇಶದೊಳಗೆ ಸ್ವಾಭಿಮಾನ ಸಂಪನ್ನರಾಗಿ, ಸ್ವಂತಿಕೆಯಿಂದ ಬಾಳಿ ಬದುಕಿದ್ದೇವೆಯೆ? ಈ ಪ್ರಶ್ನೆಗೆ ಬಹುತೇಕ ಮಂದಿ ಹೌದು ಎಂದೇ ಉತ್ತರಿಸಬಹುದು. ಇಲ್ಲಿ ನಮ್ಮದೇ ಸರ್ಕಾರವಿದೆ. ನಮ್ಮದೇ ಜನಪ್ರತಿನಿಗಳಿದ್ದಾರೆ. ಸ್ವತಂತ್ರ ಬದುಕು ಇಲ್ಲಿ ಸಾಧ್ಯ. ಹಾಗಿರುವಾಗ ನಿಮ್ಮದೇನು ಕಿರಿಕ್ಕು ಎಂದು ಕೆಲವರು ಕೇಳಬಹುದು. ನಿಜ, ನಮ್ಮದೇ ಸರ್ಕಾರ, ನಮ್ಮದೇ ಜನಪ್ರತಿನಿಧಿಗಳು ನಮ್ಮವರದೇ ಆಡಳಿತವಿದ್ದರೂ ನಾವೇಕೆ ಇನ್ನೂ ಗುಲಾಮಿ ಮಾನಸಿಕತೆಯನ್ನು ಬದಲಾಯಿಸಿಕೊಂಡಿಲ್ಲ? ಬ್ರಿಟಿಷರು ಈ ದೇಶ ಬಿಟ್ಟು ತೊಲಗಿದ ಬಳಿಕ ನಾವೇಕೆ ನಮ್ಮದೇ ರೀತಿರಿವಾಜು, ಸ್ವದೇಶಿತನ, ಸ್ವಾಭಿಮಾನಭರಿತ ನಡೆನುಡಿಗಳನ್ನು ರೂಢಿಸಿಕೊಂಡಿಲ್ಲ? ನಮ್ಮ ವೇಷಭೂಷಣಗಳಲ್ಲಿ ನಮ್ಮದೇ ಛಾಪು ಏಕಿಲ್ಲ? ಇದು ನನ್ನ ಪ್ರಶ್ನೆಗಳು. ಈ ಪ್ರಶ್ನೆಗಳು ನಿಮ್ಮನ್ನೂ ಕಾಡಿರಬಹುದು. ಮದುವೆಯಂತಹ ಶುದ್ಧ ಭಾರತೀಯ ಸಂಭ್ರಮದ ಸಂದರ್ಭದಲ್ಲೂ ಇಂಗ್ಲಿಷರ ಅದೇ ಕೋಟು, ಬೂಟು, ಟೈಗಳಿಂದ ಮಧುಮಗ ಅಲಂಕೃತನಾಗುವ ದೈನೇಸಿ ದೃಶ್ಯ ನೋಡಿದಾಗ ನಿಮಗದು ಸರಿಯೆನಿಸುತ್ತದೆಯೆ? ಈ ವಿಷಯದಲ್ಲಿ ನಮ್ಮದೇ ಆದ ಸ್ವಂತಿಕೆ ಎನ್ನುವುದು ಬೇಡವೆ? ವಿವಾಹ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ನಾವಿನ್ನೂ ಇಂಗ್ಲಿಷ್ನಲ್ಲೇ ಮುದ್ರಿಸಿ ಧನ್ಯರಾಗುತ್ತಿರುವುದು ಯಾವ ಪುರುಷಾರ್ಥಕ್ಕಾಗಿ? ಮನೆ ಮನೆಗಳಲ್ಲಿ ಕೇಕ್ ಕತ್ತರಿಸಿ, ದೀಪವಾರಿಸಿ ಹುಟ್ಟುಹಬ್ಬ ಆಚರಿಸುವುದು ಯಾವ ಸೌಭಾಗ್ಯಕ್ಕಾಗಿ? ಬಹುತೇಕ ಭಾರತೀಯರ ರುಜು ಇರುವುದು ಇಂಗ್ಲಿಷ್ನಲ್ಲೇ ಹೊರತು ಅವರವರ ಮಾತೃಭಾಷೆಯಲ್ಲಲ್ಲ ಎಂಬ ಸಂಗತಿ ನಮ್ಮನ್ನೇಕೆ ಚುಚ್ಚುವುದಿಲ್ಲ? ಗುಲಾಮಿ ಮಾನಸಿಕತೆಯ ಹಚ್ಚಡವನ್ನು ನಾವೇಕೆ ಇನ್ನೂ ಕಿತ್ತು ಬಿಸುಟಿಲ್ಲ ?
