ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಹಣ ತೆಗೆದುಕೊಂಡು ಮೋಸ ಮಾಡುವವರ ನಡುವೆ ಕೆಲಸ ಕೊಡಿಸಲೆಂದೆ ಇರುವ ಸಂಸ್ಥೆಗಳ ಹೆಸರು ಕೂಡ ಹಾಳಾಗುತ್ತದೆ ಎನ್ನುವುದು ಸತ್ಯ. ಒಳ್ಳೆಯ ಉದ್ಯೋಗ ಸಿಗುತ್ತದೆ ಎಂದಾದರೆ ಒಂದಿಷ್ಟು ಹಣ ಹೋದರೂ ಪರವಾಗಿಲ್ಲ ಎಂದು ಅಂದುಕೊಳ್ಳುವ ಯುವಕರಿಗೇನೂ ನಮ್ಮಲ್ಲಿ ಕಡಿಮೆ ಇಲ್ಲ. ಹಣ ಕೊಟ್ಟು ಕೆಲಸ ಗಿಟ್ಟಿಸಿಕೊಳ್ಳುವುದು ಸರಿಯಲ್ಲ ಎಂದು ಯಾರಾದರೂ ಹೇಳಿದರೂ ಕೆಲಸ ಇಲ್ಲದವನಿಗೇನೆ ಗೊತ್ತು, ಕೆಲಸದ ಮಹತ್ವ. ಅದರಲ್ಲೂ ಮಿಲಿಟರಿಯಲ್ಲಿ ಕೆಲಸ ಕೊಡುತ್ತೇನೆ ಎಂದು ಆಸೆ ಹುಟ್ಟಿಸಿ ಯುವಕರನ್ನು ತನ್ನತ್ತ ಸೆಳೆದು ಅವರಿಂದ ಹಣ ಪೀಕಿಸಿ ನಂತರ ಕೈ ಮೇಲೆ ಎತ್ತುವವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದ್ದಾರೆ ಎಂದರೆ ಬುದ್ಧಿವಂತರ ಜಿಲ್ಲೆಯ ನಮಗೇನೆ ಅವಮಾನ.
ಆತ ಹೇಳಿಕೊಳ್ಳೋಕೆ ನಿವೃತ್ತ ಸೈನಿಕ. ಹೀಗಾಗಿಯೇ ಸೇನೆಯಲ್ಲಿ ಉದ್ಯೋಗ ದೊರಕಿಸಿಕೊಡೋ ಭರವಸೆ ನೀಡಿ ಯುವಕರಿಗೆ ತರಬೇತಿ ಕೂಡ ನೀಡ್ತಾ ಇದ್ದ. ಜೈಲಿನ ಗೋಡೆಗಳನ್ನ ಕೂಡ ಮೀರಿಸೋ ರೀತಿಯಲ್ಲಿ ಕೋಟೆ ಕಟ್ಟಿ ಯಾರಿಗೂ ಗೊತ್ತಾಗದಂತೆ ತನ್ನ ಚಟುವಟಿಕೆಗಳನ್ನ ನಡೆಸ್ತಿದ್ದ. ಆದ್ರೆ ಆತನದ್ದು ಅಪ್ಪಟ ವಂಚನಾ ಜಾಲ ಅನ್ನೋದನ್ನ ಅರಿತ ಅದೆಷ್ಟೋ ಯುವಕರು ಆತನ ವಿರುದ್ದ ಪೊಲೀಸ್ ದೂರು ನೀಡಿದ್ರು. ಹೀಗಿದ್ರೂ ಆ ನಿವೃತ್ತ ಸೈನಿಕನನ್ನ ಮುಟ್ಟೋಕೆ ಪೊಲೀಸರಿಂದಲೂ ಸಾಧ್ಯವಾಗಿರಲಿಲ್ಲ. ಆದ್ರೆ ಅಂತಿಮವಾಗಿ ಇದೀಗ ಆತನ ಪಾಪದ ಕೊಡ ತುಂಬಿದೆ…..