ಬ್ರಿಟಿಷರು ಭಾರತದ ಸ್ವಾತಂತ್ರ್ಯ ಕಸಿದುಕೊಂಡಂತೆ ನಮ್ಮ ನೆರೆಯ ಸಿಂಹಳದ ಸ್ವಾತಂತ್ರ್ಯವನ್ನೂ ಕಸಿದುಕೊಂಡಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದಂತೆ ಸಿಂಹಳಕ್ಕೂ ಬಂದಿತು. ಬ್ರಿಟಿಷರ ಕಪಿಮುಷ್ಠಿಯಲ್ಲಿದ್ದಾಗ ಸಿಂಹಳ ’ಸಿಲೋನ್’ ಎಂದಾಗಿತ್ತು. ಆದರೆ ಬ್ರಿಟಿಷರ ಆಳ್ವಿಕೆ ತೊಲಗಿದ ಬಳಿಕ ಆ ದೇಶ ಮತ್ತೆ ತನ್ನ ಅಸ್ಮಿತೆಯನ್ನು ನೆನಪಿಸಿಕೊಂಡು ಸಿಲೋನ್ ಎಂದಾಗಿದ್ದ ದೇಶದ ಹೆಸರನ್ನು ’ಶ್ರೀಲಂಕಾ’ ಎಂದು ಬದಲಾಯಿಸಿಕೊಂಡು ಸ್ವಂತಿಕೆ ಮೆರೆದಿದೆ. ಅದೇ ರೀತಿ ನಮ್ಮ ನೆರೆಯ ಬರ್ಮಾ ದೇಶ ಕೂಡ ತನ್ನ ಹೆಸರನ್ನು ಮ್ಯಾನ್ಮಾರ್ ಎಂದು ಬದಲಿಸಿಕೊಂಡು ಸ್ವಾಭಿಮಾನ ಮೆರೆದಿದೆ. ಭಾರತದೊಳಗೇ ಇರುವ ಮದ್ರಾಸ್ ಈಗ ಚೆನ್ನೈ ಆಗಿದೆ. ಬ್ರಿಟಿಷರ ನಾಲಿಗೆ ತಿರುಗದ ಬಾಯಲ್ಲಿ ’ಬಾಂಬೆ’ ಆಗಿದ್ದ ವಾಣಿಜ್ಯ ನಗರಿ ಈಗ ಮುಂಬೈ ಆಗಿದೆ. ಬ್ಯಾಂಗಲೋರ್ ಈಗ ಬೆಂಗಳೂರು, ಶಿಮೊಗ ಈಗ ಶಿವಮೊಗ್ಗ, ಹುಬ್ಲಿ ಈಗ ಹುಬ್ಬಳ್ಳಿ, ಬೆಲ್ಲಾರಿ ಈಗ ಬಳ್ಳಾರಿ, ಒರಿಸ್ಸಾ ಈಗ ಒಡಿಶಾ, ಕಲ್ಕಟಾ ಈಗ ಕೊಲ್ಕೊತ್ತಾ ಆಗಿ ಬದಲಾಗಿದೆ.