ಅಕಾಡೆಮಿ ಆಫ್ ಕ್ಯಾರಿಯರ್ ಗೈಡೆನ್ಸ್ ಇನ್ಕಾರ್ಪೊರೇಷನ್ ಟ್ರಸ್ಟ್ ……. ಈ ಹೆಸರು ನೋಡಿದ್ರೆ ಇದ್ಯಾವುದೋ ದೊಡ್ಡ ಸಂಸ್ಥೆ ಇರಬಹುದು ಅಂತ ಎಲ್ಲರಿಗೂ ಅನಿಸಬಹುದು. ಜೈಲು ಗೋಡೆಯಂತೆ ಎತ್ತರವಾದ ಗೋಡೆ, ಭದ್ರವಾಗಿ ಮುಚ್ಚಿರೋ ಬೃಹತ್ ಗೇಟ್, ಹಾಗೂ ಗೇಟ್ ಒಳಗೆ ತಿರುಗಾಡೋ ಹಸಿದ ನಾಯಿಗಳು, ಕಂಪೌಂಡ್ ಸುತ್ತಲೂ ಸಿಸಿ ಕ್ಯಾಮೆರಾಗಳು…. ಇದು ಈ ಟ್ರಸ್ಟ್ ತನ್ನ ಭದ್ರತೆಗಾಗಿ ಮಾಡಿಕೊಂಡಿರೋ ಮೊದಲ ಮುಂಜಾಗರುಕತೆ ವಿಚಾರ ಅಂತ ಇಟ್ಟುಕೊಳ್ಳೋಣ. ಆದ್ರೆ ಇಷ್ಟೆಲ್ಲಾ ಭದ್ರತೆ ಮಾಡಿಕೊಂಡಿರೋ ಈ ಭದ್ರ ಕೋಟೆಯೊಳಗೆ ನಡೀತಾ ಇರೋದು ಮಾತ್ರ ಅಪ್ಪಟ ವಂಚನೆ. ಮಂಗಳೂರಿನ ಬಿಕರ್ನ ಕಟ್ಟೆ ಅನ್ನೋ ಪ್ರದೇಶದಲ್ಲಿ ಸಂತೋಷ್ ಅನ್ನೋ ಕೇರಳ ಮೂಲದ ಮಾಜಿ ಸೈನಿಕನೊಬ್ಬ ನಡೆಸ್ತಾ ಇರೋ ಟ್ರಸ್ಟ್ ಕಳೆದ ಕೆಲವು ವರ್ಷಗಳಿಂದ ಹಲವಾರು ಜನರಿಗೆ ಕೊಟ್ಯಾಂತರ ರೂಪಾಯಿಗಳ ವಂಚನೆ ಮಾಡಿದೆ. ಹೀಗಾಗಿ ಕಳೆದ ನಾಲ್ಕೈದು ತಿಂಗಳ ಹಿಂದೆಯೇ ಈತನ ವಂಚನೆಯ ಬಗ್ಗೆ ನೂರಕ್ಕೂ ಹೆಚ್ಚು ಜನರು ಮಂಗಳೂರು ಪೊಲೀಸರಿಗೆ ದೂರು ನೀಡಿದ್ರು. ಆದ್ರೆ ಅದ್ಯಾಗೋ ತನ್ನ ಪ್ರಭಾವ ಬಳಸಿ ಸಂತೋಷ್ ತಪ್ಪಿಸಿಕೊಳ್ತಾ ಇದ್ದ. ಆದ್ರೆ ಇದೀಗ ಮತ್ತೊಂದಷ್ಟು ಯುವಕರು ಆತನ ಮೇಲೆ ದೂರು ನೀಡೋಕೆ ಮುಂದಾಗಿದ್ದಾರೆ. ಆದ್ರೆ ಕದ್ರಿ ಪೊಲೀಸರ ಬದಲು ಮಾಧ್ಯಮಗಳ ಮೂಲಕ ನೇರವಾಗಿ ಡಿಸಿಪಿ ಸಂತೋಷ್ ಬಾಬು ಗಮನಕ್ಕೆ ತಂದಿದ್ದಾರೆ. ಹೀಗಾಗಿ ಸ್ವತಃ ಡಿಸಿಪಿ ಬಾಬು ಆತನ ಕೋಟೆಗೆ ದಾಳಿ ನಡೆಸಿ ವಂಚನೆಗೊಳಗಾದ ಯುವಕರಿಂದ ದೂರು ಪಡೆದಿದ್ದಾರೆ. ಅಲ್ಲದೇ ಆತನ ವಂಚನಾ ಜಾಲದ ರೂವಾರಿಗಳನ್ನ ಬಂಧಿಸಿ ಕದ್ರಿ ಪೊಲೀಸರಲ್ಲಿ ಎಫ್ ಐಆರ್ ದಾಖಲಿಸಿಕೊಳ್ಳೋಕೆ ಸೂಚಿಸಿದ್ದಾರೆ. ಆದ್ರೆ ಆರೋಪಿ ಸಂತೋಷ್ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಅಸಲಿಗೆ ಸಂತೋಷ್ ರೈಲ್ವೆಯಲ್ಲಿ ಮತ್ತು ಸೇನೆಯಲ್ಲಿ ಕೆಲಸ ತೆಗೆಸಿಕೊಡೋದಾಗಿ ಪತ್ರಿಕೆಗಳಲ್ಲಿ ಜಾಹಿರಾತು ನೀಡೋ ಈತ ಇದಕ್ಕಾಗಿ ಇದೇ ಜಾಗದಲ್ಲಿ ಅದಕ್ಕಾಗಿ ಟ್ರೈನಿಂಗ್ ಕೂಡಾ ನೀಡ್ತಾನೆ. ಆದ್ರೆ ಇದಕ್ಕಾಗಿ ಈತ ಒಂದು ಲಕ್ಷದಿಂದ ಮೂರು ನಾಲ್ಕು ಲಕ್ಷ ರೂಪಾಯಿಗಳನ್ನ ಫೀಸ್ ಆಗಿ ಪಡಿತಾನೆ. ಆದ್ರೆ ಫೀಸ್ ನೀಡಿ ಕೆಲಸದ ನಿರೀಕ್ಷೆಯಲ್ಲಿ ಇಲ್ಲಿ ಸೇರಿದ ಯಾರಿಗೂ ಇದುವರೆಗೂ ಕೆಲಸ ಸಿಕ್ಕಿಲ್ಲ. ಬದಲಾಗಿ ಕೊಟ್ಟ ಹಣ ವಾಪಾಸು ನೀಡುವ ಗ್ಯಾರೆಂಟಿಗಾಗಿ ಬ್ಯಾಂಕ್ ಚೆಕ್ ನೀಡ್ತಾನೆಯಾದರೂ ಅದೂ ಕೂಡಾ ಬೌನ್ಸ್ ಆಗೊತ್ತೆ. ಹಣ ಕೇಳೋಕೆ ಅಂತ ಇಲ್ಲಿ ನಿತ್ಯ ಹತ್ತಾರು ಜನ ಬರ್ತಾರೆಯಾದ್ರೂ ಯಾರಿಗೂ ಗೇಟ್ ಒಳಗಡೆ ಪ್ರವೇಶ ಇಲ್ಲ. ಇನ್ನು ಅಪ್ಪಿ ತಪ್ಪಿ ಗಲಾಟೆ ಮಾಡೋಕೆ ಅಂತ ಒಳ ಹೊಕ್ಕಿದ್ರೂ ಈತ ತನ್ನ ಭದ್ರತೆಗಾಗಿ ಸಾಕಿರೋ ನಾಲ್ಕೈದು ನಾಯಿಗಳನ್ನ ಚೂ ಬಿಡ್ತಾನೆ. ಹೀಗಾಗಿ ಹಣ ಕಳೆದುಕೊಂಡವರು ಸ್ಥಳಿಯ ಪೊಲೀಸರಿಗೆ ದೂರು ನೀಡಿದರೂ ಪೊಲೀಸರೂ ಈತನ ವಿರುದ್ದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಹಿಂದೆ ವಂಚಿಸಿ ಜೈಲು ಸೇರಿದ್ದ ಸಂತೋಷ್ ಬಳಿಕ ಈ ಟ್ರೈನಿಂಗ್ ಸ್ಕೂಲ್ ಆರಂಭಿಸಿ ನೂರಾರು ಜನರಿಗೆ ಕೋಟ್ಯಾಂತರ ರೂಪಾಯಿಗಳನ್ನ ವಂಚನೆ ಮಾಡಿದ್ದಾನೆ. ಈ ಬಗ್ಗೆ ನಗರದ ಕದ್ರಿ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲವು ದೂರುಗಳು ದಾಖಲಾಗಿದೆ. ಆದರೆ ಪೊಲೀಸರು ತಾವು ಒಳಗೆ ಹೋಗದಂತೆ ನ್ಯಾಯಾಲಯದಿಂದ ತಡೆ ಆಜ್ಞೆ ಇದೆ ಅದನ್ನ ತೆರವು ಮಾಡಿ ಕೊಡಿ ನಾವು ಆತನನ್ನ ಅರೆಸ್ಟ್ ಮಾಡ್ತೀವಿ ಅಂತಾ ಅನ್ಯಾಯಕ್ಕೆ ಒಳಗಾದವರನ್ನೇ ಹಣ ನೀಡಿದ್ದಕ್ಕೆ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ಕೂಡ ನಡೆಸ್ತಾನೆ ಅನ್ನೋದು ಪೊಲೀಸರ ಗಮನಕ್ಕೆ ಬಂದಿದೆ. ಸ್ವತಃ ಇಲ್ಲಿದ್ದ ನೂರಾರು ವಂಚನೆಗೊಳಗಾದವರೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಅದನ್ನ ಅಲ್ಲಿದ್ದ ಕೆಲ ವ್ಯಕ್ತಿಗಳನ್ನ ವಶಕ್ಕೆ ಪಡೆದು ಆತನ ಟ್ರೈನಿಂಗ್ ಸೆಂಟರ್ಗೆ ಬೀಗ ಜಡಿದಿದ್ದಾರೆ.
ಒಟ್ಟಿನಲ್ಲಿ ಕಳೆದ ಕೆಲ ವರ್ಷಗಳಿಂದ ಸೈನಿಕ ತರಬೇತಿ ಹೆಸ್ರಿನಲ್ಲಿ ವಂಚಿಸುತ್ತಿದ್ದ ಸಂತೋಷ್ ನ ಪಾಪದ ಕೊಡ ತುಂಬಿದೆ. ದಿಟ್ಟ ಅಧಿಕಾರಿ ಸಂತೋಷ್ ಬಾಬು ನೊಂದವರ ಪರವಾಗಿ ನಿಂತಿದ್ದರಿಂದಾಗಿ ಕಳೆದ ಕೆಲ ವರ್ಷಗಳಿಂದ ಹಣಕ್ಕಾಗಿ ಈತನ ಬಳಿಗೆ ಅಲೆದಾಡ್ತಿದ್ದವ್ರಿಗೆ ನ್ಯಾಯ ಸಿಗೋ ಭರವಸೆ ಸಿಕ್ಕಿದೆ. ಇನ್ನು ಸಂತೋಷ್ ಬಂಧನವಾದರೆ ಇತರರರಿಗೆ ವಂಚನೆಯಾಗೋದು ತಪ್ಪುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.