ಇಷ್ಟಾದರೆ ಸಾಕೆ? ಬ್ರಿಟಿಷರ ಬಾಯಲ್ಲಿ ವಿಕೃತಗೊಂಡ ಉಳಿದ ಹೆಸರುಗಳು ಹಾಗೆಯೇ ಇರಬೇಕೆ? ಅಷ್ಟಕ್ಕೂ ಅದ್ಯಾವ ಪಾಪಿ ಈ ದೇಶವನ್ನು ಇಂಡಿಯಾ ಎಂದು ಕರೆದನೋ ದೇವರಿಗೂ ಗೊತ್ತಿರಲಿಕ್ಕಿಲ್ಲ. ವಾಸ್ತವವಾಗಿ ಈ ದೇಶದ ಹೆಸರು ಭಾರತ ಎಂದು ಸಹಸ್ರಾರು ವರ್ಷಗಳಿಂದಲೂ ಕೇಳಿಬರುತ್ತಿದೆ. ’ಗಾಯಂತಿ ದೇವಾಃ ಕಿಲ ಗೀತಕಾನಿ ಧನ್ಯಾಸ್ತುಯೇ ಭಾರತ ಭೂಮಿ ಭಾಗೆ|’ (ಸ್ವರ್ಗಕ್ಕೆ , ಮುಕ್ತಿಗೆ ದ್ವಾರವಾದ ಭಾರತದಲ್ಲಿ ಹುಟ್ಟಿದವರು ದೇವತೆಗಳಿಗಿಂತ ಧನ್ಯರು) – ಹೀಗೆಂದು ಪ್ರಾಚೀನ ವೇದಗಳೇ ಸಾರಿವೆ. ’ಉತ್ತರಂ ಯತ್ಸಮುದ್ರಸ್ಯ ಹಿಮಾದ್ರೇಶ್ಬೈವ ದಕ್ಷಿಣಂ| ವರ್ಷಂ ತದ್ಭಾರತಂ ನಾಮ ಭಾರತೀ ಯತ್ರ ಸಂತತಿಃ||’ (ಸಾಗರಗಳಿಂದ ಉತ್ತರಕ್ಕೆ ಮತ್ತು ಹಿಮಾಲಯದಿಂದ ದಕ್ಷಿಣಕ್ಕೆ ಇರುವ ಭೂಮಿಗೆ ಭರತ ವರ್ಷ ಎಂದು ಹೆಸರು. ಭಾರತೀಯರು ಇದರ ಮಕ್ಕಳು) – ಈ ಮಾತನ್ನು ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಿಕರು ಹೇಳಿದ್ದಾರೆ. ಅಲ್ಲೆಲ್ಲೂ ಈ ದೇಶದ ಹೆಸರು ಇಂಡಿಯಾ ಎಂದು ಉಲ್ಲೇಖವಾಗಿಲ್ಲ. ಭಾರತವೆಂದೇ ಉಲ್ಲೇಖವಾಗದೆ. ಧಾರ್ಮಿಕ ಕ್ರಿಯೆಗಳಲ್ಲಿ ಮಂತ್ರಪಠಣ ಮಾಡುವಾಗಲೂ ಭರತವರ್ಷೇ ಭರತಖಂಡೇ ಜಂಬೂದ್ವೀಪೇ… ಎಂದೇ ಈ ದೇಶವನ್ನು ಪರಿಚಯಿಸಲಾಗುತ್ತದೆ. ಇಂಡಿಯಾ ವರ್ಷೇ ಇಂಡಿಯಾ ಖಂಡೇ… ಎಂದು ಹೇಳುವುದಿಲ್ಲ. ರಾಷ್ಟ್ರಕವಿ ಕುವೆಂಪು ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ಎಂದು ಈ ದೇಶವನ್ನು ಸ್ತುತಿಸಿದ್ದಾರೆಯೇ ಹೊರತು ಇಂಡಿಯಾ ಜನನಿಯ ತನುಜಾತೆ… ಎಂದು ಅಪ್ಪಿತಪ್ಪಿಯೂ ಹೇಳಿಲ್ಲ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ನಾವೆಲ್ಲ ಭಾರತ ಮಾತಾ ಕೀ ಜೈ ಎಂದು ಘೋಷಣೆ ಹಾಕುತ್ತೇವೆಯೇ ಹೊರತು ಇಂಡಿಯಾ ಮಾತಾ ಕೀ ಜೈ ಎಂದು ಹೇಳುವುದಿಲ್ಲ. ಹಾಗಿದ್ದರೆ ಇಂಡಿಯಾ ಎಂಬ ಹೆಸರು ಈ ದೇಶಕ್ಕೆ ಅಂಟಿಕೊಂಡಿದ್ದಾದರೂ ಹೇಗೆ? ಅದಕ್ಕೇಕೆ ಇನ್ನೂ ಜೋತುಬಿದ್ದಿದ್ದೇವೆ?
ಈ ಪ್ರಶ್ನೆಗೆ ಎನ್ಸೈಕ್ಲೋಪೀಡಿಯಾ, ಇತಿಹಾಸದ ಪುಸ್ತಕಗಳು… ಇತ್ಯಾದಿಗಳನ್ನು ಜಾಲಾಡಿದರೂ ಸೂಕ್ತ ಉತ್ತರ ದೊರಕುವುದಿಲ್ಲ. ಭಾರತಕ್ಕೆ ಹಿಂದೂಸ್ಥಾನ ಎಂಬ ಹೆಸರಿತ್ತುಎಂಬ ಬಗ್ಗೆ ಇತಿಹಾಸದ ಪುಟಗಳಲ್ಲಿ ಸಾಕಷ್ಟು ಉಲ್ಲೇಖಗಳಿವೆ. ಭಾರತ ಸಿಂಧೂನದಿಯ ತೀರದಲ್ಲಿದ್ದುದರಿಂದ ಪರ್ಶಿಯನ್ನರು, ಅವರ ಭಾಷೆಯಲ್ಲಿ ಸಕಾರ ಹಕಾರ ಆಗುವುದರಿಂದ ಸಿಂಧೂನದಿಯನ್ನು ಇಂಡಸ್ ಎಂದು ಕರೆದರೆಂದು, ಅದಾದ ಮೇಲೆ 2500 ವರ್ಷಗಳ ಬಳಿಕ ಗ್ರೀಕರು ಅದನ್ನು ಇಂಡೋಸ್ ಎಂದು ಕರೆದು, ಅನಂತರ ಲ್ಯಾಟಿನ್ ಭಾಷೆಯಲ್ಲಿ ಅದು ಇಂಡಸ್ ಆಗಿ ಮಾರ್ಪಟ್ಟಿತೆಂದು ಒಂದು ಅಧ್ಯಯನ ತಿಳಿಸುತ್ತದೆ. ಇಂಡಸ್ ನದಿಯ ತೀರದಲ್ಲಿರುವ ದೇಶವನ್ನು ಇಂಡಿಯಾ ಎಂದು ಯೂರೋಪಿಯನ್ನರು ಅನಂತರ ಕರೆಯತೊಡಗಿದರೆಂದು ಈ ಅಧ್ಯಯನದ ಸಾರ. ಬ್ರಿಟಿಷರು ವ್ಯಾಪಾರಕ್ಕೆಂದು ತಕ್ಕಡಿ ಹಿಡಿದು ಭಾರತಕ್ಕೆ ಬಂದ ಬಳಿಕ ಈ ದೇಶವನ್ನು ಇಂಡಿಯಾ ಎಂದೇ ಕರೆದಿರಬಹುದು. ಏಕೆಂದರೆ ಅವರು ಈ ದೇಶವನ್ನು ಉದ್ಧಾರ ಮಾಡುವುದಕ್ಕೆಂದು ಬಂದಿರಲಿಲ್ಲ. ಇಲ್ಲಿನ ಸಂಪತ್ತನ್ನು ದೋಚಿ, ಇಲ್ಲಿನ ನಾಗರಿಕತೆ, ಸಂಸ್ಕೃತಿ, ಸದಾಚಾರಗಳನ್ನು ಹೊಸಗಿ ಹಾಕಿ, ಇದನ್ನೊಂದು ಗುಲಾಮಿ ರಾಷ್ಟ್ರ ಮಾಡಬೇಕೆಂಬುದೇ ಅವರ ಹಿಡನ್ ಅಜೆಂಡಾ ಆಗಿತ್ತು. ಈ ಪ್ರಯತ್ನದಲ್ಲಿ ಅವರು ಯಶಸ್ವಿಯಾಗಿದ್ದು ಈಗ ಇತಿಹಾಸ.
ಹೀಗೆ ಯಾವುದೋ ಕಾರಣಕ್ಕೆ, ಯಾರದೋ ತೆವಲಿಗೆ ಅಥವಾ ಇನ್ನಾರದೋ ಕುತಂತ್ರಕ್ಕೆ ಇಂಡಿಯಾ ಎಂದು ವಿಕೃತಗೊಂಡ ಈ ದೇಶದ ಹೆಸರನ್ನು ಸ್ವಾತಂತ್ರ್ಯ ಬಂದ ಬಳಿಕ ಮತ್ತೆ ಸರಿಪಡಿಸಬೇಕೆಂಬ ತುಡಿತ ದೇಶದ ಆಡಳಿತ ಸೂತ್ರ ಹಿಡಿದ ಮೊಟ್ಟಮೊದಲ ಪ್ರಧಾನಿಗೆ ಇರಬೇಕಾಗಿತ್ತು. ಇಂಡಿಯಾ ಎಂದಾಗಿದ್ದನ್ನು ಭಾರತವೆಂದು ಬದಲಿಸಿದ್ದರೆ ಅದಕ್ಕೆ ತಕರಾರು ತೆಗೆಯುವವರು ಆಗ ಯಾರೂ ಇರಲಿಲ್ಲ. ಬ್ರಿಟಿಷರಂತೂ ಖಂಡಿತ ಮತ್ತೆ ಭಾರತದ ಮೇಲೆ ಆಕ್ರಮಣ ಮಾಡಿ ಇಲ್ಲಿ ರಾಜ್ಯಭಾರ ಮಾಡುತ್ತಿರಲಿಲ್ಲ! ಆದರೆ ನಮ್ಮ ಮೊಟ್ಟಮೊದಲ ಪ್ರಧಾನಿ ನೆಹರೂಜಿ ಈ ನಿಟ್ಟಿನಲ್ಲಿ ದಿಟ್ಟಹೆಜ್ಜೆ ಇಡಲೇ ಇಲ್ಲ. 1949 ರ ನವೆಂಬರ್ ೨೪ರಂದು ಭಾರತಕ್ಕೊಂದು ಹೊಸ ಸಂವಿಧಾನ ಸ್ವೀಕರಿಸಿದಾಗ ಅಲ್ಲಿ ದೇಶದ ಹೆಸರು ಉಲ್ಲೇಖವಾಗಿದ್ದುದು India that is Bharath ಎಂದು. ಅಂದರೆ ಭಾರತವನ್ನು ಇಂಡಿಯಾ ಎಂಬ ಹೆಸರಿನಿಂದ ಗುರುತಿಸಬೇಕು ಎಂಬ ಆಶಯ! ಸಂವಿಧಾನ ರಚನೆಯ ಸಮಿತಿಯಲ್ಲಿದ್ದ ಹಲವು ಗಣ್ಯರು ಈ ದೇಶದ ಹೆಸರು ಭಾರತ ಎಂದೇ ಇರಬೇಕೆಂದು ಆಗ್ರಹಿಸಿದ್ದರೂ ನೆಹರೂ ಮಾತ್ರ ಅದಕ್ಕೆ ಕಿವಿಗೊಡಲೇ ಇಲ್ಲ.
1910 ರಷ್ಟು ಹಿಂದೆಯೇ ಶ್ರೀ ಅರವಿಂದ ಘೋಷ್ ಸಾರಿದ್ದರು : ’ನಮಗೆ ತೋಚಿದಂತೆ ಆಯ್ದು, ಯಾವುದೋ ಹೆಸರಿಲ್ಲದ ಕಲಸುಮೇಲೋಗರವನ್ನು ಸೃಷ್ಟಿಸಿ, ಅದನ್ನು ಹೆಮ್ಮೆಯಿಂದ ಪೂರ್ವ ಹಾಗೂ ಪಶ್ಚಿಮಗಳ ಸಮನ್ವಯವೆಂದು ಕರೆಯದಿರೋಣ. ಯಾವುದೇ ಮೂಲದಿಂದ ಬಂದ ಏನನ್ನೇ ಆಗಲಿ ನಾವು ಅಂಧ ವಿಶ್ವಾಸದಿಂದ ಒಪ್ಪಿಕೊಳ್ಳದೇ ಪ್ರತಿಯೊಂದನ್ನೂ ಪ್ರಶ್ನಿಸಬೇಕು ನಮ್ಮದೇ ಆದ ನಿರ್ಣಯಗಳಿಗೆ ಬದ್ಧರಾಗಿರಬೇಕು. ಈ ರೀತಿ ಮಾಡುವುದರಿಂದ ನಾವು ಭಾರತೀಯರಾಗಿ ಉಳಿಯುವುದಿಲ್ಲವೆಂದು ಭಯಪಡಬೇಕಾಗಿಲ್ಲ. ನಾವು ಸ್ವತಂತ್ರವಾಗಿ ಆಲೋಚಿಸಲು ಕಲಿತರೆ ಎಂದಿಗೂ ಭಾರತ ಭಾರತವಾಗಿಯೇ ಉಳಿಯಲಿದೆ.’ ಅರವಿಂದ ಘೋಷ್ ಅವರ ಈ ಚಿಂತನೆ ಪಂಡಿತ್ ನೆಹರೂ ಅವರಲ್ಲಿ ಮೂಡಲೇ ಇಲ್ಲ.
ಬಿಡಿ, ಇವೆಲ್ಲಾ ಹಿಂದಿನ ಇತಿಹಾಸ. ಅದನ್ನೇ ಚ್ಯೂಯಿಂಗ್ಗಮ್ ನಂತೆ ಜಗಿಯುತ್ತಿದ್ದರೆ ಏನು ಪ್ರಯೋಜನ? ಈಗ ಬ್ರಿಟಿಷರ ಆಡಳಿತ ಇಲ್ಲಿಲ್ಲ. ನೆಹರೂ ಕೂಡ ಈಗಿಲ್ಲ. ಸಿಲೋನ್ನಂತಹ ಪುಟ್ಟ ದೇಶ ಶ್ರೀಲಂಕಾ ಆಗಿ ಸ್ವಾಭಿಮಾನದಿಂದ ತಲೆಯೆತ್ತಬಹುದಾದರೆ, ಬರ್ಮಾ ಮ್ಯಾನ್ಮಾರ್ ಆಗಿ ಹೆಮ್ಮೆ ಪಡಬಹುದಾದರೆ ಭಾರತವೆಂಬ ಬಹುದೊಡ್ಡ ದೇಶ ಇನ್ನೂ ಜಾಗತಿಕ ನಕ್ಷೆಯಲ್ಲಿ ಇಂಡಿಯಾ ಎಂದು ಬ್ರಿಟಿಷರು ತಿರುಚಿದ ಅದೇ ವಿಕೃತ ಹೆಸರಿನಲ್ಲಿ ಉಳಿಯಬೇಕೆ? ಇಂಡಿಯಾ ಎಂಬ ಹೆಸರನ್ನು ಭಾರತ ಎಂದು ಬದಲಿಸಲು ಆಡಳಿತ ಸೂತ್ರ ಹಿಡಿದವರು ಯಾವುದೇ ಯುದ್ಧ ಮಾಡಬೇಕಾಗಿಲ್ಲ. ಗನ್ ಹಿಡಿಯಬೇಕಾಗಿಲ್ಲ. ಆದರೆ ಸಂವಿಧಾನಕ್ಕೆ ತಿದ್ದುಪಡಿ ತಂದು, ಸಂಸತ್ತಿನಲ್ಲಿ ಈ ಬಗ್ಗೆ ಒಂದು ಮಸೂದೆಯನ್ನು ಮಂಡಿಸಿ, ಅದನ್ನು ಸರ್ವಾನುಮತದಿಂದ ಅಂಗೀಕರಿಸಬೇಕು, ಅಷ್ಟೆ. ಆದರೆ ಇದಕ್ಕೂ ಆಳುವವರಲ್ಲಿ ಪ್ರಬಲ ಇಚ್ಛಾಶಕ್ತಿ ಬೇಕು. ಅದು ಇದೆಯಾ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.